Mysore
35
scattered clouds

Social Media

ಸೋಮವಾರ, 04 ಮೇ 2026
Light
Dark

ಶಿವಾಜಿ ಗಣೇಶನ್‌ ಅವರ ವಾರದ ಅಂಕಣ: ಬಂಗಾಳ-ಕೇರಳದಲ್ಲಿ ಬದಲಾವಣೆಯ ಸುಳಿವು?

ಅಧಿಕಾರ ಹಿಡಿಯಲು ದಿನದ ಇಪ್ಪತ್ನಾಲ್ಕು ಗಂಟೆಯೂ ರಾಜಕೀಯ ಲೆಕ್ಕಾಚಾರ ಹಾಕುವುದರಲ್ಲಿ ನಿಪುಣರೆಂದೇ ಖ್ಯಾತಿ ಪಡೆದಿದ್ದ ಜನತಾದಳದ ಅಗ್ರಗಣ್ಯ ನಾಯಕ ಎಚ್.ಡಿ. ದೇವೇಗೌಡರನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಈಗ ಮೀರಿಸುತ್ತಿದ್ದಾರೆ. ಪ್ರತಿವರ್ಷವೂ ನಾಲ್ಕು ರಾಜ್ಯಗಳ ಚುನಾವಣೆ ಸರದಿ ಬರುತ್ತಿದ್ದು, ಅವುಗಳನ್ನು ಭಾರತೀಯ ಜನತಾ ಪಕ್ಷದ ವಶಕ್ಕೆ ತೆಗೆದುಕೊಳ್ಳಲು ಮೋದಿ-ಶಾ ಜೋಡಿ ನಡೆಸುತ್ತಾ ಬಂದಿರುವ ರಾಜಕೀಯ ತಂತ್ರಗಾರಿಕೆ ಒಮ್ಮೊಮ್ಮೆ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೂ ಅಣಕಿಸಿಬಿಡುವಂತೆ ಮಾಡುತ್ತಿರುವುದು ಈಗ ಗುಟ್ಟಾಗಿ ಉಳಿದಿಲ್ಲ ಎನ್ನುವುದಕ್ಕೆ ಪಶ್ಚಿಮ ಬಂಗಾಳದಲ್ಲಿ ಕಳೆದ ಆರು ತಿಂಗಳುಗಳಿಂದ ನಡೆಸಿಕೊಂಡು ಬಂದಿರುವ ಘಟನಾವಳಿಗಳ ಇತಿಹಾಸವನ್ನೊಮ್ಮೆ ಗಮನಿಸಿದಾಗ ತಿಳಿಯುತ್ತದೆ.

ಅಂತು ಪ್ರಧಾನಿ ಮೋದಿ ಮತ್ತು ಬಿಜೆಪಿಯ ಚುನಾವಣಾ ತಂತ್ರಗಾರಿಕೆಯಲ್ಲಿ ಪರಿಣತರೆಂದೇ ಖ್ಯಾತಿಯಾಗಿರುವ ಗೃಹ ಸಚಿವ ಅಮಿತ್ ಶಾ ಅವರ ಕೆಂಗಣ್ಣಿಗೆ ಗುರಿಯಾಗಿರುವ ಪಶ್ಚಿಮ ಬಂಗಾಳ ಸೇರಿದಂತೆ ತಮಿಳುನಾಡು, ಕೇರಳಂ, ಅಸ್ಸಾಂ ಮತ್ತು ಕೇಂದ್ರಾಡಳಿತ ಪ್ರದೇಶಗಳ ವಿಧಾನಸಭೆ ಚುನಾವಣೆಗಳು ಮುಗಿದು ಫಲಿತಾಂಶಕ್ಕಾಗಿ ಸೋಮವಾರದವರೆಗೆ ಕಾಯಬೇಕಾಗಿದೆ.

