ನಾಳಿದ್ದು 21ರಂದು ನಡೆಯುವ ನೀಟ್ ಪರೀಕ್ಷೆಯ ಹಿನ್ನೆಲೆಯಲ್ಲಿ ಟೆಲಿಗ್ರಾಂ ಆಪ್‌ಅನ್ನು ಜೂ. 27ರ ವರೆಗೆ ತಾತ್ಕಾಲಿಕವಾಗಿ ಕೇಂದ್ರ ಸರ್ಕಾರ ಬ್ಯಾನ್ ಮಾಡಿದೆ. ಈ ಬ್ಯಾನನ್ನು ಖಾಯಂ ಆಗಿ ಮಾಡಿ ಎಂದು ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದ ಮಾಜಿ ಅಧ್ಯಕ್ಷ ಉಮೇಶ್ ಬಣಕಾರ್ ಮತ್ತೆ ಒತ್ತಾಯ ಮಾಡಿದ್ದಾರೆ. ಅವರು ಅಧ್ಯಕ್ಷರಾಗಿದ್ದ ಅವಧಿಯಲ್ಲಿ, ಕೇಂದ್ರ ವಾರ್ತಾ ಸಚಿವರಿಗೆ ಸಂಘದ ಮೂಲಕ ಈ ಒತ್ತಾಯ ಮಾಡಿದ್ದರು.
ಸಿನಿಮಾ ಪೈರೆಸಿ ಎಂಬುದು ಈಗಾಗಲೇ ಸಂಬಂಧಪಟ್ಟ ಎಲ್ಲರಿಗೂ ಗೊತ್ತಿರುವ ಹಾಗೆ, ಜಾಗತಿಕ ಚಿತ್ರರಂಗವನ್ನು ಪೀಡಿಸುತ್ತಿರುವ ಬಹುದೊಡ್ಡ ಪಿಡುಗು. ತಂತ್ರeನ ಬೆಳೆದಂತೆ ಪೈರೆಸಿ ಮಾಡುವ ವಿಧಾನಗಳೂ ಡಿಜಿಟಲ್ ರೂಪ ಪಡೆದುಕೊಂಡು ಚಿತ್ರೋದ್ಯಮದ ಬೆನ್ನೆಲುಬನ್ನೇ ಮುರಿಯುತ್ತಿವೆ. ವಿಶ್ವದ ಅತ್ಯಽಕ ಚಿತ್ರಗಳನ್ನು ನಿರ್ಮಿಸುತ್ತಿರುವ ಭಾರತದಲ್ಲಿ, ಒಂದು ಅಂದಾಜಿನ ಪ್ರಕಾರ ಪೈರೆಸಿಯಿಂದ ಚಿತ್ರೋದ್ಯಮಕ್ಕೆ ಪ್ರತಿ ವರ್ಷ ಆಗುತ್ತಿರುವ ನಷ್ಟ ಸುಮಾರು ರೂ. ೨೦,೦೦೦ ಕೋಟಿಗೂ ಹೆಚ್ಚು.
ಚಿತ್ರೋದ್ಯಮಕ್ಕೆ ಆಗುವ ನಷ್ಟ ಮಾತ್ರವಲ್ಲದೆ, ಪರೋಕ್ಷವಾಗಿ ಇದು ಚಿತ್ರೋದ್ಯಮವನ್ನು ನಂಬಿಕೊಂಡಿರುವ ಲಕ್ಷಾಂತರ ಮಂದಿ ಕಾರ್ಮಿಕರು, ತಂತ್ರಜ್ಞರು, ಚಿತ್ರಮಂದಿರಗಳ ಸಿಬ್ಬಂದಿಗಳೇ ಮೊದಲಾದವರ ಕೆಲಸಕ್ಕೂ ಎರವಾಗುತ್ತದೆ. ಉದ್ಯಮಕ್ಕೆ ಮಾತ್ರವಲ್ಲದೆ, ಸರಕಾರಕ್ಕೂ ಇದು ತೆರಿಗೆ ನಷ್ಟ ಮಾಡುತ್ತದೆ. ಪೈರೆಸಿಗಳ ಕಾರಣದಿಂದ ಚಿತ್ರಮಂದಿರಗಳಿಗೆ ಹೋಗುವ ಪ್ರೇಕ್ಷಕರ ಸಂಖ್ಯೆ ಕಡಿಮೆಯಾಗುವುರಿಂದ, ಅಲ್ಲಿಂದ ಸಂಗ್ರಹವಾಗುವ ಮನರಂಜನಾ ತೆರಿಗೆಗೆ ಹೊಡೆತ ಬೀಳುತ್ತದೆ. ಇದು ವಾರ್ಷಿಕ ತೆರಿಗೆ ಸಂಗ್ರಹದ ಮೇಲೆ ಪರಿಣಾಮ ಬೀರುತ್ತದೆ. ಕನ್ನಡ ಚಿತ್ರರಂಗ ಕೂಡಾ ಈ ಪೈರೆಸಿ ಕಾಟದಿಂದ ಹೊರಗಿಲ್ಲ. ಪಾನ್ ಇಂಡಿಯಾ ಹೆಸರಿನಲ್ಲಿ ಭಾರೀ ಬಂಡವಾಳ ಹೂಡಿ ಚಿತ್ರ ನಿರ್ಮಿಸುವ ಮಂದಿಗೆ ಪೈರೆಸಿಯಿಂದ ಆಗುವ ನಷ್ಟ ಒಂದು ರೀತಿಯದಾದರೆ, ಸಣ್ಣ ನಿರ್ಮಾಣ ವೆಚ್ಚದ ನಿರ್ಮಾಪಕರಿಗೆ ಆಗುವ ತೊಂದರೆ ಬೇರೆಯೇ ರೀತಿಯದು. ಅದ್ಧೂರಿ ವೆಚ್ಚದ ಚಿತ್ರಗಳು ಮಾತ್ರವಲ್ಲ, ಕಡಿಮೆ ವೆಚ್ಚದ ಚಿತ್ರಗಳೂ ಪೈರೆಸಿಯಾಗಿ ಅದರ ಕೊಂಡಿಗಳು ಕೆಲವೇ ಗಂಟೆಗಳೊಳಗೆ ಆಸಕ್ತರ ಮೊಬೈಲ್‌ಗಳನ್ನು ಸೇರುತ್ತವೆ. ಅಲ್ಲಿ ಶ್ರೀಮಂತ – ಬಡವ ಭೇದವಿಲ್ಲ.
ಸಾಮಾನ್ಯವಾಗಿ ಈ ಪೈರೆಸಿ ಮಾಡಲು ಸಂಬಂಧಪಟ್ಟವರು ಅವರದೇ ಆದ ರೀತಿಯನ್ನು ಅನುಸರಿಸುತ್ತಾರೆ. ಚಿತ್ರಮಂದಿರಗಳಲ್ಲಿ ಅದನ್ನು ರೆಕಾರ್ಡ್ ಮಾಡುವುದು ಒಂದು. ಅತ್ಯಾಧುನಿಕ ಕ್ಯಾಮೆರಾ ಇಲ್ಲವೇ ಮೊಬೈಲ್‌ಗಳ ಮೂಲಕ ತೆರೆಕಂಡ ಚಿತ್ರಮಂದಿರಗಳಲ್ಲಿ ಅದರ ಪ್ರದರ್ಶನ ನಡೆಯುವ ವೇಳೆ ರೆಕಾರ್ಡ್ ಮಾಡುತ್ತಾರೆ. ಅದಕ್ಕಾಗಿ ಚಿತ್ರಮಂದಿರದ ಸಿಬ್ಬಂದಿಗೆ ಇಲ್ಲವೇ ಸಂಬಂಧಪಟ್ಟವರಿಗೆ ಆಮಿಷ ಒಡ್ಡುವ ಜಾಲ ಕಾರ್ಯಪ್ರವೃತ್ತವಾಗುತ್ತದೆ. ಒಟಿಟಿಗಳಲ್ಲಿ ಪ್ರಸಾರವಾಗುವ ಚಿತ್ರಗಳನ್ನು ಆಧುನಿಕ ತಂತ್ರದ ಸಾ-ವೇರ್ ಬಳಸಿ ರೆಕಾರ್ಡ್ ಮಾಡಿ ಪೈರೆಸಿ ಮಾಡುವುದು ಇನ್ನೊಂದು ರೀತಿ. ಡಿಜಿಟಲ್ ರಿಪ್ ಎಂದು ಇದಕ್ಕೆ ಹೇಳುತ್ತಾರೆ.
