ಮೈಸೂರು : ಸಾಂಸ್ಕೃತಿಕ ನಗರಿ ಮೈಸೂರಿನ ಗರಿಮೆಯ ಕಿರೀಟದಂತಿರುವ, ಅಚ್ಚ ಹಸಿರಿನ ನಡುವಿನ ೧೮೩ ವರ್ಷಗಳ ಇತಿಹಾಸವಿರುವ ಅರಮ ನೆಯೊಂದು ಶಿಥಿಲಗೊಂಡಿದೆ. ಪಾಳುಬಿದ್ದಂತಾಗಿ ಪಾರಂಪರಿಕತೆಗೆ ಧಕ್ಕೆಯಾಗಿದೆ. ರಾಜರ ಕಾಲದಿಂದ ಇಂದಿನವರೆಗೂ ಶಿಕ್ಷಣ ಕೇಂದ್ರವಾಗಿರುವ ‘ವಸಂತ ಮಹಲ್’ ಬಳಕೆಯಲ್ಲಿದ್ದರೂ ಕಟ್ಟಡ ಶಿಥಿಲವಾಗಿದ್ದು, ಅಂತಿಮ ದಿನಗಳನ್ನು ಎಣಿಸುತ್ತಿದೆ.
ಮೈಸೂರು ಸಂಸ್ಥಾನದಲ್ಲಿ ತನ್ನದೇ ಆದ ವೈಶಿಷ್ಟ್ಯತೆ ಹೊಂದಿದ್ದ ವಸಂತ ಮಹಲ್‌ನ ಅಸ್ತಿತ್ವವು ಇಂದು ಅವಸಾನದೆಡೆಗೆ ಸಾಗುತ್ತಿದೆ. ನಗರದ ಇಟ್ಟಿಗೆಗೂಡು ಮುಖ್ಯರಸ್ತೆಯಲ್ಲಿರುವ ವಸಂತ ಮಹಲ್, ವೈಭೋಗ ವಿಲಾಸಿಯ ಸಂಕೇತವಾಗಿದೆ. ಇಂದು ಅದರ ಕಟ್ಟಡ ಸಂಪೂರ್ಣವಾಗಿ ಹಾಳಾಗಿ ಎಂದು ಕುಸಿಯುತ್ತದೋ ಎಂಬ ಆತಂಕದ ವಾತಾವರಣ ನಿರ್ಮಾಣವಾಗಿದೆ. ಗೋಡೆಗಳು ಬಣ್ಣ ಕಾಣದೇ ದಶಕಗಳೇ ಕಳೆದಿವೆ. ದಪ್ಪ ದಪ್ಪ ಗೋಡೆಗಳು ಬಿರುಕು ಬಿಟ್ಟು, ಗಾರೆ ಚಕ್ಕೆಗಳು ಉದುರಿ ಬಿದ್ದಿವೆ. ಮೇಲ್ಚಾವಣಿ ಮಳೆಯಲ್ಲಿ ನೆನೆದು, ಬಿಸಿಲಿನಲ್ಲಿ ಒಣಗಿ ಹಾಳಾಗಿದೆ. ಗೋಡೆಗಳ ಮೇಲೆ ಪಾಚಿ ಕಟ್ಟಿದ್ದು, ಗಿಡಗಂಟಿ ಬೆಳೆದುಕೊಂಡಿದೆ. ಶತಮಾ ನ ಕಂಡು ಪಾರಂಪರಿಕ ಹಿರಿಮೆಯ, ಆಳುವ ಅರಸರ ಬಂಗಲೆಯ ಕಟ್ಟಡ, ಶಿಥಿಲಗೊಂಡು ಜೀರ್ಣೋದ್ಧಾರವಾಗದೇ ಪಾಳುಬಿದ್ದಂತಾಗಿದೆ.
ಶಿಕ್ಷಣ ಕೇಂದ್ರ ವಸಂತ ಮಹಲ್
೩೬ ಎಕರೆ ವಿಸ್ತೀರ್ಣದ ವಿಶಾಲವಾದ ಜಾಗದಲ್ಲಿ ಅಚ್ಚ ಹಸಿರಿನ ವಾತಾವರಣದಲ್ಲಿ ವಸಂತ್ ಮಹಲ್‌ಅನ್ನು ೧೮೪೨ರಲ್ಲಿ ಮೈಸೂರು ಒಡೆಯರು ನಿರ್ಮಾಣ ಮಾಡಿದ್ದರು. ಅಂದಿನಿಂದಲೂ ರಾಜ ಮನೆತನದ ಶಿಕ್ಷಣ ಕೇಂದ್ರವಾಗಿ ಈ ಅರಮನೆ ಬಳಕೆಯಾಗುತ್ತಿತ್ತು. ಮಹಡಿಯನ್ನೊಳಗೊಂಡಂ ತಹ ಅರಮನೆ ಟಸ್ಕನ್ ಶೈಲಿಯಲ್ಲಿ ಕಟ್ಟಲಾಗಿದ್ದು, ಅರಮನೆಯ ಮುಂಭಾಗವನ್ನು ಮೃದುವಾದ ಕಬ್ಬಿಣದಿಂದ ನಿರ್ಮಿಸಲಾಗಿದೆ. ಈ ಕಟ್ಟಡವ ನ್ನು ಹಲವು ವರ್ಷಗಳ ಹಿಂದೆ, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್)ಗೆ ನೀಡಲಾಗಿದ್ದು, ಸಂಸ್ಥೆ ಆಡಳಿತ ನಡೆಸುತ್ತಿದೆ. ಸಂಪೂರ್ಣ ಶಿಥಿಲವಾಗಿರುವ ಕಟ್ಟಡ ಈವರೆಗೂ ದುರಸ್ತಿಯನ್ನೇ ಕಂಡಿಲ್ಲ. ಶಿಥಿಲಾವಸ್ಥೆಯ ಕಟ್ಟಡದಲ್ಲಿಯೇ ಅಧಿಕಾರಿಗಳು ಆತಂಕದಲ್ಲಿ ಕೆಲಸ ನಿರ್ವಹಿಸುವ ಪರಿಸ್ಥಿತಿ ಇದೆ.
