Mysore
36
few clouds

Social Media

ಸೋಮವಾರ, 20 ಏಪ್ರಿಲ 2026
Light
Dark

ದೇವನೂರಿಗೆ ಆಗಮಿಸಿದ ಪಂಪ

ಪಂಪ ಪ್ರಶಸ್ತಿ ಪಡೆಯುತ್ತಿರುವ ಮಹಾದೇವರಿಗೆ ಎಲ್ಲಾ ಮನೆಗಳ ಜೋತಮ್ಮದೀರು ಹರಸಲಿ

ರಾಜೇಂದ್ರ ಚೆನ್ನಿ

೧ ತಮ್ಮ ಒಟ್ಟು ಬರಹಗಳು ಇಷ್ಟು ಕಡಿಮೆ ಪುಟಗಳಷ್ಟು ಇವೆ ಎಂದು ಸ್ವತಃ ಮಹಾದೇವರೇ ಆಶ್ಚರ್ಯಪಟ್ಟಿದ್ದಾರೆ. ಆದರೆ ಕನ್ನಡ ಸಂವೇದನೆಯ ಎದೆಗೆ ಬಿದ್ದ ಅಕ್ಷರಗಳಂತೆ ಅವು ಪ್ರಕಟವಾದ ದಿನದಿಂದಲೇ ಫಲ ಕೊಡುತ್ತಾ ಬಂದಿವೆ. ಕಾರಣವೆಂದರೆ ‘ದ್ಯಾವನೂರು’ ಸಂಕಲನದಲ್ಲಿ ಒಂದು ಕತೆಯನ್ನು ಬಿಟ್ಟರೆ ಇನ್ನೆಲ್ಲವೂ ವಾಸ್ತವವಾದದ ಇಕ್ಕಟ್ಟನ್ನು ದಾಟಿಕೊಂಡು ಭಾಷೆ, ರೂಪಕಗಳು, ನಿರೂಪಣೆಯ ಪ್ರಯೋಗಶೀಲತೆಯಿಂದ ಕನ್ನಡ ಕಥನ ಪರಂಪರೆಯಲ್ಲಿ ಹೊಸ ಸಂಚಲನವನ್ನೇ ತಂದಿವೆ. ಕಥನದ ಸಾಧ್ಯತೆಗಳನ್ನು ಹಿಗ್ಗಿಸಿವೆ. ಅವುಗಳಿಗೆ ಇರುವ ಚೈತನ್ಯವು ಬಂದಿರುವುದು ಅನನ್ಯವಾದ ಸೃಜನಶೀಲ ಲೋಕದೃಷ್ಟಿಯಿಂದ. ಒಂದು ಕಡೆಗೆ ದಲಿತ ಸಮುದಾಯಗಳು ಅನುಭವಿಸುವ ಸೋಲು, ಅವಮಾನ, ಶೋಷಣೆ ಇವುಗಳನ್ನು ಗುರುತಿಸುತ್ತಲೇ ದಲಿತ ವ್ಯಕ್ತಿಗಳನ್ನು, ಆತ್ಮಗಳನ್ನು ಕೇವಲ “ಶೋಷಿತ ಬಲಿಪಶು” ಎನ್ನುವ ಸ್ಥಗಿತ ಪ್ರತಿಮೆಗೆ ಇಳಿಸದೆ ಅವರ ಅದಮ್ಯ ಚೈತನ್ಯವನ್ನೂ, ಜೀವಪರ ತುಡಿತಗಳನ್ನೂ ಈ ಲೋಕದೃಷ್ಟಿ ಆತ್ಮೀಯವಾಗಿ ಕಂಡರಿಸುತ್ತದೆ. ಆದ್ದರಿಂದಲೇ ‘ಒಡಲಾಳ’ದಲ್ಲಿ ಯಾರ ಜಪ್ತಿಗೂ ಸಿಗದ ನವಿಲುಗಳು ಪುಟ್ಟ ಗೌರಿಯ ಕೈಯಿಂದ ಮೂಡಿಬರುತ್ತವೆ. ಸಾಕವ್ವ ಮೂರನೇ ಕ್ಲಾಸ್ ಶಿವೂನ ಕಲ್ಪನೆಯಲ್ಲಿ ಯಕ್ಷಿಯಂತೆ ಆಕಾಶದಲ್ಲಿ ಹಾರಿ ಸಾಕ್ಷಾತ್ ಯಮರಾಜನ ಜೊತೆಗೆ ವ್ಯವಹರಿಸುತ್ತಾಳೆ. ‘ಕುಸುಮಬಾಲೆ’ಯಲ್ಲಿ ಕೊಲೆಯಾಗಿರುವ ಚನ್ನ ಮುಂಬಯಿಯ ಹೋಟೆಲ್‌ನಲ್ಲಿ ಜಬರ್ದಸ್ತಾಗಿ ಇದ್ದಾನೆ, ಅವನ ತಂದೆ ತಾಯಿ ಕಣ್ಣಲ್ಲಿ.

