Mysore
21
few clouds

Social Media

ಮಂಗಳವಾರ, 27 ಜನವರಿ 2026
Light
Dark

ಮತ್ತಷ್ಟು ಹೆಚ್ಚಾದ ಪ್ರಭಾವಿ ಸಚಿವರ ದೆಹಲಿ ಯಾತ್ರೆ

ಬೆಂಗಳೂರು: ರಾಜಕೀಯವಾಗಿ ನವೆಂಬರ್ ಕ್ರಾಂತಿಯ ಚರ್ಚೆಗಳ ನಡುವೆ ಸಚಿವ ಸಂಪುಟದ ಪ್ರಭಾವಿ ಸಚಿವರ ದೆಹಲಿಯಾತ್ರೆಗಳು ಮತ್ತಷ್ಟು ಹೆಚ್ಚಾಗಿವೆ.

ಡಿಸಿಎಂ ಡಿ.ಕೆ.ಶಿವಕುಮಾರ್ ದೆಹಲಿಗೆ ತೆರಳಿ ವರಿಷ್ಠರ ಆಪ್ತರನ್ನು ಭೇಟಿ ಮಾಡಿ ವಾಪಸ್ ಬಂದ ಬೆನ್ನಲ್ಲೆ ಸಚಿವ ಸತೀಶ್ ಜಾರಕಿಹೊಳಿ ಕೂಡ ದೆಹಲಿಯತ್ತ ಮುಖ ಮಾಡಿದ್ದಾರೆ.

ಡಿ.ಕೆ.ಶಿವಕುಮಾರ್ ದೆಹಲಿಯಲ್ಲಿ ಸೋನಿಯಾ ಗಾಂಧಿಯವರ ಆಪ್ತರಾದ ಅಂಬಿಕಾ ಸೋನಿ ಅವರನ್ನು ಭೇಟಿ ಮಾಡಿ ಬಂದಿದ್ದರು. ಜೊತೆಗೆ ಕೆಲವು ಹಿರಿಯ ನಾಯಕರ ಜೊತೆಯೂ ಮಾತುಕತೆ ನಡೆಸಿದ್ದರು.

ನವೆಂಬರ್ ಕ್ರಾಂತಿಯ ವಿಚಾರವಾಗಿ ನಾನಾ ರೀತಿಯ ವದಂತಿಗಳು ಹಬ್ಬುತ್ತಿವೆ. ಡಿ.ಕೆ.ಶಿವಕುಮಾರ್ ಅವರ ಮೌನ ತಂತ್ರಗಾರಿಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಣದಲ್ಲಿ ಕಳವಳ ಸೃಷ್ಟಿಸಿದೆ. ಹೀಗಾಗಿ ಸಿದ್ದರಾಮಯ್ಯ ಆಪ್ತರಾಗಿರುವ ಸಚಿವ ಸತೀಶ್ ಜಾರಕಿಹೊಳಿ ಮೂರು ದಿನ ದೆಹಲಿಯಲ್ಲಿ ಬೀಡು ಬಿಟ್ಟು ತಮ್ಮದೇ ಆದ ಕಾರ್ಯತಂತ್ರ ಬಳಸಲಿದ್ದಾರೆ ಎಂಬ ಚರ್ಚೆಗಳಾಗುತ್ತಿವೆ.

ಅಧಿಕಾರ ಹಂಚಿಕೆ ಸೇರಿದಂತೆ ಯಾವುದೇ ರಾಜಕೀಯ ವಿಚಾರಗಳಾದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ನೇರವಾಗಿ ಅಖಾಡ ಪ್ರವೇಶ ಮಾಡುವುದಿಲ್ಲ. ಬದಲಾಗಿ ತಮ್ಮ ಆಪ್ತರನ್ನು ಮೊದಲು ಬಿಟ್ಟು ಪೂರಕವಾದ ವೇದಿಕೆ ಸೃಷ್ಟಿಸಿಕೊಳ್ಳುವ ತಾಂತ್ರಿಕತೆಯನ್ನು ಮೊದಲಿನಿಂದಲೂ ಅನುಸರಿಸುತ್ತಿರುವುದು ಕಂಡುಬಂದಿದೆ. ಈಗಲೂ ಸಿದ್ದರಾಮಯ್ಯ ಅದೇ ಮಾದರಿಯ ರಾಜಕಾರಣ ಮಾಡುತ್ತಿದ್ದಾರೆಯೇ ಎಂಬ ಅನುಮಾನಗಳು ಕಾಡಲಾರಂಭಿಸಿವೆ.

ಸತೀಶ್ ಜಾರಕಿಹೊಳಿ ತಮ್ಮ ಇಲಾಖೆಯ ಕಾರ್ಯ ಯೋಜನೆಗಳಿಗೆ ಸಂಬಂಧಪಟ್ಟಂತೆ ಚರ್ಚಿಸಲು ದೆಹಲಿಗೆ ತೆರಳುತ್ತಿದ್ದಾರೆ ಎಂದು ಹೇಳುತ್ತಲೇ ತೆರೆಮರೆಯಲ್ಲಿ ಮತ್ತೊಂದು ತಂತ್ರಗಾರಿಕೆ ಅನುಸರಿಸಲಾಗುತ್ತಿದೆ.

ರಾಜ್ಯದಲ್ಲಿ ನಡೆಯುತ್ತಿರುವ ಗೊಂದಲಗಳ ಬಗ್ಗೆ ಹೈಕಮಾಂಡ್‌ಗೆ ವರದಿ ನೀಡುವ ಮೂಲಕ ಎಲ್ಲಾ ರೀತಿಯ ಗೊಂದಲಗಳನ್ನು ಬಗೆಹರಿಸಿ ಸತೀಶ್ ಜಾರಕಿಹೊಳಿ ಮನವಿ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.

Tags:
error: Content is protected !!