ಪಾಳು ಬಿದ್ದಂತಿರುವ ಕಟ್ಟಡ
ವೈಭವದ ಈ ಅರಮನೆ ನೂರು ವರ್ಷಗಳನ್ನು ಪೂರೈಸಿದ್ದು, ಒಮ್ಮೆಯೂ ದುರಸ್ತಿ ಕಾರ್ಯ ನಡೆಯದ ಪರಿಣಾಮ ಕಟ್ಟಡ ಸಂಪೂರ್ಣ ಹಾಳಾಗಿದೆ. ಮೊದಲ ಮಹಡಿಯಲ್ಲಿ ಮೇಲ್ಚಾವಣಿ ಬಿರುಕು ಬಿಟ್ಟಿದ್ದು ಮಳೆಗಾಲದಲ್ಲಿ ನೀರು ಸೋರುತ್ತದೆ. ಸೂಕ್ತ ನಿರ್ವಹಣೆಯಿಲ್ಲದೇ ಕಟ್ಟಡ ಶಿಥಿಲಾವಸ್ಥೆಯಲ್ಲಿರುವ ಕಾರಣ ಗೋಡೆಗಳೆಲ್ಲ ವಸ್ತಿ ಹಿಡಿಯುತ್ತವೆ.
ಮೇಲ್ಚಾವಣಿ ಕೆಲವೆಡೆ ಮುರಿದುಬಿದ್ದಿದ್ದು, ಮರದಿಂದ ನಿರ್ಮಿತವಾದ ಕಿಟಕಿ ಬಾಗಿಲುಗಳು ದುಸ್ಥಿತಿಯಲ್ಲಿವೆ. ಈ ಕಟ್ಟಡ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ.
ನಿರ್ವಹಣೆ ಯಾರ ಜವಾಬ್ದಾರಿ?
ವಸಂತ ಮಹಲ್ ನೂರು ವರ್ಷಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ಪಾರಂಪರಿಕ ಕಟ್ಟಡ ಎಂದು ಪಾರಂಪರಿಕ ಇಲಾಖೆಗೆ ಸೇರಿಸಲಾಗಿದೆ. ಆದರೆ ಈ ಕಟ್ಟಡ ದಲ್ಲಿ ಡಯಟ್ ಸಂಸ್ಥೆಯು ಆಡಳಿತ ನಡೆಸುತ್ತಿದೆ. ಇದರ ನಿರ್ವಹಣೆಯನ್ನು ಸಂಸ್ಥೆಯೇ ಮಾಡಬೇಕಾಗಿದೆ. ಆದರೆ ಜೀರ್ಣೋದ್ಧಾರ ಕಾರ್ಯ ಯಾರದ್ದು ಎಂಬ ಗೊಂದಲವಿದ್ದು, ಅದರ ಜೀರ್ಣೋದ್ಧಾರ ಕೆಲಸವು ಪಾರಂಪರಿಕ ಇಲಾಖೆಗೆ ಸಂಬಂಧಿಸಿದ್ದು ಎಂಬ ಅನುಮಾನವಿದೆ.
