ಪಂಜು ಗಂಗೊಳ್ಳಿ
ಅಗ್ಗದ ಸ್ಯಾನಿಟರಿ ಪ್ಯಾಡ್ ಮೂಲಕ ಬಡ ಮಹಿಳೆಯರಿಗೆ ನೆರವು
೨೧ನೇ ಶತಮಾನದ, ಆಧುನಿಕ ಎನಿಸಿರುವ ನಮ್ಮ ಸಮಾಜದಲ್ಲಿ ಈಗಲೂ ಹೆಣ್ಣಿನ ಮುಟ್ಟಿನ ಬಗ್ಗೆ ಸಾರ್ವಜನಿಕವಾಗಿ ಮಾತಾಡುವುದು ಹೆಚ್ಚೂ ಕಡಿಮೆ ನಿಷೇಧ ಎನಿಸಿಕೊಂಡಿದೆ. ಮುಟ್ಟು ಅಂದರೆ ಮೈಲಿಗೆ, ಮುಟ್ಟಾದ ಮಹಿಳೆ ಧಾರ್ಮಿಕವಾಗಿ ಹಾಗೂ ಸಾಮಾಜಿಕವಾಗಿಯೂ ಬಹಿಷ್ಕೃತೆ ಅಂತ ಎನಿಸಿಕೊಳ್ಳುವುದು ಈಗಲೂ ನಡೆಯುತ್ತಿದೆ. ಸ್ವತಃ ಮಹಿಳೆಯರೂ ಮುಟ್ಟಿನ ಬಗ್ಗೆ ಇದಕ್ಕಿಂತ ಹೆಚ್ಚು ಭಿನ್ನವಾದ ಅಭಿಪ್ರಾಯ ಹೊಂದಿಲ್ಲವೆಂದರೆ ಅದು ಅತಿಶಯೋಕ್ತಿಯಾಗಲಾರದು. ಇಂತಹದರಲ್ಲಿ, ತೊಂಬತ್ತರ ದಶಕದಲ್ಲಿ ಒಬ್ಬ ಪುರುಷ ಮುಟ್ಟಿನ ಬಗ್ಗೆ ಸಾರ್ವಜನಿಕವಾಗಿ ಮಾತಾಡುವುದನ್ನು, ಮುಟ್ಟಿನ ಸಮಯದ ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸಿದುದನ್ನು ಆಗಿನ ಸಮಾಜ ಹೇಗೆ ಸ್ವೀಕರಿಸಿರಬಹುದೆಂಬುದನ್ನು ಊಹಿಸಿಕೊಳ್ಳಲು ಹೆಚ್ಚು ಕಷ್ಟವಾಗಲಿಕ್ಕಿಲ್ಲ.
೧೯೬೧ರಲ್ಲಿ ತಮಿಳುನಾಡಿನ ಕೊಯಂಬತ್ತೂರು ಜಿಲ್ಲೆಯ ಒಂದು ಹಳ್ಳಿಯಲ್ಲಿ ಹುಟ್ಟಿದ ಅರುಣಾಚಲಂ ಮುರುಗಾನಂದಮ್ ೧೯೯೦ರಲ್ಲಿ ಮದುವೆಯಾದರು. ಒಂದು ದಿನ ಅರ ಹೆಂಡತಿ ಶಾಂತಿ ಮುಟ್ಟಾದಾಗ ಸ್ಯಾನಿಟರಿ ಪ್ಯಾಡಿನ ಬದಲು ಹಳೆಯ ಬಟ್ಟೆಯನ್ನು ಉಪಯೋಗಿಸುವುದನ್ನು ನೋಡಿದರು. ಪ್ಯಾಡ್ ಉಪಯೋಗಿಸುವ ಬದಲು ಹಳೆ ಬಟ್ಟೆ ಏಕೆ ಉಪಯೋಗಿಸುತ್ತೀಯ ಎಂದು ಕೇಳಿದಾಗ ಆಕೆ ‘ಅದು ಬಹಳ ದುಬಾರಿ. ನಾನು ಮತ್ತು ಮನೆಯ ಇತರ ಹೆಂಗಸರು ಅದನ್ನು ಖರೀದಿಸಲು ಹಣ ಖರ್ಚು ಮಾಡಿದರೆ ಮನೆಗೆ ಹಾಲು ತರುವುದನ್ನು ನಿಲ್ಲಿಸಬೇಕಾಗುತ್ತದೆ’ ಎಂದು ಹೇಳಿದರು. ಆಗ ಮುರುಗಾನಂದಮ್ ತಾನೇ ಏಕೆ ಅಗ್ಗದ ಸ್ಯಾನಿಟರಿ ಪ್ಯಾಡ್ ತಯಾರಿಸಬಾರದು ಎಂದು ಆಲೋಚಿಸಿ ಆ ಕೆಲಸಕ್ಕೆ ಮುಂದಾದರು. ಮೊದಲು ಅವರು ಸಾಧಾರಣ ಹತ್ತಿಯನ್ನು ಬಳಸಿ, ಸ್ಯಾನಿಟರಿ ಪ್ಯಾಡಿನ ಮಾದರಿಯೊಂದನ್ನು ತಯಾರು ಮಾಡಿ, ಹೆಂಡತಿಗೆ ಕೊಟ್ಟು, ಬಳಸಿ ಅಭಿಪ್ರಾಯ ತಿಳಿಸಲು ಹೇಳಿದರು. ಆಕೆ ಮುಟ್ಟಾದಾಗ ಅದನ್ನು ಬಳಸಿ, ಅದು ಏನೇನೂ ಪ್ರಯೋಜನವಿಲ್ಲವೆಂದು ಹೇಳಿ ಮೊದಲಿನಂತೆಯೇ ಹಳೇ ಬಟ್ಟೆಯನ್ನು ಬಳಸುವುದನ್ನು ಮುಂದುವರಿಸಿದರು. ಆಗ ಮುರುಗಾನಂದಮ್ ಮಾರುಕಟ್ಟೆಯಲ್ಲಿ ಸಿಗುವ ಸ್ಯಾನಿಟರಿ ಪ್ಯಾಡ್‌ಗಳನ್ನು ತಂದು, ಅವುಗಳನ್ನು ಪರೀಕ್ಷಿಸಿ, ಬೇರೆ ಬೇರೆ ವಸ್ತುಗಳನ್ನು ಬಳಸಿ ಕೆಲವು ಮಾದರಿಗಳನ್ನು ತಯಾರಿಸಿದರು. ಆದರೆ, ಅವರಿಗೆ ಆಗ ಬೇರೊಂದು ಸಮಸ್ಯೆ ಎದುರಾಯಿತು.
ತನ್ನ ಪ್ರತಿಯೊಂದು ಮಾದರಿಯನ್ನು ಹೆಂಡತಿಗೆ ಕೊಟ್ಟು ಪ್ರಯೋಗಕ್ಕೆ ಒಳಪಡಿಸಲು ಅವರು ತಿಂಗಳು ಕಾಲ ಕಾಯಬೇಕಾಗುತ್ತಿತ್ತು. ಆಗ ಅವರು ತಮ್ಮ ಸಹೋದರಿಯರು ಹಾಗೂ ಇತರ ಕೆಲವು ಹೆಂಗಸರಿಗೆ ಕೊಟ್ಟು ಅವರ ಅಭಿಪ್ರಾಯ ಸಂಗ್ರಹಿಸಲು ಪ್ರಯತ್ನಿಸಿದರು. ಆದರೆ, ಅವರೆಲ್ಲರೂ ಮುಜುಗರದಿಂದಾಗಿ ನಿರಾಕರಿಸಿದರು.
ಆದರೂ, ಮುರುಗಾನಂದಮ್ ತಮ್ಮ ಪ್ರಯತ್ನದಿಂದ ಹಿಂಜರಿಯಲಿಲ್ಲ. ಅವರು ಹತ್ತಿರದ ಒಂದು ಮೆಡಿಕಲ್ ಕಾಲೇಜಿಗೆ ಹೋಗಿ, ಅಲ್ಲಿನ ವಿದ್ಯಾರ್ಥಿನಿಯರಿಗೆ ತನ್ನ ಪ್ಯಾಡ್‌ಗಳನ್ನು ಕೊಟ್ಟು ಅಭಿಪ್ರಾಯ ಸಂಗ್ರಹಿಸಲು ಪ್ರಯತ್ನಿಸಿದರೂ ಅಲ್ಲಿಯೂ ಸಫಲರಾಗಲಿಲ್ಲ. ಇದರಿಂದ ಬೇಸತ್ತ ಮುರುಗನಂತಮ್ ತನ್ನ ಪ್ಯಾಡನ್ನು ತನ್ನ ಮೇಲೆಯೇ ಪ್ರಯೋಗಿಸಲು ಮುಂದಾದರು! ಹೇಗೆಂದರೆ, ಫುಟ್‌ಬಾಲ್‌ಗಳಲ್ಲಿ ಬಳಸುವ ಒಂದು ರಬ್ಬರ್ ಬ್ಲಾಡರ್‌ಗೆ ಒಂದು ನಳಿಕೆಯನ್ನು ಜೋಡಿಸಿದರು. ಮಾಂಸದಂಗಡಿಯಿಂದ ಆಡಿನ ರಕ್ತವನ್ನು ತಂದು ಅದಕ್ಕೆ ತುಂಬಿ, ತನ್ನ ಸೊಂಟಕ್ಕೆ ಕಟ್ಟಿಕೊಂಡರು. ಒಳ ಉಡುಪಿನಲ್ಲಿ ತನ್ನ ಸ್ಯಾನಿಟರಿ ಪ್ಯಾಡಿನ ಮಾದರಿಯನ್ನು ಇಟ್ಟು, ಅದಕ್ಕೆ ಬ್ಲಾಡರಿನ ನಳಿಕೆಯಿಂದ ರಕ್ತ ಸೋರಿ ಬರುವಂತೆ ಮಾಡಿ, ತನ್ನ ಎಂದಿನ ಕೆಲಸಗಳಲ್ಲಿ ನಿರತರಾದರು.