ನಿರೀಕ್ಷೆಯಂತೆ ಪಶ್ಚಿಮ ಬಂಗಾಳದ ಕೆಲವು ಕಡೆ ಚುನಾವಣೆಗೆ ಸಂಬಂಧಿಸಿದ ಗಲಭೆಗಳು ನಡೆದಿರುವುದನ್ನು ಬಿಟ್ಟರೆ ಉಳಿದ ರಾಜ್ಯಗಳಲ್ಲಿ ರಾಜಕೀಯ ಪೈಪೋಟಿಯ ನಡುವೆ ಮತದಾನ ಶಾಂತಿಯುತವಾಗಿಯೇ ನಡೆದಿದೆ. ಚುನಾವಣಾ ಆಯೋಗ ಕಳೆದ ಒಂದು ವರ್ಷದಿಂದ ನಡೆಸುತ್ತಿರುವ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಕಾರ್ಯವು ಎಲ್ಲಡೆ ಗೊಂದಲ ಮತ್ತು ಪ್ರತಿಭಟನೆಗೆ ಅವಕಾಶ ಮಾಡಿಕೊಟ್ಟಿರುವುದು ಸುಳ್ಳಲ್ಲ. ಕಳೆದ ಕೆಲವು ತಿಂಗಳ ಹಿಂದೆ ನಡೆದ ಬಿಹಾರ, ಮಹಾರಾಷ್ಟ್ರ, ಜಾರ್ಖಂಡ್, ಒಡಿಶಾ ಮತ್ತು ಹರಿಯಾಣದಲ್ಲೂ ಅರ್ಹರಲ್ಲ ಎಂದು ಮತದಾರರ ಪಟ್ಟಿಯಿಂದ ಲಕ್ಷಾಂತರ ಮತದಾರರ ಹೆಸರನ್ನು ತೆಗೆದುಹಾಕಲಾಯಿತು. ಅದೇ ಪ್ರಕ್ರಿಯೆ ಈಗ ಚುನಾವಣೆ ನಡೆದ ಐದು ರಾಜ್ಯಗಳಲ್ಲಿಯೂ ಮರುಕಳಿಸಿದೆ. ಆದರೆ ಪಶ್ಚಿಮ ಬಂಗಾಳದಲ್ಲಿ ಈ ಮತದಾರರ ವಿಶೇಷ ಪರಿಷ್ಕರಣೆ ಕಾರ್ಯ ಸುಪ್ರೀಂ ಕೋರ್ಟಿನ ಮೆಟ್ಟಿಲನ್ನು ಹತ್ತಿತು. ಅರ್ಹರಲ್ಲ ಎನ್ನುವ ಕಾರಣವೊಡ್ಡಿ ಸುಮಾರು ೯೦ ಲಕ್ಷ ಮಂದಿ ಮತದಾರರನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ. ಅಧಿಕಾರ ಹಿಡಿಯಲು ಕೇಂದ್ರ ಸರ್ಕಾರದ ಬಿಜೆಪಿಯು ಸೇನೆ ಕಳುಹಿಸುವುದೊಂದನ್ನು ಬಿಟ್ಟು ಎಲ್ಲ ಅಧಿಕಾರವನ್ನೂ ಬಳಸುತ್ತಿದೆ ಎನ್ನುವ ಆರೋಪ ಹಲವು ಘಟನೆಗಳನ್ನು ಗಮನಿಸಿದರೆ ಸತ್ಯಕ್ಕೆ ಹತ್ತಿರ ಎನಿಸುತ್ತಿದೆ.

ಹದಿನೈದು ವರ್ಷಗಳ ಹಿಂದೆ ಬೀದಿ ರಾಜಕೀಯ ಹೋರಾಟದ ಮೂಲಕ ೩೫ ವರ್ಷಗಳ ಸಿಪಿಎಂ ನೇತೃತ್ವದ ಎಡಪಕ್ಷಗಳ ಆಡಳಿತವನ್ನು ಕಿತ್ತೆಸೆದು ೨೦೧೧ರಿಂದ ಅಧಿಕಾರ ಹಿಡಿದಿರುವ ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ಈಗ ತಮ್ಮ ೧೫ ವರ್ಷಗಳ ಆಡಳಿತವನ್ನು ಉಳಿಸಿಕೊಳ್ಳಲು ಹಗಲು ರಾತ್ರಿ ನಿದ್ದೆಗೆಟ್ಟು ಹೆಣಗಾಡುತ್ತಿದ್ದಾರೆ. ಕೇಂದ್ರದಲ್ಲಿ ಹನ್ನೊಂದು ವರ್ಷಗಳಿಂದ ಸತತವಾಗಿ ಅಧಿಕಾರ ನಡೆಸುತ್ತಿರುವ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿಯ ವಿರುದ್ಧ ಮತ್ತದೇ ಬೀದಿ ಕಾಳಗ ನಡೆಸುತ್ತಿರುವುದನ್ನು ಗಮನಿಸಿದರೆ ರಾಜಕೀಯ ಹೋರಾಟವನ್ನೇ ಉಸಿರಾಗಿಸಿಕೊಂಡಿರುವ ಮಮತಾ ಬ್ಯಾನರ್ಜಿ ಅವರಿಗೆ ಇದು ಮತ್ತೊಂದು ರಾಜಕೀಯ ಸವಾಲು.