ಒಂದು ಕಾಲದಲ್ಲಿ ಅಮಾಸನಂತೆಯೆ ಹುಲಿಯಾಸದಲ್ಲಿ ಕುಣಿಯುತ್ತಿದ್ದ ಕುರಿಯಯ್ಯ ಈಗ ಅಮಾಸ ಗೌಡರ ಕಣ್ಣಿನಲ್ಲಿ ಕುಣಿಯುತ್ತಲಿದ್ದ. ‘ಎದೆಗೆ ಬಿದ್ದ ಅಕ್ಷರ’ದಲ್ಲಿನ ಬರಹಗಳು “gnostic” ಎಂದು ಕರೆಯುವ ವಚನಗಳಂತೆ ಅಥವಾ ಝೆನ್ ಕತೆಗಳಂತೆ ಇವೆ. ಅವುಗಳಿಗೆ ಅಗಾಧವಾದ ರೂಪಕ ಶಕ್ತಿಯೂ ಇದೆ. ಗಾಢವಾಗಿ ಚಿಂತಿಸಿ, ಧ್ಯಾನಿಸಿ ಕಣಿ ಹೇಳಿದಂತೆ ಹೇಳಿಬಿಡುವುದು ಈ ಬರಹಗಳ ಗುಣ. ೨ “ಇಂದಿನ ವ್ಯಾಪಾರೀ ಜಾಗತೀಕರಣ ಯುದ್ಧವಲ್ಲದೇ ಮತ್ತೇನಲ್ಲ. ಇದೊಂದು ನವ ಯುದ್ಧ. ಆಯುಧವನ್ನೂ ಬಳಸದೇ ಇರುವ ಯುದ್ಧ”. “ಇವರು ಬಲಿಷ್ಠರು, ನಿಜ. ಎಷ್ಟು ಬಲಿಷ್ಠರು ಎಂದರೆ ಈ ಇರಾಕ್ ಯುದ್ಧದಿಂದಾಗಿ ಚರಿತ್ರೆಯನ್ನೇ ತುಂಬಾ ಹಿಂದಕ್ಕೆ ತಳ್ಳಿಬಿಟ್ಟರು….

ಒಂದು ಕಿಡಿನುಡಿ: “ಬಲಿಷ್ಠ ರಾಷ್ಟ್ರಗಳು ಗೂಂಡಾಗಳಂತೆ ವರ್ತಿಸುತ್ತಿವೆ. ಬಡ ರಾಷ್ಟ್ರಗಳು ಬೆಲೆವೆಣ್ಣುಗಳಂತೆ ವರ್ತಿಸುತ್ತಿವೆ… ಆಕಾಶದಲ್ಲಿ ರಣಹದ್ದುಗಳು ಹಾರಾಡದೆ ಮತ್ತೇನು ಮಾಡಬೇಕು” ಈಗ ೨೦೨೬ರ ಇರಾನ್ ಯುದ್ಧದ ಬಗ್ಗೆ ಈ ಪುಟ್ಟ ಲೇಖನದ ಪ್ರತಿಯೊಂದು ಪದವೂ ಇದ್ದಂತಿದೆಶ್ರಿ.

