Mysore
23
overcast clouds

Social Media

ಭಾನುವಾರ, 21 ಜೂನ್ 2026
Light
Dark

ಶಿವಸ್ವಾಮಿಯವರೊಳಗಿನ ಕನ್ನಡದ ಮೇಷ್ಟ್ರು ನಿವೃತ್ತರಾಗುವುದಿಲ್ಲ  

ಸಿ.ಎಂ.ನರಸಿಂಹಮೂರ್ತಿ

ಪಾಠ ಪ್ರವಚನಗಳ ಜೊತೆ ವಿದ್ಯಾರ್ಥಿಗಳ ನೋವು ನಲಿವುಗಳಿಗೂ ಸ್ಪಂದಿಸುತ್ತಿದ್ದ ಈ ಗುರುಗಳ ಗುಣ ದೊಡ್ಡದು

ಶಿವಸ್ವಾಮಿ ಎಂಬ ಕನ್ನಡದ ಮೇಷ್ಟ್ರು. ಚಾಮರಾಜನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸುದೀರ್ಘ ಸೇವೆ ಸಲ್ಲಿಸಿ ಇತ್ತೀಚೆಗೆ ನಿವೃತ್ತಿ ಹೊಂದಿದರು.

ಕನ್ನಡ ಶಿಕ್ಷಕ ಪಾತ್ರವನ್ನು ಈ ಪ್ರಾಂತ್ಯದ ವಿವಿಧ ಕಾಲೇಜುಗಳಲ್ಲಿ ಸಮರ್ಥವಾಗಿ ನಿರ್ವಹಿಸಿರುವ ಶಿವಸ್ವಾಮಿಯವರು, ಪಾಠ ಪ್ರವಚನಗಳೊಂದಿಗೆ ನೂರಾರು ವಿದ್ಯಾರ್ಥಿಗಳಿಗೆ ಸಾಹಿತ್ಯ, ಕಲೆ, ನಾಟಕ ಕುರಿತು ಆಸಕ್ತಿ ಮೂಡಿಸುವ ಜೊತೆಯಲ್ಲಿಯೇ ಸಮಾಜದ ಓರೆ ಕೋರೆಗಳನ್ನು ಗುರುತಿಸುವ, ಜಾಗೃತಿಗೊಳಿಸುವ, ಪ್ರಶ್ನಿಸುವ ಹಾಗೂ ಅವುಗಳನ್ನು ಎದುರಿಸುವ, ಪರಿಹಾರ ಹುಡುಕುವ, ಹುಡುಕಿಸುವ ಮನೋಭಾವ ಬೆಳೆಸುವತ್ತ ಗಮನ ನೀಡಿದ್ದಾರೆ ಮತ್ತು ಸಹೋದ್ಯೋಗಿಗಳಿಗೂ ಸ್ಛೂರ್ತಿಯಾಗಿದ್ದಾರೆ. ವಿದ್ಯಾರ್ಥಿಗಳಲ್ಲಿ ಗಾಂಧಿ, ಅಂಬೇಡ್ಕರ್, ಜೆಪಿ, ಲೋಹಿಯಾ ಚಿಂತನೆಗಳಲ್ಲಿ ತೊಡಗಿಸಲು ಜಾತಿ ವಿನಾಶ ಸಮ ಸಮಾಜದತ್ತ ಆಲೋಚಿಸಲು ಶಿವಸ್ವಾಮಿಯವರ ಕೊಡುಗೆಯನ್ನು ನೆನೆಯಲೇಬೇಕು. ಗಾಂಧಿ ಭವನದೊಡನೆ ವಿದ್ಯಾರ್ಥಿಗಳಲ್ಲಿ ಗಾಂಧಿ ನೆಪದಲ್ಲಿ ಬಹು ಆಯಾಮದ ಅಭಿವೃದ್ಧಿ ಆಲೋಚನೆಗಳನ್ನು ಅಂಬೇಡ್ಕರ್, ಗಾಂಧಿ ಅವರ ಚಿಂತನೆ ಅಧ್ಯಯನಗಳಲ್ಲೂ ತೊಡಗಿಸುವ ಮನಸ್ಸನ್ನು ಶಿವಸ್ವಾಮಿ ನಡೆಸಿರುವ ಪರಿ ಶ್ಲಾಘನೀಯ.

ದೇವನೂರ ಮಹಾದೇವ ಅವರ ‘ಕುಸುಮಬಾಲೆ’ಯನ್ನು ಯಾವುದೇ ಟಿಪ್ಪಣಿ ಪುಸ್ತಕಗಳ ನೆರವಿಲ್ಲದೆ ವಾಚನ, ಪರಿಚಯ, ವಿಮರ್ಶೆ ಮಾಡುವ ಇವರ ಅಸಾಧಾರಣ ಪ್ರತಿಭೆಗೆ ನಾಡಿನಲ್ಲಿ ಮಾರುಹೋಗದವರಿಲ್ಲ. ದೇವನೂರರ ಸಮಗ್ರ ಸಾಹಿತ್ಯದೊಡನೆ ಇತರ ಅನೇಕ ಸಮಕಾಲೀನರ ರಚನೆಗಳು ಹಿಂದಿನ ಸಾಹಿತಿಗಳ ಉಲ್ಲೇಖ, ದಲಿತ ಸಂಘರ್ಷ ಸಮಿತಿಯ ಹೋರಾಟದ ಜೊತೆಗೆ ಪ್ರಚಲಿತ ರಾಜಕೀಯ, ಸಾಮಾಜಿಕ, ಸಾಂಸ್ಕ ತಿಯ ವಿಚಾರಗಳೆಲ್ಲವೂ ಉಲ್ಲೇಖವಾಗಿ ವಿಮರ್ಶೆಯಾಗಿ ಧ್ವನಿಸುತ್ತದೆ.

