Mysore
34
clear sky

Social Media

ಗುರುವಾರ, 26 ಮಾರ್ಚ್ 2026
Light
Dark

ಎಲ್‌ಪಿಜಿ ಕೊರತೆ ಪರಿಸ್ಥಿತಿ ; ಹಾಲಿನ ವಹಿವಾಟು ಯಥಾಸ್ಥಿತಿ

ಕೆ.ಬಿ.ರಮೇಶ ನಾಯಕ

ಮೈಸೂರು : ಮಧ್ಯಪ್ರಾಚ್ಯ ದೇಶಗಳಲ್ಲಿ ನಡೆಯುತ್ತಿರುವಯುದ್ಧದ ಪರಿಣಾಮದಿಂದಾಗಿ ಭಾರತದಲ್ಲಿ ಎಲ್‌ಪಿಜಿ ಸಿಲಿಂಡರ್ ಪೂರೈಕೆಗೆ ದೊಡ್ಡ ಹೊಡೆತ ಬಿದ್ದು ವಾಣಿಜ್ಯ ವಹಿವಾಟಿನ ಮೇಲೆ ಪರಿಣಾಮ ಬೀರಿದ್ದರೂ ಹಾಲು ಉದ್ಯಮಕ್ಕೆ ಗ್ಯಾಸ್‌ ಟ್ರಬಲ್ ತಟ್ಟಿಲ್ಲ.

ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟ ದಲ್ಲಿ ಯಾವುದೇ ಇಳಿಕೆಯಾಗಿಲ್ಲ. ದೊಡ್ಡ ದೊಡ್ಡ, ಮಧ್ಯಮ ವರ್ಗದ ಹೋಟೆಲ್‌ಗಳಲ್ಲಿ ಮನು ಬದಲಾದರೂ ಚಹ, ಕಾಫಿ, ಹಾಲು ಮಾರಾಟ ಮಾಡುತ್ತಿರುವುದರಿಂದ ಎಂದಿನಂತೆ ಹಾಲು ಮಾರಾಟವಾಗುತ್ತಿರುವುದು ಮೈಮುಲ್ ನಿಟ್ಟುಸಿರು ಬಿಡುವಂತೆ ಮಾಡಿದೆ. ಇರಾನ್ ವಿರುದ್ಧ ಇಸ್ರೇಲ್, ಅಮೆರಿಕ ಜಂಟಿಯಾಗಿ ಯುದ್ಧ ನಡೆಸುತ್ತಿರುವ ಪರಿಣಾಮ ತೈಲ ಉತ್ಪನ್ನಗಳ ಸಾಗಾಣಿಕೆಯಲ್ಲಿ ದೊಡ್ಡ ಸಮಸ್ಯೆಯಾಗಿದೆ. ವಿದೇಶಗಳಿಂದ ಬರಬೇಕಾದ ಪೆಟ್ರೋಲಿಯಂ ಉತ್ಪನ್ನಗಳು, ಎಲ್‌ಪಿಜಿಯಲ್ಲಿ ವ್ಯತ್ಯಯ ಉಂಟಾಗಿರುವ ಕಾರಣ ಭಾರತದಲ್ಲಿ ಪರಿಣಾಮ ಬೀರಿದೆ. ಕಳೆದ ಒಂದು ವಾರದಿಂದ ಹೋಟೆಲ್ ಮಾಲೀಕರಿಗೆ ಶೇ.20ರಷ್ಟು ಎಲ್ ಪಿಜಿ ಸಿಲಿಂಡರ್ ಪೂರೈಕೆ ಮಾಡಲಾಗುತ್ತಿದ್ದರೂ ಕೆಲವು ಕಡೆಗಳಲ್ಲಿ ಹೋಟೆಲ್‌ಗಳನ್ನು ಮುಚ್ಚಲಾ ಗಿದೆ. ಹಲವೆಡೆ ಮೆನುಗಳನ್ನು ಬದಲಿಸಿಕೊಂಡು ನಿರ್ವಹಣೆ ಮಾಡಲಾಗುತ್ತಿದೆ. ಇದರಿಂದಾಗಿ, ಹಾಲು ಮಾರಾಟದ ಮೇಲೆ ಪರಿಣಾಮ ಹೋಟೆಲ್ ಮೆನು ಬದಲಾವಣೆ, ಟೀ, ಕಾಫಿ ಚಲಾವಣೆ ಹಾಲು ಬಳಕೆಯ ವ್ಯಾಪಾರದ ಮೇಲೆ ಪರಿಣಾಮ ಬೀರದ ಗ್ಯಾಸ್ ಟ್ರಬಲ್ ಬೀರಬಹುದೆಂದು ಅಂದಾಜಿಸಲಾಗಿತ್ತು. ಆದರೆ, ರಸ್ತೆಬದಿಯಲ್ಲಿರುವ ಕ್ಯಾಂಟೀನ್‌ಗಳಿಂದ ಪಂಚತಾರಾ ಹೋಟೆಲ್‌ಗಳ ತನಕವೂ ಚಹ, ಕಾಫಿ, ಮಾಲ್ಟ್ ಮೊದಲಾದುವುಗಳಿಗೆ ಹಾಲು ಬಳಸಬೇಕಿರುವುದರಿಂದ ಮಾರಾಟದಲ್ಲಿ ಇಳಿಕೆಯಾಗದಿರುವುದು ಗಮನಾರ್ಹವಾಗಿದೆ.