ಪಶ್ಚಿಮ ಬಂಗಾಳದಲ್ಲಿ ಕಳೆದ ಐವತ್ತು ವರ್ಷಗಳಿಂದ ರಾಜಕೀಯ ಸಂಘರ್ಷ ಎನ್ನುವುದು ಹಿಂಸಾಚಾರದ ಮೂಲಕ ಮುಂದುವರಿದುಕೊಂಡೇ ಬಂದಿದೆ. ಅದೀಗ ಪುನರಾವರ್ತನೆಯಾಗಿದೆ. ‘ಇಂಡಿಯಾ’ಒಕ್ಕೂಟದಿಂದಲೂ ದೂರವುಳಿದು ಹೇಳ ಹೆಸರಿಲ್ಲದ ಎಡಪಕ್ಷಗಳು ಮತ್ತು ಕಾಂಗ್ರೆಸ್ಸನ್ನು ರಾಜಕೀಯವಾಗಿ ಬದಿಗಿರಿಸಿದ ಮಮತಾ ಈಗ ಕೇಂದ್ರದ ಬಿಜೆಪಿ ಸರ್ಕಾರದ ಇಡಿ, ಸಿಬಿಐ ದಾಳಿಗೆ ಗುರಿಯಾಗಿದ್ದಾರೆ. ಜೊತೆಗೆ ಚುನಾವಣಾ ಆಯೋಗದ ಎಸ್‌ಐಆರ್ ಕಠಿಣ ಕ್ರಮಗಳು, ಚುನಾವಣಾ ಆಯೋಗದಿಂದಲೇ ಮುಖ್ಯಕಾರ್ಯದರ್ಶಿ ಮತ್ತು ಡಿಜಿಪಿಯ ಬದಲಾವಣೆ, ಮತ ಎಣಿಕೆ ಕೇಂದ್ರಗಳಿಗೆ ಕೇಂದ್ರ ಸರ್ಕಾರದ ಅಧಿಕಾರಿಗಳ ನಿಯೋಜನೆ ವಿರುದ್ಧ ಸುಪ್ರೀಂ ಕೋರ್ಟಿನವರೆಗೂ ಕಾನೂನು ಹೋರಾಟ ನಡೆಸುತ್ತಿರುವುದು ಅವರ ರಾಜಕೀಯ ಅಳಿವು ಉಳಿವಿನಂತೆ ಕಾಡುತ್ತಿದೆ. ಬೇರೆ ರಾಜಕೀಯ ಪಕ್ಷಗಳ ಬೆಂಬಲವಿಲ್ಲದೆ ನಡೆಸುತ್ತಿರುವ ಈ ಹೋರಾಟ ಸಾಮಾನ್ಯ ಸಂಗತಿಯಲ್ಲ. ತಮ್ಮ ರಾಜಕೀಯ ಹೋರಾಟದಲ್ಲಿ ಕೈ ಕೈ ಹಿಡಿದು ಜೊತೆಯಾಗಿ ನಿಲ್ಲುವಂತೆ ಲೋಕಸಭೆ ಸದಸ್ಯೆಯರಾದ ಮೋಹುವಾ ಮೈತ್ರಾ ಮತ್ತು ಸಯಾನಿ ಘೋಷ್ ಎಂಬ ದಿಟ್ಟ ಮಹಿಳೆಯರನ್ನು ರಾಜಕೀಯಕ್ಕೆ ತಂದಿರುವ ಕೀರ್ತಿ ಮಮತಾ ದೀದಿಯದು. ಈ ಇಬ್ಬರು ಮಹಿಳೆಯರ ಜೊತೆಗೆ ತಮ್ಮ ಸಂಬಂಧಿ ಲೋಕಸಭೆಯ ಟಿಎಂಸಿ ನಾಯಕ ಅಭಿಷೇಕ್ ಬ್ಯಾನರ್ಜಿ ಮತ್ತು ರಾಜ್ಯಸಭೆಯಲ್ಲಿ ಡೆರಿಕ್ ಓ ಬ್ರಿಯನ್ ತಮ್ಮ ಬಲಗೈ ಬಂಟರಾಗಿ ನಿಂತಿದ್ದಾರೆ.

