Mysore
33
scattered clouds

Social Media

ಗುರುವಾರ, 28 ಮೇ 2026
Light
Dark

ಪ್ರವಾಸಿಗರ ಆಕರ್ಷಣೆಗೆ ವರುಣ ಕೆರೆಗೆ ನವಸ್ಪರ್ಶ

ಕೆ.ಬಿ.ರಮೇಶನಾಯಕ

೧೫ ಕೋಟಿ ರೂಪಾಯಿ ವೆಚ್ಚದಲ್ಲಿ ಕೆರೆ ಸೌಂದರ್ಯೀಕರಣ 

ಪ್ರವಾಸಿಗರ ಕಣ್ಮನ ಸೆಳೆಯಲು ಹತ್ತು ಹಲವು ಮನರಂಜನಾ ಚಟುವಟಿಕೆಗಳು

ಮೈಸೂರಿನಿಂದ ೧೩ ಕಿಮೀ ದೂರದಲ್ಲಿರುವ ವರುಣ ಕೆರೆಗೆ ಜಲಾಶಯದ ನೀರು 

ಜಿಲ್ಲಾ ಉಸ್ತುವಾರಿ ಸಚಿವರ ಬಯಕೆಗೆ ಸ್ಪಂದಿಸಿದ ಸಿಎಂ

ನೀರನ್ನು ವೈಜ್ಞಾನಿಕವಾಗಿ ಶುದ್ಧೀಕರಿಸಲು ನೈಸರ್ಗಿಕ ಜೈವಿಕ ವ್ಯವಸ್ಥೆ(ಎನ್‌ಬಿಎಸ್) ಅಳವಡಿಕೆ

ಮೈಸೂರು: ನಾಡಹಬ್ಬ ದಸರಾ ಮಹೋತ್ಸವದ ವೇಳೆ ಜಲ ಸಾಹಸ ಕ್ರೀಡೆಗಳಲ್ಲದೆ ವರ್ಷವಿಡೀ ಜಲಪ್ರಿಯರು ಹಾಗೂ ಪ್ರವಾಸಿಗರನ್ನು ಆಕರ್ಷಿಸಲು ವರುಣ ಕೆರೆಗೆ ನವ ಸ್ಪರ್ಶ ನೀಡಲಿದ್ದು, ವರುಣ ನಾಲೆಯಿಂದ ಕೆರೆಗೆ ಶುದ್ಧ ನೀರು ಹರಿಯಲಿದೆ.

ಕೆರೆಯನ್ನು ಅತ್ಯಾಕರ್ಷಕ ಪ್ರವಾಸಿತಾಣವಾಗಿ ರೂಪುಗೊಳಿಸುವ ಜತೆಗೆ, ವರ್ಷ ಪೂರ್ತಿ ಜಲ ಕ್ರೀಡೆಗಳಿಗೆ ನೆರವಾಗುವಂತೆ ಮಾಡಲು ಕೆರೆಯನ್ನು ತುಂಬಿಸಲಾಗುತ್ತದೆ. ಚಾಮುಂಡಿಬೆಟ್ಟದ ತಪ್ಪಲಿನಿಂದ, ತಿಪ್ಪಯ್ಯನ ಕೆರೆ ಮೂಲದಿಂದ ಹರಿದು ಬರುತ್ತಿದ್ದ ಜಲ ಮೂಲ ಕಾಣೆಯಾಗಿರುವ ಪರಿಣಾಮ ಚಿಕ್ಕಹಳ್ಳಿಯ ವರಕೋಡು ಬಳಿ ನಾಲೆಯಿಂದ ಕೆರೆಗೆ ನೀರು ಹರಿಸಲಾಗುತ್ತದೆ. ಹೀಗಾಗಿ, ಮುಂದಿನ ದಿನಗಳಲ್ಲಿ ಮೈಸೂರು-ತಿ.ನರಸೀಪುರ ರಸ್ತೆಯಲ್ಲಿರುವ ವರುಣ ಕೆರೆಯು ಪ್ರವಾಸಿ ಕೇಂದ್ರವಾಗಿ ಕಂಗೊಳಿಸುವುದಲ್ಲದೆ ದೋಣಿ ವಿಹಾರದ ವೇಳೆ ಕಲುಷಿತ ನೀರಿನಿಂದ ಹೊರ ಬರುತ್ತಿದ್ದ ವಾಸನೆ ತಪ್ಪಿದಂತಾಗಲಿದೆ.

