Mysore
26
few clouds

Social Media

ಭಾನುವಾರ, 07 ಡಿಸೆಂಬರ್ 2025
Light
Dark

ನವೆಂಬರ್ ಬಂದರೂ ನಡೆಯದ ಚುಂಚನಕಟ್ಟೆ ಜಲಪಾತೋತ್ಸವ 

೫ ವರ್ಷಗಳಿಂದ ನಡೆದುಕೊಂಡು ಬರುತ್ತಿದ್ದ ಉತ್ಸವ; ಕಾತರದಿಂದ ಕಾಯುತ್ತಿರುವ ಜನತೆ

ಹೊಸೂರು: ಮೈಸೂರು ಜಿಲ್ಲೆಯ ಏಕೈಕ ಜಲಪಾತ ಉತ್ಸವಕ್ಕೆ ಗ್ರಹಣ ಹಿಡಿದಿದ್ದು ಹಣದ ಕೊರತೆಯೋ, ಅಧಿಕಾರಿಗಳ ನಿರ್ಲಕ್ಷ್ಯವೋ, ಜನಪ್ರತಿನಿಧಿಗಳ ನಿರಾಸಕ್ತಿಯೋ ತಿಳಿಯದಾಗಿದೆ.

ಸಾಲಿಗ್ರಾಮ ತಾಲ್ಲೂಕಿನ ಚುಂಚನಕಟ್ಟೆಯ ಕಾವೇರಿ ನದಿಯ ಧನುಷ್ಕೋಟಿ ಜಲಪಾತೋತ್ಸವ ಐದು ವರ್ಷಗಳಿಂದ ಜರುಗುತ್ತಾ ಬರುತ್ತಿದ್ದು, ಕಳೆದ ವರ್ಷವೂ ಸೆಪ್ಟೆಂಬರ್ ತಿಂಗಳಲ್ಲಿ ಅದ್ಧೂರಿ ಯಾಗಿ ನಡೆದಿತ್ತು.

ಆದರೆ ಈ ಬಾರಿ ನವೆಂಬರ್ ತಿಂಗಳು ಬಂದರೂ ಸರ್ಕಾರ ಹಣ ಬಿಡುಗಡೆ ಮಾಡದ ಕಾರಣ ಜಲಪಾತೋತ್ಸವಕ್ಕೆ ಹಣಕಾಸಿನ ನೆರವಿಲ್ಲದೆ ಸ್ಥಗಿತಗೊಂಡಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಈ ಬಾರಿ ಜೂನ್ ಆರಂಭದಲ್ಲಿ ಕಾವೇರಿ ಮೈದುಂಬಿ ಹರಿದಿದ್ದು ಆಗಸ್ಟ್, ಸೆಪ್ಟೆಂಬರ್‌ನಲ್ಲಿ ನಡೆಯಬೇಕಿದ್ದ ಜಲಪಾತ ಉತ್ಸವಕ್ಕೆ ಈ ಭಾಗದ ಜನ ಕಾತರದಿಂದ ಕಾಯುತ್ತಿದ್ದರು. ಕೆಆರ್‌ಎಸ್ ತುಂಬಿದ ನಂತರ ಈಗಾಗಲೇ ಗಗನಚುಕ್ಕಿ ಭರಚುಕ್ಕಿ ಜಲಪಾತೋತ್ಸವ ಅದ್ಧೂರಿಯಾಗಿ ನಡೆದಿದ್ದು ಅರ್ಧಕ್ಕೂ ಹೆಚ್ಚಿನ ಸಚಿವ ಸಂಪುಟವೇ ಹಾಜರಾಗಿತ್ತು. ಆದರೆ, ಮುಖ್ಯಮಂತ್ರಿಗಳ ತವರು ಜಿಲ್ಲೆಯ ಜಲಪಾತೋತ್ಸವ ನಡೆಯದಿರುವುದು ಬೇಸರ ಮೂಡಿಸಿದೆ. ೫ ವರ್ಷಗಳ ಹಿಂದೆ ಚುಂಚನಕಟ್ಟೆ ಯನ್ನು ಪ್ರವಾಸೋದ್ಯಮ ಇಲಾಖೆ ವತಿಯಿಂದ ಅಂದಿನ ಸಚಿವ ಸಾ.ರಾ.ಮಹೇಶ್ ರವರ ಶ್ರಮದಿಂದ ಸುಮಾರು ೮ ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಿದ್ದು, ಜಲಪಾತೋತ್ಸವವನ್ನು ನಡೆಸಿ ರಾಜ್ಯದ ಮೂಲೆ ಮೂಲೆಯಿಂದ ಪ್ರವಾಸಿಗರನ್ನು ಸೆಳೆಯುವಲ್ಲಿ ಯಶಸ್ವಿ ಯಾಗಿದ್ದರು. ಆದರೆ ಇಂದು ಚುಂಚನಕಟ್ಟೆಯ ಧನುಷ್ಕೋಟಿ ಜಲಪಾತೋತ್ಸವ ನಡೆಯುವುದಿಲ್ಲ ವೇನೋ ಎಂಬ ಜಿಜ್ಞಾಸೆ ಉಂಟಾಗಿದೆ.

