Mysore
25
scattered clouds

Social Media

ಮಂಗಳವಾರ, 27 ಜನವರಿ 2026
Light
Dark

ಕಡೇ ಕಾರ್ತಿಕ ಸೋಮವಾರ : ಮ.ಬೆಟ್ಟದಲ್ಲಿ ಅಗತ್ಯ ಸಿದ್ಧತೆ

ಹನೂರು : ರಾಜ್ಯದ ಪ್ರಸಿದ್ಧ ಧಾರ್ಮಿಕ ಯಾತ್ರಾಸ್ಥಳ ಶ್ರೀ ಕ್ಷೇತ್ರ ಮಲೆಮಹದೇಶ್ವರ ಬೆಟ್ಟದ ದೀಪದಗಿರಿ ಒಡ್ಡುವಿನಲ್ಲಿ ಕಡೇ ಕಾರ್ತಿಕ ಸೋಮವಾರ ದೀಪದ ಗಿರಿ ಒಡ್ದುವಿನಲ್ಲಿ ನಡೆಯುವ ದೀಪೋತ್ಸವ ಹಾಗೂ ತೆಪ್ಪೋತ್ಸವಕ್ಕೆ ಶ್ರೀ ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎ.ಇ ರಘು ರವರ ನೇತೃತ್ವದಲ್ಲಿ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಮಾದಪ್ಪನ ಸನ್ನಿಧಿಯಲ್ಲಿ ಈಗಾಗಲೇ ಮೂರು ಸೋಮವಾರಗಳಂದು ವಿಶೇಷ ಪೂಜೆ ನೆರವೇರಿಸಲಾಗಿದ್ದು, ಕಡೇ ಕಾರ್ತಿಕ ಸೋಮವಾರ ಬೆಳಗಿನ ಜಾವ ಸ್ವಾಮಿಗೆ ಬೇಡಗಂಪಣ ಅರ್ಚಕರಿಂದ ವಿಶೇಷ ಪೂಜೆಯೊಂದಿಗೆ ದೇಗುಲದಲ್ಲಿ ವಿಶೇಷ ಉತ್ಸವಗಳು ನಡೆಯಲಿವೆ. ಬೆಳಗ್ಗೆ 10.30 ರಿಂದ ಮಧ್ಯಾಹ್ನ 12 ಗಂಟೆವರೆಗೆ ದೇಗುಲದ ಆಲಂಬಾಡಿ ಬಸವನ ಸಾಲಿನ ಕಂಠ ಸಾಲೆಯಲ್ಲಿ ಸಾಲೂರು ಬೃಹನ್ಮಠದ ಪೀಠಾಧಿಪತಿ ಡಾ.ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ನೇತೃತ್ವದಲ್ಲಿ ಬೇಡಗಂಪಣ ಸರದಿ ಅರ್ಚಕರಿಂದ ಸ್ವಾಮಿಯ ಕೊಳಗದ ಮುಖವಾಡಕ್ಕೆ ಹಾಲು, ಜೇನುತುಪ್ಪ, ಅಷ್ಟಗಂಧ, ಸಕ್ಕರೆ, ಮೊಸರು, ನಿಂಬೆರಸ, ಖರ್ಜೂರ, ದ್ರಾಕ್ಷಿ, ಕಲ್ಲು ಸಕ್ಕರೆ ಅಭಿಷೇಕ ನೆರವೇರಲಿದೆ. ಬಳಿಕ ಶತನಾಮ ಬಿಲ್ವಾರ್ಚನೆಯೊಂದಿಗೆ ಸ್ವಾಮಿಯ ಮೂರ್ತಿಯನ್ನು ವಿವಿಧ ಪುಷ್ಪಗಳಿಂದ ಅಲಂಕರಿಸಿ ದೀಪ, ಧೂಪದಾರತಿ, ಕುಂಭದಾರತಿ ಹಾಗೂ ಗೋಪುರದ ಆರತಿಯ ಜತೆಗೆ ಮಹಾಮಂಗಳಾರತಿ ಬೆಳಗಿಸಲಾಗುತ್ತದೆ. ರಾತ್ರಿ 9 ಗಂಟೆ ಹೊತ್ತಿಗೆ ಮಹದೇಶ್ವರರ ಮಹಾಜ್ಯೋತಿ ದರ್ಶನ ನೆರವೇರಲಿದೆ. ದೊಡ್ಡಕೆರೆ ಕಲ್ಯಾಣಿಯಲ್ಲಿ ತೆಪ್ಪೋತ್ಸವ ಜರುಗಲಿದೆ.