ಡಿ ವರ್ಗಕ್ಕೆ ಸೇರಿದ್ದ ಕೆರೆ: ವಾಜಮಂಗಲ ಗ್ರಾಪಂ, ಎಂಡಿಎ ಬಡಾವಣೆಗಳ, ಚಿಕ್ಕಹಳ್ಳಿ ಗ್ರಾಮ ಹಾಗೂ ಗ್ರಾಮಕ್ಕೆ ಹೊಂದಿಕೊಂಡಂತಿರುವ ಎಂಡಿಎ ವ್ಯಾಪ್ತಿಯಲ್ಲಿನ ಮಲೀನ ನೀರು ಡಿ.ದೇವರಾಜ ಅರಸು ಮುಖ್ಯ ನಾಲೆಯ ಹಳ್ಳದ ಮೂಲಕ ಕೆರೆಗೆ ಬಂದು ಸೇರುತ್ತಿತ್ತು. ಇದನ್ನು ತಡೆಯಲು ಯಾವುದೇ ಪ್ರಯತ್ನಗಳು ನಡೆಯದ ಕಾರಣ ಮಲಿನ ನೀರು ಕೆರೆಗೆ ಸೇರುವುದು ಹೆಚ್ಚಾಗಿದ್ದರಿಂದ ದೋಣಿ ವಿಹಾರಕ್ಕೆ ಬರುವ ಪ್ರವಾಸಿಗರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಬಹುದೆಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮೈಸೂರು ಪ್ರಾದೇಶಿಕ ಕಚೇರಿ ಅಧಿಕಾರಿಗಳು ಕೆರೆಯ ನೀರಿನ ಗುಣಮಟ್ಟ ಪರೀಕ್ಷೆಗೆ ಕೆರೆಯ ನೀರಿನ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಿದ್ದರು. ಪರೀಕ್ಷೆಯ ವೇಳೆ ಕೆರೆಯ ನೀರಿನ ಗುಣಮಟ್ಟವು ಡಿ ವರ್ಗಕ್ಕೆ ಸೇರಿದೆ ಎನ್ನುವ ವರದಿಯನ್ನು ಮಂಡಳಿ ನೀಡಿದೆ. ಹೀಗಾಗಿ, ವರುಣ ಕೆರೆಯಲ್ಲಿ ದೋಣಿವಿಹಾರವನ್ನು ತಾತ್ಕಾಲಿಕವಾಗಿ ಬಂದ್ ಮಾಡುವ ಜತೆಗೆ, ಕೆರೆಯನ್ನು ಅಭಿವೃದ್ಧಿಪಡಿಸಬೇಕೆಂದು ಪ್ರವಾಸೋದ್ಯಮ ಇಲಾಖೆ ಜಂಟಿ ನಿರ್ದೇಶಕರಾಗಿದ್ದ ಎಂ.ಕೆ.ಸವಿತಾ ಅವರು ಸರ್ಕಾರಕ್ಕೆ ಪತ್ರ ಬರೆದಿದ್ದರು. ಈ ಪತ್ರದ ಆಧಾರದ ಮೇಲೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ತಂದು ಕೆರೆಯನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲು ಅನುದಾನದ ಬೇಡಿಕೆ ಇಟ್ಟಿದ್ದರು.

ಅದರಂತೆ, ಕಾವೇರಿ ನೀರಾವರಿ ನಿಗಮವು ೧೫ ಕೋಟಿ ರೂಪಾಯಿ ವೆಚ್ಚದ ವಿಸ್ತೃತ ಯೋಜನಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿತ್ತು. ಹೀಗಾಗಿ,ರಾಜ್ಯಸರ್ಕಾರ ೧೪.೭೫ ಕೋಟಿ ರೂ.ಗಳ ಅನುದಾನ ಬಿಡುಗಡೆ ಮಾಡಿರು ವುದರಿಂದ ಕಾಮಗಾರಿ ಆರಂಭಿಸಲಾಗಿದೆ.