ಚುನಾವಣೆ ನಡೆದ ಮೇಲೆ ಸಹಜವಾಗಿ ಚುನಾವಣಾ ಸಮೀಕ್ಷೆ ನಡೆಸುವ ಹತ್ತಾರು ಸಂಸ್ಥೆಗಳು ಮತದಾನೋತ್ತರ ಸಮೀಕ್ಷೆಗಳನ್ನು ನಡೆಸಿವೆ. ಬಹುತೇಕ ಸಮೀಕ್ಷೆಗಳೆಲ್ಲ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರ ಹಿಡಿಯುವ ಸಾಧ್ಯತೆಯ ಅಂಕಿ ಅಂಶಗಳನ್ನು ನೀಡಿವೆ. ಪೀಪಲ್ಸ್ ಪಲ್ಸ್ ಎನ್ನುವ ಸಂಸ್ಥೆಯೊಂದು ಮಾತ್ರ ಟಿಎಂಸಿ ೧೮೫ ಸ್ಥಾನಗಳನ್ನು ಪಡೆಯಬಹುದೆಂದು ಹೇಳಿದ್ದರೆ, ಉಳಿದ ಐದು ಸಂಸ್ಥೆಗಳ ಸಮೀಕ್ಷೆಗಳು ಬಿಜೆಪಿ ಪರವಾದ ಒಲವು ಇರುವ ಮಾಹಿತಿಯನ್ನು ನೀಡಿವೆ. ಚುನಾವಣೆ ಸಮೀಕ್ಷೆ ನಡೆಸುವಲ್ಲಿ ಇದ್ದುದರಲ್ಲಿ ವಾಸ್ತವ ಸ್ಥಿತಿಗೆ ಹತ್ತಿರವಾಗುವ ‘ಆಕ್ಸಿಸ್ ಮೈ ಇಂಡಿಯಾ’ಸಂಸ್ಥೆಯು ಸಮೀಕ್ಷೆ ನಡೆಸಿದ್ದರೂ ವರದಿ ನೀಡದೆ ಹಿಂದೆ ಸರಿದಿದೆ. ಪಶ್ಚಿಮ ಬಂಗಾಳದಲ್ಲಿ ಸಮೀಕ್ಷೆ ನಡೆಸಿದ್ದರೂ ಶೇ.೭೦ರಷ್ಟು ಮತದಾರರು ಬಾಯಿ ಬಿಟ್ಟಿಲ್ಲ. ವಾಸ್ತವ ಸ್ಥಿತಿ ಹೀಗಿರುವುದರಿಂದ ಈ ರಾಜ್ಯದ ಚುನಾವಣಾ ಸಮೀಕ್ಷೆಯ ವಿವರವನ್ನು ತಾವು ಪ್ರಕಟಿಸಲು ಸಾಧ್ಯವಾಗುತ್ತಿಲ್ಲ ಎಂದು ಆ ಸಂಸ್ಥೆಯ ಮುಖ್ಯಸ್ಥರಾದ ಪ್ರದೀಪ್ ಗುಪ್ತಾ ತಮ್ಮ ಅಸಹಾಯಕತೆಯನ್ನು ಪತ್ರಿಕಾ ಪ್ರಕಟಣೆ ನೀಡುವ ಮೂಲಕ ಹೇಳಿಕೊಂಡಿದ್ದಾರೆ.