ಆದರೆ, ಆಗಿದ್ದೇ ಬೇರೆ. ಅವರ ಪ್ಯಾಂಟು ರಕ್ತಮಯವಾಗಿ, ಅಸಹ್ಯ ವಾಸನೆ ಬರತೊಡಗಿತು. ಮುರುಗಾನಂದಮ್‌ರ ನೆರೆಹೊರೆಯವರಿಗೆ ಈಗ ಅವರು ಒಬ್ಬ ಹುಚ್ಚ ಅಥವಾ ವಿಕೃತ ಮನಸ್ಸಿನವನು ಎಂಬುದರಲ್ಲಿ ಯಾವುದೇಅನುಮಾನ ಉಳಿಯಲಿಲ್ಲ. ಸುತ್ತಮುತ್ತಲಿನವರು ತನ್ನ ಗಂಡನ ಬಗ್ಗೆ ತುಚ್ಛವಾಗಿ ಮಾತಾಡುವುದನ್ನು ನೋಡಿ ಪತ್ನಿ ಶಾಂತಿ ಮನೆ ಬಿಟ್ಟು, ತನ್ನ ತವರು ಮನೆಗೆ ಹೋಗಿ, ಮುರುಗಾನಂದಮ್‌ಗೆ ವಿಚ್ಛೇದನ ನೋಟಿಸ್ ಕಳಿಸಿದರು. ಅವರ ಸಹೋದರಿಯರು ಹಾಗೂ ತಾಯಿಯೂ ಅವರಿಂದ ಪ್ರತ್ಯೇಕವಾಗಿ, ಮುರುಗಾನಂದಮ್ ಅಕ್ಷರಶಃ ಏಕಾಂಗಿಯಾಗಿ ಜೀವಿಸಬೇಕಾಯಿತು. ಅಷ್ಟೆಲ್ಲ ಆದರೂ ಮುರುಗಾನಂದಮ್ ತನ್ನ ಪ್ರಯತ್ನವನ್ನು ನಿಲ್ಲಿಸಲಿಲ್ಲ. ಕೊನೆಗೆ ಅವರಿಗೆ ಕಂಪೆನಿಗಳ ಸ್ಯಾನಿಟರಿ ಪ್ಯಾಡ್‌ಗಳಲ್ಲಿ ಬಳಸುವುದು ಸಾಮಾನ್ಯ ಹತ್ತಿಯಲ್ಲ, ಬದಲಿಗೆ ಪೈನ್ ಮರಗಳಿಂದ ವಿಶೇಷವಾಗಿ ತಯಾರಿಸಿದ ಸೆಲ್ಯುಲೋಸ್ ಎಂಬುದು ತಿಳಿಯಿತು. ಆ ವಿಶೇಷ ಸೆಲ್ಯೂಲೋಸ್ ತಯಾರಿಸಲು ಬಳಸುವ ಯಂತ್ರದ ಬೆಲೆ ನಾಲ್ಕು ಕೋಟಿ ರುಪಾಯಿಗೂ ಅಧಿಕ. ಮುರುಗಾನಂದಮ್ ಅದರಿಂದಲೂ ಧೃತಿಗೆಡಲಿಲ್ಲ.
