Mysore
28
few clouds

Social Media

ಶನಿವಾರ, 06 ಡಿಸೆಂಬರ್ 2025
Light
Dark

ಎಂಟು ವರ್ಷಗಳ ನಂತರ ಮತ್ತೆ ಕಾಲೇಜ್‍ ಹುಡುಗಿಯಾದ ರಚಿತಾ ರಾಮ್‍

ರಚಿತಾ ರಾಮ್‍ ಅಭಿನಯದ ‘ಮ್ಯಾಟ್ನಿ’, ‘ಸಂಜು ವೆಡ್ಸ್ ಗೀತಾ 2’, ‘ಬ್ಯಾಡ್‍ ಮ್ಯಾನರ್ಸ್’, ‘ವೀರಂ’, ‘ಕ್ರಾಂತಿ’ ಸೇರಿದಂತೆ ಕೆಲವು ಚಿತ್ರಗಳು ಒಂದರ ಹಿಂದೊಂದು ಸೋತಿವೆ. ಈ ಸೋಲುಗಳ ನಡುವೆಯೂ ಅವರ ಕೈಯಲ್ಲಿ ‘ಕಲ್ಟ್’, ‘ಲ್ಯಾಂಡ್ ಲಾರ್ಡ್’ ಮತ್ತು ‘ಅಯೋಗ್ಯ’ ಚಿತ್ರಗಳಿವೆ. ಈ ಸಾಲಿಗೆ ಇದೀಗ ಧ್ರುವ ಸರ್ಜಾ ಅಭಿನಯದ ‘ಕ್ರಿಮಿನಲ್‍’ ಚಿತ್ರ ಸಹ ಸೇರಿದೆ.

ವಿಶೇಷವೆಂದರೆ, ಈ ಚಿತ್ರದಲ್ಲಿ ರಚಿತಾ ಬಹಳ ದಿನಗಳ ನಂತರ ಕಾಲೇಜು ಯುವತಿಯಾಗಿ ಕಾಣಿಸಿಕೊಳ್ಳುತ್ತಿದ್ದಾರಂತೆ. ಅಷ್ಟೇ ಅಲ್ಲ, ಪಾತ್ರಕ್ಕಾಗಿ ತೂಕವನ್ನು ಇಳಿಸಿಕೊಳ್ಳುತ್ತಿದ್ದಾರಂತೆ. ಈ ವಿಷಯವನ್ನು ಸ್ವತಃ ಅವರೇ ಹೇಳಿದ್ದಾರೆ.

ಈ ಕುರಿತು ಮಾತನಾಡಿರುವ ಅವರು, ‘’ಕ್ರಿಮಿನಲ್‍ ಚಿತ್ರದಲ್ಲಿ ಗ್ಲಾಮರ್‍ ಇರುವುದಿಲ್ಲ. ಮೇಕಪ್‍ ಹಾಕೋಕೂ ಬಿಡುತ್ತಿಲ್ಲ. ಈ ಚಿತ್ರದಲ್ಲಿ ಯುವ ಪ್ರೇಮಿಯಾಗಿ ಕಾಣಿಸಿಕೊಳ್ಳುತ್ತಿದ್ದೇನೆ. ಪಾತ್ರಕ್ಕಾಗಿ ಇನ್ನಷ್ಟು ತೂಕ ಇಳಿಸಿಕೊಳ್ಳಬಬೇಕು. ‘ಭರ್ಜರಿ’ಯಲ್ಲಿ ಕಾಲೇಜ್‍ ಹುಡುಗಿಯಾಗಿ ಕಾಣಿಸಿಕೊಂಡಿದ್ದು ಬಿಟ್ಟರೆ, ನಂತರ ಇದೇ ಚಿತ್ರದಲ್ಲಿ ಅಂಥದ್ದೊಂದು ಪಾತ್ರ ಮಾಡುತ್ತಿದ್ದೇನೆ. ಇಲ್ಲಿ ಹೆಚ್ಚು ಮೇಕಪ್‍ ಇರುವುದಿಲ್ಲ. ಒಬ್ಬ ಸರಳ ಹುಡುಗಿಯ ಪಾತ್ರ ಮಾಡುತ್ತಿದ್ದೇನೆ. ನಾನೊಬ್ಬಳೇ ಅಲ್ಲ, ಧ್ರುವ ಸಹ ತೂಕ ಇಳಿಸಿಕೊಳ‍್ಳುತ್ತಿದ್ದಾರೆ. ಇಬ್ಬರೂ ಯಂಗ್‍ ಆಗಿ ಕಾಣಬೇಕು ಎಂಬುದು ನಮ್ಮ ಉದ್ದೇಶ’ ಎನ್ನುತ್ತಾರೆ.