ಮೈಸೂರಿನ ಅಗ್ರಹಾರ, ಚಾಮರಾಜ ಜೋಡಿ ರಸ್ತೆ, ವಿದ್ಯಾರಣ್ಯಪುರಂ, ಚಾಮುಂಡಿಪುರಂ, ಸಿದ್ದಾರ್ಥನಗರ, ಬಂಬೂಬಜಾರ್, ಮಂಡಿ ಮೊಹಲ್ಲಾ, ಗಾಂಧಿವೃತ್ತ, ವಿವಿ ಪುರಂ ಸೇರಿದಂತೆ ಅನೇಕ ಬಡಾವಣೆಗಳಲ್ಲಿ ಅಂದಾಜು 500ಕ್ಕೂ ಹೆಚ್ಚು ಟೀ ಅಂಗಡಿಗಳು ಇರುವ ಜತೆಗೆ, ಪ್ರತಿಷ್ಠಿತ ಕಂಪೆನಿಗಳ ಫ್ರಾಂಚೈಸಿಗಳನ್ನು ಹೊಂದಿರುವ ಟೀ, ಕಾಫಿ ಶಾಪ್‌ಗಳೂ ಇವೆ. ಇಲ್ಲಿ ಮುಂಜಾನೆ 4 ರಿಂದ ರಾತ್ರಿ 11 ಗಂಟೆಯ ತನಕ ಸಾವಿರಾರು ಟೀ ಮಾರಾಟವಾಗುತ್ತಿರುವುದರಿಂದ ಹಾಲು ಬಳಕೆಯಾಗುತ್ತಿದೆ. ಹಾಗಾಗಿ, ಹಾಲು ಮಾರಾಟದ ಮೇಲೆ ಶೇ.10ರಷ್ಟು ಕೂಡ ಪರಿಣಾಮ ಉಂಟಾ ಗಿಲ್ಲ ಎಂದು ಮೈಮುಲ್ ಅಧಿಕಾರಿಗಳು ಹೇಳುತ್ತಾರೆ.

ಮಾರಾಟದಲ್ಲಿ ಯಥಾಸ್ಥಿತಿ: ಮೈಸೂರು ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟಕ್ಕೆ ಪ್ರಸ್ತುತ ದಿನದಲ್ಲಿ 9.45 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ಬೇಸಿಗೆ ದಿನಗಳಲ್ಲಿ ಹಾಲಿನ ಉತ್ಪಾದನೆ ಕಡಿಮೆಯಾಗು ತಿತ್ತಾದರೂ ಮೇವು ಸೇರಿದಂತೆ ಇನ್ನಿತರ ಬೀಜ ಗಳನ್ನು ಕೊಡುವುದರಿಂದ ಯಾವುದೇ ಸಮಸ್ಯೆಯಾಗಿಲ್ಲ. ಹಾಗಾಗಿ, ಕಳೆದ ನಾಲೈದು ವರ್ಷ ಗಳಂತೆ ಈ ಬಾರಿಯೂ ಮಾರ್ಚ್ ತಿಂಗಳಲ್ಲಿ 9 ಲಕ್ಷಕ್ಕಿಂತ ಹೆಚ್ಚು ಲೀಟರ್ ಹಾಲು ಸಂಗ್ರಹ ವಾಗುತ್ತಿದೆ. ಎಲ್‌ ಪಿಜಿ ಸಿಲಿಂಡರ್ ಕೊರತೆ ಇದ್ದರೂ ಹಾಲು ಬಳಕೆಯಲ್ಲಿ ಕಡಿಮೆಯಾಗ ದಿರುವ ಕಾರಣ 3.2 ಲಕ್ಷ ಲೀಟರ್ ಹಾಲು, 92 ಸಾವಿರ ಲೀಟರ್ ಮೊಸರು, 10500 ಲೀಟರ್ ಮಜ್ಜಿಗೆ, 2000 ಸಾವಿರ ಲೀಟರ್ ಮ್ಯಾಂಗೋ ಲಸ್ಸಿ, 1500 ಪ್ರೊಬಟರ್ ಮಿಲ್ಕ್, 500 ಲೀಟರ್ ರಾಗಿ ಅಂಬಲಿ ಮಾರಾಟವಾಗುತ್ತಿದೆ. ಇದಲ್ಲದೆ, ಚೆನೈ ಮಾರಾಟ ಕೇಂದ್ರದಲ್ಲಿ 45 ಸಾವಿರ ಲೀ, ಕೇರಳದಲ್ಲಿ 12 ಸಾವಿರ ಲೀಟರ್ ಹಾಲು ಮಾರಾಟವಾಗುತ್ತಿದೆ ಎಂದು ಹೇಳಲಾಗಿದೆ.

