ಮೈಸೂರು: ಹುಣಸೂರು ತಾಲ್ಲೂಕಿನ ಹನಗೋಡು ಹೋಬಳಿಯ ಕಲ್ಲೂರಪ್ಪನ ಬೆಟ್ಟದ ಬಳಿಯ ಮಾದಹಳ್ಳಿಯ ಜೋಳದ ಹೊಲದಲ್ಲಿ ಪತ್ತೆಯಾದ ಭಾರಿ ಗಾತ್ರದ ಹೆಬ್ಬಾವನ್ನು ಅರಣ್ಯ ಇಲಾಖೆ ಸಿಬ್ಬಂದಿ ಸಂರಕ್ಷಿಸಿ, ನಾಗರಹೊಳೆ ರಾಷ್ಟ್ರೀಯ ಉದ್ಯಾನವನಕ್ಕೆ ಬಿಟ್ಟಿದ್ದಾರೆ.
ನಾಗರಹೊಳೆ ರಾಷ್ಟ್ರಿಯ ಉದ್ಯಾನವನದ ಕಾಡಂಚಿನ ಪ್ರದೇಶದಲ್ಲಿರುವ ಕಲ್ಲೂರಪ್ಪನ ಬೆಟ್ಟದ ಬಳಿಯ ಮಾದಹಳ್ಳಿಯ ಗ್ರಾಮದ ಮುನಿಕುಮಾರ್ ಎಂಬುವವರ ಹೊಲದಲ್ಲಿ ಹೆಬ್ಬಾವು ಕಾಣಿಸಿಕೊಂಡಿತ್ತು. ಕೂಡಲೇ ಮುನಿಕುಮಾರ್ ಅವರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು.
ಮಾಹಿತಿ ಮೇರೆಗೆ ಸ್ಥಳಕ್ಕಾಗಮಿಸಿದ ವೀರನಹೊಸಹಳ್ಳಿ ವನ್ಯಜೀವಿ ವಲಯದ ಸಿಬ್ಬಂದಿ, ಸುರಕ್ಷಿತವಾಗಿ ಹೆಬ್ಬಾವನ್ನು ಬಲೆಯಲ್ಲಿ ಬಂಧಿಸಿ ನಾಗರಹೊಳೆ ಉದ್ಯಾನವನಕ್ಕೆ ಸಾಗಿಸಿದರು. ಇಲ್ಲಿವರೆಗೂ ಈ ಭಾಗದಲ್ಲಿ ಇಷ್ಟೊಂದು ಬೃಹತ್ ಗಾತ್ರದ ಹಾವು ಕಂಡಿರಲಿಲ್ಲ. ಹನ್ನೆರಡೂವರೆ ಅಡಿ ಉದ್ದ, 50 ಕೆ.ಜಿ ತೂಕದ ಸುಮಾರು 8-10 ವರ್ಷ ಪ್ರಾಯದ ಈ ಹೆಣ್ಣು ಹೆಬ್ಬಾವು ಆರೋಗ್ಯಯುತವಾಗಿದೆ ಎಂದು ವೀರನಹೊಸಹಳ್ಳಿ ಆರ್‌ಎಫ್‌ಒ ವಿನೋದ್ ಗೌಡ ಅವರು ಮಾಹಿತಿ ನೀಡಿದ್ದಾರೆ.





