ಡಾ.ಎಸ್. ಕೃಷ್ಣಪ್ಪ ಕಿತ್ತೂರು
ಇಂದು ಕೈವಾರ ತಾತಯ್ಯ ಅವರ ಜಯಂತಿ
‘ಉತ್ತಮ ಕುಲವೆಂದು ಹೇಳುವ ಮಾತು ಯುಕ್ತವಲ್ಲಣ್ಣ’… ೧೮ನೇ ಶತಮಾ ನದ ದಾಸ ಶ್ರೇಷ್ಠರ ಪರಂಪರೆಯಲ್ಲಿ ಕೈವಾರ ತಾತಯ್ಯ ಎಂದೇ ಗುರುತಿಸಿಕೊಂಡಿರುವ ಶ್ರೀ ಯೋಗಿ ನಾರೇಯಣ ಗುರುಗಳ ಮಾತು ಇದು. ಈ ಮಾತಿ ನಿಂದಲೇ ತಾತಯ್ಯ ಅವರು ಸಾಮಾಜಿಕ ತಾರತಮ್ಯವನ್ನು ವಿರೋಧಿಸಿದ್ದರು ಎಂಬುದನ್ನು ಸಾರುತ್ತದೆ.
೩೦೦ ವರ್ಷಗಳ ಹಿಂದೆ ಆಧ್ಯಾತ್ಮಿಕ ನೆಲೆಯಲ್ಲಿ ಪ್ರತಿಯೊಬ್ಬ ಮನುಷ್ಯನ ಏಳ್ಗೆಯನ್ನೂ ಬಯಸಿದವರು. ಇವರು ಬರೆದಿರುವ ಕಾಲಜ್ಞಾನವು ಸರ್ವಕಾಲಕ್ಕೂ ಸರ್ವ ವೇದ್ಯವಾದುದು. ಇವರನ್ನು ಭಾರತ ದೇಶದ ನಾಸ್ಟ್ರಡಾಮಸ್ ಎಂದೂ ಕರೆಯಲಾಗುತ್ತದೆ. ಯತೀಂದ್ರರು ೧೧೦ ವರ್ಷಗಳ ಕಾಲ ಬದುಕಿ ಸುಕ್ಷೇತ್ರ ಕೈವಾರದಲ್ಲಿ ಸಜೀವ ಸಮಾಧಿಯಾದರು. ಯತೀಂದ್ರರು ತಮ್ಮ ಆರಾಧ್ಯ ದೈವವಾದ ಶ್ರೀ ಅಮರ ನಾರಾಯಣ ಸ್ವಾಮಿಯವರ ನಾಮಾಕಿಂತದಲ್ಲಿ ಸಾವಿರಾರು ಗೀತೆಗಳನ್ನು ರಚಿಸಿದ್ದಾರೆ.
