ಸಂದರ್ಶನ: ಶ್ರೀಧರ್ ಆರ್ ಭಟ್
ನಗರಾಭಿವೃದ್ಧಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ವಿಶ್ವಾಸ
ಮೈಸೂರು: ನಗರಾಭಿವೃದ್ಧಿ ಇಲಾಖೆಯಲ್ಲಿ ಹಲವಾರು ಸವಾಲುಗಳಿವೆ. ಸಚಿವನಾಗಿ ಪ್ರಾಮಾಣಿಕ ಸೇವೆ ಸಲ್ಲಿಸಲು ನಾನು ಬದ್ಧ. ಮೈಸೂರಿನ ಲ್ಯಾನ್ಸ್‌ಡೌನ್, ದೇವರಾಜ ಮಾರುಕಟ್ಟೆ ಕಟ್ಟಡಗಳ ನವೀಕರಣ ಮಾಡಿದರೂ, ಹೊಸದಾಗಿ ನಿರ್ಮಿಸಿದರೂ ಪಾರಂಪರಿಕತೆ ಉಳಿಸಿಕೊಳ್ಳಲಾಗುವುದು.
ನನ್ನ ತಂದೆ ಸಿದ್ದರಾಮಯ್ಯ ಅವರು ಹಾಕಿಕೊಟ್ಟಿರುವ ರಾಜಕಾರಣ ಮಾರ್ಗದಲ್ಲಿ ನಡೆಯುವುದು ನನ್ನ ಗುರಿ… ರಾಜ್ಯ ರಾಜಕಾರಣದ ಬದಲಾದ ಸನ್ನಿವೇಶದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸಂಪುಟದಲ್ಲಿ ಇದೇ ಮೊದಲ ಬಾರಿಗೆ ಸಚಿವರಾಗಿರುವ ಡಾ. ಯತೀಂದ್ರ ಸಿದ್ದರಾಮಯ್ಯ ಅವರು, ನಗರಾಭಿವೃದ್ಧಿ ಖಾತೆ ಸೇರಿದಂತೆ ನಗರಗಳ ಅಭಿವೃದ್ಧಿಯ ಕುರಿತು ರಾಜ್ಯದ ಜನತೆಯಸೂರಿನ ಕನಸುಗಳನ್ನು ನನಸು ಮಾಡವ ನಿಟ್ಟಿನಲ್ಲಿ ತಮ್ಮ ಅನಿಸಿಕೆಗಳನ್ನು ‘ಆಂದೋಲನ‘ ಪತ್ರಿಕೆ ನಡೆಸಿದ ವಿಶೇಷ ಸಂದರ್ಶನದಲ್ಲಿ ಮೇಲಿನ ರೀತಿಯಲ್ಲಿ ಹಂಚಿಕೊಂಡಿದ್ದಾರೆ.
ಆಂದೋಲನ: ಮೊದಲ ಬಾರಿಗೆ ವಿಧಾನ ಪರಿಷತ್ ಸದಸ್ಯರು, ಇದೇ ಅವಧಿಯಲ್ಲಿ ಪ್ರಥಮವಾಗಿ ಮಹತ್ತರವಾದ ನಗರಾಭಿವೃದ್ಧಿ ಖಾತೆಯ ಹೊಣೆಗಾರಿಕೆ ತಮ್ಮ ಹೆಗಲಿಗೆ ಬಿದ್ದಿದೆ. ಈ ಬಗ್ಗೆ ಏನು ಹೇಳುತ್ತೀರಿ?
ಯತೀಂದ್ರ ಸಿದ್ದರಾಮಯ್ಯ: ಮೊದಲ ಬಾರಿ ಸಚಿವ ಸ್ಥಾನ ಲಭಿಸಿರುವುದಕ್ಕೆ ಸಂತೋಷವಾಗಿದೆ. ಈ ಸ್ಥಾನದ ನಿರ್ವಹಣೆ ದೊಡ್ಡ ಸವಾಲು. ಈ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸುವುದರ ಮೂಲಕ ರಾಜ್ಯದ ಜನತೆಯ ಸೇವೆ ಮಾಡುವುದಕ್ಕೆ ಬದ್ಧನಾಗಿದ್ದೇನೆ.