‘ಕ್ರಿಮಿನಲ್‍’ ಚಿತ್ರದಲ್ಲಿ ಪಾರ್ವತಿ ಎಂಬ ಪಾತ್ರ ಮಾಡುತ್ತಿರುವುದಾಗಿ ಹೇಳುವ ರಚಿತಾ, ‘ಚಿತ್ರದಲ್ಲಿ ಧ್ರುವ, ಶಿವ ಎಂಬ ಪಾತ್ರ ಮಾಡಿದರೆ, ನಾನು ಪಾರ್ವತಿ ಎಂಬ ಪಾತ್ರ ಮಾಡುತ್ತಿದ್ದಾರೆ. ಚಿತ್ರದಲ್ಲಿ ಶಿವ-ಪಾರ್ವತಿ ಪ್ರೀತಿ ಜಗಳ, ಗಲಾಟೆ, ಅಳು-ನಗು ಎಲ್ಲವೂ ಇರುತ್ತದೆ. ‘ಕೂಲಿ’ ಚಿತ್ರದ ನಂತರ ಬೇರೆ ತರಹದ ಪಾತ್ರಗಳು ಬರುತ್ತಿವೆ. ಬೇರೆ ತರಹ ನೋಡುತ್ತಿದ್ದಾರೆ. ಈ ಚಿತ್ರದಲ್ಲೂ ವಿಭಿನ್ನ ಪಾತ್ರ ಸಿಕ್ಕಿದೆ. ಈ ಚಿತ್ರಕ್ಕಾಗಿ ಮೊದಲ ಕಾಲ್‍ ಬಂದಿದ್ದು ಧ್ರುವ ಅವರದ್ದು. ಈ ಪಾತ್ರವನ್ನು ನೀವು ಮಾಡಬೇಕು ಎಂದರು. ನಾನೇ ಯಾಕೆ ಎಂದು ಕೇಳಿದೆ. ಈ ಪಾತ್ರಕ್ಕೆ ನೀವೇ ಸೂಕ್ತ, ನಿಮಗೆ ಈ ಪಾತ್ರ ಕಷ್ಟವಾಗುವುದಿಲ್ಲ ಎಂದರು. ಈ ಚಿತ್ರದಲ್ಲಿ ಶಿವ-ಪಾರ್ವತಿ ಬಹಳ ಚೆನ್ನಾಗಿರುತ್ತಾರೆ. ಮುದ್ದುಮುದ್ದಾಗಿ ಇರುತ್ತಾರೆ ಎನ್ನುವುದಕ್ಕಿಂತ ಆ ಕಾಂಬಿನೇಷನ್‍ ಚೆನ್ನಾಗಿದೆ’ ಎನ್ನುತ್ತಾರೆ ರಚಿತಾ.

ಅಂದಹಾಗೆ, ‘ಕ್ರಿಮಿನಲ್‍’ ಚಿತ್ರ ಮುಹೂರ್ತ ಇತ್ತೀಚೆಗೆ ಆಗಿದ್ದು, ಸದ್ಯದಲ್ಲೇ ಚಿತ್ರೀಕರಣ ನಡೆಯಲಿದೆ.

Tags:
error: Content is protected !!