ಮುಳ್ಳೂರು ನಾಗರಾಜ ಕಾವ್ಯ ಪ್ರಶಸ್ತಿ, ರಾಜಶೇಖರ ಕೋಟಿ ನೆನಪು ಕಾರ್ಯಕ್ರಮ
ಪತ್ರಿಕಾರಂಗ ಸೇರಿ ಬಹುತೇಕ ಕ್ಷೇತ್ರಗಳಿಗೆ ಕೋಟಿ ಕೊಡುಗೆ:ಮಹದೇವಸ್ವಾಮಿ
ಮೈಸೂರು: ಶೋಷಿತರ ಬದುಕಿನ ನೋವು-ನಲಿವುಗಳನ್ನು ಏಕಲವ್ಯ-ಶಂಭೂಕನ ಪಾತ್ರಗಳ ಮೂಲಕ ನೆಲದ ಜೋಗುಳದಂತೆ ಹಾಡಿ ಕನ್ನಡ ಸಾಹಿತ್ಯದಲ್ಲಿ ವಿಶಿಷ್ಟ ಧ್ವನಿಯಾಗಿ ಉಳಿದ ಕವಿ ಮುಳ್ಳೂರು ನಾಗರಾಜ ಹಾಗೂ ಜನ ಸಾಮಾನ್ಯರ ಆಶೋತ್ತರಗಳಿಗೆ ಅಕ್ಷರ ರೂಪ ನೀಡಿದ ‘ಆಂದೋಲನ’ ದಿನಪತ್ರಿಕೆಯ ಸಂಸ್ಥಾಪಕ ರಾಜಶೇಖರ ಕೋಟಿ ಅವರ ನೆನಪುಗಳು ಮೋಡಕವಿದ ವಾತಾವರಣದಲ್ಲಿ ಸಭಿಕರ ಮನ ಮಿಡಿಯುವಂತೆ ಮಾಡಿದವು.
ಮೈಸೂರಿನ ನೆಲೆ ಹಿನ್ನೆಲೆ , ಚಾಮರಾಜ ನಗರದ ರಂಗವಾಹಿನಿ ಸಂಸ್ಥೆ ಹಾಗೂ ಡಾ. ರಾಮಮನೋಹರ ಲೋಹಿಯಾ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ನಗರದ ಕಲಾಮಂದಿರದ ಕಿರು ರಂಗಮಂದಿರದಲ್ಲಿ ಆಯೋಜಿಸಿದ್ದ ಮುಳ್ಳೂರು ನಾಗರಾಜ ರಾಜ್ಯ ಮಟ್ಟದ ೧೫ನೇ ವರ್ಷದ ಕಾವ್ಯ ಪ್ರಶಸ್ತಿ ಪ್ರದಾನ ಹಾಗೂ ‘ಆಂದೋಲನ’ ದಿನಪತ್ರಿಕೆ ಸಂಸ್ಥಾಪಕ ಸಂಪಾದಕ ರಾಜಶೇಖರ ಕೋಟಿ ನೆನಪು ಕಾರ್ಯಕ್ರಮದಲ್ಲಿ ಈ ದೃಶ್ಯ ಮೂಡಿದಂತೆ ಭಾಸವಾಯಿತು.
