ಮೈಸೂರು: ಡ್ರಗ್ಸ್ ಜಾಲಕ್ಕೆ ಕಡಿವಾಣ ಹಾಕಿ ಮೈಸೂರು ಜಿಲ್ಲೆಯನ್ನು ಡ್ರಗ್ಸ್ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಕುರಿತು ಮೈಸೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ನಿನ್ನೆ ನಡೆದ ಕೆಡಿಪಿ ಸಭೆಯಲ್ಲಿ ಅಪರಾಧ ಪ್ರಕರಣಗಳನ್ನು ತಡೆಗಟ್ಟಬೇಕು. ಶಿಕ್ಷೆಯ ಪ್ರಮಾಣವನ್ನು ಹೆಚ್ಚಳ ಮಾಡಬೇಕು. ಅಪರಾಧ ನಡೆದಾಗ ಕಮಿಷನರ್, ಎಸ್‌ಪಿ ಸ್ಥಳಕ್ಕೆ ಭೇಟಿ ನೀಡಬೇಕು. ಮೈಸೂರು ಜಿಲ್ಲೆಯಲ್ಲಿ 23 ಪೊಲೀಸ್ ಠಾಣೆಗಳಿವೆ. ಎಲ್ಲಾ ಠಾಣೆಗಳಿಗೂ ಎಸ್ಪಿ ಭೇಟಿ ನೀಡಬೇಕು.
ಇದನ್ನು ಓದಿ: ಮೈಸೂರು: ಡ್ರಗ್ಸ್ ಮುಕ್ತ ಮೈಸೂರು ಮಾಡಲು ಬೈಕ್ ರ್ಯಾಲಿ
ಅಪರಾಧಿ, ರೌಡಿಗಳನ್ನು ಬಿಟ್ಟು ಉಳಿದವರ ಜೊತೆ ಜನಸ್ನೇಹಿಯಾಗಿರಬೇಕು. ಕಳೆದ ವರ್ಷಕ್ಕಿಂತ ಈ ವರ್ಷ ಕಡಿಮೆ ಅಪರಾಧ ಆಗುವಂತೆ ನೋಡಿಕೊಳ್ಳಬೇಕು. ಕೊಲೆ, ಡಕಾಯಿತಿ, ಸರಗಳ್ಳತನ ಸೇರಿದಂತೆ ಅಪರಾಧ ಕೃತ್ಯ ಕಡಿಮೆ ಆಗಬೇಕು. ಡ್ರಗ್ಸ್ ಜಾಲಕ್ಕೆ ಕಡಿವಾಣ ಹಾಕಿ. ವಿದ್ಯಾರ್ಥಿಗಳು, ಯುವಕರು ಡ್ರಗ್ಸ್ ಚಟಕ್ಕೆ ಸಿಲುಕಿದ್ದಾರೆ. ಅವರ ಭವಿಷ್ಯದ ದೃಷ್ಟಿಯಿಂದ ಡ್ರಗ್ಸ್ ಮುಕ್ತ ಜಿಲ್ಲೆಯನ್ನಾಗಿ ಮಾಡುವಂತೆ ಸೂಚಿಸಿದ್ದೇನೆ ಎಂದು ಹೇಳಿದರು.
ಇನ್ನು ಇತ್ತೀಚೆಗೆ ಮೈಸೂರಿನಲ್ಲಿ ನಡೆದ ಬಾಲಕಿ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ನಿಜಕ್ಕೂ ನಾಗರಿಕ ಸಮಾಜ ತಲೆತಗ್ಗಿಸುವ ವಿಚಾರ. ಇನ್ನು ಮುಂದೆ ಇಂತಹ ಘಟನೆಗಳು ನಡೆದರೆ ಕಮಿಷನರ್ ನೇರ ಕಾರಣ ಎಂದು ಎಚ್ಚರಿಕೆ ನೀಡಿದರು.