“ಭಾರತ ಸಂವಿಧಾನಕ್ಕೆ ‘ಭೂತ ಚೇಷ್ಟೆ’ ಎನ್ನುವ ಲೇಖನವೂ ಕೂಡ ಇಂದಿನ ಅತ್ಯಂತ ಸಮರ್ಪಕವಾದ ವರ್ಣನೆಯಾಗಿದೆ. “ಭೂತಕಾಲದ ಸಂವಿಧಾನವೂ ಇಲ್ಲಿ ಬಲವಾಗಿದೆ. ಹಾಗಾಗಿ ನಮ್ಮ ವರ್ತಮಾನ ಸಂವಿ ಧಾನದ ಆಸೆಗಳು ತೆವಳುತ್ತಿವೆ”. ಇಷ್ಟು ಕರಾರುವಾಕ್ಕಾಗಿ ನಮ್ಮ ಕಾಲದ ವಾಸ್ತವಗಳನ್ನು ಮಹಾದೇವ ತೋರಿಸು ತ್ತಾರೆ. ಆದ್ದರಿಂದಲೇ ಯಾವುದೇ ಬಿಕ್ಕಟ್ಟು ಎದುರಾದರೂ ಮಹಾದೇವರ ನುಡಿಗಾಗಿ ಎಲ್ಲರೂ ಕಾಯುತ್ತಾರೆ. ಅಂಥ ವಿಶ್ವಾಸಾರ್ಹತೆ ಅವರ ಬರಹ ಮತ್ತು ಮಾತುಗಳಿಗಿವೆ. ಸುದೀರ್ಘವಾದ ಕನ್ನಡ ಪರಂಪರೆಯಲ್ಲಿ ಸ್ಥಾಯಿಯಾಗಿ ಉಳಿದುಕೊಂಡಿರುವಸಮಾನತೆಯ ಆಶಯಗಳು ಈ ಬರಹಗಳನ್ನು ರೂಪಿಸಿವೆ. ಹೊರಳಿ ನೋಡಿದರೆ ೧೯೭೦ರ ದಶಕದಿಂದೀಚೆಗೆ ಕನ್ನಡ ಪ್ರಜ್ಞೆಯನ್ನು ರೂಪಿಸಿರುವ ಎಲ್ಲಾ ಚಿಂತನೆ ಹಾಗೂ ಹೋರಾಟಗಳು ಈ ಬರಹಗಳನ್ನು ರೂಪಿಸಿವೆ. ಮಹಾದೇವರ ಕ್ರಿಯಾಶೀಲತೆ (activism) ವಿಭಿನ್ನವಾದದು. ಅಪಾರವಾದ ಅರ್ಥವಂತಿಕೆ ಇರುವ ಸಾಂಕೇತಿಕ ಕ್ರಿಯೆಗಳಾಗಿ ಸಾರ್ವಜನಿಕ ವಲಯವನ್ನು ಸಹಚರ್ಚೆಗೆ ಹಚ್ಚಿಸುವ ಗುಣ ಈ ಕ್ರಿಯಾಶೀಲತೆಗೆ ಇದೆ. ‘ಗಾಂಧಿ’ ಸಿನಿಮಾ ನೋಡಿ ಬರೆದದ್ದು, ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ತಿರಸ್ಕರಿಸಿದ್ದು ಇತ್ಯಾದಿ ಒಬ್ಬ ‘public intellectua’ ಮಾಡಬಹುದಾದ ಪ್ರಭಾವಿ ಕೆಲಸವಿದಾಗಿದೆ. ಅಂಬೇಡ್ಕರ್ ವಿರುದ್ಧ ಗಾಂಧಿ ಎನ್ನುವ ವೈಚಾರಿಕ ಆಕೃತಿಯನ್ನು ಬದಲಾಯಿಸ ಬಹುದಾದ ಚಿಂತನೆಯೂ ಅವರದ್ದಾಗಿದೆ.