ಪತ್ರಿಕೋದ್ಯಮವನ್ನು ಜನರ ಬದುಕಿನೊಂದಿಗೆ ಬೆಸೆದು ಶೋಷಿತರ ಪರ ಧ್ವನಿಯಾಗಿದ್ದ ರಾಜಶೇಖರ ಕೋಟಿ ಅವರ ಜನ ಮುಖಿ ಚಿಂತನೆ, ಸಾಮಾಜಿಕ ಕಾಳಜಿ ಹಾಗೂ ನಿರ್ಭೀತ ಪತ್ರಿಕೋದ್ಯಮವನ್ನು ಸ್ಮರಿಸಲಾಯಿತು. ಕಾರ್ಯಕ್ರಮದಲ್ಲಿ ಕವಿ ಎಸ್. ಮಂಜುನಾಥ ಅವರಿಗೆ ಮುಳ್ಳೂರು ನಾಗರಾಜ ಕಾವ್ಯ ಪ್ರಶಸ್ತಿ ನೀಡಿ ಗೌರವಿಸಿದರು. ಕಾರ್ಯಕ್ರಮವನ್ನು ಉದ್ಘಾಟಿಸಿದ ಸಾಹಿತಿ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಸ್.ಜಿ.ಸಿದ್ದರಾಮಯ್ಯ ಅವರು ಮಾತನಾಡಿ, ಸಾಂಸ್ಕೃತಿಕ ದಬ್ಬಾಳಿಕೆಯ ಬಿಡುಗಡೆಗಾಗಿ ಅಂಬೇಡ್ಕರ್ ಕೊಟ್ಟ ಶಿಕ್ಷಣ, ಸಂಘಟನೆ, ಹೋರಾಟ, ಸೂತ್ರಗಳನ್ನು ಪ್ರಾಣ ವಾಕ್ಯವಾಗಿಸಿಕೊಂಡು ಬದುಕಿದವರು ಮುಳ್ಳೂರು ನಾಗರಾಜ ಎಂದರು.
ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಸಾಂಸ್ಕೃತಿಕ ದಬ್ಬಾಳಿಕೆ ವಿರುದ್ಧ ಗಾಂಽಜಿ ಅವರಿಗೆ ಡಾ.ಬಿ.ಆರ್.ಅಂಬೇಡ್ಕರ್ ಮನವರಿಕೆ ಮಾಡಿಕೊಟ್ಟರಲ್ಲದೆ, ಅದರ ವಿರುದ್ಧ ಧ್ವನಿ ಎತ್ತಿದರು. ಆದರೆ, ಅಂಬೇಡ್ಕರ್ ಕೂಗನ್ನು ಯಾರೂ ಕೇಳಿಸಿಕೊಳ್ಳಲಿಲ್ಲ. ಅದನ್ನು ಕೇಳಿಸಿಕೊಂಡಿದ್ದರೆ ಶೋಷಿತ ಸಮಾಜದ ಸ್ವಾಮೀಜಿಗಳು, ರಾಜಕಾರಣಿಗಳು ಗುಲಾಮಗಿರಿಯ ದಾಳವಾಗಿ ಬಳಕೆ ಆಗುತ್ತಿರಲಿಲ್ಲ ಎಂದು ಹೇಳಿದರು. ಮುಳ್ಳೂರು ನಾಗರಾಜು ಶಿಕ್ಷಣ ಪಡೆದರು.
ಸಂಘಟನೆ ಮಾಡಿ, ಆ ಮೂಲಕ ಶೋಷಿತರ ಪರ ಹೋರಾಟ ನಡೆಸಿದರು. ವೈಯಕ್ತಿಕ ಬದುಕಿ ಗಿಂತ ದಲಿತರು, ಶೋಷಿತರು, ಅಸಹಾಯಕರ ಪರವಾದ ಹೋರಾಟದಲ್ಲಿ ಮುಳ್ಳೂರರದ ಅವಿಶ್ರಾಂತ ನಡಿಗೆ. ಕೊನೆಯವರೆಗೂ ಕೂಡ ಆ ಹೆಜ್ಜೆಯನ್ನು ಹಿಂದೆ ಇಡಲಿಲ್ಲ ಎಂದರು.