ನಾಲ್ಕು ವರ್ಷ ಶ್ರಮ ಪಟ್ಟು, ತನ್ನದೇ ಒಂದು ಸರಳ ಯಂತ್ರವನ್ನು ತಯಾರು ಮಾಡಿ, ಸೆಲ್ಯೂಲೋಸ್ ತಯಾರಿಸುವಲ್ಲಿ ಯಶಸ್ವಿಯಾದರು. ಮುರುಗಾನಂದಮ್ ಕಂಡು ಹಿಡಿದ ಯಂತ್ರ ಎಷ್ಟು ಸರಳವಾದುದೆಂದರೆ ಗ್ರಾಮೀಣ ಪ್ರದೇಶದ ಒಬ್ಬ ಸಾಧಾರಣ ಮಹಿಳೆಯೂ ತುಸು ತರಬೇತಿ ಪಡೆದು ಆ ಯಂತ್ರವನ್ನು ಬಳಸಿ ಸ್ಯಾನಿಟರಿ ಪ್ಯಾಡುಗಳನ್ನು ತಯಾರಿಸಬಹುದು. ಹಲವು ಕಾರ್ಪೊರೇಟ್ ಕಂಪೆನಿಗಳು ಕೋಟ್ಯಂತರ ರುಪಾಯಿ ಕೊಟ್ಟು ತಮ್ಮ ಯಂತ್ರವನ್ನು ಖರೀದಿಸಲು ಮುಂದೆ ಬಂದರೂ, ಮುರುಗಾನಂದಮ್ಗ್ರಾಮೀಣ ಭಾಗದ ಬಡ ಮಹಿಳೆಯರಿಗೆ ಅದರ ಉಪಯೋಗ ಸಿಗಬೇಕೆಂಬ ಉದ್ದೇಶಕ್ಕೆ ಅದಕ್ಕೊಪ್ಪಲಿಲ್ಲ. ಅವರು ತಮ್ಮ ಯಂತ್ರಕ್ಕೆ ಪೇಟೆಂಟ್ ಪಡೆದು, ಜಯಶ್ರೀ ಇಂಡಸ್ಟ್ರೀಸ್ ಎಂಬ ಹೆಸರಿನ ಒಂದು ಕಂಪೆನಿ ಪ್ರಾರಂಭಿಸಿದರು. ಆಮದು ಮಾಡಲ್ಪಡುವ ಸ್ಯಾನಿಟರಿ ಪ್ಯಾಡ್ ತಯಾರಿಸುವ ಒಂದು ವಿದೇಶೀ ಯಂತ್ರದ ಬೆಲೆ ನಾಲ್ಕೂವರೆ ಕೋಟಿ ರುಪಾಯಿಗೂ ಅಧಿಕ.
ಮುರುಗಾನಂದಮ್‌ರ ಯಂತ್ರದ ಬೆಲೆ ಕೇವಲ ೨೦ ಸಾವಿರ ರುಪಾಯಿ! ಇದು ಕೈಯಿಂದ ಚಲಾಯಿಸುವ ನಮೂನೆ. ನಂತರದ ದಿನಗಳಲ್ಲಿ ಅವರು ಸಂಪೂರ್ಣ ಆಟೋಮ್ಯಾಟಿಕ್ ಯಂತ್ರಗಳನ್ನು ಆವಿಷ್ಕರಿಸಿದ್ದು ಅವುಗಳ ಬೆಲೆ ಕೆಲವು ಲಕ್ಷ ರೂಪಾಯಿಗಳಾಗುತ್ತವೆ. ದೇಶದ ೨೭ ರಾಜ್ಯಗಳಲ್ಲಿ ವಿವಿಧ ಮಹಿಳಾ ಸಂಘಸಂಸ್ಥೆಗಳು ಮುರುಗಾನಂದಮ್‌ರ ಯಂತ್ರಗಳನ್ನು ಬಳಸುತ್ತಿವೆ. ಕೆಲವು ಅಭಿವೃದ್ಧಿಶೀಲ ದೇಶಗಳಿಗೂ ಮುರುಗಾನಂದಮ್ ತಮ್ಮ ಯಂತ್ರವನ್ನು ರಫ್ತು ಮಾಡುತ್ತಾರೆ.