ಪ್ರೊ.ನಂಜುಂಡಸ್ವಾಮಿಯವರಿಗೆ ರೈತ ಚಳವಳಿಯ ಬಗ್ಗೆ ದಶಕಗಳ ಹಿಂದೆ ಕೇಳಿದ್ದ ಮಹಾದೇವರ ಯಕ್ಷಪ್ರಶ್ನೆಗಳು ಹಾಗೇ ಇವೆ. ಇಂದು ಶಿವಸುಂದರ್ ಅವರ ಲೇಖನವನ್ನು ಓದುತ್ತಿದ್ದೆ. ಬೇರೆ ರೂಢಿಗತ ಮಾರ್ಗ ಗಳಲ್ಲಿ ಅಂಬೇಡ್ಕರ್ ಅವರ ಸವಾಲನ್ನು ಎದುರಿಸಲಾರದೆ ಈಗ ಆರ್.ಎಸ್.ಎಸ್. ಅವರನ್ನು ಹಿಂದುತ್ವದ ಚೌಕಟ್ಟಿನಲ್ಲಿ ತೂರಿಸುವ ಪ್ರಯತ್ನ ಮಾಡುತ್ತಿದೆ ಎಂದು ಅವರು ಬರೆದಿದ್ದಾರೆ. ಈ ಪ್ರಯತ್ನವು ಎಷ್ಟು ದುಷ್ಟವೋ ಅಷ್ಟೇ ಅಸಂಗತವೂ ಕೂಡ ಎಂದು ಮಹಾದೇವ ಬಹಳ ಹಿಂದೆ ಬರೆದಿದ್ದರು. “ಬಸವ, ಅಂಬೇಡ್ಕರ್‌ರ ಹೆಸರನ್ನು ಉಚ್ಛಾರ ಮಾಡಿದರೂ ಅದು ಸಮಾನತೆ ಯನ್ನೇ ಉಸಿರಾಡುತ್ತದೆ. ಇಂಥವರ ಜೊತೆ ಮೇಲು- ಕೀಳಿನ ಗೋಲ್ವಾಳ್ಕರ್‌ರನ್ನು ಕೂಡಿಸಿರುವುದು” ಎಂದು ಅವರು ಬರೆದಿದ್ದರು. ಈಗ ಪ್ರಬಲವಾಗಿ ನಡೆಯುತ್ತಿರುವ ಪ್ರಯತ್ನವು ನಾವು ಎಚ್ಚರವಾಗಿರದಿದ್ದರೆ ಸಮಸ್ಯಾತ್ಮಕವಾಗಬಲ್ಲದು. ಮಹಾದೇವರ ಖಚಿತತೆ ಈಗಲೂ ದಾರಿದೀಪವಾಗಬಲ್ಲದು. ಬಾಬಾ ಸಾಹೇಬರ ಚಿಂತನೆಯ ಬುನಾದಿಯಲ್ಲಿರುವುದು ‘”radical equality’’ ಎಂದು ಕರೆಯಲಾಗಿರುವ, ಯಾವ ಸಮಜಾಯಿಷಿಯೂ ಇಲ್ಲದ ಸಮಾನತೆಯ ಪರಿಕಲ್ಪನೆ. ಅದನ್ನು ಮೂಲತಃ ಅಸಮಾನತೆಯನ್ನೇ ಬೆಂಬಲಿಸುವ ಸಿದ್ಧಾಂತಗಳಲ್ಲಿ ಸೇರಿಸಲಾಗದು. ಇವು ಪರಸ್ಪರ ವಿರೋಧಿ ವೈಚಾರಿಕ ಆಕೃತಿಗಳು ಹಾಗೂ ಲೋಕದೃಷ್ಟಿಗಳು. ಇದನ್ನು ಮಹಾದೇವ ಹೇಳುತ್ತಾ ಬಂದಿದ್ದಾರೆ. ಇದನ್ನು ಅರ್ಥಮಾಡಿಸುವುದು ಈಗಿನ ಜವಾಬ್ದಾರಿಯಾಗಿದೆ.

೩ ‘ಕುಸುಮಬಾಲೆ’ ಕೃತಿಯನ್ನು ಪೂರ್ವಿಕ ಮಾದಾರ ‘ಮಲೆ ಮಾದೇಶ್ವರಂಗೆ’ ಅರ್ಪಿಸಲಾಗಿದೆ. ಈ ಅರ್ಪಣೆಯ ಮೂಲಕ ಈ ಕೃತಿಯು ಮೌಖಿಕ ಕಥನ-ಕಾವ್ಯ ಪರಂಪರೆಗಳೊಂದಿಗೆ ತನ್ನ ಸಂಬಂಧವನ್ನು ದಾಖಲಿಸುತ್ತದೆ. ಇದು ನಮ್ಮ ಓದಿಗೆ ಅತ್ಯಂತ ಅವಶ್ಯವಾಗಿದೆ. ಮುದ್ರಣ ಮಾದರಿಯ ಪ್ರಕಟಿತ ಕೃತಿಯೊಳಗೆ ಗದ್ಯ, ಕಾವ್ಯ, ನಿರೂಪಣೆ, ಪುರಾಣ ಇವೆಲ್ಲವೂ ಮಿಳಿತವಾಗಿವೆ. ಹೀಗಾಗಿಯೇ ‘ಒಡಲಾಳ’, ‘ಕುಸುಮ ಬಾಲೆ’ ಇವುಗಳು ಹೆಚ್ಚಾಗಿ ತಲುಪಿದ್ದು ಪಠ್ಯದ ಓದುವಿಕೆಯಿಂದ, ಅಂದರೆ ಅವುಗಳ ಧ್ವನಿಯನ್ನು ಕೇಳಿಸಿಕೊಳ್ಳುವುದರ ಮೂಲಕ. ಇಂಥ ಪ್ರಯೋಗ ಗಳಿಗೆ ಕಿ.ರಂ. ನಾಗರಾಜರ ಮಾರ್ಗದರ್ಶನವಿತ್ತು, ನಂತರ ಎಲ್.ಬಸವರಾಜು ಅವರು ಮಾಡಿದ ಮುದ್ರಿತ ಕೃತಿಯ ಮರು ಜೋಡಣೆಯೂ ಬಹು ಅರ್ಥಪೂರ್ಣವಾಗಿತ್ತು.

