Mysore
24
overcast clouds

Social Media

ಗುರುವಾರ, 18 ಜೂನ್ 2026
Light
Dark

ರಸ್ತೆ ಇಲ್ಲದೆ ಯೋಧನ ಕುಟುಂಬ ಪರದಾಟ

ಮಹೇಶ್ ಕರೋಠಿ

ಮುಚ್ಚಿರುವ ರಸ್ತೆಯನ್ನು ಪುನಃ ತೆರೆದು ಸಮಸ್ಯೆ ಬಗೆಹರಿಸಬೇಕೆಂದು ಗ್ರಾಮಸ್ಥರ ಒತ್ತಾಯ

ಕಿಕ್ಕೇರಿ: ಜಮ್ಮು-ಕಾಶ್ಮೀರದ ಗಡಿಯಲ್ಲಿ ದೇಶದ ಭದ್ರತೆಗಾಗಿ ತನ್ನ ಜೀವವನ್ನೇ ಪಣಕ್ಕಿಟ್ಟು ಯೋಧ ದರ್ಶನ್ ಕರ್ತವ್ಯ ನಿರ್ವಹಿಸುತ್ತಿದ್ದರೆ, ಇತ್ತ ಮತ್ತೊಂದೆಡೆ, ಅವರ ತಂದೆ-ತಾಯಿ ಹಾಗೂ ವಯೋವೃದ್ಧ ಅಜ್ಜಿ ತಮ್ಮ ಮನೆಗೆ ರಸ್ತೆ ಇಲ್ಲದೆ ಪರದಾಡುತ್ತಿದ್ದಾರೆ. ದೇಶಕ್ಕಾಗಿ ಸೇವೆ ಸಲ್ಲಿಸುತ್ತಿರುವ ಯೋಧನ ಕುಟುಂಬಕ್ಕೆ ರಸ್ತೆ ಇಲ್ಲದಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

ಕಿಕ್ಕೇರಿ ಹೋಬಳಿಯ ಗುಡೆಹೊಸಹಳ್ಳಿ ಗ್ರಾಮದ ಯೋಧ ದರ್ಶನ್ ಅವರ ಕುಟುಂಬ ಹಲವು ವರ್ಷಗಳಿಂದ ತಮ್ಮ ಜಮೀನಿನಲ್ಲಿ ಮನೆ ನಿರ್ಮಿಸಿಕೊಂಡು ವಾಸಿಸುತ್ತಿದೆ. ಸುಮಾರು ೩೦ ವರ್ಷಗಳಿಂದ ಈ ಕುಟುಂಬ ಬಳಸುತ್ತಿದ್ದ ರಸ್ತೆಯನ್ನು ಇತ್ತೀಚೆಗೆ ಪಕ್ಕದ ಜಮೀನಿನವರು ಗುಂಡಿ ತೋಡಿ ಕಾಲುವೆಯಂತೆ ಮಾರ್ಪ ಡಿಸಿರುವುದರಿಂದ ರಸ್ತೆ ಇಲ್ಲದಂತಾಗಿದೆ.

ಇದರಿಂದ ಯೋಧನ ಕುಟುಂಬ ಸಂಪರ್ಕ ಕಳೆದುಕೊಂಡಂತಾಗಿದೆ. ತುರ್ತು ಸಂದರ್ಭ ದಲ್ಲಿ ಆಸ್ಪತ್ರೆಗೆ ಕರೆದೊಯ್ಯಲು ದಾರಿ ಇಲ್ಲದಿರುವುದು ಮಾನವೀಯತೆಯನ್ನೇ ಪ್ರಶ್ನಿಸುವಂತಾಗಿದೆ.

ಕುಟುಂಬದವರು ಹಾಗೂ ಗ್ರಾಮಸ್ಥರಾದ ಗೋಪಾಲ, ಅನ್ನಪೂರ್ಣ, ಯೋಗಾ, ಮಂಜವ್ವ, ಪಂಕಜಾ, ರುಕ್ಮಿಣಿ, ಸಚಿನ್, ರಾಜೇಶ್ ಅವರು ಮಾತನಾಡಿ, ಹಲವು ವರ್ಷಗಳಿಂದ ಬಳಕೆಯಲ್ಲಿದ್ದ ರಸ್ತೆಯನ್ನು ಏಕಾಏಕಿ ಮುಚ್ಚಿರುವುದರಿಂದ ಯೋಧನ ಕುಟುಂಬ ಮಾತ್ರವಲ್ಲ, ಸಾರ್ವಜನಿಕರಿಗೂ ತೀವ್ರ ತೊಂದರೆಯಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಮಧ್ಯ ಪ್ರವೇಶಿಸಿ ರಸ್ತೆ ಸಮಸ್ಯೆಯನ್ನು ಬಗೆಹರಿಸಬೇಕೆಂದು ಆಗ್ರಹಿಸಿದರು.