ನೈಸರ್ಗಿಕ ಜೈವಿಕ ವ್ಯವಸ್ಥೆ(ಎನ್‌ಬಿಎಸ್) ತಂತ್ರಜ್ಞಾನ: ಭವಿಷ್ಯದಲ್ಲಿ ಕೆರೆಗೆ ಮಲೀನ ನೀರು ಸೇರದಂತೆ ಹಾಗೂ ನಿರ್ವಹಣೆಯ ವೆಚ್ಚವನ್ನು ತಪ್ಪಿಸಲು ಕಾವೇರಿ ನೀರಾವರಿ ನಿಗಮವು ನೈಸರ್ಗಿಕ ಜೈವಿಕ ವ್ಯವಸ್ಥೆ ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತಿದೆ. ವರುಣ ಕೆರೆಗೆ ಸೇರುತ್ತಿರುವ ನೀರನ್ನು ಸಂಪೂರ್ಣವಾಗಿ ಶುದ್ಧೀಕರಿಸುವ ಸಲುವಾಗಿ ಒಳಚರಂಡಿ ಸಂಸ್ಕರಣಾ ಘಟಕವನ್ನು ನಿರ್ಮಾಣ ಮಾಡುವುದಕ್ಕೆ ಹೆಚ್ಚಿನ ಪ್ರಮಾಣದ ಭೂಮಿಯ ಅವಶ್ಯಕತೆ ಇದೆ. Sequencial batch reactor  (ಎಸ್‌ಬಿಆರ್)ತಂತ್ರಜ್ಞಾನದಂತೆ ನಿರ್ಮಿಸಿದರೆ ವಿದ್ಯುತ್ ಅವಶ್ಯಕತೆ ಜತೆಗೆ, ಸತತವಾಗಿ ನಿರ್ವಹಣೆ ಮಾಡಬೇಕಾದ ಅನಿವಾರ್ಯತೆ ಇರುತ್ತಿತ್ತು. ಆದ್ದರಿಂದ ಈ ಕ್ರಮವನ್ನು ಕೈ ಬಿಟ್ಟು ನೈಸರ್ಗಿಕವಾಗಿ ಜೈವಿಕ ವ್ಯವಸ್ಥೆಯ ಮೂಲಕ ಪುನರುಜ್ಜೀವನಗೊಳಿಸುವ ಮತ್ತು ಸೌಂದರ್ಯೀಕರಣಗೊಳಿಸುವ ಪದ್ಧತಿಯಡಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ.

ಎನ್‌ಬಿಎಸ್ ವ್ಯವಸ್ಥೆಯಲ್ಲಿ ಮಲೀನ ನೀರು ಕೆರೆಗೆ ಸೇರದಂತೆ ಕೆರೆಯ ಪರಿಽಯಲ್ಲಿ ಪ್ರತ್ಯೇಕ ನಾಲೆ ಏರಿ ನಿರ್ಮಿಸಿ, ಕೆರೆಯ ಕೋಡಿ ಮೂಲಕ ಹರಿಬಿಡುವ ವ್ಯವಸ್ಥೆ ಕಲ್ಪಿಸಲಾಗುತ್ತದೆ. ನಾಲೆಯ ಉದ್ದಗಲಕ್ಕೂ ಕ್ಯಾನ್ನಾ ಇಂಡಿಕಾ ಮತ್ತು ವೆಡೆಲಿಯಾ ತಳಿಯ ಸಸ್ಯಗಳನ್ನು ಬೆಳೆಸಿ ಈ ಸಸ್ಯಗಳಿಂದ ನೈಸರ್ಗಿಕವಾಗಿ ಜೈವಿಕ ವ್ಯವಸ್ಥೆಯ ಮೂಲಕ ಸಲರ್, ನೈಟ್ರೋಜನ್ ಮೊದಲಾದ ರಸಾಯನಿಕಗಳನ್ನು ಹೀರಿಕೊಂಡು ಶುದ್ಧೀಕರಿಸಿ ಕೋಡಿಯ ಮೂಲಕವೇ ಹಳ್ಳಕ್ಕೆ ಬಿಡುವುದು ವಿಶೇಷವಾಗಿದೆ.