ನ.17ರಂದು ರಾತ್ರಿ ದೀಪದಗಿರಿ ಒಡ್ಡುವಿನ ಬಳಿಯಿರುವ ಬೃಹತ್ ಅಣತೆಗೆ ಬಿಳಿ ಬಣ್ಣ ಬಳಿಯಲಾಗಿದೆ. ಹಸಿರು ಚಪ್ಪರ ನಿರ್ಮಿಸಿ ತಳಿರುತೋರಣದಿಂದ ಸಿಂಗರಿಸಲಾಗಿದೆ. ಇದರೊಂದಿಗೆ ಧಾರ್ಮಿಕ ಪೂಜಾ ಕಾರ್ಯಕ್ಕೆ ಸಿದ್ಧತೆ ನಡೆದಿದೆ. ಇನ್ನು ದೀಪೋತ್ಸವ ವೇಳೆ ಇಲ್ಲಿಗೆ ಸಾವಿರಾರು ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ಈ ಮಾರ್ಗದ ರಸ್ತೆಯನ್ನು ಪ್ರಾಧಿಕಾರದಿಂದ ದುರಸ್ತಿಪಡಿಸಿ ವಿದ್ಯುತ್ ದೀಪದ ವ್ಯವಸ್ಥೆ ಕಲ್ಪಿಸಲಾಗಿದೆ. ದೊಡ್ಡಕೆರೆ ಕಲ್ಯಾಣಿಯಲ್ಲಿ ತೆಪ್ಪೋತ್ಸವಕ್ಕೆ ತೆಪ್ಪ ಸಿದ್ಧಪಡಿಸಲಾಗಿದೆ.

ಇದನ್ನು ಓದಿ: ಕಾರ್ತಿಕ್‍ ಮಹೇಶ್‍ ಅಭಿನಯದಲ್ಲಿ ‘ಸಿಂಪಲ್’ ಸುನಿ ಹೊಸ ಚಿತ್ರ

ಮಹಾಜ್ಯೋತಿ ಸಂಜೆ ದೇಗುಲದಲ್ಲಿ ಸಾಲೂರು ಬೃಹನ್ಮಠದ ದರ್ಶನ ಪೀಠಾಧಿಪತಿ ಡಾ.ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಸಮ್ಮುಖದಲ್ಲಿ ಬೇಡಗಂಪಣ ಅರ್ಚಕರಿಂದ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಬಳಿಕ ದೇವರ ಉತ್ಸವ ಮೂರ್ತಿಯನ್ನು ಬಸವ ವಾಹನದಲ್ಲಿ ಕೂರಿಸಿ ದೇಗುಲದ ಸುತ್ತ ಪ್ರದಕ್ಷಿಣೆ ಹಾಕಿಸಲಾಗುತ್ತದೆ. ಮಾದಪ್ಪನಿಗೆ ನೈವೇದ್ಯ ಅರ್ಪಿಸಿ ಮಹಾ ಮಂಗಳಾರತಿ ಬೆಳಗಿದ ನಂತರ ಉತ್ಸವ ಮೂರ್ತಿಯನ್ನು ಸತ್ತಿಗೆ, ಸೂರಿ ಪಾನಿ, ಜಾಗಟೆ ಸದ್ದು ಹಾಗೂ ವಾದ್ಯ ಮೇಳ ದೊಂದಿಗೆ ಮೆರವಣಿಗೆ ಮೂಲಕ ದೀಪದಗಿರಿ ಒಡ್ಡುಗೆ ಕೊಂಡೊಯ್ಯಲಾಗುತ್ತದೆ. ಈ ವೇಳೆ ಸ್ವಾಮಿಗೆ ಬಿಲ್ವಾರ್ಚನೆ, ದೀವಾಟಿಕೆ ಸೇವೆ ಹಾಗೂ ಧೂಪ ದೀಪಧಾರತಿ ಸೇವೆ ನೆರವೇರಿಸುವ ಮೂಲಕ ವಿಶೇಷ ಪೂಜೆ ಸಲ್ಲಿಸಿ ಸಾಲೂರು ಶ್ರೀಗಳ ಸಮ್ಮುಖದಲ್ಲಿ ವಿಜೃಂಭಣೆ ಯಿಂದ ಮಹಾಜ್ಯೋತಿಯನ್ನು ಬೆಳಗಿಸಲಾಗುತ್ತದೆ. ತೆಪ್ಪೋತ್ಸವ ಬಳಿಕ ದೇಗುಲಕ್ಕೆ ತೆರಳಿ ಸ್ವಾಮಿಗೆ ನೈವೇದ್ಯ ಅರ್ಪಿಸಿ ಕಾರ್ತಿಕ ಮಾಸದ ಪೂಜೆ ನೆರವೇರಿಸಲಾಗುತ್ತದೆ.

