Mysore
24
light rain

Social Media

ಮಂಗಳವಾರ, 29 ಸೆಪ್ಟೆಂಬರ್ 2026
Light
Dark

ನೂತನ ದೇವಾಲಯದ ಬಳಿ ಕೋಣ ಬಲಿಕೊಟ್ಟು ವಾಮಾಚಾರ : ಬೆಚ್ಚಿಬಿದ್ದ ಗ್ರಾಮಸ್ಥರು

ಕಿಕ್ಕೇರಿ ಬಳಿಯ ಗೊಂದಹಳ್ಳಿಯಲ್ಲಿ ದುಷ್ಕೃತ್ಯ

ಕಿಕ್ಕೇರಿ‌ : ನೂತನ ದೇವಾಲಯದ ಕಳಶಸ್ಥಾಪನೆಯಾಗಿ 12 ದಿನ ಕಳೆಯುವ ಅಷ್ಟರಲ್ಲೇ ದುಷ್ಕರ್ಮಿಗಳು ರಾತ್ರೋರಾತ್ರಿ ಕೋಣವನ್ನು ಬಲಿಕೊಟ್ಟು ವಾಮಾಚಾರ ನಡೆಸಿರುವ ಘಟನೆ ಗ್ರಾಮಸ್ಥರನ್ನು ಬೆಚ್ಚಿ ಬೀಳಿಸಿದೆ.

ಗೊಂದಹಳ್ಳಿ ಗ್ರಾಮದಲ್ಲಿ ನೂತನವಾಗಿ ದಂಡಮ್ಮ ದೇವಸ್ಥಾನದ ಉದ್ಘಾಟನಾ ಕಾರ್ಯಕ್ರಮ ನಿಮಿತ್ತ ಹಲವು ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಹೋಮ ಅವನ ಮುಂತಾದ ವಿಧಿ ವಿಧಾನಗಳೊಂದಿಗೆ 12 ದಿನಗಳ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. 12 ದಿನಗಳ ಕಾರ್ಯಕ್ರಮ ಮುಗಿಯಲು ಇನ್ನೊಂದು ದಿನ ಮಾತ್ರ ಬಾಕಿ ಇತ್ತು. ಆದರೆ ಗುರುವಾರ ರಾತ್ರಿ ಅಪರಿಚಿತ ದುಷ್ಕರ್ಮಿಗಳು ಕೋಣವನ್ನು ಬಲಿಕೊಟ್ಟು ರುಂಡ ಮುಂಡವನ್ನು ಬೇರ್ಪಡಿಸಿ ದೇಹವನ್ನು ಅಲ್ಲಿಯೇ ಬಿಟ್ಟು ರುಂಡವನ್ನು ಹೊತ್ತೊಯ್ದಿದ್ದಾರೆ.

ಇದನ್ನು ಓದಿ: ಹುಣಸೂರು | ಆತಂಕ ಸೃಷ್ಟಿಸಿದ್ದ ಹುಲಿ ಸೆರೆ ; ನಿಟ್ಟುಸಿರು ಬಿಟ್ಟ ಗ್ರಾಮಸ್ಥರು

ಇದರಿಂದಾಗಿ ಸ್ಥಳದಲ್ಲಿ ರಕ್ತ ಚೆಲ್ಲಾಡಿದ್ದು ಮಾತ್ರವಲ್ಲ ಅನೇಕ ರೀತಿಯ ವಾಮಾಚಾರ ನಡೆಸಿರುವ ಮಡಿಕೆ ಕುಡಿಕೆ ದಾರ ಅರಿಶಿನ ಕುಂಕುಮ ಮುಂತಾದ ವಸ್ತುಗಳು ಸ್ಥಳದಲ್ಲಿ ಎಲ್ಲಾ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಬೆಳಗ್ಗೆ ಎಂದಿನಂತೆ ಜಮೀನಿನ ಹತ್ತಿರ ಹೋಗಲು ಬಂದವರು ಈ ಭಯಂಕರ ಸನ್ನಿವೇಶವನ್ನು ಕಂಡು ಮೂಕ ವಿಸ್ಮಿತರಾಗಿ ಮುಖಂಡರಿಗೆ ತಿಳಿಸಿದ್ದಾರೆ. ವಿಚಾರ ಕಾಡ್ಗಿಚ್ಚಿನಂತೆ ಗ್ರಾಮದಲ್ಲೆಲ್ಲ ಹಬ್ಬಿತು.ಕುತೂಹಲ ಭರಿತ ಜನರು ಗುಂಪು ಗುಂಪಾಗಿ ಬಂದು ಈ ಕೃತ್ಯವನ್ನು ವೀಕ್ಷಿಸಿದರು.

ಈ ಘಟನೆಯಿಂದ ಹಲವರು ತೀವ್ರ ಆತಂಕಗೊಂಡಿರುವುದಲ್ಲದೆ ವಾಮಾಚಾರದಿಂದ ಊರಿನ ಶಾಂತಿಗೆ ಭಂಗವಾಗುವುದೇ ಎಂಬ ಆತಂಕ ಕಾಡುತ್ತಿದೆ. ಹಾಗಾಗಿ 12ನೇ ದಿನದ ಪೂಜಾ ಕಾರ್ಯಕ್ರಮ ಸಮಪ್ತಿಗೊಳ್ಳುವ ಮುನ್ನವೇ ಇಂತಹ ದುಷ್ಕೃತ್ಯ ನಡೆಸಿರುವ ವಾಮಾಚಾರಿಗಳನ್ನು ಕೂಡಲೇ ಬಂಧಿಸಿ ಗ್ರಾಮಸ್ಥರ ಆತಂಕ ನಿವಾರಿಸಬೇಕೆಂದು ಆಗ್ರಹಿಸಿದ್ದಾರೆ.

ಸ್ಥಳಕ್ಕೆ ಮುಖಂಡರಾದ ನಂಜಣ್ಣ ಅಣ್ಣೇಗೌಡ ಮಂಜೇಗೌಡ ಆನಂದ್ ಬೊಮ್ಮೇಗೌಡ ಬಸವರಾಜು ಕುಮಾರ್, ರಂಜಿತ್ ಮುಂತಾದವರು ಸ್ಥಳ ಪರಿಶೀಲನೆ ನಡೆಸಿ ಪೊಲೀಸರಿಗೆ ದೂರು ದಾಖಲಿಸುವ ಪ್ರಕ್ರಿಯೆ ನಡೆಯುತ್ತಿದ್ದು, ಸಂಬಂಧಿಸಿದವರನ್ನು ಪತ್ತೆಹಚ್ಚಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಅಗ್ರಹಿಸಿದ್ದಾರೆ

Tags:
error: Content is protected !!