ಕೈವಾರದ ಬಣಜಿಗರ ಕೊಂಡಪ್ಪ ಮತ್ತು ಮುದ್ದಮ್ಮ ದಂಪತಿಗೆ ಮದುವೆಯಾಗಿ ಬಹಳ ವರ್ಷಗಳವರೆಗೆ ಮಕ್ಕಳಾಗಿರಲಿಲ್ಲ. ಅವರು ಶ್ರೀ ಅಮರ ನಾರಾಯಣಸ್ವಾಮಿ ಆರಾಧನೆ ಮಾಡಿದ ನಂತರ ಅವರ ಕೃಪೆಯಿಂದ ಗಂಡುಮಗುವಿನ ಜನನವಾಯಿತು. ಅದು ಕ್ರಿ.ಶ.೧೭೨೬ರ ಕಾಲಘಟ್ಟ. ಆ ಮಗುವಿಗೆ ‘ನಾರಾಯಣಪ್ಪ’ ಅಂತ ಹೆಸರಿಟ್ಟರು. ಬಾಲ್ಯದಲ್ಲಿಯೇ ನಾರಾಯಣಪ್ಪನವರು ತಂದೆ- ತಾಯಿಯರನ್ನು ಕಳೆದುಕೊಂಡರು. ಸಂಬಂಧಿಕರ ಮನೆಯಲ್ಲಿ ಬಾಲ್ಯವನ್ನು ಕಳೆದರು. ನಾರಾಯಣಪ್ಪನವರಿಗೆ ಓದು ಬರಹದಲ್ಲಿ ಆಸಕ್ತಿ ಇರಲಿಲ್ಲ. ಆದರೆ ಆಧ್ಯಾತ್ಮಿಕ ವಿಷಯದಲ್ಲಿ ಹೆಚ್ಚಿನ ಆಸಕ್ತಿಯಿದ್ದ ಪ್ರಯುಕ್ತ ಅವರು ಸಂಸ್ಕೃತ, ತೆಲುಗು ಹಾಗೂ ಕನ್ನಡ ಭಾಷೆಗಳಲ್ಲಿ ಅಭ್ಯಾಸ ಮಾಡಿದರು. ನಾರಾಯಣಪ್ಪನವರು ಪ್ರೌಢಾವಸ್ಥೆಯಲ್ಲಿ ಸಂಬಂಧದಲ್ಲಿಯೇ ಮುನಿಯಮ್ಮ ಎಂಬ ಕನ್ಯೆಯನ್ನು ವಿವಾಹವಾಗುತ್ತಾರೆ.
ಈ ದಂಪತಿಗೆ ಮುದ್ದಮ್ಮ, ಪೆದ್ದಕೊಂಡಪ್ಪ ಹಾಗೂ ಚಿಕ್ಕಕೊಂಡಪ್ಪ ಎಂಬ ಮೂವರು ಮಕ್ಕಳು ಇದ್ದರು. ನಾರಾಯಣಪ್ಪನವರು ಬಳೆ ಮಲಾರವನ್ನು ಹೆಗಲಿಗೆ ಹಾಕಿಕೊಂಡು ಹಳ್ಳಿ-ಹಳ್ಳಿ ಸುತ್ತಿ ಬಳೆ ವ್ಯಾಪಾರ ಮಾಡುತ್ತಾ ಜೀವನ ಸಾಗಿಸುತ್ತಿದ್ದರು. ಆದಾಗ್ಯೂ ಬಹುತೇಕ ಮಹಿಳೆಯರು ಬಳೆಗಳನ್ನು ತೊಡಿಸಿಕೊಂಡು ಹಣ ಕೊಡುತ್ತಿರಲಿಲ್ಲ. ಆದರೂ ನಾರಾಯಣಪ್ಪನವರು ಚಕಾರವೆತ್ತದೆ ಹೊರಟು ಹೋಗುತ್ತಿದ್ದರು. ನಾರಾಯಣಪ್ಪನವರು ಕಡು ಬಡವರಾಗಿ ಕನಿಷ್ಠ ಜೀವನ ನಡೆಸಲೂ ಕಷ್ಟಪಡುತ್ತಿದ್ದರು. ನಾರಾಯಣಪ್ಪ ಅವರು ಒಂದು ದಿನ ಬಳೆ ವ್ಯಾಪಾರ ಮುಗಿಸಿಕೊಂಡು ಸಂಜೆ ವಾಪಸ್ ಮನೆಗೆ ಬರುವಾಗ ಮಳೆ ಶುರುವಾಯಿತು. ಆಗ ದಾರಿಯ ಅನತಿದೂರದಲ್ಲಿ ಒಂದು ಗುಹೆ ಕಾಣಿಸಿ ಅಲ್ಲಿಗೆ ಆಶ್ರಯ ಪಡೆಯಲು ನಾರಾಯಣಪ್ಪನವರು ಹೋಗುತ್ತಾರೆ. ಗುಹೆಯೊಳಗೆ ಹೋದಾಗ ‘ಪರದೇಶಿಸ್ವಾಮಿ’ ಎಂಬವರ ದರ್ಶನವಾಗಿ ನಾರಾಯಣಪ್ಪನವರ ಜೀವನದ ಮಹತ್ತರ ತಿರುವುಂಟಾಗುತ್ತದೆ. ಆಗ ಸ್ವಾಮೀಜಿಯವರು ನಾರಾಯಣಪ್ಪನವರಿಗೆ ಮುಕ್ತಿಮಾರ್ಗ ತೋರಿ, ‘ಓಂ ನಮೋ ನಾರಾಯಣಾಯ’ ಅಷ್ಟಾಕ್ಷರಿ ಮಂತ್ರವನ್ನು ಬೋಧಿಸುತ್ತಾರೆ. ಆ ಮಂತ್ರವನ್ನು ನಾರಾಯಣಪ್ಪ ಹಲವಾರು ವರ್ಷಗಳು ನರಸಿಂಹ ಗುಹೆಯಲ್ಲಿ ಏಕಾಂತವಾಗಿ ಕುಳಿತು ಪಠಿಸುತ್ತಾರೆ. ಆಗ ಅವರಿಗೆ ಜ್ಞಾನಸಿದ್ಧಿಯಾಯಿತು.
ತಾತಯ್ಯ ಅವರು ಸರಳ ಸಾಧು ಜೀವನವನ್ನು ಮಾಡುತ್ತಾ ಜಾತಿ ಪದ್ಧತಿಯನ್ನು ಸಮಾಜದಲ್ಲಿ ತೊಲಗಿಸಲು ಶ್ರಮಿಸಿದರು. ಆದ್ದರಿಂದಲೇ ಅವರು ಎಲ್ಲ ಜಾತಿವರ್ಗದವರನ್ನೂ ಭಕ್ತರಾಗಿ ಪಡೆದರು. ಇಂದೂ ಎಲ್ಲಾ ಜಾತಿವರ್ಗದವರು ಕೈವಾರ ತಾತಯ್ಯನವರನ್ನು ಆರಾಧಿಸುತ್ತಾರೆ.
ದಾಸ ಶ್ರೇಷ್ಠರ ಪರಂಪರೆಗೆ ಸೇರಿದ ಶ್ರೀ ಯೋಗಿ ನಾರೇಯಣ ಗುರುಗಳು ಬಳೆ ಮಾರುತ್ತಲೇ ಶ್ರೀ ವಿಷ್ಣುವಿನ ತತ್ವ ಸಾರಗಳನ್ನು ಸಾರಿದ ತನ್ನ ಕೀರ್ತನೆಗಳ ಮೂಲಕ ಜಾತಿ ಧರ್ಮಗಳನ್ನು ಬದಿಗೊತ್ತಿ ದೇವರು, ಧರ್ಮದ ನೆಲೆಯನ್ನು ಹುಡುಕಲು ಹೊರಟ ಕೀರ್ತನಕಾರ ತಾತಯ್ಯ ಅವರು. ತಮ್ಮ ಭವಿಷ್ಯವಾಣಿಯ ಮೂಲಕ ಪ್ರಪಂಚದಲ್ಲಿ ನಡೆಯುವ ಘಟನೆಗಳನ್ನು ವರ್ತಮಾನದಲ್ಲಿ ತಿಳಿಸುತ್ತಾ ಹೋಗುತ್ತಿದ ದಾರ್ಶನಿಕ. ಸಿದ್ಧಿ ಯೋಗ ವಿಧಾನಗಳನ್ನು ಜಗತ್ತಿಗೆ ಸಾರುತ್ತಾ ಬಂದವರು.
ಜನಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿ ಕೀರ್ತನೆಗಳನ್ನು ಹರಿಸಿದ್ದಾರೆ. ಸಂಸ್ಕ ತ, ಕನ್ನಡ, ತೆಲುಗು ಭಾಷೆಗಳ ಪರಿಚಯವಿದ್ದ ತಾತಯ್ಯನವರು ‘ಕಾಲಜ್ಞಾನ’ ಕೃತಿಯಲ್ಲಿ ಯುಗ ಧರ್ಮಗಳ ಕಥನಗಳನ್ನು ಕಾವ್ಯ ರೂಪದಲ್ಲಿ ರಚಿಸಿದ್ದಾರೆ. ವಿಶ್ವದಲ್ಲಿ ಶ್ವೇತವರ್ಣೀಯರ ಆಳ್ವಿಕೆ ಅಂತ್ಯವನ್ನು ಕೂಡ ಹೇಳಿದ್ದರು. ರಾಜಾಡಳಿತದ ಶೋಷಣೆ, ಪ್ರಕೃತಿ ವಿಕೋಪಗಳ ವಿವರಣೆ, ಪ್ರಜಾಪ್ರಭುತ್ವದ ವೈಖರಿಗಳನ್ನು ಕುರಿತು ತಮ್ಮ ಭವಿಷ್ಯವಾಣಿಯಲ್ಲಿ ಹೇಳಿದ್ದಾರೆ. ಶ್ರೀ ಯೋಗಿ ನಾರೇಯಣರ ಈ ಗ್ರಂಥ ಇಂದು ದೇಶ ವ್ಯಾಪ್ತಿಯಲ್ಲೇ ಖ್ಯಾತಿಯನ್ನು ಪಡೆಯುತ್ತಿದೆ.
ಶ್ರೀ ಯೋಗಿ ನಾರೇಯಣರು ಕೋಲಾರ , ಚಿಕ್ಕಬಳ್ಳಾಪುರ ಸುತ್ತಮುತ್ತಲಿನ ಪ್ರದೇಶಗಳು ತೆಲುಗು ಭಾಷೆಗೆ ಹತ್ತಿರವಾಗಿದ್ದು, ತೆಲುಗಿನಲ್ಲಿಯೂ ತಮ್ಮ ಶಬ್ದ ಭಂಡಾರವನ್ನು ಸಾರಿದ್ದಾರೆ. ಸಂಸ್ಕೃತ ರೂಪಕ ಕನ್ನಡ ತತ್ವಪದಗಳು ಇದರಲ್ಲಿ ಹುದುಗಿವೆ. ಇದರಲ್ಲಿ ಇರುವ ‘ಭೀಮ ಲಿಂಗನ ಶತಕ’ ದೈವವಾಣಿ ಎಂದೇ ಹೇಳಬೇಕು. ಭವಿಷ್ಯವಾಣಿ ಗಳನ್ನು ದೈವ ನುಡಿಸಿದಂತೆ ಸದ್ಗುರು ಕೈವಾರ ತಾತಯ್ಯ ಗುರುಗಳು ನುಡಿದು, ಕಾಲಜ್ಞಾನ ಕೃತಿ ಗುರುವಾಣಿ ಯಾಗುತ್ತಾ ಹೋಗುತ್ತಿದೆ. ಯೋಗಿ ನಾರೇಯಣರ ಪದ್ಯಗಳು ಸ್ವಾತಂತ್ರ್ಯ ಪೂರ್ವದ ಭಾರತದ ಸ್ಥಿತಿಗತಿಗಳು, ಭಾರತೀಯ ಶಾಸ್ತ್ರ ಪುರಾಣಗಳಿಗೆ ಸಂಬಂಽಸಿದ ಕಾಲ, ದೈವ,ಸೃಷ್ಟಿ ಕರ್ತೃತ್ವ, ವಕೃತ್ವಗಳ ವಿಚಾರಗಳನ್ನು