ಅಂತೆಯೇ ರಂಗಪ್ರದರ್ಶನಗಳು ಕೂಡ. ಹೀಗೆ ಈ ಕೃತಿಗಳು ಕನ್ನಡ ಮನಸ್ಸುಗಳನ್ನು ತಲುಪುವ ವಿಭಿನ್ನ ದಾರಿಗಳನ್ನು ತಾವೇ ತೋರಿದವು. ಕುವೆಂಪು, ಲಂಕೇಶ್ ತಮ್ಮ ಬರಹ ಗಳಿಂದ ಸಮುದಾಯದೊಂದಿಗೆ ನಿರಂತರ ಸಂಭಾಷಣೆಯಲ್ಲಿದ್ದರು. ಸ್ವೀಕೃತವಾದ, ಪರೀಕ್ಷೆಗೆ ಒಳಗಾಗದ ಸಿದ್ಧಾಂತಗಳನ್ನು, ಮೌಲ್ಯಗಳನ್ನು, ನಂಬಿಕೆಗಳನ್ನು ಪ್ರಶ್ನಿಸುವುದು ಈ ಸಂಭಾಷಣೆಯ ಪ್ರಮುಖ ಗುಣವಾಗಿತ್ತು. ಈ ಸಂಪ್ರದಾಯವನ್ನು ಮುಂದುವರಿಸಿದ ಮಹಾದೇವರು ಒಂದು ಹೆಜ್ಜೆ ಮುಂದೆ ಹೋಗಿ ಈ ಸಂಭಾಷಣೆಗೆ ಕಾವ್ಯದಲಯವನ್ನು, ಕಥನದ ಕುತೂಹಲವನ್ನು ಮತ್ತು ರೂಪಕಗಳನ್ನು ಸೇರಿಸಿದ್ದಾರೆ. ಮುಖ್ಯವಾಗಿ ಅವರದು ಉಪದೇಶ ಮಾಡದೆಯೇ ಮನಸ್ಸುಗಳನ್ನು ತಿದ್ದುವ ಸಂಭಾಷಣೆ. ಇದು ಪರಿಣಾಮಕಾರಿಯಾಗುವುದಕ್ಕೆ ಕಾರಣವೆಂದರೆ ಅದರಲ್ಲಿರುವ ವೈಯಕ್ತಿಕ ತುರ್ತು ಮತ್ತು ಸಮಾಜವನ್ನು ಹಸನಾಗಿಸುವುದರ ಬಗ್ಗೆ ಇರುವ ಅದರ ಆರ್ತತೆಯಿಂದಾಗಿ

” ದೇವನೂರರದು ಉಪದೇಶ ಮಾಡದೆಯೇ ಮನಸ್ಸುಗಳನ್ನುತಿದ್ದುವ ಸಂಭಾಷಣೆ. ಇದು ಪರಿಣಾಮಕಾರಿಯಾಗುವುದಕ್ಕೆ ಕಾರಣವೆಂದರೆ, ಅದರಲ್ಲಿರುವ ವೈಯಕ್ತಿಕ ತುರ್ತು ಮತ್ತು ಸಮಾಜವನ್ನು ಹಸನಾಗಿಸುವುದರ ಬಗ್ಗೆ ಇರುವ ಅದರ ಆರ್ತತೆ ”

 

 

 

 

Tags:
error: Content is protected !!