ಬೆಂಗಳೂರು: ರಾಜ್ಯದಲ್ಲಿ ಹಾವುಗಳ ಕಾಟ ಹೆಚ್ಚಾಗಿದ್ದು, ಕೇವಲ 10 ತಿಂಗಳಿನಲ್ಲಿ 18 ಸಾವಿರಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ.
ಇತ್ತೀಚೆಗೆ ಅತಿಯಾಗಿ ನಡೆಯುತ್ತಿರುವ ಕಾಂಕ್ರಿಟೀಕರಣದ ಪ್ರಭಾವದಿಂದಾಗಿ ಜನವಸತಿ ಪ್ರದೇಶಗಳಿಗೆ ಹಾವುಗಳು ನುಗ್ಗುತ್ತಿವೆ.
ಈ ಹಿನ್ನೆಲೆಯಲ್ಲಿ ಹಾವುಗಳ ಕಡಿತ ಪ್ರಮಾಣವು ಗಣನೀಯವಾಗಿ ಹೆಚ್ಚುತ್ತಿದ್ದು, ಕೇವಲ 10 ತಿಂಗಳ ಅವಧಿಯಲ್ಲಿ 18 ಸಾವಿರಕ್ಕೂ ಹೆಚ್ಚು ಹಾವು ಕಡಿತ ಪ್ರಕರಣಗಳು ವರದಿಯಾಗಿವೆ.
ಅದರಲ್ಲಿ 125 ಜನರ ಪ್ರಾಣ ಕಳೆದುಕೊಂಡಿದ್ದು, ಕಳೆದ ವಾರದ ಅವಧಿಯಲ್ಲೇ 512 ಹಾವು ಕಡಿತ ಪ್ರಕರಣಗಳು ಪತ್ತೆಯಾಗಿವೆ. ಅದರಲ್ಲಿ ಮೂವರು ಅಸುನೀಗಿದ್ದಾರೆ.
ಹಾವುಗಳ ಕಡಿತದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇದೆ. ಇದಕ್ಕೆ ಸಕಾಲದಲ್ಲಿ ಚಿಕಿತ್ಸೆ ಹಾಗೂ ಔಷಧ ಸಿಗದೇ ಇರುವುದೇ ಕಾರಣ ಎನ್ನಲಾಗುತ್ತದೆ.
ಹೀಗಾಗಿ ರಾಜ್ಯದ ಎಲ್ಲಾ ತಾಲ್ಲೂಕು ಹಾಗೂ ಜಿಲ್ಲಾ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಅಗತ್ಯ ಇರುವ ಔಷಧ ದಾಸ್ತಾನು ಇಟ್ಟುಕೊಳ್ಳುವಂತೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ.
ಈಗ ಹಾವುಗಳ ಮಿಲನದ ಕಾಲವಾಗಿದ್ದು, ಅವುಗಳು ಎಲ್ಲೆಂದರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ. ಹಾವುಗಳು ಕಂಡಾಗ ಅವುಗಳಿಗೆ ತೊಂದರೆ ಕೊಡುವುದು ಅಥವಾ ಅವುಗಳನ್ನು ಹಿಡಿಯಲು ಪ್ರಯತ್ನ ಮಾಡಬಾರದು ಎಂದು ಆರೋಗ್ಯ ಇಲಾಖೆ ಸೂಚನೆ ನೀಡಿದೆ.