ಒಂದು ನೈಸರ್ಗಿಕ ದೈಹಿಕ ಕ್ರಿಯೆಯಾದ ಮುಟ್ಟು ಭಾರತದಲ್ಲಿ ಕೇವಲ ಮಹಿಳಾ ಆರೋಗ್ಯ ಹಾಗೂ ಗೌರವದ ಸಮಸ್ಯೆಯಾಗಿ ಮಾತ್ರವಲ್ಲದೆ, ಅದೊಂದು ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮಸ್ಯೆಯಾಗಿ ಪರಿಣಮಿಸಿದೆ. ದುಬಾರಿ ಎಂಬ ಕಾರಣಕ್ಕೆ ಸ್ಯಾನಿಟರಿ ಪ್ಯಾಡ್‌ಗಳನ್ನು ಬಳಸುವ ಭಾರತೀಯ ಮಹಿಳೆಯರ ಸಂಖ್ಯೆ ಒಟ್ಟು ಜನಸಂಖ್ಯೆಯಲ್ಲಿ ಶೇ.೧೦ಕ್ಕೂ ಕಡಿಮೆ. ಗ್ರಾಮೀಣ ಪ್ರದೇಶಗಳ ಎಷ್ಟೋ ಹೆಣ್ಣು ಮಕ್ಕಳು ಮುಟ್ಟಿನ ಕಾರಣಕ್ಕೆ ಶಾಲಾ ಕಲಿಕೆಯನ್ನು ಅರ್ಧದಲ್ಲಿ ನಿಲ್ಲಿಸುವುದು ಈಗಲೂ ಮುಂದುವರಿದಿದೆ. ಮುರುಗನಂತಮ್‌ರ ಅಗ್ಗದ ಸ್ಯಾನಿಟರಿ ಪ್ಯಾಡ್ ಈ ಸಮಸ್ಯೆಗಳ ಪರಿಹಾರಕ್ಕೆ ನೀಡುತ್ತಿರುವ ಕೊಡುಗೆ ಅಗಾಧವಾದುದು. ಇದನ್ನು ಮನಗಂಡು ೨೦೧೪ರಲ್ಲಿ ಟೈಮ್ಸ್ ಪತ್ರಿಕೆ ಇವರನ್ನು ಜಗತ್ತಿನ ಸಾರ್ವಕಾಲಿಕ ೧೦೦ ಪ್ರಭಾವಶಾಲಿ ವ್ಯಕ್ತಿಗಳಲ್ಲೊಬ್ಬರು ಎಂದು ಹೆಸರಿಸಿತು. ೨೦೧೬ರಲ್ಲಿ ಕೇಂದ್ರ ಸರ್ಕಾರ ಇವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತು. ೨೦೧೮ರಲ್ಲಿ ಇವರ ಬದುಕನ್ನು ಆಧರಿಸಿದ ‘ಪ್ಯಾಡ್‌ಮ್ಯಾನ್’ ಎಂಬ ಹೆಸರಿನ ಹಿಂದಿ ಸಿನಿಮಾ ತೆರೆ ಕಂಡಿತು. ಈಗ ಅವರು ೨೦೨೬ರ ಸಾಲಿನ ನೋಬೆಲ್ ಶಾಂತಿ ಪ್ರಶಸ್ತಿಗೆ ನಾಮಾಂಕಿತಗೊಂಡಿರುವುದು ಅವರ ಕೆಲಸದ ಮಹತ್ವವನ್ನು ಸೂಚಿಸುತ್ತದೆ.
” ಮುರುಗಾನಂದಮ್ ಕಂಡು ಹಿಡಿದ ಯಂತ್ರ ಎಷ್ಟು ಸರಳವಾದುದೆಂದರೆ ಗ್ರಾಮೀಣ ಪ್ರದೇಶದ ಒಬ್ಬಸಾಧಾರಣ ಮಹಿಳೆಯೂ ತುಸು ತರಬೇತಿ ಪಡೆದು ಆ ಯಂತ್ರವನ್ನು ಬಳಸಿ ಸ್ಯಾನಿಟರಿ ಪ್ಯಾಡುಗಳನ್ನು ತಯಾರಿಸಬಹುದು. ಹಲವು ಕಾರ್ಪೊರೇಟ್ ಕಂಪೆನಿಗಳು ಕೋಟ್ಯಂತರ ರುಪಾಯಿ ಕೊಟ್ಟು ತಮ್ಮ ಯಂತ್ರವನ್ನು ಖರೀದಿಸಲು ಮುಂದೆ ಬಂದರೂ, ಮುರುಗಾನಂದಮ್ ಗ್ರಾಮೀಣ ಭಾಗದ ಬಡ ಮಹಿಳೆಯರಿಗೆ ಅದರ ಉಪಯೋಗ ಸಿಗಬೇಕೆಂಬ ಉದ್ದೇಶಕ್ಕೆ ಅದಕ್ಕೊಪ್ಪಲಿಲ್ಲ.”





