ಕಳೆದ ಎರಡು ತಿಂಗಳಿಂದೀಚೆಗೆ ಮೈಸೂರು ಜಿಲ್ಲೆಯ ಸರಗೂರು, ಎಚ್.ಡಿ.ಕೋಟೆ, ಹುಣಸೂರು ತಾಲ್ಲೂಕು ಹಾಗೂ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕು ವ್ಯಾಪ್ತಿಯಲ್ಲಿ ಹುಲಿ ದಾಳಿ ಪ್ರಕರಣಗಳು ಹೆಚ್ಚು ವರದಿಯಾಗುತ್ತಿವೆ. ಇದರಿಂದ ರೈತರು ಹೊಲ ಗದ್ದೆಗಳಲ್ಲಿ ಕೆಲಸ ನಿರ್ವಹಿಸುವುದೇ ಕಷ್ಟವಾಗಿದೆ. ಅರಣ್ಯ ಇಲಾಖೆಯವರು ಉಪಟಳ ನೀಡುವ ಹುಲಿಗಳನ್ನು ಸೆರೆ ಹಿಡಿದು ಮೈಸೂರಿನ ಕೂರ್ಗಳ್ಳಿಯ ಪುನರ್ವಸತಿ ಕೇಂದ್ರಕ್ಕೆ ಬಿಡುತ್ತಿದ್ದಾರೆ. ಕೆಲ ದಿನಗಳ ನಂತರ ಇಂತಹ ಹುಲಿಗಳನ್ನು ಮತ್ತೆ ಕಾಡಿಗೆ ಬಿಡಲಾಗುವುದು ಎಂದು ಅರಣ್ಯಾಽಕಾರಿಗಳು ಹೇಳಿದ್ದಾರೆ. ಸೆರೆ ಹಿಡಿದ ಹುಲಿಗಳನ್ನು ಮರಳಿ ಕಾಡಿಗೆ ಬಿಟ್ಟರೆ ಅವು ಮತ್ತೆ ಜನವಸತಿ ಪ್ರದೇಶಕ್ಕೆ ಬಂದು ದಾಳಿ ಮಾಡುವ ಸಾಧ್ಯತೆಗಳಿವೆ. ಅರಣ್ಯ ಇಲಾಖೆಯವರು ಹುಲಿಗಳನ್ನು ಬೇರೆ ರಾಜ್ಯಗಳ ಮೃಗಾಲಯಗಳಿಗೆ ಪ್ರಾಣಿ ವಿನಿಮಯ ಯೋಜನೆಯಡಿ ನೀಡಬಹುದು. ಮರಳಿ ಕಾಡಿಗೆ ಬಿಡುವುದೇ ಆದರೆ ಅವುಗಳಿಗೆ ರೇಡಿಯೋ ಕಾಲರ್ ಅಳವಡಿಸಿ ಬಿಡಲಿ. ಆಗ ಅವುಗಳ ಚಲನ ವಲನಗಳನ್ನು ಸುಲಭವಾಗಿ ತಿಳಿದು ಅವುಗಳ ಇರುವಿಕೆಯನ್ನು ತಿಳಿಯಬಹುದಾಗಿದೆ. ಇದರಿಂದಾಗಿ ಹುಲಿಗಳ ದಾಳಿಯನ್ನು ತಪ್ಪಿಸಬಹುದಾಗಿದೆ.
-ಮುಳ್ಳೂರು ಪ್ರಕಾಶ್, ಕನಕದಾಸ ನಗರ, ಮೈಸೂರು