ಇದು ಸತ್ಯವೇ ಆಗಿದ್ದರೆ ಬೇರೆ ಸಂಸ್ಥೆಗಳ ಸಮೀಕ್ಷೆಗೆ ಬಂಗಾಳದ ಮತದಾರ ಹೇಗೆ ಬಾಯಿ ಬಿಟ್ಟಿದ್ದಾರೆ ಎನ್ನುವುದು ಪ್ರಶ್ನೆಯಾಗಿ ಉಳಿಯಲಿದೆ. ಹಾಗಾಗಿ ಬೇರೆ ಸಂಸ್ಥೆಗಳ ಸಮೀಕ್ಷೆಯ ಸಾಚಾತನವನ್ನು ಶಂಕಿಸಬೇಕಿದೆ. ಇಲ್ಲವೇ ಪ್ರದೀಪ್ ಗುಪ್ತಾ ಯಾವುದಾದರೂ ಒತ್ತಡಕ್ಕೆ ಒಳಗಾಗಿದ್ದಾರೆಯೇ ಎಂದು ಅನುಮಾನ ಪಡಬೇಕಾಗಿದೆ.

ಇನ್ನು ಬಿಜೆಪಿಯ ಕಣ್ಣು ದಕ್ಷಿಣ ಭಾಗದ ತಮಿಳುನಾಡು ಮತ್ತು ಕೇರಳಂ ರಾಜ್ಯಗಳ ಕಡೆ. ತಮಿಳುನಾಡು ದ್ರಾವಿಡ ಸಂಸ್ಕೃತಿಯ ಗಟ್ಟಿ ನೆಲ. ಅದನ್ನು ಅಲುಗಾಡಿಸಲು ಇನ್ನೂ ಹಲವಾರ ವರ್ಷಗಳು ಬೇಕಾಗಬಹುದೇನೋ ಅಥವಾ ಅದು ಸಾಧ್ಯವಿಲ್ಲವೇನೋ ಎನ್ನುವಂತೆ ಅಲ್ಲಿನ ಮತದಾರರ ದ್ರಾವಿಡ ರಾಜಕಾರಣದ ಮನಃಸ್ಥಿತಿಯನ್ನು ಬದಲಿಸುವುದು ಕಷ್ಟ. ತಮಿಳುನಾಡಿನಲ್ಲಿ ಮತ್ತೆ ಡಿಎಂಕೆ ಅಧಿಕಾರ ಉಳಿಸಿಕೊಳ್ಳುವ ಸಾಧ್ಯತೆ ಹೆಚ್ಚಿರುವುದಾಗಿ ಸಮೀಕ್ಷೆಗಳು ಹೇಳಿವೆ. ವಿಧಾನಸಭೆಯ ಒಟ್ಟು ೨೩೪ ಸಂಖ್ಯಾ ಬಲದಲ್ಲಿ ಅಧಿಕಾರ ಹಿಡಿಯಲು ಬೇಕಾಗಿರುವ ಸಂಖ್ಯೆ೧೧೮. ‘ಆಕ್ಸಿಸ್ ಮೈ ಇಂಡಿಯಾ’ ಮಾತ್ರ ಚುನಾವಣಾ ರಾಜಕೀಯದಲ್ಲಿ ಕುತೂಹಲ ಎಬ್ಬಿಸಿರುವ ನಟ ವಿಜಯ್ ಅವರ ಟಿವಿಕೆ ಪಕ್ಷವು ೯೮ ಸ್ಥಾನಗಳನ್ನು ಪಡೆಯುವ ಸಾಧ್ಯತೆ ಇದೆ ಎಂದು ನೀಡಿರುವ ಮಾಹಿತಿ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ.

