Mysore
14
clear sky

Social Media

ಶುಕ್ರವಾರ, 23 ಜನವರಿ 2026
Light
Dark

ಸೆಟ್ಟೇರಿತು ‘ಹಲ್ಕಾ ಡಾನ್’; ಸಾಯಿಕುಮಾರ್ ಫ್ಯಾನ್‍ ಆದ ಪ್ರಮೋದ್‍

‘ಭುವನಂ ಗಗನಂ’ ನಂತರ ಪ್ರಮೋದ್‍ ಸುದ್ದಿಯೇ ಇರಲಿಲ್ಲ. ಅವರು ಯಾವ ಚಿತ್ರ ಮಾಡುತ್ತಾರೆ? ಅದು ಯಾವಾಗ ಬಿಡುಗಡೆ? ಎಂಬ ಪ್ರಶ್ನೆಗಳು ಸಹಜವಾಗಿಯೇ ಕೇಳಿ ಬಂದಿದ್ದವು. ಇದೀಗ ಪ್ರಮೋದ್‍ ಹೊಸದೊಂದು ಚಿತ್ರದೊಂದಿಗೆ ಬರುತ್ತಿದ್ದು, ಆ ಚಿತ್ರದ ಮುಹೂರ್ತ ಇತ್ತೀಚೆಗೆ ನಡೆದಿದೆ.

‘ಟಗರು’ ಮತ್ತು ‘ಸಲಗ ಚಿತ್ರಗಳನ್ನು ನಿರ್ಮಿಸಿರುವ ಕೆ.ಪಿ. ಶ್ರೀಕಾಂತ್ ಇದೀಗ ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ. ವೀನಸ್ ಎಂಟರ್‌ಟೈನರ್ ಬ್ಯಾನರ್ ಅಡಿಯಲ್ಲಿ‌ ಅವರು ‘ಹಲ್ಕಾ ಡಾನ್‍’ ಎಂಬ ಚಿತ್ರವನ್ನು ನಿರ್ಮಿಸುತ್ತಿದ್ದು, ಈ ಚಿತ್ರದಲ್ಲಿ ಪ್ರಮೋದ್‍ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರಕ್ಕೆ ‘ಸಾಯಿಕುಮಾರ್ ಫ್ಯಾನ್‍’ ಎಂಬ ಅಡಿಬರಹ ಇದೆ.

ಇತ್ತೀಚೆಗೆ ಬಂಡೆ ಮಹಾಂಕಾಳಿ ದೇವಸ್ಥಾನದಲ್ಲಿ ಚಿತ್ರದ ಮುಹೂರ್ತ ಸಮಾರಂಭ ನಡೆದಿದ್ದು, ಶಿವರಾಜಕುಮಾರ್, ಗೀತಾ ಶಿವರಾಜಕುಮಾರ್, ಸುದೀಪ್‍, ರಚಿತಾ ರಾಮ್, ‘ದುನಿಯಾ’ ವಿಜಯ್, ವಿನಯ್ ರಾಜಕುಮಾರ್, ನಿರ್ದೇಶಕ ಆರ್. ಚಂದ್ರು ಸೇರಿದಂತೆ ಸೇರಿದಂತೆ ಹಲವರು ಚಿತ್ರತಂಡಕ್ಕೆ ಶುಭಕೋರಿದರು. ಈ ಸಂದರ್ಭದಲ್ಲಿ ಚಿತ್ರರಂಗದಲ್ಲಿ 50 ವರ್ಷ ಪೂರೈಸಿದ ಸಾಯಿಕುಮಾರ್ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.

ಇದನ್ನು ಓದಿ: ‘ಹರ್ಕ್ಯುಲಸ್’ ಆದ ವಿರಾಟ್‍; ಮಾಸ್‍ ಹೀರೋ ಆಗಿ ಬದಲಾಗಲು ಪ್ರಯತ್ನ

ಈ ಚಿತ್ರಕ್ಕೆ ಚಲ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದ ಕುರಿತು ಮಾತನಾಡುವ ಅವರು, ‘ಇದೊಂದು ಡಾರ್ಕ್ ಕಾಮಿಡಿ ಜಾನರ್‍ನ ಕಥೆ. ಹಲ್ಕಾ ಡಾನ್‍ ಎಂದರೆ ನಾಯಕನ ಹೆಸರು. ಮುಂದಿನ ತಿಂಗಳಿನಿಂದ ಈ ಚಿತ್ರದ ಚಿತ್ರೀಕರಣ ನಡೆಯಲಿದೆ. ಪ್ರಮೋದ್‍ಗೆ ಗಂಭೀರವಾಗಿಯೇ ನಗಿಸುವ ಶಕ್ತಿ ಇದೆ. ಅದೇ ಕಾರಣಕ್ಕೆ ಅವರನ್ನು ಆಯ್ಕೆ ಮಾಡಿಕೊಳ್ಳಲಾಯಿತು. ನಾನು ಸಾಯಿಕುಮಾರ್ ಅವರ ಅಭಿಮಾನಿ. ಈ ಚಿತ್ರದಲ್ಲಿ ಅವರೂ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದು ಚಿತ್ರರಂಗಕ್ಕೆ ಸಂಬಂಧಿಸಿದ ಕಥೆಯಲ್ಲ. ಪ್ರತಿಯೊಬ್ಬರೂ ಇನ್ನೊಬ್ಬರಿಗೆ ಅಭಿಮಾನಿಯಾಗಿರುತ್ತಾರೆ. ಅಂಥ ಅಭಿಮಾನಿಯ ಕಥೆ ಇದು’ ಎಂದರು.

ನಾಯಕ ಪ್ರಮೋದ್ ಮಾತನಾಡಿ, ‘ನಾನು ಐದಾರು ಬಾರಿ ಈ ಸಿನಿಮಾದ ಕಥೆ ಕೇಳಿದ್ದೇನೆ. ಚಲ ಬಹಳ ಚೆನ್ನಾಗಿ ಕಥೆ ಮಾಡಿಕೊಂಡಿದ್ದಾರೆ. ನನ್ನ ಸಿನಿಮಾ ಪ್ರಯಾಣದಲ್ಲಿ ಈ ಚಿತ್ರ ಒಳ್ಳೆಯ ಹೆಸರು ತಂದುಕೊಡುತ್ತದೆ ಎಂಬ ನಂಬಿಕೆ ಇದೆ’ ಎಂದರು.

ಕನ್ನಡ ಹಾಗೂ ತೆಲುಗಿನಲ್ಲಿ ಏಕಕಾಲಕ್ಕೆ ‘ಹಲ್ಕಾ ಡಾನ್’ ಸಿನಿಮಾ ನಿರ್ಮಾಣವಾಗುತ್ತಿದೆ. ಚಿತ್ರಕ್ಕೆ ವಿ. ಹರಿಕೃಷ್ಣ ಸಂಗೀತ, ಸತ್ಯ ಹೆಗಡೆ ಛಾಯಾಗ್ರಹಣವಿದ್ದು, ಪ್ರಮೋದ್‍ಗೆ ನಾಯಕಿಯಾಗಿ ಅಮೃತಾ ಅಯ್ಯಂಗಾರ್ ನಟಿಸುತ್ತಿದ್ದು, ಮಿಕ್ಕಂತೆ ಸಾಯಿಕುಮಾರ್‍, ರಮೇಶ್ ಇಂದಿರಾ, ಜ್ಯೋತಿ ರೈ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

Tags:
error: Content is protected !!