ಹೋರಾಟದ ಉಪ ಉತ್ಪನ್ನ ಮುಳ್ಳೂರರ ಸಾಹಿತ್ಯ: ವೈದಿಕ ಜಗತ್ತಿನ ಎಲ್ಲ ಮೀಮಾಂಸೆಗಳನ್ನು ಹೊಡೆದು ಹಾಕಿ ಕನ್ನಡ ಕಾವ್ಯ ಲೋಕವನ್ನು ಕಟ್ಟಿದ ಆದಿಕವಿ ಪಂಪ, ಕುಲಕ್ಕೆ ಹೊಸ ವ್ಯಾಖ್ಯಾನವನ್ನು ಕೊಡಿಸಿದವರು. ಮುಳ್ಳೂರು ನಾಗರಾಜ ಕೂಡ ಪಂಪ ಮತ್ತು ಬಸವಣ್ಣನ ಹಾದಿಯಲ್ಲಿ ನಡೆದರು. ಆದರೆ, ಕನ್ನಡ ಸಾಹಿತ್ಯದ ವಿಮರ್ಶಾ ಲೋಕ ರೋಗಗ್ರಸ್ತವಾಗಿದೆ. ಕಳಪೆ ಸಾಹಿತ್ಯವನ್ನು ವಿಜೃಂಭಿಸುವ ಬಾಲಬಡುಕರ ವಾತಾವರಣದಲ್ಲಿ ವಿಮರ್ಶಾ ಲೋಕ ಇದೆ. ಹೀಗಾಗಿ ಮುಳ್ಳೂರು ನಾಗರಾಜ ಅವರ ಸಾಹಿತ್ಯಕ್ಕೆ ಸಿಗಬೇಕಾದ ಗೌರವ ಸಿಕ್ಕಿಲ್ಲ ಎಂದು ಹೇಳಿದರು.
ವಚನ ಚಳವಳಿಯಂತೆ ಸಾಂಸ್ಕೃತಿಕ ದಬ್ಬಾಳಿಕೆಯ ವಿರುದ್ಧದ ಹೋರಾಟದ ಉಪ ಉತ್ಪನ್ನ ದಂತೆ ಮುಳ್ಳೂರರ ಸಾಹಿತ್ಯ ಮೂಡಿಬಂದಿದೆ. ಆದರೆ, ಪ್ರತಿಭಟನೆಯಾಗಿ ಕಲಿಸಬೇಕಾದ ವಚನವನ್ನು ಇವತ್ತು ಭಜನೆಯಾಗಿ ಕಲಿಸುತ್ತಿದ್ದೇವೆ ಎಂದು ಸಿದ್ದರಾಮಯ್ಯ ಬೇಸರದಿಂದ ನುಡಿದರು.
ಹೋರಾಟದ ಫಲ ಸಾಹಿತ್ಯದಲ್ಲಿ: ಮುಳ್ಳೂರರು ಶೋಷಿತರ ಮೇಲಿನ ಹಲ್ಲೆ, ಅತ್ಯಾಚಾರ, ಹತ್ಯೆ ಹಾಗೂ ಅಪಮಾನದ ವಿರುದ್ಧ ದಲಿತ ಸಂಘರ್ಷ ಸಮಿತಿ (ದಸಂಸ) ರೂಪಿಸಿದ ಧರಣಿ, ಸತ್ಯಾಗ್ರಹ, ಜಾಥಾಗಳಲ್ಲಿ ನಡೆದವರು. ಹಸಿವು, ಬಡತನ, ಅಭದ್ರತೆಗಳನ್ನು ಸಾಯುವ ಕೊನೆಯ ವರೆಗೆ ತಮ್ಮ ಬೆನ್ನಿಗೆ ಕಟ್ಟಿಕೊಂಡು ಬಾಳಿದವರು ಎಂದು ಸಿದ್ದರಾಮಯ್ಯ ಸ್ಮರಿಸಿದರು.
ಮುಳ್ಳೂರು ನಾಗರಾಜ ಮತ್ತು ‘ಆಂದೋಲನ’ ದಿನಪತ್ರಿಕೆಯ ಸಂಸ್ಥಾಪಕ ಸಂಪಾದಕ ರಾಜಶೇಖರ ಕೋಟಿ ಅವರನ್ನು ಕುರಿತು ಲೇಖಕ ಮಲ್ಕುಂಡಿ ಮಹದೇವಸ್ವಾಮಿ ಅವರು ಮಾತನಾಡಿ, ಹಿರಿಯ ಸಾಹಿತಿ ದೇವನೂರ ಮಹಾದೇವ ಅವರು ರಾಜಶೇಖರ ಕೋಟಿ ಅವರನ್ನು ಒಂಟಿ ಕಾಲಿನ ತಪಸ್ವಿ ಎಂದಿದ್ದರು. ಹೌದು. ಹಾಗೆಯೇ ಕೋಟಿ ಅವರು ಒಂಟಿ ಕಾಲಿನ ಓಟಗಾರ ಕೂಡ. ಕೋಟಿ ಅವರು ಒಂದು ಹೊತ್ತಿನ ಊಟಕ್ಕೂ ಕಷ್ಟಪಡುವ ಸಂದಿಗ್ಧತೆಯಲ್ಲಿ ತನ್ನ ಬದುಕನ್ನು ಕಟ್ಟಿ ‘ಆಂದೋಲನ’ ದಿನಪತ್ರಿಕೆಯನ್ನು ಸೃಷ್ಟಿಸಿದರು ಎಂದರು.