ಆಂದೋಲನ: ೨೦೧೮ರ ವಿಧಾನಸಭೆ ಚುನಾವಣೆಯಲ್ಲಿ ಮೊದಲ ಬಾರಿಗೆ ಶಾಸಕರಾದಿರಿ, ನಂತರ ಪ್ರಥಮ ಬಾರಿಗೆ ವಿಧಾನಪರಿಷತ್ ಸದಸ್ಯರಾದವರು, ಹಾಗಿರುವಾಗ ಮಂತ್ರಿಯಾಗುವ ನಿರೀಕ್ಷೆಯಿತ್ತೆ?
ಯತೀಂದ್ರ ಸಿದ್ದರಾಮಯ್ಯ: ನನ್ನ ತಂದೆ ಸಿದ್ದರಾಮಯ್ಯ ಅವರು ೫ ವರ್ಷಗಳು ಮುಖ್ಯಮಂತ್ರಿಯಾಗಿ ರಾಜ್ಯದ ಜನತೆಯ ಸೇವೆಯಲ್ಲಿರುತ್ತಾರೆ ಎಂದು ಭಾವಿಸಿದ್ದೆ. ಹಾಗಾಗಿ ಈಗಲೇ ಮಂತ್ರಿಯಾಗುವ ನಿರೀಕ್ಷೆಯೇ ಇರಲಿಲ್ಲ .
ಆಂದೋಲನ: ವಿಧಾನ ಪರಿಷತ್‌ನಲ್ಲಿ ಈಗ ನೀವೇ ಸಭಾ ನಾಯಕರಾಗಿ ನೇಮಕಗೊಳ್ಳಲಿದ್ದೀರಿ ಎಂಬ ಮಾತಿದೆಯಲ್ಲ?
ಯತೀಂದ್ರ ಸಿದ್ದರಾಮಯ್ಯ: ಸಚಿವ ಸ್ಥಾನದ ಜೊತೆಗೆ ಹೈಕಮಾಂಡ್ ಹಾಗೂ ಮುಖ್ಯಮಂತ್ರಿಗಳು ನನಗೆಸ ಭಾ ನಾಯಕನ ಅವಕಾಶ ನೀಡಿದರೆ ಅದನ್ನು ಸವಾಲೆಂದು ಸ್ವೀಕರಿಸಿ ಎಲ್ಲರ ಸಹಕಾರದೊಂದಿಗೆ ಆ ಜವಾಬ್ಧಾರಿಯನ್ನು ಸಮರ್ಥವಾಗಿ ನಿರ್ವಹಿಸುತ್ತೇನೆ.
೫ ವರ್ಷಗಳ ನಂತರ ಮಂತ್ರಿಯಾಗುವ ಹಂಬಲವಿತ್ತು. ಆದರೆ ಬದಲಾದ ಸನ್ನಿವೇಶದಲ್ಲಿ ತಂದೆಯವರೇ ಅಧಿಕಾರವನ್ನು ತ್ಯಾಗ ಮಾಡಿದರು. ತಂದೆಯವರು ಮುಖ್ಯಮಂತ್ರಿ ಸ್ಥಾನ ತ್ಯಜಿಸಿದ ನಂತರ ನಮ್ಮ ಕಾಂಗ್ರೆಸ್ ಪಕ್ಷದ ವರಿಷ್ಠರು, ಹಿಂದುಳಿದ ವರ್ಗಗಳವರು ಅಸಮಾಧಾನಗೊಳ್ಳದಿರಲಿ ಎಂಬ ಮುಂದಾಲೋಚನೆ ಇಟ್ಟುಕೊಂಡು, ಬಹುಶಃ ನನಗೆ ಸಚಿವ ಸ್ಥಾನ ನೀಡಿದ್ದಾರೆ ಎಂದು ಭಾವಿಸಿದ್ದೇನೆ. ನಾನೀಗ ಈ ಖಾತೆಯ ನಿರ್ವಹಣೆಯ ಮೂಲಕ ಪಕ್ಷದ ವರಿಷ್ಠರ ವಿಶ್ವಾಸದ ನಂಬಿಕೆಯನ್ನು ಉಳಿಸಿಕೊಂಡೇಮ ಸಚಿವನಾಗಿ ರಾಜ್ಯದ ಜನತೆಯ ಸೇವೆಯನ್ನು ಮಾಡುತ್ತೇನೆ.