ಈ ರಸ್ತೆಯ ಕುರಿತು ೨೦೦೭ರಲ್ಲಿಯೇ ತಹಸಿಲ್ದಾರ್ ಅವರಿಗೆ ಅರ್ಜಿ ಸಲ್ಲಿಸಲಾಗಿತ್ತು. ಸ್ಥಳ ಪರಿಶೀಲನೆ ನಡೆಸಿ ವರದಿ ನೀಡಲಾಗಿದ್ದರೂ ಸಮಸ್ಯೆ ಮಾತ್ರ ಇಂದಿಗೂ ಬಗೆಹರಿದಿಲ್ಲ. ಹಲವು ದಶಕಗಳಿಂದ ಬಳಕೆಯಲ್ಲಿದ್ದ ರಸ್ತೆಯನ್ನು ಏಕಾಏಕಿ ಬಂದ್ ಮಾಡಿರುವುದು ಗ್ರಾಮಸ್ಥರಲ್ಲೂ ಅಸಮಾಧಾನ ಉಂಟುಮಾಡಿದೆ.

ಯೋಧ ದರ್ಶನ್ ಗಡಿಯಲ್ಲಿ ನಿಂತು ದೇಶದ ಕೋಟ್ಯಂತರ ಜನರ ಸುರಕ್ಷತೆಗಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ, ಅವನ ತಂದೆ-ತಾಯಿ ಮತ್ತು ಅಜ್ಜಿ ಇರುವ ಮನೆಗೆ ಹೋಗಲು ರಸ್ತೆ ಇಲ್ಲ. ದೇಶಕ್ಕಾಗಿ ಹೋರಾಡುವ ಯೋಧನ ಕುಟುಂಬದ ಕಣ್ಣೀರಿಗೆ ಬೆಲೆ ಇಲ್ಲವೇ? ಎಂದು ಕುಟುಂಬದವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಗ್ರಾಮಸ್ಥರು ಹಾಗೂ ಸಾರ್ವಜನಿಕರು ಯೋಧ ದರ್ಶನ್ ಅವರ ಕುಟುಂಬಕ್ಕೆ ನ್ಯಾಯ ಸಿಗಬೇಕು ಎಂದು ಆಗ್ರಹಿಸಿದ್ದು, ಹಲವು ವರ್ಷಗಳಿಂದ ಬಳಕೆಯಲ್ಲಿದ್ದ ರಸ್ತೆಯನ್ನು ಪುನಃ ತೆರೆಯಬೇಕು ಎಂದು ಒತ್ತಾಯಿಸಿದ್ದಾರೆ.

ದೇಶಕ್ಕಾಗಿ ಗಡಿಯಲ್ಲಿ ಹಗಲು-ರಾತ್ರಿ ಸೇವೆ ಸಲ್ಲಿಸುತ್ತಿರುವ ಯೋಧನ ಕುಟುಂಬಕ್ಕೆ ರಸ್ತೆ ಒದಗಿಸುವುದು ಸರ್ಕಾರ ಹಾಗೂ ಸಂಬಂಧಪಟ್ಟ ಇಲಾಖೆಗಳ ನೈತಿಕ ಹೊಣೆಗಾರಿಕೆಯಾಗಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಇನ್ನಾದರೂ ಎಚ್ಚೆತ್ತುಕೊಂಡು ಯೋಧ ದರ್ಶನ್ ಅವರ ಕುಟುಂಬದ ಸಂಕಷ್ಟಕ್ಕೆ ಸ್ಪಂದಿಸಿ ರಸ್ತೆ ಸೌಲಭ್ಯ ಕಲ್ಪಿಸುತ್ತಾರೋ ಅಥವಾ ಸುಮ್ಮನಿದ್ದು ಸೈನಿಕನಿಗೆ ಅಗೌರವ ಸೂಚಿಸುತ್ತಾರೋ ಎಂಬುದನ್ನು ಕಾದು ನೋಡಬೇಕಿದೆ.

Tags:
error: Content is protected !!