ಕೇರಳಂ ರಾಜ್ಯದಲ್ಲಿ ಕೆಲವು ತಿಂಗಳ ಹಿಂದೆ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯಲ್ಲಿ ತಿರುವನಂತಪುರ ಮಹಾನಗರ ಪಾಲಿಕೆಯಲ್ಲಿ ಜಯಗಳಿಸಿದ ಬಿಜೆಪಿಗೆ ವಿಧಾನಸಭೆ ಚುನಾವಣೆಯಲ್ಲೂ ಅಧಿಕಾರ ಹಿಡಿಯುವ ಹುಮ್ಮಸ್ಸು ಬಂದದ್ದನ್ನು ಅಲ್ಲಗಳೆಯುವಂತಿಲ್ಲ. ಆದರೆ ವಾಸ್ತವವಾಗಿ ಮತ್ತು ಬಹುತೇಕ ಎಲ್ಲ ಸಮೀಕ್ಷೆಗಳ ಪ್ರಕಾರ ಈ ಬಾರಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಗೆಲುವು ಸಾಧಿಸಲಿದೆ ಎನ್ನುವ ಚಿತ್ರಣ ದೊರೆತಿದೆ. ಹತ್ತು ವರ್ಷ ನಿರಂತರವಾಗಿ ಅಧಿಕಾರ ನಡೆಸಿದ ಸಿಪಿಐ (ಎಂ)ನೇತೃತ್ವದ ಎಡ ರಂಗಕ್ಕೆ ಸೋಲಾಗುವುದು ಬಹುತೇಕ ಖಚಿತ ಎನ್ನುವ ವರದಿಗಳು ಬಂದಿವೆ.

ನಿರೀಕ್ಷೆಯಂತೆ ಅಸ್ಸಾಂನಲ್ಲಿ ಕೂಡ ಬಿಜೆಪಿ ತನ್ನ ಅಧಿಕಾರವನ್ನು ಉಳಿಸಿಕೊಳ್ಳಲಿದೆ. ಕೇಂದ್ರಾಡಳಿತ ಪುದುಚೇರಿಯಲ್ಲಿ ಎನ್‌ಡಿಎ ಮತ್ತೆ ಅಧಿಕಾರದಲ್ಲಿ ಮುಂದುವರಿಯಬಹುದೆನ್ನುವ ಮಾಹಿತಿ ಹೊರಬಿದ್ದಿದೆ. ಎಲ್ಲ ಚುನಾವಣಾ ರಾಜಕೀಯ ಲೆಕ್ಕಾಚಾರದಂತೆ ಕುತೂಹಲ ಕೆರಳಿಸಿರುವುದು ಪಶ್ಚಿಮ ಬಂಗಾಳದ ಫಲಿತಾಂಶ. ಮಮತಾ ಬ್ಯಾನರ್ಜಿ ವಿರುದ್ಧ ಪ್ರಧಾನಿ ಮೋದಿ ಮತ್ತು ಶಾ ನಡೆಸುತ್ತಿರುವ ದಾಳಿ ಮತ್ತು ಜಿದ್ದಾ ಜಿದ್ದಿಗೆ ಎದೆಗೊಟ್ಟು ಮಮತಾ ಗಟ್ಟಿಯಾಗಿ ನಿಂತಿರುವುದು ಅವರ ರಾಜಕೀಯ ಧೈರ್ಯ ಮತ್ತು ಬದ್ಧತೆಗೆ ಸಾಕ್ಷಿ.

” ಚುನಾವಣೆ ನಡೆದ ಮೇಲೆ ಸಹಜವಾಗಿ ಚುನಾವಣಾ ಸಮೀಕ್ಷೆ ನಡೆಸುವ ಹತ್ತಾರು ಸಂಸ್ಥೆಗಳು ಮತದಾನೋತ್ತರ ಸಮೀಕ್ಷೆಗಳನ್ನು ನಡೆಸಿವೆ. ಬಹುತೇಕ ಸಮೀಕ್ಷೆಗಳೆಲ್ಲ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರ ಹಿಡಿಯುವ ಸಾಧ್ಯತೆಯ ಅಂಕಿ ಅಂಶಗಳನ್ನು ನೀಡಿವೆ. ಪೀಪಲ್ಸ್ ಪಲ್ಸ್ ಎನ್ನುವ ಸಂಸ್ಥೆಯೊಂದು ಮಾತ್ರ ಟಿಎಂಸಿ ೧೮೫ ಸ್ಥಾನಗಳನ್ನು ಪಡೆಯಬಹುದೆಂದು ಹೇಳಿದ್ದರೆ, ಉಳಿದ ಐದು ಸಂಸ್ಥೆಗಳ ಸಮೀಕ್ಷೆಗಳು ಬಿಜೆಪಿ ಪರವಾದ ಒಲವು ಇರುವ ಮಾಹಿತಿಯನ್ನು ನೀಡಿವೆ.”

 

 

Tags:
error: Content is protected !!