ಆಂದೋಲನ: ರಾಜ್ಯದ ಸಚಿವರಾಗಿ ನೇಮಕವಾದ ಹಲವರು ತಮಗೆ ನೀಡಿದ ಖಾತೆಗಳ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ್ದಾರೆ. ಇದಕ್ಕೆ ನೀವೇನು ಹೇಳುತ್ತಿರಾ?
ಯತೀಂದ್ರ ಸಿದ್ದರಾಮಯ್ಯ: ಜನತೆಯ ಸೇವೆ ಮಾಡಲು ಯಾವ ಖಾತೆಯಾದರೂ ಸರಿ ಎಂದು ಭಾವಿಸಿರುವ ನನಗೆ ಮಹತ್ತರವಾದ ನಗರಾಭಿವೃದ್ಧಿ ಖಾತೆ ದೊರಕಿದೆ. ಇದು ಜನರಿಗೆ ಸೌಲಭ್ಯ ಒದಗಿಸಲು ಸಿಕ್ಕಿದ ಅವಕಾಶ ಎಂದು ಭಾವಿಸಿ ಅವರ ಸೇವೆ ಮಾಡುತ್ತೇನೆ. ಅಲ್ಲದೆ, ಶಾಸಕರು ನೀಡುವ ಸಲಹೆಗಳನ್ನು ಸ್ವೀಕರಿಸುತ್ತೇನೆ. ಅವುಗಳ ಸಾಧಕ- ಬಾಧಕಗಳನ್ನು ಗಮನಿಸಿ, ಅನುಷ್ಠಾನಕ್ಕಾಗಿ ಪ್ರಾಮಾಣಿಕವಾಗಿ ದುಡಿಯುತ್ತೇನೆ.
ಆಂದೋಲನ: ನಗರಾಭಿವೃದ್ಧಿ ಸಚಿವರಾಗಿ ನಿಮ್ಮ ಮೊದಲ ಆದ್ಯತೆ ಏನು? ಇಲಾಖೆಯಲ್ಲಿ ಮುಖ್ಯವಾಗಿ ಆಗಬೇಕಾದ ಕೆಲಸಗಳೇನು?
ಯತೀಂದ್ರ ಸಿದ್ದರಾಮಯ್ಯ: ನಗರಗಳ ಅಭಿವೃದ್ಧಿಗೆ ಪುರಾತನವಾದ ಕಾನೂನುಗಳೇ ಅಡ್ಡಿಯಾಗಿವೆ. ಏಕ ರೂಪವಾದ ಕಾನೂನು ಇಲ್ಲ. ಅದನ್ನು ಸರಿಪಡಿಸಬೇಕಾಗಿದೆ. ಭೌಗೋಳಿಕ ಸನ್ನಿವೇಶಗಳನ್ನು ಆಧರಿಸಿ (ಮಲೆನಾಡು, ಕರಾವಳಿ ಪ್ರದೇಶಗಳನ್ನು ಹೊರತುಪಡಿಸಿ) ರಾಜ್ಯಾದ್ಯಂತ ನಗರಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಏಕ ರೂಪ ಕಾನೂನು ಜಾರಿಗೆ ತರಬೇಕಿದೆ. ಸಕಾಲದಲ್ಲಿ ಸಭೆ ನಡೆಸದೇ ಇರುವ ಕಾರಣಕ್ಕಾಗಿ ಸಮಯದ ಪರಿಧಿಯಲ್ಲಿ ಹಣ ನೀಡಿದ ಜನತೆ ನಿವೇಶನ ಪಡೆಯಲ ಆಗದ ಸನ್ನಿವೇಶ ನಿರ್ಮಾಣವಾಗಿದೆ. ಅದು ಬದಲಾಗಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅನುದಾನ ನೀಡಿದ ಒಳಚರಂಡಿ, ಕುಡಿಯುವ ನೀರಿ ಕಾಮಗಾರಿಗಳು ನಿಗದಿತ ಅವಧಿಯಲ್ಲಿ ಪೂರ್ಣಗೊಳ್ಳುತ್ತಿಲ್ಲ. ಇಂತಹ ಲೋಪಗಳನ್ನು ಸರಿಪಡಿಸಿ ಜನತೆಯ ನಂಬಿಕೆಯನ್ನು ಉಳಿಸಿಕೊಳ್ಳಲು ನಾನು ಪ್ರಯತ್ನ ಮಾಡುತ್ತೇನೆ.