ಮೂಲಗಳ ಪ್ರಕಾರ, ತಮಿಳ್ ರಾಕರ್ಸ್, ಮೂವಿರೂಲ್ಸ, ಫಿಲ್ಮಿಜಿ ಮುಂತಾದವು ಭಾರತದಲ್ಲಿ ಅತಿ ಹೆಚ್ಚು ಪೈರೆಸಿ ಮಾಡುವ ಜಾಲತಾಣಗಳು. ಈ ತಾಣಗಳ ಡೊಮೈನ್‌ಗಳನ್ನು ಬ್ಯಾನ್ ಮಾಡಿದರೆ, ಕ್ಷಣಾರ್ಧದಲ್ಲಿ ಅವು ಬೇರೊಂದು ಹೆಸರಿನಲ್ಲಿ ಪ್ರತ್ಯಕ್ಷವಾಗುತ್ತವೆ ಎನ್ನುವುದು ಈ ತಂತ್ರಜ್ಞಾನ ಪರಿಣತರ ಮಾತು. ಡಿಜಿಟಲ್ ರಕ್ತಬೀಜಾಸುರ ಸಂತತಿ ಎಂದರೆ ತಪ್ಪೇನಿಲ್ಲ.
ಟೆಲಿಗ್ರಾಂ ಮತ್ತು ಟೊರೆಂಟ್‌ಗಳು ಅತ್ಯಧಿಕ ಪೈರೆಸಿ ಮಾಡುವ ಕೇಂದ್ರಗಳು ಎನ್ನಲಾಗಿದೆ. ಇಲ್ಲಿನ ಅನುಕೂಲ ಎಂದರೆ, ಯಾವುದೇ ಜಾಲತಾಣಗಳ ಕೊಂಡಿ ಇಲ್ಲದೆಯೂ ವಿಡಿಯೋಗಳನ್ನು ನೇರವಾಗಿ ಹಂಚಿಕೊಳ್ಳುವ ವ್ಯವಸ್ಥೆ.
ಟೆಲಿಗ್ರಾಂ ತಾಣದ ಮೂಲಕ ಆಗುವಷ್ಟು ಕನ್ನಡ ಚಿತ್ರಗಳ ಪೈರೆಸಿ ಬೇರೆ ಯಾವುದರಲ್ಲೂ ಅಲ್ಲ ಎನ್ನುವ ಅಭಿಪ್ರಾಯ ಚಿತ್ರೋದ್ಯಮದಲ್ಲಿದೆ. ವಾಟ್ಸಾಪ್ ಗಳ ಗುಂಪಿನಲ್ಲಿ ಹಂಚಿಕೊಳ್ಳುವಂತೆ, ಇಲ್ಲೂ ಹಂಚಿಕೊಳ್ಳ ಬಹುದು. ವಾಟ್ಸಾಪ್ ಬಳಗದ ಸದಸ್ಯರ ಸಂಖ್ಯೆಗೆ ಮಿತಿ ಇದೆ. ಅದು ಸಾವಿರ ದಾಟುವುದಿಲ್ಲ. ಆದರೆ, ಟೆಲಿಗ್ರಾಂನಲ್ಲಿ ಎರಡು ಲಕ್ಷದವರೆಗೆ ಬಳಗದ ಸದಸ್ಯರು ಇರಬಹುದು. ಈ ಕಾರಣದಿಂದಲೇ ಟೆಲಿಗ್ರಾಂನತ್ತ ಎಲ್ಲರ ಕಣ್ಣು. ಟೆಲಿಗ್ರಾಂ ಜಾಲತಾಣವನ್ನು ಖಾಯಂ ಆಗಿ ಬ್ಯಾನ್ ಮಾಡಬೇಕು ಎಂದು ಹೇಳದ ರ ಹಿಂದಿನ ಮರ್ಮ ಇದು. ಪೈರೆಸಿ ನಿಗ್ರಹಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಾನೂನುಗಳನ್ನು ತಂದಿವೆ. ಭಾರತ ಸರ್ಕಾರ ಸಿನಿಮಾಟೊಗ್ರಫಿ (ತಿದ್ದುಪಡಿ) ಕಾಯ್ದೆ ೨೦೨೩ರಲ್ಲಿ ಥಿಯೇಟರ್‌ನಲ್ಲಿ ಅನಧಿಕೃತವಾಗಿ ಸಿನಿಮಾ ರೆಕಾರ್ಡ್ ಮಾಡುವುದು ಮತ್ತು ಅದನ್ನು ಹಂಚಿಕೊಳ್ಳುವುದು ಜಮೀನು ರಹಿತ ಅಪರಾಧ. ಅಪರಾಧ ಸಾಬೀತಾದರೆ ೩ ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ಸಿನಿಮಾದ ಒಟ್ಟು ನಿರ್ಮಾಣ ವೆಚ್ಚದ ಶೇ. ೩ ರಷ್ಟು ದಂಡ ನೀಡಬೇಕು ಎಂದು ಹೇಳಿದೆ. ಆದರೆ ಇಂತಹ ಬಂಧನ ಮತ್ತು ಶಿಕ್ಷೆಯ ವರದಿ ಇನ್ನೂ ಬಂದಂತಿಲ್ಲ. ಕರ್ನಾಟಕ ಸರ್ಕಾರವೂ, ಪೈರೆಸಿಯನ್ನು ಗೂಂಡಾ ಕಾಯ್ದೆಯ ಅಡಿಯಲ್ಲಿ ಸೇರಿಸಿ ವರ್ಷಗಳಾದವು. ಅಂದು, ಇಂದು ಅಪವಾದಗಳನ್ನು ಹೊರತುಪಡಿಸಿದರೆ, ಪೊಲೀಸ್ ಇಲಾಖೆ ಆಗಲಿ, ಉದ್ಯಮ ಆಗಲಿ ಇದನ್ನು ಗಂಭೀರವಾಗಿ ತೆಗೆದುಕೊಂಡಿದೆಯೇ ಎನ್ನುವ ಅನುಮಾನ ಬರುತ್ತದೆ.
ಇತ್ತೀಚೆಗೆ ಈ ನಿಟ್ಟಿನಲ್ಲಿ ಚಲನಚಿತ್ರ ವಾಣಿಜ್ಯ ಮಂಡಳಿ ಹೆಚ್ಚು ಮುತುವರ್ಜಿ ವಹಿಸಿದ ವರ್ತಮಾನ ಇದೆ. ನೆರೆಯ ರಾಜ್ಯದಲ್ಲಿದ್ದಂತೆ ಪೈರೆಸಿ ನಿಗ್ರಹ ಪಡೆಯೊಂದನ್ನು ಪೊಲೀಸ್ ಮತ್ತು ಉದ್ಯಮದ ಸಹಭಾಗಿತ್ವದಲ್ಲಿ ನೇಮಿಸಿ, ಕಾರ್ಯಪ್ರವೃತ್ತವಾಗುವಂತೆ ಮಾಡಬಹುದು.
ಇತ್ತೀಚೆಗೆ ನಟ, ಸಂಸದ ಜಗ್ಗೇಶ್ ಅವರು, ಈ ನಿಟ್ಟಿನಲ್ಲಿ ಒಂದಷ್ಟು ವಿವರಗಳನ್ನು ಕಲೆಹಾಕಿಸಿ ಕೇಂದ್ರದಲ್ಲಿರುವ ಸಂಬಂಧಪಟ್ಟವರ ಗಮನಕ್ಕೆ ತಂದಿದ್ದರು. ಕನ್ನಡ ಚಿತ್ರಗಳನ್ನು ಒಟಿಟಿಗಳು ಕೊಂಡುಕೊಳ್ಳದೆ ಇರುವುದಕ್ಕೆ ಪೈರೆಸಿಯೂ ಒಂದು ಕಾರಣ. ಇಂತಹ ಚಿತ್ರಗಳನ್ನು ನೋಡುವವರ ಸಂಖ್ಯೆ ಹೆಚ್ಚಾದಾಗ, ಒಟಿಟಿಯಲ್ಲಿ ಸದಸ್ಯರಾಗುವವರ ಸಂಖ್ಯೆ ಇಳಿಮುಖವಾಗುತ್ತದೆ. ಅಷ್ಟೇ ಅಲ್ಲ, ಚಿತ್ರ ತೆರೆಕಂಡ ಕೆಲವೇ ಗಂಟೆಗಳಲ್ಲಿ ಅದರ ಪೈರೆಸಿ ಆಗುವುದರಿಂದ ಅಲ್ಲಿಗೂ ಬರುವವರ ಸಂಖ್ಯೆ ಕಡಿಮೆಯಾಗುತ್ತದೆ.