ಪತ್ರಿಕೆಯೊಂದರಿಂದಲೇ ರಾಜಶೇಖರ ಕೋಟಿ ಅವರನ್ನು ಅರ್ಥ ಮಾಡಿಕೊಳ್ಳಲಾಗದು. ಸಮಾಜದ ಬಹುತೇಕ ಕ್ಷೇತ್ರಗಳಲ್ಲಿ ರಾಜಶೇಖರ ಕೋಟಿ ಅವರು ‘ಆಂದೋಲನ’ ಮಾಡಿದ್ದಾರೆ. ಒಬ್ಬ ಪತ್ರಕರ್ತ ಎಷ್ಟೋ ಎತ್ತರಕ್ಕೆ ಬೆಳೆಯ ಬಹುದು. ಆದರೆ, ಆಳಕ್ಕೆ ಇಳಿಯಬೇಕು. ಕೋಟಿ ಅವರು ಸಮಾಜದ ಆಳಕ್ಕೆ ಇಳಿದವರು ಎಂದು ಹೇಳಿದರು.
ಮುಳ್ಳೂರು ನಾಗರಾಜ ಅವರ ಸಾಹಿತ್ಯವನ್ನು ವಿಮರ್ಶೆ ಮಾಡಬೇಕಾದ ಕೆಲಸ ನಮ್ಮ ಮುಂದಿದೆ. ಮುಳ್ಳೂರರ ಪ್ರಶಸ್ತಿ ಸಮಾರಂಭಕ್ಕೂ ಮುನ್ನ ಅವರ ಸಾಹಿತ್ಯ, ಬದುಕು, ಹೋರಾಟದ ಕುರಿತು ಎರಡು ದಿನ ವಿಚಾರಸಂಕಿರಣ ನಡೆಯುವಂತಾಗಬೇಕು ಎಂದರು.
ಪ್ರಶಸ್ತಿ ಪುರಸ್ಕೃತರ ಕುರಿತು ಡಾ.ತ್ರಿವೇಣಿ ಮಾತನಾಡಿದರು. ಹಿರಿಯ ಕವಿ ಸುಬ್ಬು ಹೊಲೆಯಾರ್ ಅಧ್ಯಕ್ಷತೆ ವಹಿಸಿದ್ದರು. ಕೆ.ಆರ್.ಗೋಪಾಲಕೃಷ್ಣ, ಚಾಮರಾಜನಗರ ಜಿಲ್ಲೆ ಹನೂರಿನ ಜಿ.ವಿ.ಗೌಡ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಎಸ್.ನಂಜುಂಡಯ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ರಂಗವಾಹಿನಿ ಸಂಸ್ಥೆಯ ಅಧ್ಯಕ್ಷ ಸಿ.ಎಂ. ನರಸಿಂಹಮೂರ್ತಿ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ದೇವಾನಂದ ವರಪ್ರಸಾದ್ ಮತ್ತು ತಂಡದವರು ಪ್ರಾರ್ಥಿಸಿದರು. ಮೈಸೂರು ವಿಶ್ವವಿದ್ಯಾನಿಲಯದ ಸಂಶೋಧನಾ ವಿದ್ಯಾರ್ಥಿನಿ ಎಂ.ಎನ್.ಪ್ರೇಮಕುಮಾರಿ ನಿರೂಪಿಸಿದರು. ಮುಳ್ಳೂರು ನಾಗರಾಜ ಅವರ ಪತ್ನಿ ಪುಟ್ಟಲಕ್ಷ್ಮಿ, ಪುತ್ರ ಕಿರಣ್, ಹಿರಿಯ ಪತ್ರಕರ್ತ ರಾದ ಮುಳ್ಳೂರು ರಾಜು, ಮಲೆಯೂರು ಸೋಮಯ್ಯ, ಪ್ರೊ.