ಆಂದೋಲನ: ನಿಮ್ಮ ತಂದೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ವೈಯಕ್ತಿಕ ವರ್ಚಸ್ಸಿನಿಂದ ಸಮುದಾಯಗಳ ನಾಯಕರಾಗಿ ಮೂಡಿಬಂದವರು. ಅಂತಹ ತಂದೆಯ ಮಗನಾಗಿ ನೀವು ಅವರ ನೆರಳಿನಿಂದ ಹೊರಬರುವುದು ಸವಾಲಿನ ಕೆಲಸ ಅನಿಸುತ್ತಿದೆಯೆ?
ಯತೀಂದ್ರ ಸಿದ್ದರಾಮಯ್ಯ: ರಾಜಕೀಯಕ್ಕೆ ಬಂದವರೆಲ್ಲರೂ ಸ್ವಂತ ವರ್ಚಸ್ಸು ಬೆಳೆಸಿಕೊಳ್ಳಲು ಪ್ರಯತ್ನಿಸಲೇಬೇಕು. ಸಿದ್ದರಾಮಯ್ಯ ಅವರು ಆಲದ ಮರ ಇದ್ದಂತೆ. ಅವರ ನೆರಳಲ್ಲಿ ನಿಂತ ನಾನು ಅವರ ತೋರಿದ ದಾರಿಯಲ್ಲೇ ಸಾಗುತ್ತೇನೆ. ಪ್ರಾಮಾಣಿಕವಾಗಿ ಜನಸೇವೆಮಾಡಿದರೆ ಮಾತ್ರ ಸ್ವಂತ ವರ್ಚಸ್ಸು ಬೆಳೆಸಿಕೊಳ್ಳಲು ಸಾಧ್ಯ ಎಂಬುದು ನನ್ನ ನಂಬಿಕೆಯಾಗಿದೆ.
ಆಂದೋಲನ: ಸಿದ್ದರಾಮಯ್ಯನವರು ಅಹಿಂದ ನಾಯಕರಾಗಿ ರಾರಾಜಿಸಿದವರು. ಈಗ ಅವರ ನೇತೃತ್ವದಲ್ಲೇ ಅಹಿಂದ ಹೋರಾಟ ಮುಂದುವರಿಯುತ್ತದೆಯಾ?
ಯತೀಂದ್ರ ಸಿದ್ದರಾಮಯ್ಯ: ಅಹಿಂದ ಚಳವಳಿ ಒಂದು ಸಾಮಾಜಿಕ ಚಳವಳಿ ದೀನ- ದಲಿತರು ಸಮಾಜದ ಬಡವರ ಪರವಾಗಿ ನಿಂತು ಅವರ ಅಭಿವೃದ್ಧಿಗಾಗಿ ಮಾತನಾಡುವುದು, ಹೋರಾಡುವುದು ಎಲ್ಲ ಜನ ನಾಯಕರೂ ಹಾಗೂ ಪಕ್ಷಗಳ ಜವಾಬ್ದಾರಿಯಾಗಿದೆ. ಕಾಂಗ್ರೆಸ್ ಪಕ್ಷ ಹಾಗೂ ಸಿದ್ದರಾಮಯ್ಯ ಎಂದೆಂದಿಗೂ ಅಹಿಂದ ಪರ ಬಡವರ ಪರ ನಾನೂ ಈ ಚಳವಳಿಯ ಭಾಗವಾಗಿ ದುಡಿಯುವೆ, ಸಾಮಾಜಿಕ ನಾಯಕತ್ವದ ಪರ ಧ್ವನಿ ಎತ್ತಿ ಹೋರಾಟ ಮಾಡುತ್ತೇನೆ. ಸಮಯ ಬಂದಾಗ ನಾಯಕತ್ವದ ತೀರ್ಮಾನವಾಗುತ್ತದೆ.
