ನವೀನ್ ಡಿಸೋಜ
ಅ.೭ರಂದು ಅಂತಿಮ ಮತದಾರರ ಪಟ್ಟಿ ಪ್ರಕಟ
ಕೊಡಗಿನಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಗೆ ಸಿದ್ಧತೆ
ಮಡಿಕೇರಿ: ಭಾರತ ಚುನಾವಣಾ ಆಯೋಗವು ರಾಜ್ಯದಲ್ಲಿ ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಕಾರ್ಯಕೈಗೊಳ್ಳಲು ಮುಂದಾಗಿದೆ. ಪ್ರಸ್ತುತ ಜಿಲ್ಲೆಯಲ್ಲಿ ವಿಶೇಷ ಸಮಗ್ರ ಪರಿಷ್ಕರಣೆಯ ಪೂರ್ವಭಾವಿ ಮ್ಯಾಪಿಂಗ್ ಕಾರ್ಯದಲ್ಲಿ ಶೇ.೯೮.೩೦ರಷ್ಟು ಪ್ರಗತಿ ಸಾಧಿಸಲಾಗಿದೆ.
ಯಾವುದೇ ಅರ್ಹ ಮತದಾರರನ್ನು ಕೈಬಿಡುವಂತಿಲ್ಲ. ಯಾವುದೇ ಅನರ್ಹ ವ್ಯಕ್ತಿಯನ್ನು ಮತದಾರರ ಪಟ್ಟಿಯಲ್ಲಿ ಸೇರಿಸುವಂತಿಲ್ಲ ಎಂಬ ಗುರಿಯೊಂದಿಗೆ ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯಕೈಗೊಳ್ಳಲು ನಿರ್ಧರಿಸಲಾಗಿದೆ. ಭಾರತ ಚುನಾವಣಾ ಆಯೋಗವು ವಿಶೇಷ ಸಮಗ್ರ ಪರಿಷ್ಕರಣೆಗೆ ಅರ್ಹತಾ ದಿನಾಂಕ ೨೦೨೬ ಅ.೧ನ್ನು ಘೋಷಿಸಿದೆ.
ಜೂ.೨೦ರಿಂದ ೨೯ರವರೆಗೆ ಪೂರ್ವತಯಾರಿ, ತರಬೇತಿ ಮತ್ತು ಮುದ್ರಣಕ್ಕೆ ಅವಕಾಶ ಕಲ್ಪಿಸಿದೆ. ಜೂ.೩೦ರಿಂದ ಜು.೨೯ರವರೆಗೆ ಮತಗಟ್ಟೆ ಅಧಿಕಾರಿಯಿಂದ ಮನೆಮನೆ ಭೇಟಿ ಹಾಗೂ ಮತಗಟ್ಟೆಗಳ ಪುನರ್ ವಿಂಗಡಣೆ ಕಾರ್ಯ, ಆ.೫ರಂದು ಕರಡು ಮತದಾರರ ಪಟ್ಟಿ ಪ್ರಕಟಗೊಳ್ಳಲಿದೆ.
ಆ.೫ರಿಂದ ಸೆ.೪ರವರೆಗೆ ಹಕ್ಕು ಮತ್ತು ಆಕ್ಷೇಪಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಿದೆ. ಜೊತೆಗೆ ಆ.೫ರಿಂದ ಅ.೩ರವರೆಗೆ ಸೂಚನೆ ಹಂತ, ಹಕ್ಕು ಮತ್ತು ಆಕ್ಷೇಪಣೆಗಳ ವಿಲೇವಾರಿ ನಡೆಯಲಿದೆ. ಅ.೭ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಗೊಳ್ಳಲಿದೆ.
ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯದ ಪೂರ್ವಭಾವಿಯಾಗಿ ೨೦೨೫ರ ಮತದಾರರ ಪಟ್ಟಿಯಲ್ಲಿರುವ ಮತದಾರರನ್ನು ೨೦೦೨ರ ಮತದಾರರ ಪಟ್ಟಿಯೊಂದಿಗೆ ಹೊಂದಾಣಿಕೆ ಮಾಡಿ, ಲಭ್ಯವಿರುವ ಮತದಾರರನ್ನು ಹಾಗೂ ಅವರ ಸಂತತಿ ವಿವರ ಜೋಡಣೆ ಮಾಡಲಾಗುತ್ತಿದ್ದು, ಈ ಕಾರ್ಯದಲ್ಲಿ ಜಿಲ್ಲೆಯು ಶೇ.೯೮.೩೦ರಷ್ಟು ಪ್ರಗತಿ ಸಾಧಿಸಿದೆ. ಒಟ್ಟು ೪,೬೮,೫೪೬ ಮತದಾರರಿದ್ದು, ೪,೬೦,೬೦೨ ಮತದಾರರ ಮ್ಯಾಪಿಂಗ್ ಕಾರ್ಯ ಪೂರ್ಣಗೊಂಡಿದೆ. ೭,೯೪೪ ಮತದಾರರ ಮ್ಯಾಪಿಂಗ್ ಬಾಕಿ ಇದೆ.
೨೦೮-ಮಡಿಕೇರಿ ವಿಧಾನಸಭಾ ಕ್ಷೇತ್ರದ ಸೋಮವಾರಪೇಟೆ ತಾಲ್ಲೂಕಿನಲ್ಲಿ ಒಟ್ಟು ಮತದಾರರು ೮೮,೩೦೫, ಒಟ್ಟು ೮೬,೯೫೩ ಮ್ಯಾಪಿಂಗ್ ಆಗಿದ್ದು, ಶೇ.೯೮.೪೭ ರಷ್ಟು ಪ್ರಗತಿಯಾಗಿದೆ. ೧,೩೫೨ ಮತದಾರರ ಮ್ಯಾಪಿಂಗ್‌ಗೆ ಬಾಕಿ ಇದೆ. ಕುಶಾಲನಗರ ತಾಲ್ಲೂಕಿನಲ್ಲಿ ಒಟ್ಟು ಮತದಾರರು ೯೩,೯೪೭, ಒಟ್ಟು ೯೨,೮೭೨ ಮ್ಯಾಪಿಂಗ್ ಆಗಿದ್ದು, ಶೇ.೯೮.೮೬ ರಷ್ಟು ಪ್ರಗತಿ ಸಾಧಿಸಲಾಗಿದೆ. ೧,೦೭೫ ಮತದಾರರ ಮ್ಯಾಪಿಂಗ್‌ಗೆ ಬಾಕಿ ಇದೆ.
ಮಡಿಕೇರಿ ತಾಲ್ಲೂಕಿನಲ್ಲಿ ಒಟ್ಟು ಮತದಾರರು ೫೬,೧೫೫, ಒಟ್ಟು ೫೪,೮೯೦ ಮ್ಯಾಪಿಂಗ್ ಆಗಿದ್ದು, ಶೇ.೯೭.೭೫ ರಷ್ಟು ಪ್ರಗತಿ ಸಾಧಿಸಲಾಗಿದೆ. ೧,೨೬೫ ಮತದಾರರು ಮ್ಯಾಪಿಂಗ್‌ಗೆ ಬಾಕಿ ಇದೆ. ೨೦೯-ವಿರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಮಡಿಕೇರಿ ತಾಲ್ಲೂಕಿನಲ್ಲಿ ಒಟ್ಟು ಮತದಾರರು ೬೬,೬೩೧, ಒಟ್ಟು ೬೫,೪೪೯ ಮ್ಯಾಪಿಂಗ್ ಆಗಿದ್ದು, ಶೇ.೯೮.೨೩ ರಷ್ಟು ಪ್ರಗತಿ ಸಾಧಿಸಲಾಗಿದೆ. ೧,೧೮೨ ಮತದಾರರ ಮ್ಯಾಪಿಂಗ್‌ಗೆ ಬಾಕಿ ಇದೆ. ವಿರಾಜಪೇಟೆ ತಾಲ್ಲೂಕಿನಲ್ಲಿ ಒಟ್ಟು ಮತದಾರರು ೭೯,೮೯೪, ಒಟ್ಟು ೭೮,೬೮೬ ಮ್ಯಾಪಿಂಗ್ ಆಗಿದ್ದು, ಶೇ.೯೮.೪೯ ರಷ್ಟು ಪ್ರಗತಿ ಸಾಧಿಸಲಾಗಿದೆ. ೧,೨೦೮ ಮತದಾರರ ಮ್ಯಾಪಿಂಗ್‌ಗೆ ಬಾಕಿ ಇದೆ.