ಕಡೇ ಕಾರ್ತಿಕ ಸೋಮವಾರ ಹಿನ್ನೆಲೆಯಲ್ಲಿ ಕಳೆದ ಮೂರಾಲ್ಕು ದಿನಗಳಿಂದ ವಿವಿಧ ಜಿಲ್ಲೆಗಳಿಂದ ಸಾವಿರಾರು ಭಕ್ತರು ಕಾಲ್ನಡಿಗೆಯ ಮೂಲಕ ಮ.ಬೆಟ್ಟಕ್ಕೆ ಆಗಮಿಸಿದ್ದು, ದೇವರ ದರ್ಶನ, ಹರಕೆ ಸೇವೆಯಲ್ಲಿ ಭಾಗಿಯಾಗಿ ಶ್ರೀ ಕ್ಷೇತ್ರದಲ್ಲಿಯೇ ಬೀಡು ಬಿಟ್ಟಿದ್ದಾರೆ. ಶುಕ್ರವಾರ ಸಂಜೆ ಜರುಗಿದ ಚಿನ್ನದ ತೇರಿನ ಉತ್ಸವದಲ್ಲಿ ಸಾವಿರಾರು ಭಕ್ತರು ಭಾಗಿಯಾಗಿದ್ದರು. ಭಾನುವಾರ ರಜೆ ಹಿನ್ನೆಲೆಯಲ್ಲಿ ಸಾವಿರಾರು ಭಕ್ತರು ಮ.ಬೆಟ್ಟಕ್ಕೆ ಭೇಟಿ ನೀಡಿದ್ದಾರೆ. ಶ್ರೀ ಕ್ಷೇತ್ರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ಪ್ರಾಧಿಕಾರ ದಾಸೋಹ, ಕುಡಿಯುವ ನೀರು, ನೆರಳು, ಸುಸೂತ್ರ ದೇವರ ದರ್ಶನ ಹಾಗೂ ಇತರ ಅಗತ್ಯ ಮೂಲ ಸೌಕರ್ಯಕ್ಕೆ ಸಮಸ್ಯೆಯಾಗ ದಂತೆ ಸಿದ್ಧತೆ ಮಾಡಿಕೊಂಡಿದೆ. ದೇವರ ದರ್ಶನಕ್ಕೆ ವೃದ್ಧರು ಹಾಗೂ ಅಂಗವಿಕಲರಿಗೆ ಪ್ರತ್ಯೇಕ ಕೌಂಟರ್ ತೆರೆಯಲಾಗಿದೆ. ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ಭಕ್ತರಿಗೆ ಮೂಲ ಸೌಕರ್ಯ ಕೊರತೆಯಾಗದಂತೆ ಕ್ರಮ ವಹಿಸಿ ಎಂದು ಪ್ರಾಧಿಕಾರದ ಕಾರ್ಯದರ್ಶಿ ಎ.ಈ.ರಘು ಸಿಬ್ಬಂದಿಗೆ ಸೂಚಿಸಿದ್ದಾರೆ.

ಕಡೇ ಕಾರ್ತಿಕ ಸೋಮವಾರಕ್ಕೆ ಪ್ರತಿ ವರ್ಷದಂತೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸುವ ನಿರೀಕ್ಷೆ ಇರುವುದರಿಂದ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಬರುವಂತಹ ಭಕ್ತಾದಿಗಳಿಗೆ ಮೂಲಭೂತ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ. ದೀಪೋತ್ಸವ, ತೆಪ್ಪೋತ್ಸವ ಹಾಗೂ ಧಾರ್ಮಿಕ ಪೂಜಾ ಕೈಂಕರ್ಯಕ್ಕೆ ವ್ಯವಸ್ಥಿತ ವಾಗಿ ಸಿದ್ಧತೆ ಮಾಡಿಕೊಳ್ಳಲಾಗಿದೆ. : ಎ.ಈ.ರಘು, ಕಾರ್ಯದರ್ಶಿ ಶ್ರೀ ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ, ಮ.ಬೆಟ್ಟ

Tags:
error: Content is protected !!