ಆಂದೋಲನ: ೨೦೨೮ರ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ವರುಣ ಕ್ಷೇತ್ರದಿಂದಲೇ ತಾವು ಸ್ಪರ್ಧಿ ಸುವಿರಾ? ಹಾಗಿದ್ದರೆ, ಹಾಲಿ ವರುಣವನ್ನು ಪ್ರತಿನಿಧಿಸುತ್ತಿರುವ ಸಿದ್ದರಾಮಯ್ಯನವರು ರಾಜಕಾರಣದಿಂದ ನಿವೃತ್ತಿ ಪಡೆಯುತ್ತಾರೆಯೇ?
ಯತೀಂದ್ರ ಸಿದ್ದರಾಮಯ್ಯ: ರಾಜಕಾರಣದಿಂದ ನಿವೃತ್ತಿ ಇಲ್ಲ ಎಂದು ಹೇಳಿದ ತಂದೆ ಚುನಾವಣೆಗೆ ಮತ್ತೆ ಸ್ಪರ್ಧಿಸುವುದಿಲ್ಲ ಎಂದಿದ್ದಾರೆ. ಚುನಾವಣೆ ಸಾಕು ಎಂಬ ಅವರ ಅಭಿಪ್ರಾಯಕ್ಕೆ ಕುಟುಂಬದಲ್ಲೂ ಸಹಮತವಿದೆ. ಅವರು ಸ್ಪರ್ಧಿ ಸದಿದ್ದರೆ ನನ್ನನ್ನು ಪ್ರಥಮವಾಗಿ ಶಾಸಕನಾಗಿಸಿದ ವರುಣ ಜನತೆಯ ಸೇವೆ ಮಾಡಲು ಪುನಃ ಅಲ್ಲೇ ಕಣಕ್ಕಿಳಿಯುವ ಅನಿವಾರ್ಯತೆ ಎದುರಾಗಬಹುದು.
ಆಂದೋಲನ: ಮೈಸೂರಿನಲ್ಲಿ ನಗರಾಭಿವೃದ್ಧಿ ಇಲಾಖೆಯಿಂದ ಹಮ್ಮಿಕೊಳ್ಳುವ ಯೋಜನೆಗಳೇನು? ನಿಮ್ಮ ಆದ್ಯತೆಯ ಕಾರ್ಯಗಳೇನು? ಲ್ಯಾನ್ಸ್ ಡೌನ್, ದೇವರಾಜ ಮಾರುಕಟ್ಟೆ ಕಟ್ಟಡಗಳ ನವೀಕರಣ ಕಾರ್ಯ ಯಾವಾಗ ಆರಂಭವಾಗಬಹುದು?
ಯತೀಂದ್ರ ಸಿದ್ದರಾಮಯ್ಯ: ಲ್ಯಾನ್ಸ್ ಡೌನ್ ಕಟ್ಟಡ ಹಾಗೂ ದೇವರಾಜ ಅರಸು ಮಾರುಕಟ್ಟೆಯ ಪ್ರಕರಣ ಈಗಾಗಲೇ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರಿದೆ. ನ್ಯಾಯಾಲಯ ನೀಡುವ ಆದೇಶದ ಅನ್ವಯ ಉಭಯ ಕಟ್ಟಡಗಳನ್ನು ಉಳಿಸಿಕೊಳ್ಳುವ ಅಥವಾ ಹೊಸದಾಗಿ ನಿರ್ಮಿಸಲು ಸರ್ಕಾರ ಬದ್ಧವಾಗಿದೆ. ನವೀಕರಣವಾಗಲಿ ಅಥವಾ ಹೊಸದಾಗಿ ಕಟ್ಟುವುದಾಗಲಿ ಪಾರಂಪರಿಕತೆಯನ್ನು ಉಳಿಸಿಕೊಂಡೇ ಕೆಲಸ ಮಾಡುತ್ತೇವೆ. ಇನ್ನು ಮೈಸೂರಿಗೆ ಹೊಸ ಯೋಜನೆಗಳನ್ನು ನೀಡುವ ಉದ್ದೇಶವಂತೂ ಇದ್ದೇ ಇದೆ. ಅದಕ್ಕಾಗಿ ರೂಪರೇಷೆಗಳನ್ನು ಸಿದ್ಧಪಡಿಸಲಾಗುವುದು.