ಪೊನ್ನಂಪೇಟೆ ತಾಲ್ಲೂಕಿನಲ್ಲಿ ಒಟ್ಟು ಮತದಾರರು ೮೩,೬೧೪, ಒಟ್ಟು ೮೧,೭೫೨ ಮ್ಯಾಪಿಂಗ್ ಆಗಿದ್ದು, ಶೇ.೯೭.೭೭ ರಷ್ಟು ಪ್ರಗತಿ ಸಾಧಿಸಲಾಗಿದೆ. ೧,೮೬೨ ಮತದಾರರ ಮ್ಯಾಪಿಂಗ್‌ಗೆ ಬಾಕಿ ಇದೆ. ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರಗಳಿಗೂ ಮತದಾರರ ನೋಂದಣಾಧಿಕಾರಿಗಳು ಮತ್ತು ಸಹಾಯಕ ಮತದಾರರ ನೋಂದಣಾಧಿಕಾರಿಗಳನ್ನು ನೇಮಕ ಮಾಡಲಾಗಿದ್ದು, ೨೦೮- ಮಡಿಕೇರಿ ಕ್ಷೇತ್ರಕ್ಕೆ ಉಪ ವಿಭಾಗಾಧೀಕಾರಿ ಚಕ್ಕಿ, ೨೦೯-ವಿರಾಜಪೇಟೆ ಕ್ಷೇತ್ರಕ್ಕೆ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಆರ್. ಮಂಜುನಾಥ್ ಅವರನ್ನು ನೇಮಕ ಮಾಡಲಾಗಿದೆ. ಸಹಾಯಕ ಮತದಾರರ ನೋಂದಣಾಧಿಕಾರಿಗಳಾಗಿ ತಾಲ್ಲೂಕು ತಹಸಿಲ್ದಾರ್‌ಗಳನ್ನು ನೇಮಕ ಮಾಡಲಾಗಿದೆ.
” ಭಾರತ ಚುನಾವಣಾ ಆಯೋಗವು ರಾಜ್ಯದಲ್ಲಿ ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯ ಕೈಗೊಳ್ಳಲು ವೇಳಾಪಟ್ಟಿ ಹೊರಡಿಸಿದೆ. ಕೊಡಗು ಜಿಲ್ಲಾಡಳಿತದಿಂದ ಈ ಸಂಬಂಧ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಪೂರ್ವಭಾವಿ ಮ್ಯಾಪಿಂಗ್ ಕಾರ್ಯ ಈಗಾಗಲೇ ಶೇ.೯೮.೩೦ರಷ್ಟು ಪೂರ್ಣಗೊಂಡಿದೆ. ಬೂತ್ ಮಟ್ಟದ ಅಧಿಕಾರಿಗಳು ಪ್ರತಿಯೊಂದು ಮನೆಗೂ ಭೇಟಿ ನೀಡಿ ಮಾಹಿತಿ ಸಂಗ್ರಹಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಎಲ್ಲರೂ ಕೈಜೋಡಿಸಬೇಕು.”
-ಎಸ್.ಜೆ.ಸೋಮಶೇಖರ್, ಕೊಡಗು ಜಿಲ್ಲಾಧಿಕಾರಿ
ಮೇಲ್ವಿಚಾರಕರ ನೇಮಕ:
ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಯಲ್ಲಿ ಜಿಲ್ಲೆಯಲ್ಲಿ ೫೫೨ ಬಿಎಲ್ ಒಗಳು ಹಾಗೂ ೯೬ ಬಿಎಲ್‌ಒ ಮೇಲ್ವಿಚಾರಕರನ್ನು ನೇಮಕ ಮಾಡಲಾಗಿದೆ. ೨೦೮-ಮಡಿಕೇರಿ ವಿಧಾನಸಭಾ ಕ್ಷೇತ್ರದ ೨೭೫ ಬಿಎಲ್‌ಒಗಳು, ೩೫ ಬಿಎಲ್‌ಒ ಮೇಲ್ವಿಚಾರಕರು, ೨೦೯-ವಿರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ೨೭೭ ಬಿಎಲ್‌ಒಗಳು ಮತ್ತು ೬೧ ಬಿಎಲ್‌ಒ ಮೇಲ್ವಿಚಾರಕರನ್ನು ನೇಮಕ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಎಸ್.ಜೆ.ಸೋಮಶೇಖರ್ ತಿಳಿಸಿದ್ದಾರೆ.