ಪೈರೆಸಿ ಚಿತ್ರಮಂದಿರಗಳ ಆಗಬೇಕು ಎಂದೇನಿಲ್ಲ, ಈಗ ತಮಿಳುನಾಡಿನ ಮುಖ್ಯಮಂತ್ರಿಯಾಗಿರುವ ನಟ ವಿಜಯ್ ಅವರ ಜನನಾಯಗನ್ ಚಿತ್ರ ಇನ್ನೂ ತೆರೆಗೆ ಬಂದಿಲ್ಲ. ಆದರೆ ಅದರ ಪೈರೆಸಿ ಪ್ರತಿಗಳು ಅದಾಗಲೇ ಬಂದಿತ್ತು. ಆ ಚಿತ್ರ ಇನ್ನೂ ಪ್ರಮಾಣೀಕರಣ ಮಂಡಳಿಯಿಂದ ಪ್ರಮಾಣ ಪತ್ರ ಪಡೆದಿಲ್ಲ. ಅಂದರೆ, ಚಿತ್ರ ಸಿದ್ಧವಾಗುವ ಜಾಗದಲ್ಲೂ ಈ ಪೈರೆಸಿ ಮಾಡುವ ಜಾಲದ ಕಬಂಧಬಾಹು ಚಾಚಿದೆ ಎಂದರ್ಥ.
ವರ್ಷಗಳ ಹಿಂದಿನ ಮಾತು. ಅಂತಾರಾಷ್ಟ್ರೀಯ ಖ್ಯಾತಿಯ ನಿರ್ದೇಶಕ ಶೇಖರ್ ಕಪೂರ್, ಈ ಪೈರೆಸಿಯ ಆರಂಭದ ದಿನಗಳಲ್ಲಿ ಹೇಳಿದ್ದ ಮಾತಿದು. ನನ್ನ ಚಿತ್ರ ಪೈರೆಸಿ ಆದರೆ ಅದರಿಂದ ಚಿತ್ರಕ್ಕೆ ಅನುಕೂಲ ಆಗುತ್ತದೆ. ಯಾಕೆಂದರೆ ನನ್ನ ಚಿತ್ರದ ಅನುಭವ ಪಡೆಯಲು ಅದನ್ನು ಚಿತ್ರಮಂದಿರದ ನೋಡಬೇಕು ಎನ್ನುವುದಾಗಿತ್ತು ಎಂಬುದು ಅವರ ಅಭಿಪ್ರಾಯ. ಆಗಿನ್ನೂ ಡಿಜಿಟಲ್ ತಂತ್ರeನ ಈ ಪರಿ ವ್ಯಾಪಿಸಿರಲಿಲ್ಲ. ಒಟಿಟಿ ಬಂದಿರಲಿಲ್ಲ.
ಇಂತಹದೇ ಮಾತುಗಳನ್ನು ಕಲಾತ್ಮಕ ಚಿತ್ರಗಳ ನಿರ್ದೇಶಕರೂ ಹೇಳುವುದಿದೆ. ಅದಕ್ಕೆ ಕಾರಣವೂ ಇಲ್ಲದಿಲ್ಲ. ಭಾರತೀಯ ಭಾಷೆಗಳಲ್ಲಿ ತಯಾರಾಗುತ್ತಿದ್ದ ಕಲಾತ್ಮಕ ಚಿತ್ರಗಳು ಚಿತ್ರಮಂದಿರಗಳಲ್ಲಿ ಈ ಹಿಂದೆ ತೆರೆಕಾಣುತ್ತಿದ್ದವು. ಆದರೆ ಬದಲಾದ ವ್ಯವಹಾರ ರೀತಿ, ಕಲಾತ್ಮಕ ಚಿತ್ರಗಳ ಕುರಿತಂತೆ, ಒಂದು ವರ್ಗದ ಮಂದಿಯ ಅವe, ಇಂತಹ ಚಿತ್ರಗಳನ್ನು ಚಿತ್ರಮಂದಿರದತ್ತ ಬರದಂತೆ ಮಾಡಿತು. ದೂರದರ್ಶನದಲ್ಲಿ ಪ್ರತಿ ಶನಿವಾರ ಪ್ರಶಸ್ತಿವಿಜೇತ ಚಿತ್ರಗಳ ಪ್ರಸಾರ ಆಗುತ್ತಿತ್ತು. ಆದರೆ ಅದೀಗ ಇಲ್ಲ. ಅದರ ಬದಲು ಹಿಂದಿ ಜನಪ್ರಿಯ ಚಿತ್ರಗಳನ್ನು ದೂರದರ್ಶನದ ವಿವಿಧ ವಾಹಿನಿಗಳಲ್ಲಿ ಪ್ರಸಾರ ಮಾಡುಲಾಗುತ್ತಿದೆ.