ಮದುವೆಗಳಿಗೆ ಬುಕ್ಕಿಂಗ್ : ಏಪ್ರಿಲ್, ಮೇ ತಿಂಗಳಲ್ಲಿ ಮದುವೆ, ಗೃಹ ಪ್ರವೇಶ ಸೇರಿದಂತೆ ಶುಭ ಸಮಾರಂಭಗಳು ನಡೆಯುತ್ತಿರುವ ಕಾರಣ ಹಾಲು, ಮೊಸರುಗಳನ್ನು ಬುಕ್ಕಿಂಗ್ ಮಾಡಲಾಗುತ್ತಿದೆ. ಕಲ್ಯಾಣಮಂಟಪಗಳಲ್ಲಿ ಮದುವೆಗೆ ಬುಕ್ಕಿಂಗ್ ಮಾಡಿರುವುದನ್ನು ಈತನಕ ಗ್ಯಾಸ್ ಸಿಲಿಂಡರ್ ಸಮಸ್ಯೆ ಮುಂದಿಟ್ಟುಕೊಂಡು ರದ್ದುಪಡಿಸಿಲ್ಲ. ಬುಕ್ಕಿಂಗ್ ಮಾಡಿರುವವರು ಈತನಕ ಯಾರೂ ಕ್ಯಾನ್ಸಲ್ ಮಾಡಿಸಿಲ್ಲ. ಮುಂದೆ ಬೇಸಿಗೆ ಬೇಗೆ ಹೆಚ್ಚಾದರೆ ಮೊಸರು, ಮಜ್ಜಿಗೆ, ಲಸ್ಲಿ ಮಾರಾಟದಲ್ಲೂ ಸ್ವಲ್ಪ ಏರಿಕೆಯಾಗಬಹುದೆಂದು ನಿರೀಕ್ಷಿಸಲಾಗಿದೆ.

ಎಲ್ ಪಿಜಿ ಸಿಲಿಂಡರ್ ಸಮಸ್ಯೆ ಉಂಟಾಗಿದ್ದರೂ ಹಾಲು ಮಾರಾಟದಲ್ಲಿ ಯಾವುದೇ ವ್ಯತ್ಯಯವಾಗಿಲ್ಲ. ಮುಂದಿನ ವಾರದ ತನಕವೂ ಇದೇ ಪರಿಸ್ಥಿತಿ ಮುಂದುವರಿದರೆ ಒಂದಿಷ್ಟು ಕಡಿಮೆಯಾಗಬಹುದು. ಆದರೆ, ಈತನಕ ಮಾರಾಟದಲ್ಲಿ ಕೊಂಚವೂ ಇಳಿಕೆ ಕಂಡಿಲ್ಲ. ಎಂದಿನಂತೆ ಮೂರು ಲಕ್ಷ ಲೀಟರ್ ಹಾಲು ಮಾರಾಟವಾಗುತ್ತಿದೆ.
-ಎಸ್.ಕೆ.ಜಯಶಂಕರ್, ವ್ಯವಸ್ಥಾಪಕರು (ಮಾರುಕಟ್ಟೆ), ಮೈಮುಲ್

Tags:
error: Content is protected !!