ಶಿವಸ್ವಾಮಿಯವರು ಪಾಠ ಪ್ರವಚನಗಳ ಜೊತೆ ವಿದ್ಯಾರ್ಥಿಗಳ ನೋವು ನಲಿವುಗಳಿಗೂ ಸ್ಪಂದಿಸುತ್ತಿದ್ದ ಗುಣ ದೊಡ್ಡದು. ವಿದ್ಯಾರ್ಥಿಗಳೊಂದಿಗೆ ಪ್ರವಾಸ, ಶೈಕ್ಷಣಿಕ ಅವಕಾಶಗಳ ಸೃಷ್ಟಿ ಔದ್ಯೋಗಿಕ ಮಾರ್ಗದರ್ಶನ ನೀಡುತ್ತಿದ್ದ ಪರಿ ಅನುಕರಣೀಯ. ಪಂಪ, ರನ್ನ, ಪೊನ್ನ, ಕುಮಾರವ್ಯಾಸ, ಅಲ್ಲದೆ ಅಲ್ಲಮಪ್ರಭು, ದಾಸ ಸಾಹಿತ್ಯ, ಕುವೆಂಪು, ಕಾರಂತ, ಮಾಸ್ತಿ, ಬೇಂದ್ರೆ, ಶಿವರುದ್ರಪ್ಪ, ಕಾರ್ನಾಡ್, ತ್ರಿವೇಣಿ, ವೈದೇಹಿ, ಅನಂತಮೂರ್ತಿ, ದೇವನೂರು, ರಶೀದ್, ಮೊಗಳ್ಳಿ ಇವರಷ್ಟೇ ಅಲ್ಲದೆ ಇತ್ತೀಚಿನ ಬರಹಗಾರರು ಕೂಡ ಶಿವಸ್ವಾಮಿಯವರ ಓದಿಗೆ ಒಳಪಟ್ಟವರು.

ಇದು ಕೇವಲ ಓದುವಿಕೆಯಲ್ಲ. ಓದು, ವಿಮರ್ಶೆ, ಮೆಚ್ಚುಗೆ ಮುಂದೆ ಅವುಗಳನ್ನು ಸೂಕ್ತವಾಗಿ ಸಮರ್ಪಕವಾಗಿ ಪಾಠ ಮಾಡುವಾಗ, ಭಾಷಣದಲ್ಲೂ ಉಲ್ಲೇಖಿಸುವುದು ಶಿವಸ್ವಾಮಿ ಅವರ ಸಾಮರ್ಥ್ಯ. ಇದು ಶಿವಸ್ವಾಮಿ ಅವರ ಕನ್ನಡ ಪ್ರೀತಿ. ಇವರ ಮಾತಿನ ಹಾಡಿನ ಆಸ್ವಾದವೇ ಅಮೋಘ. ಕನ್ನಡ ಸಾಹಿತ್ಯ ಸಂಸ್ಕ ತಿ ಬಗ್ಗೆ ಅಪಾರ ಒಲವು ಹೊಂದಿರುವ ಶಿವಸ್ವಾಮಿಯವರು ಪ್ರಸ್ತುತ ಖಾಸಗಿ ಜಾನಪದ ಕಾಲೇಜೊಂದರ ಪ್ರಾಂಶುಪಾಲರಾಗಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸಾಹಿತ್ಯ ಅಭಿರುಚಿ ಮೂಡಿಸುವ ಚಕೋರ ಕಾರ್ಯಕ್ರಮದ ಜಿಲ್ಲಾ ಸಂಚಾಲಕರಾಗಿದ್ದಾರೆ.

ನಾಡಿನಾದ್ಯಂತ ಅಪಾರ ಗೆಳೆಯರ ಬಳಗವನ್ನು ಹೊಂದಿರುವ ಕನ್ನಡ ಮನಸ್ಸಿನ ಶಿವಸ್ವಾಮಿ ಉದ್ಯೋಗದಲ್ಲಿ ನಿವೃತ್ತಿಯಾಗಿದ್ದರೂ, ಕನ್ನಡದ ಕೆಲಸಗಳಿಗೆ ಇಂದು ಮುನ್ನುಗ್ಗಿ ಬರುವ ಇವರ ಉತ್ಸಾಹಕ್ಕೆ ನಾವೆಲ್ಲರೂ ಫಿದಾ ಆಗಿದ್ದೇವೆ.

Tags:
error: Content is protected !!