ಡಿ.ಆನಂದ್, ಸಿ.ಹರ ಕುಮಾರ್, ಪರಶಿವ ಮೂರ್ತಿ, ಬದನವಾಳು ಬಸವಣ್ಣ, ಡಾ.ಮಧುಸೂದನ್, ಹಾಸನ ಕೃಷ್ಣಮೂರ್ತಿ, ಡಿ.ಈರೇಶ್ ನಗರ್ಲೆ, ಚಂದನಾರಾಜು, ಹಿರಿಯ ಪತ್ರಕರ್ತ ಕೃಷ್ಣಪ್ರಸಾದ್, ಕವಿಗಳಾದ ಸೋಸಲೆ ಗಂಗಾಧರ್, ಗೋವಿಂದ ಗುಂಡಾಪುರ, ಜಯಶಂಕರ್ ಮೇಸ್ತ್ರಿ, ತುಕಾರಾಮ್ ಚಂಡಾಳ, ದಸಂಸದ ಶಂಭಯ್ಯ, ಡಾ.ಮ.ಪು.ಪೂರ್ಣಾನಂದ, ಡಾ.ಎಂ.ಸಿ. ಮನೊಹರ, ಹಾಸನ ಕೃಷ್ಣದಾಸ್, ಸವಿತಾ ಪ.ಮಲ್ಲೇಶ್, ಹಗಿನವಾಳು ಚಿಕ್ಕಣ್ಣ, ಮೈಸೂರು ವಿವಿ ಸಂಶೋಧಕರ ಸಂಘದ ಅಧ್ಯಕ್ಷ ವರಹಳ್ಳಿ ಆನಂದ್, ಸದಸ್ಯರಾದ ಕಲ್ಲಳ್ಳಿ ಕುಮಾರ್, ಮಂಜು, ಮೋಹನ್ ಮುಂತಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
” ಮುಳ್ಳೂರು ನಾಗರಾಜ ಅತ್ಯಂತ ಪ್ರಾಮಾಣಿಕ ಹೋರಾಟದ ಜೀವಿ. ಅವರ ಸಾಹಿತ್ಯ ರೋಮಾಂಚನಗೊಳಿಸುತ್ತದೆ. ಶರಣ ಚಳವಳಿಯಿಂದ ಹಿಡಿದು ದಲಿತ ಸಂಘರ್ಷ ಸಮಿತಿಯ ಹೋರಾಟದವರೆಗೂ ಅವರ ಕಾವ್ಯ ಬೆಳಕು ಚೆಲ್ಲಲಿದೆ. ಅವರ ಹೆಸರಿನಲ್ಲಿ ಪ್ರಶಸ್ತಿ ಪಡೆಯುತ್ತಿರುವುದು ಬಹಳ ಸಂತಸದ ಸಂಗತಿ.”
– ಎಸ್.ಮಂಜುನಾಥ, ಪ್ರಶಸ್ತಿ ಪುರಸ್ಕೃತರು
” ಮೈಸೂರಿನ ಕಲಾಮಂದಿರದ ಕಿರು ರಂಗಮಂದಿರದಲ್ಲಿ ಆಯೋಜಿಸಿದ್ದ ಮುಳ್ಳೂರು ನಾಗರಾಜ ರಾಜ್ಯ ಮಟ್ಟದ ೧೫ನೇ ವರ್ಷದ ಕಾವ್ಯ ಪ್ರಶಸ್ತಿ ಪ್ರದಾನ ಹಾಗೂ ‘ಆಂದೋಲನ’ ದಿನಪತ್ರಿಕೆ ಸಂಸ್ಥಾಪಕ ಸಂಪಾದಕ ರಾಜಶೇಖರ ಕೋಟಿ ನೆನಪು ಕಾರ್ಯಕ್ರಮದಲ್ಲಿ ಕವಿ ಎಸ್.ಮಂಜುನಾಥ ಅವರಿಗೆ ಮುಳ್ಳೂರು ನಾಗರಾಜ ಕಾವ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು.”