ಕೆರೆಯ ಸೌಂದರ್ಯೀಕರಣ: ಪ್ರವಾಸಿಗ ರನ್ನು ಆಕರ್ಷಿಸುವ ಜತೆಗೆ ಹಾಗೂ ದೋಣಿ ವಿಹಾರಕ್ಕೆ ಪೂರಕವಾಗಿ ಕೆರೆ ಸೌಂದರ್ಯೀಕರಣಗೊಳಿಸಿ ಪ್ರವಾಸೋದ್ಯಮ ತಾಣವಾಗಿ ಮಾಡಲಾಗುತ್ತದೆ. ಕೆರೆ ಬಳಿ ಕೆಫೆಟೇರಿಯ, ಉದ್ಯಾನವನ, ಸಾರ್ವಜನಿಕರು ವಾಯ ವಿಹಾರ ಮಾಡಲು ವಾಕ್ ವೇ ನಿರ್ಮಾಣ, ಸ್ವಾಗತ ಕಮಾನು ಸೇರಿದಂತೆ ಇನ್ನಿತರ ವ್ಯವಸ್ಥೆ ಮಾಡಲಾಗುತ್ತದೆ. ಮುಖ್ಯರಸ್ತೆಯಿಂದ ಕೆರೆ ಅಂಚಿನಲ್ಲಿ ನಿಂತು ನೋಡುವಂತೆ ಕೂಡ ವ್ಯವಸ್ಥೆ ಮಾಡಲಾಗುತ್ತದೆ ಎಂದು ಹೇಳಲಾಗಿದೆ.

” ವರುಣ ಕೆರೆಗೆ ಕಲುಷಿತ ನೀರು ಸೇರುವುದನ್ನು ತಡೆಗಟ್ಟುವಂತೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಅವರ ಗಮನಕ್ಕೆ ತಂದಿದ್ದರಿಂದ ಸರ್ಕಾರ ಅನುದಾನ ಬಿಡುಗಡೆ ಮಾಡಿತ್ತು. ಕೆರೆ ಶುದ್ಧೀಕರಣವಾದ ಮೇಲೆ ಮಲೀನ ನೀರು ಸೇರುವುದಿಲ್ಲ. ಮುಂದಿನ ದಿನಗಳಲ್ಲಿ ವ್ಯವಸ್ಥಿತವಾಗಿ ನಿರ್ವಹಣೆ ಮಾಡಬೇಕು.”

-ಅಹಿಂದ ಜವರಪ್ಪ

” ಮೈಸೂರು ಭಾಗದಲ್ಲಿ ಮೊದಲ ಬಾರಿಗೆ ಎನ್‌ಬಿಎಸ್ ವ್ಯವಸ್ಥೆ ಅಳವಡಿಸಿಕೊಂಡು ಕೆರೆ ಶುದ್ಧೀಕರಣ ಮಾಡಲಾಗುತ್ತದೆ. ಮುಂದೆ ಕೆರೆಗೆ ಕಲುಷಿತ ನೀರು ಸೇರಲ್ಲ. ನಿರ್ವಹಣೆಗೆ ಕರೆಂಟ್ ಬೇಕಿಲ್ಲ,ಅನುದಾನ ಬೇಕಾಗಿಲ್ಲ. ಜುಲೈ ಅಂತ್ಯಕ್ಕೆ ಕೆರೆಯ ಹೂಳು ತೆಗೆಯುವುದು ಮುಗಿಯುತ್ತದೆ. ನಂತರ ಉಳಿದ ಕಾಮಗಾರಿಗಳನ್ನು ನಡೆಸಲಾಗುವುದು. ಕೆರೆ ಸಂರಕ್ಷಣೆ ತಜ್ಞರ ಸಲಹೆಯಂತೆ ಎನ್‌ಬಿಎಸ್ ವ್ಯವಸ್ಥೆಯನ್ನು ಅಳವಡಿಸಿಕೊಂಡಿರುವುದರಿಂದ ಮುಂದೆ ಕೆರೆಯ ನೀರು ಶುದ್ಧವಾಗಿ ಉಳಿಯಲಿದೆ.”

-ಮಹೇಶ್,ಮುಖ್ಯ ಅಭಿಯಂತರರು, ಕಾವೇರಿ ನೀರಾವರಿ ನಿಗಮ

 

 

Tags:
error: Content is protected !!