ಇದನ್ನು ಓದಿ: ಪರೀಕ್ಷೆ ಮುಗಿದು ನಾಲ್ಕು ತಿಂಗಳು; ಫಲಿತಾಂಶ ಗೋಜಲು

ಪ್ರತಿ ಬಾರಿ ಜಲಪಾತೋತ್ಸವ ನಡೆಸುವ ಸಂದರ್ಭದಲ್ಲಿ ನದಿಯ ನೀರಿನ ಪ್ರಮಾಣ ಕಡಿಮೆ ಇರುತ್ತದೆ. ಆಗಸ್ಟ್ ಅಂತ್ಯದೊಳಗೆ ಜಲ ಪಾತೋತ್ಸವವನ್ನು ಮಾಡಬೇಕೆಂಬ ಈ ಭಾಗದ ಆಸಕ್ತರ ಕೂಗಿಗೆ ಯಾರೂ ಸ್ಪಂದಿಸದಿರುವುದು ವಿಪರ್ಯಾಸ.

ಸೆಪ್ಟೆಂಬರ್ ನಂತರ ಹಾರಂಗಿ ಅಣೆಕಟ್ಟೆಯಿಂದ ನೀರು ಬಿಡಿಸಿ ಜಲಪಾತೋತ್ಸವ ನಡೆಸುವುದು ದುರ್ದೈವದ ಸಂಗತಿಯಾಗಿದೆ. ಜಲಪಾತೋತ್ಸವ ಕೇವಲ ಎರಡು ದಿನಗಳ ಕಾರ್ಯಕ್ರಮವೇ ಆಗಿದ್ದರೂ ನಿರಂತರವಾಗಿ ರಾಜ್ಯಾದ್ಯಂತ ಜನರನ್ನು ಸೆಳೆಯುವಲ್ಲಿ ಪ್ರಮುಖ ಕಾರ್ಯಕ್ರಮವಾಗಿದೆ.

ಜೊತೆಗೆ ಸ್ಥಳೀಯ ಶ್ರೀ ಕೋದಂಡರಾಮ ದೇವಾಲಯದ ಆದಾಯವೂ ಹೆಚ್ಚುತ್ತಿದ್ದು ಜನಪ್ರತಿನಿಧಿಗಳು, ಅಧಿಕಾರಿ ವರ್ಗದವರು, ಪ್ರವಾಸೋದ್ಯಮ ಇಲಾಖೆ ಇತ್ತ ಗಮನಹರಿಸಿ ಕಾರ್ಯಕ್ರಮ ಆಯೋಜಿಸಲು ಮುಂದಾಗಬೇಕಿದೆ.

” ಕಾರ್ಯಕ್ರಮ ಆಯೋಜನೆಗಾಗಿಈಗಾಗಲೇಸಿದ್ಧತೆಗಳು ನಡೆಯುತ್ತಿದ್ದು, ಈ ತಿಂಗಳ ಅಂತ್ಯಕ್ಕೆ ಖಚಿತವಾಗಿ ಚುಂಚನಕಟ್ಟೆ ಧನುಷ್ಕೋಟಿ ಜಲಪಾತೋತ್ಸವ ಜರುಗಲಿದೆ.”

-ಡಿ.ರವಿಶಂಕರ್, ಶಾಸಕರು

” ಸರ್ಕಾರ ಪ್ರತಿ ವರ್ಷ ನಡೆಸುವ ಕಾರ್ಯಕ್ರಮಗಳಿಗೆ ಮೊದಲೇದಿನಾಂಕಗಳನ್ನು ನಿಗದಿಪಡಿಸಿ ಸಿದ್ಧತೆ ಮಾಡಿಕೊಳ್ಳಬೇಕು. ಈ ಬಾರಿ ಪ್ರವಾಸೋದ್ಯಮ ಇಲಾಖೆ ಮತ್ತು ಜಿಲ್ಲಾಡಳಿತ ನಿರ್ಲಕ್ಷ್ಯ ಮುಂದುವರಿಸಿದ್ದು ನವೆಂಬರ್ ತಿಂಗಳಲ್ಲಿ ಕಾರ್ಯಕ್ರಮ ನಡೆಯದೇ ಇದ್ದರೆ ಹೋರಾಟ ಮಾಡಲಾಗುವುದು.”

-ಕರ್ತಾಳ್ ಮಧು, ಮುಖಂಡರು

– ಆನಂದ್ ಹೊಸೂರು

Tags:
error: Content is protected !!