Mysore
22
haze

Social Media

ಭಾನುವಾರ, 25 ಜನವರಿ 2026
Light
Dark

ಸಾಲಭಾದೆ : ರೈತ ಆತ್ಮಹತ್ಯೆ

ಪಾಂಡವಪುರ : ಒಂದೆಡೆ ಸಾಲಗಾರರ ಕಾಟ, ಮತ್ತೊಂದೆಡೆ ಬೆಳೆ ನಷ್ಟದಿಂದ ಕಂಗಾಲಾದ ರೈತ ತನ್ನ ಜಮೀನಿನಲ್ಲಿ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲ್ಲೂಕಿನ ಬೇವಿನಕುಪ್ಪೆ ಗ್ರಾಮದಲ್ಲಿ ನಡೆದಿದೆ.

ಬೇವಿನಕುಪ್ಪೆ ಗ್ರಾಮದ ಹೊನ್ನೇಗೌಡ ಅವರ ಮಗ ಗೋವಿಂದ (58) ಕ್ರಿಮಿನಾಶಕ ಕುಡಿದು ಆತ್ಮಹತ್ಯೆ ಮಾಡಿಕೊಂಡಿರುವ ರೈತ. ಮೃತರಿಗೆ ಪತ್ನಿ ರತ್ನಮ್ಮ, ಪುತ್ರಿ ಅರ್ಪಿತಾ ಹಾಗೂ ಪುತ್ರ ಪುನೀತ್ ಇದ್ದಾರೆ.

ತಮ್ಮ ಆರು ಮಂದಿ ಸಹೋದರರಲ್ಲಿ ನಾಲ್ಕನೆಯವರಾದ ಗೋವಿಂದ ಅವರು ಒಟ್ಟು ಕುಟುಂಬದ 10 ಎಕರೆ ಜಮೀನಿನಲ್ಲಿ ವ್ಯವಸಾಯ ಮಾಡುತ್ತಿದ್ದರು. ಇತ್ತೀಚೆಗೆ ಪುತ್ರಿಯ ಮದುವೆ ಕೂಡ ನಿಶ್ಚಯವಾಗಿ 8 ಲಕ್ಷ ರೂ.ಸಾಲ ಮಾಡಿಕೊಂಡಿದ್ದರಲ್ಲದೆ, ಮೈಕ್ರೋ ಫೈನಾನ್ಸ್, ಕೈ ಸಾಲ, ಬ್ಯಾಂಕ್‌ಸಾಲ ಸೇರಿ ಸುಮಾರು 22 ಲಕ್ಷ ರೂ. ಸಾಲದ ಹೊರೆಯಾಗಿತ್ತು ಎನ್ನಲಾಗಿದೆ.

ಇದನ್ನೂ ಓದಿ:-ಬನ್ನೀರುಘಟ್ಟ : ಸಫಾರಿ ವೇಳೆ ಚಿರತೆ ದಾಳಿ ; ಮಹಿಳೆ ಗಂಭೀರ

ಇದರೊಂದಿಗೆ 1 ಎಕರೆ 6 ಗುಂಟೆ ಜಾಗದಲ್ಲಿ ಟೊಮ್ಯಾಟೊ ಬೆಳೆ ಬೆಳಿದಿದ್ದ ಗೋವಿಂದ ಅವರು ಇದಕ್ಕೂ ಕೈಸಾಲ ಮಾಡಿದ್ದರು ಎನ್ನಲಾಗಿದ್ದು, ಈ ಫಸಲೂ ಬಾರದೆ ಕೈಸುಟ್ಟುಕೊಂಡಿದ್ದರು. ಇದರಿಂದ ಮನನೊಂದು ಬುಧವಾರ ರಾತ್ರಿ ತಮ್ಮ ಜಮೀನಿನಲ್ಲಿ ಕ್ರಿಮಿನಾಶಕ ಸೇವಿಸಿ ಒದ್ದಾಡುತ್ತಿದ್ದರು ಎನ್ನಲಾಗಿದೆ. ಅದೇ ಮಾರ್ಗದಲ್ಲಿ ಬಂದ ಗೋವಿಂದ ಅವರ ಚಿಕ್ಕಪ್ಪ ಕೂಡಲೇ ಗೋವಿಂದ ಕುಟುಂಬದವರಿಗೆ ಮಾಹಿತಿ ತಲುಪಿಸಿದ್ದಾರೆ. ತಕ್ಷಣ ಗೋವಿಂದ ಅವರಿಗೆ ಪಾಂಡವಪುರ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ತಡರಾತ್ರಿ 3 ಗಂಟೆ ಸಮಯದಲ್ಲಿ ಕೊನೆಯುಸಿರೆಳೆದಿದ್ದಾರೆ. ಗೋವಿಂದ ಅವರ ಪುತ್ರ ಪುನೀತ್ ಪಾಂಡವಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Tags:
error: Content is protected !!