ಪ್ರಸ್ತಾಪಿಸಿದ್ದಾರೆ. ಆಧ್ಯಾತ್ಮಿಕ ಶಾಸ್ತ್ರಗಳ ಪ್ರಕಾರ ಭಗವಂತನು ನಿತ್ಯ ನಿರಾಕಾರ, ನಿರ್ಲೇಪ, ನಿರ್ವಿಕಲ್ಪ, ನಿರಂಜನ ವಿಶೇಷಣ ಇತ್ಯಾದಿ ವಿಚಾರಗಳು ಅವರ ಕಾಲಜ್ಞಾನ ಕೃತಿಯಲ್ಲಿ ಪ್ರತಿಪಾದಿಸಲ್ಪಟ್ಟಿವೆ. ಈ ಕೃತಿಯಲ್ಲಿ ಒಟ್ಟು ೪೩ ಪದ್ಯಗಳಿವೆ ಭಗವತ್ ತತ್ವದ ಸಾರಾಂಶ ಕೂಡಿದೆ ತಾತ್ವಿಕತೆಯ ಉದ್ದೇಶವನ್ನು ಅಳವಡಿಸಿಕೊಂಡಿದೆ. ಯೋಗಿಗಳಿಗೆ ಆತ್ಮವಿಶ್ತ್ತ್ರತನ ಏಕದ್ವಿತೀಯವಾದ ಪರಬ್ರಹ್ಮ ತತ್ವ ಸಾರವು ಇದರಲ್ಲಿ ಇದೆ. ಭೂತ, ಭವಿಷ್ಯ, ವರ್ತಮಾನಗಳ ಕಾಲಮಾನ ಲೆಕ್ಕಾಚಾರಗಳನ್ನು ತಮ್ಮ ಕೃತಿ ಹನ್ನೊಂದನೇ ಅಧ್ಯಾಯದಲ್ಲಿ ಸೊಗಸಾಗಿ ವಿವರಿಸಿದ್ದಾರೆ. ಶತಾಯುಷಿಯಾಗಿದ್ದ ನಾರೇಯಣ ಕವಿಗಳು ಕೈವಾರದಲ್ಲಿ ಐಕ್ಯವಾದರು ಎನ್ನಲಾಗಿದೆ.
ಓಲೆಗರಿಯಲ್ಲಿದ್ದ ಕಾಲಜ್ಞಾನ ಗ್ರಂಥವನ್ನು ಕೈವಾರದ ಧರ್ಮಾಧಿಕಾರಿ ಎಂ.ಎಸ್.ರಾಮಯ್ಯನವರು ಸಂರಕ್ಷಿಸಿ ಪೋಷಣೆ ಮಾಡಿದರೆಂದು ತಿಳಿದು ಬಂದಿದೆ. ಕೈವಾರ ಶ್ರೀ ಕ್ಷೇತ್ರದಲ್ಲಿ ನಾರೇಯಣನವರ ಮಠವಿದ್ದು, ಅಲ್ಲಿ ಪ್ರವಚನಗಳು ಭಜನೆಗಳು ಭಜಂತ್ರಿಗಳು ನಡೆಯುತ್ತಾ ಬಂದಿವೆ.
(ಲೇಖಕರು, ಮೈಸೂರಿನ ಮಹಾರಾಜ ಕಾಲೇಜಿನ ಸಹಾಯಕ ಪ್ರಾಧ್ಯಾಪಕರು)
” ತಾತಯ್ಯ ಅವರು ಸರಳ ಸಾಧು ಜೀವನವನ್ನು ಮಾಡುತ್ತಾ ಜಾತಿ ಪದ್ಧತಿಯನ್ನು ಸಮಾಜದಲ್ಲಿ ತೊಲಗಿಸಲು ಶ್ರಮಿಸಿದರು. ಆದ್ದರಿಂದಲೇ ಅವರು ಎಲ್ಲ ಜಾತಿವರ್ಗದವರನ್ನೂ ಭಕ್ತರಾಗಿ ಪಡೆದರು. ಇಂದೂ ಎಲ್ಲಾ ಜಾತಿವರ್ಗದವರು ಕೈವಾರ ತಾತಯ್ಯನವರನ್ನು ಆರಾಧಿಸುತ್ತಾರೆ.”