ಪಾರಂಪರಿಕ ಇಲಾಖೆಯ ವ್ಯಾಪ್ತಿಗೆ ವಸಂತ್ ಮಹಲ್ ಒಳಪಟ್ಟರೂ ಅದರಲ್ಲಿ ಆಡಳಿತ ನಡೆಸುವ ಸಂಸ್ಥೆಯೇ ದುರಸ್ತಿಯ ಹೊಣೆ ಹೊರಬೇಕಿದೆ ಎಂದು ಪಾರಂಪರಿಕ ಇಲಾಖೆಯ ಸೂಚನೆಯಿದೆ. ೨೦೨೦ರ ಬಳಿಕ ಪಾರಂಪರಿಕ ಇಲಾಖೆಯ ನೇತೃತ್ವದಲ್ಲಿ ಆಯಾ ಜಿಲ್ಲೆಯ ಪಾರಂಪರಿಕ ಕಟ್ಟಡಗಳ ಜವಾಬ್ದಾರಿಯನ್ನು ನಿರ್ವಹಿಸಲು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಜಿಲ್ಲಾ ಪಾರಂಪರಿಕ ಸಮಿತಿ ರಚಿಸಿದ್ದು, ಮಾರ್ಗಸೂಚಿ ಮೇರೆಗೆ ಕಟ್ಟಡ ನಿರ್ವಹಣೆಯ ಸಂಸ್ಥೆಗಳು ದುರಸ್ತಿ ಕಾರ್ಯ ನಡೆಸಬೇಕಿದೆ.
ಒಮ್ಮೆಯೂ ದುರಸ್ತಿ ಕಾಣದ ಕಟ್ಟಡ
೨೦೦೭-೦೮ರಲ್ಲಿ ಡಯಟ್ ಸಂಸ್ಥೆಯಿಂದ ಸಣ್ಣಪುಟ್ಟದಾಗಿ ತೇಪೆ ಹಚ್ಚುವ ಕೆಲಸ ಮಾಡಲಾಗಿತ್ತು. ಈ ಕಟ್ಟಡ ಬಳಕೆಗೆ ಯೋಗ್ಯವಾಗಿದ್ದು, ಇದರ ಪುನಶ್ಚೇತನ ಅವಶ್ಯ ಎಂದು ಪಾರಂಪರಿಕ ಇಲಾಖೆ ಪರಿಶೀಲನೆ ನಡೆಸಿ ೨೦೧೯-೨೦ನೇ ಸಾಲಿನಲ್ಲಿ ಸರ್ಕಾರಕ್ಕೆ ಡಿಪಿಆರ್ ಸಲ್ಲಿಸಿ ದುರಸ್ತಿಗೆ ೩ ಕೋಟಿ ರೂ. ಅನುದಾನ ನೀಡುವಂತೆ ಡಯಟ್ ಸಂಸ್ಥೆಯ ಸಹಯೋಗದಲ್ಲಿ ಮನವಿ ಸಲ್ಲಿಸಲಾಗಿತ್ತು.
ಆದರೆ, ಅನುದಾನ ಮೊತ್ತ ಹೆಚ್ಚೆಂದು ಸರ್ಕಾರ ಈವರೆಗೂ ಅನುಮೋದನೆ ನೀಡಿಲ್ಲ. ಈವರೆಗೂ ಎರಡು ಮೂರು ಬಾರಿ ಮನವಿ ಸಲ್ಲಿಸಿದರೂ ಸರ್ಕಾರಗಳು ಗಮನಹರಿಸಿಲ್ಲ. ಆ ಮೂಲಕ ಪಾರಂಪರಿಕ ಕಟ್ಟಡ ಉಳಿವಿಗೆ ಸರ್ಕಾರಗಳು ನಿರ್ಲಕ್ಷ್ಯ ತೋರುತ್ತಿವೆಯೇ ಎಂಬ ಪ್ರಶ್ನೆ ಮೂಡುತ್ತಿದೆ.
ಇದೀಗ ಡಯಟ್ ಎಕ್ಸಲೆನ್ಸ್ ವತಿಯಿಂದ ಡಯಟ್ ಗೆ ಪ್ರತ್ಯೇಕ ಕಟ್ಟಡ ನಿರ್ಮಿಸಿಕೊಳ್ಳಲು ೭ ಕೋಟಿ ರೂ. ಅನುದಾನ ನೀಡಲು ಮುಂದಾಗಿದ್ದು, ಈ ಹಣವನ್ನು ವಸಂತ್ ಮಹಲ್ ದುರಸ್ತಿಗೆ ಬಳಸುವಂತಿಲ್ಲ. ಒಂದು ವೇಳೆ ಡಯಟ್ ಸಂಸ್ಥೆಗೆ ಪ್ರತ್ಯೇಕ ಹೊಸ ಕಟ್ಟಡ ನಿರ್ಮಾಣವಾದರೆ, ವಸಂತ ಮಹಲ್ ಸ್ಥಿತಿ ಅವಸಾನವಾಗುತ್ತದೆ ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಏನೇ ಆಗಲಿ ಪಾರಂಪರಿಕ ಕಟ್ಟಡಗಳ ಉಳಿವಿನ ಜವಾಬ್ದಾರಿ ಸರ್ಕಾರಗಳದ್ದಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು, ಸರ್ಕಾರಗಳು ವಸಂತ್ ಮಹಲ್‌ಅನ್ನು ದುರಸ್ತಿಗೊಳಿಸಿ ಮೈಸೂರಿನ ಪಾರಂಪರಿಕತೆಯನ್ನು ಕಾಪಾಡುವ ಹೊಣೆಯನ್ನು ಹೊರಬೇಕಿದೆ.




