Mysore
30
overcast clouds

Social Media

ಸೋಮವಾರ, 22 ಜೂನ್ 2026
Light
Dark

3 ತಿಂಗಳಿಂದ ಬಾರದ ಮಾಸಾಶನ ; ಬಡಜನರು ಕಂಗಾಲು

ವೃದ್ಧರು, ವಿಧವೆಯರು, ಅಂಗವಿಕಲರಿಗೆ ಬಾರದ ಮಾಸಿಕ ಹಣ ; ಕಚೇರಿಗಳಿಗೆ ನಿತ್ಯ ಅಲೆದಾಟ

ಎಚ್.ಡಿ.ಕೋಟೆ : ವೃದ್ಧರು, ವಿಧವೆಯರು, ಅಂಗವಿಕಲರೂ ಸೇರಿದಂತೆ ಅನೇಕರಿಗೆ ಪ್ರತಿ ತಿಂಗಳು ಸರ್ಕಾರದಿಂದ ಬರುತ್ತಿದ್ದ ಮಾಸಾಶನ 3 ತಿಂಗಳಿನಿಂದ ಕೈಸೇರದೆ ಕಂಗಾಲಾಗಿ ನಿತ್ಯವೂ ಕಚೇರಿಗಳಿಗೆ ಅಲೆದಾಡುತ್ತಿದ್ದಾರೆ.

ಜಿಲ್ಲೆಯಲ್ಲಿ ಹಿಂದುಳಿದ ವರ್ಗದವರು ಮತ್ತು ಅತಿ ಹೆಚ್ಚು ಕೂಲಿ ಕಾರ್ಮಿಕರು, ಗಿರಿಜನರು, ರೈತರು ವಾಸಿಸುವ ಕೋಟೆ ತಾಲ್ಲೂಕಿನಲ್ಲಿ 32 ಸಾವಿರ ಬಡಜನರು ವಿಧವಾ ವೇತನ, ಅಂಗವಿಕಲರ ವೇತನ, ವೃದ್ಧಾಪ್ಯ ವೇತನ, ಸಂಧ್ಯಾ ಸುರಕ್ಷಾ ಯೋಜನೆಯ ಮಾಸಾಶನ ತಲಾ 1,200 ರೂ. ಗಳನ್ನು ಅವಲಂಬಿಸಿದ್ದಾರೆ.

ಇದರಿಂದಲೇ ತಮ್ಮ ಜೀವನಕ್ಕೆ ಆಧಾರವಾದ ಆಹಾರ, ಔಷಧ ಇನ್ನಿತರ ಪದಾರ್ಥಗಳನ್ನು ತೆಗೆದು ಕೊಂಡು ಮಕ್ಕಳಿಗೆ, ಇನ್ನಿತರರಿಗೆ ಹೊರಯಾಗದಂತೆ ಜೀವನ ನಡೆಸುತ್ತಿದ್ದರು. ಆದರೆ, ೩ ತಿಂಗಳುಗಳಿಂದ ಅವರ ಕುಟುಂಬದ ಯಾವ ಸದಸ್ಯರು ಹೆಚ್ಚಿನ ಆದಾಯವಿರುವ ಪ್ರಮಾಣ ಪತ್ರ ಮಾಡಿಸಿಕೊಂಡು ಶಾಲಾ ಕಾಲೇಜು ಹಾಗೂ ಇನ್ನಿತರ ಕೆಲಸ ಕಾರ್ಯಗಳಿಗೆ ಬಳಸಿರುತ್ತಾರೋ ಅಂತಹವರಿಗೆ ಯೋಜನೆಯ ಸೌಲಭ್ಯ ದೊರೆಯುತ್ತಿಲ್ಲ. ಇದನ್ನು ತಿಳಿಯದೆ ಬಹುತೇಕರು ನಿತ್ಯವೂ ಬ್ಯಾಂಕು, ಅಂಚೆ ಕಚೇರಿಗಳಿಗೆ ಅಲೆದಾಡಿ, ಹಣ ಬಾರದಿದ್ದರಿಂದ ಪರಿತಪಿಸುತ್ತಿದ್ದಾರೆ.

ತಾಲ್ಲೂಕಿನಲ್ಲಿ 15 ಸಾವಿರಕ್ಕೂ ಹೆಚ್ಚು ಜನರಿಗೆ ವಿವಿಧ ಯೋಜನೆಗಳ ಮೂಲಕ ಬರುತ್ತಿದ್ದ ಮಾಸಾಶನ ರದ್ದಾಗಿದೆ. 2 ತಿಂಗಳುಗಳಿಂದ ಪ್ರತಿನಿತ್ಯ ಸಾವಿರಾರು ಜನರು ಕೋಟೆ ಮತ್ತು ಸರಗೂರು ತಾಲ್ಲೂಕು ಕಚೇರಿಗಳಲ್ಲಿನ ಕಂದಾಯ ಇಲಾಖೆ ಅಧಿಕಾರಿಗಳ ಬಳಿಗೆ ಹೋಗಿ ಸರಿಪಡಿಸಿಕೊಳ್ಳಲು ಮುಂದಾದರೂ ಪ್ರಯೋಜನವಾಗುತ್ತಿಲ್ಲ. ಅನೇಕ ಸಬೂಬುಗಳನ್ನು ಹೇಳಿ ಜನರನ್ನು ಕಳಿಸುತ್ತಿದ್ದಾರೆ. ಒಂದೆಡೆ ಸರ್ಕಾರದ ಮಾಸಾಶನವೂ ಇಲ್ಲ, ಮತ್ತೊಂ ದೆಡೆ ಬೇರೆ ಕಡೆ ಹೋಗಿ ಕೆಲಸ ಮಾಡಲೂ ಶಕ್ತಿ ಇಲ್ಲದೆ ಪರದಾಡುತ್ತಿದ್ದಾರೆ. ಇನ್ನಾದರೂ ಅರ್ಹರಿಗೆ ಮಾಸಾಶನ ಕೊಡಿಸುವ ನಿಟ್ಟಿನಲ್ಲಿ ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು ಮುಂದಾಗಬೇಕಿದೆ.

Tags:
error: Content is protected !!