ರಾಜ್ಯ ಸರ್ಕಾರವೂ ಅಷ್ಟೇ. ಕಲಾತ್ಮಕ ಚಿತ್ರಗಳಿಗೆ ಈ ದಿನಗಳಲ್ಲಿ ವಿಶೇಷ ಆದ್ಯತೆ ನೀಡುತ್ತಿಲ್ಲ. ಮೊದಲು, ಸಹಾಯಧನ ನೀಡಲು ಆರಂಭಿಸಿದ ಕೆಲವು ವರ್ಷಗಳ ನಂತರ, ಕಲಾತ್ಮಕ ಚಿತ್ರಗಳಿಗೆ ಉಳಿದ ಚಿತ್ರಗಳಿಗಿಂತ ಹೆಚ್ಚು ಸಹಾಯಧನ ನೀಡುತ್ತಿತ್ತು. ಆದರೆ ಈಗ ಅದಿಲ್ಲ. ಕಲಾತ್ಮಕ ಚಿತ್ರಗಳ ಹೆಸರಿನಲ್ಲಿ, ಸಿನಿಮಾ ಭಾಷೆಯೇ ಬಾರದ, ಈ ಮಾಧ್ಯಮದ ಗಂಧಗಾಳಿಯೂ ಇಲ್ಲದ ಮಂದಿ ಇದಕ್ಕೆ ಕಾರಣ ಎಂದರೆ ತಪ್ಪೇನೂ ಅಲ್ಲ. ರಾಷ್ಟ್ರಪ್ರಶಸ್ತಿ ವಿಜೇತ ಚಿತ್ರಗಳಿಗೆ, ಅಂತಾರಾಷ್ಟ್ರೀಯ ಮನ ಣೆ ಪಡೆದ ಚಿತ್ರಗಳಿಗೆ ಹೆಚ್ಚಿನ ಸಹಾಯಧನ ನೀಡಲಾಗುತ್ತಿದೆ.
ಪೈರೆಸಿ ವಿರುದ್ಧ ಹೋರಾಡಲು ದಕ್ಷಿಣ ಭಾರತ ಚಲನಚಿತ್ರ ನಿರ್ಮಾಪಕರು ಒಂದಾಗಿರುವುದು ಒಂದು ಒಳ್ಳೆಯ ಬೆಳವಣಿಗೆ. ಹೊಸದಾಗಿ ಸ್ಥಾಪನೆಯಾಗಿರುವ ಈ ಸಂಘಟನೆ ದಕ್ಷಿಣ ಭಾರತದ ಎಲ್ಲ ಭಾಷೆಗಳ ಚಲನಚಿತ್ರ ನಿರ್ಮಾಪಕರ ಸಂಘಗಳ ಜೊತೆ ಸಹಯೋಗ ಪಡೆದು, ಕೇಂದ್ರ ಸರ್ಕಾರದ ಜೊತೆ ಈ ನಿಟ್ಟಿನಲ್ಲಿ ಪತ್ರವ್ಯವಹಾರ ಸಾಗಿರುವುದಾಗಿ ಮೂಲಗಳು ತಿಳಿಸಿವೆ. ಎಂದೋ ಆಗಬೇಕಾಗಿದ್ದ ಕೆಲಸ ತಡವಾಗಿಯಾದರೂ ಆಗುತ್ತಿರುವುದು ಚಿತ್ರೋದ್ಯಮದ ಹಿತದೃಷ್ಟಿಯಿಂದ ಸ್ವಾಗತಾರ್ಹ. ಭಾರತದ ಭಾಷಾ ಚಿತ್ರೋದ್ಯಮಗಳ ಪಾಲಿಗೆ ಕುಠಾರಪ್ರಾಯವಾಗಿರುವ ಪೈರೆಸಿ ನಿಗ್ರಹ ಸಾಧ್ಯವಾದದ್ದೇ ಆದರೆ, ಈ ಉದ್ಯಮಗಳು ಉಸಿರುಗಟ್ಟಿಸುವ ವಾತಾವರಣದಿಂದ ಹೊರಬರಬಹುದು.
ಅದಕ್ಕೂ ಮಿಗಿಲಾಗಿ, ಪ್ರೇಕ್ಷಕ ಪೈರೆಸಿ ಚಿತ್ರಗಳನ್ನು ನೋಡುವುದಿಲ್ಲ ಎಂದು ನಿರ್ಧರಿಸಿದರೆ ಇದು ತಾನೇ ತಾನಾಗಿ ನಿಲ್ಲಬಹುದು.