ಆಂದೋಲನ: ರಿಯಲ್ ಎಸ್ಟೇಟ್ ಮುಕ್ತ ಮೈಸೂರಾಗಿಸಲು ಏನೇನು ಕ್ರಮಗಳನ್ನು ಕೈಗೊಳ್ಳುತ್ತೀರಿ? ನಗರಾಭಿವೃದ್ಧಿ ಪ್ರಾಧಿಕಾರದಿಂದಲೇ ಮತ್ತಷ್ಟು ಬಡಾವಣೆಗಳನ್ನು ರಚಿಸುವ ಯೋಚನೆ ಇದೆಯೇ?
ಯತೀಂದ್ರ ಸಿದ್ದರಾಮಯ್ಯ: ನಿವೇಶನಗಳ ಲಭ್ಯತೆಗೆ ಅನುಗುಣವಾಗಿ ಹೊಸ ಹೊಸ ಬಡಾವಣೆಗಳನ್ನು ನಿರ್ಮಿಸಿ,ನಿವೇಶನಗಳನ್ನು ವಿತರಿಸುವ ಮೂಲಕ ರಿಯಲ್ ಎಸ್ಟೇಟ್ ದಂಧೆಗೆ ಕಡಿವಾಣ ಹಾಕಬಹುದು. ಬೊಮ್ಮೇನಹಳ್ಳಿ ಬಡಾವಣೆಯ ಕಾಮಗಾರಿ ಪೂರ್ಣಗೊಳಿಸಿ ನಿವೇಶನ ವಿತರಿಸಲಾಗುವುದು ಹಾಗೂ ೫೦ -೫೦ರ ಅನುಪಾತದಲ್ಲಿ ಭೂಮಾಲೀಕರೊಂದಿಗೆ ಸೇರಿ ಬಡವಾಣೆ ನಿರ್ಮಿಸಲಾಗುವುದು. ಈ ನಿಟ್ಟಿನಲ್ಲಿ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಮೈಸೂರು ನಗರ ಅಭಿವೃದ್ಧಿಗೆ ಹಣ ಸಹಾಯದ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು. ಒಟ್ಟಾರೆ ಮೈಸೂರು ನಾಗರಿಕರ ನಿವೇಶನಕ್ಕಾಗಿ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡುತ್ತೇನೆ.
ಆಂದೋಲನ: ಆನ್‌ಲೈನ್ ಸೇವೆಗೆ ಸರ್ವರ್‌ಗಳ ಲೋಪದೋಷಗಳಿಗೆ ಪರಿಹಾರ ಏನು?
ಯತೀಂದ್ರ ಸಿದ್ದರಾಮಯ್ಯ: ಈಗಾಗಲೇ ಆನ್‌ಲೈನ್ ಸರ್ವರ್‌ಗಳ ದೋಷ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ಇಲಾಖೆಯ ಎಲ್ಲ ಸೌಲಭ್ಯಗಳ ಮಾಹಿತಿಗಳೂ ಆನ್‌ಲೈನ್‌ನಲ್ಲೇ ಸರಳವಾಗಿ ಸಾರ್ವಜನಿಕರಿಗೆ ಸಿಗುವಂತೆ ಮಾಡುವ ಮಹದಾಸೆ ಇದೆ. ಬಜೆಟ್‌ನಲ್ಲಿ ಘೋಷಿಸಿರುವ ಐಟಿ ಪಾರ್ಕ್, ಸಿರಿಕಲ್ಚರ್ ಪಾರ್ಕ್ ನಂತಹ ಶಾಶ್ವತ ಯೋಜನೆಗಳ ಜಾರಿಗೆ ಗಂಭೀರ ಪ್ರಯತ್ನ ನಡೆಸಲಾಗುವುದು.





