Mysore
29
few clouds

Social Media

ಮಂಗಳವಾರ, 27 ಜನವರಿ 2026
Light
Dark

ಇದುವರೆಗೂ ಮಾಡದ ಪಾತ್ರವೊಂದರ ಜೊತೆಗೆ ಬಂದ ಅಜೇಯ್‍ ರಾವ್‍

ಅಜೇಯ್‍ ರಾವ್ ಎಂದರೆ ಲವ್ವರ್ ಬಾಯ್‍ ಪಾತ್ರಗಳು ಎಂದು ಬ್ರಾಂಡ್‍ ಆಗಿ ಹೋಗಿತ್ತು. ಅದರಿಂದ ಆಚೆ ಬರುವುದಕ್ಕೆ ಅಜೇಯ್‍ ಸಹ ಪ್ರಯತ್ನ ಮಾಡುತ್ತಲೇ ಇದ್ದಾರೆ. ಮೊದಲ ಹಂತವಾಗಿ ಈಗಾಗಲೇ ‘ಯುದ್ಧಕಾಂಡ’ ಬಿಡುಗಡೆಯಾಗಿದೆ. ಈಗ ಅವರು ಮೊದಲ ಬಾರಿಗೆ ಸೈಕ್‍ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಅಜೇಯ್‍ ಸದ್ದಿಲ್ಲದೆ ‘ರಾಧೇಯ’ ಎಂಬ ಹೊಸ ಚಿತ್ರದ ಮೂಲಕ ವಾಪಸ್ಸಾಗಿದ್ದಾರೆ. ಈ ಚಿತ್ರವು ನವೆಂಬರ್ 21ರಂದು ಬಿಡುಗಡೆಯಾಗುತ್ತಿದ್ದು, ಅದಕ್ಕೂ ಮೊದಲು ಚಿತ್ರದ ಟೀಸರ್‍ ಬಿಡುಗಡೆಯಾಗಿದೆ. ಒಂದಷ್ಟು ವರ್ಷಗಳಿಂದ ಕೆಲವು ನಿರ್ದೇಶಕರ ಜೊತೆಗೆ ಕೆಲಸ ಮಾಡಿ ಅನುಭವ ಪಡೆದಿರುವ ವೇದಗುರು ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ಜೊತೆಗೆ ಕೀರ್ತಿ ಚಾಹ್ನಾ ಸಿನಿಮಾ ಕಾರ್ಖಾನೆ ಮೂಲಕ ನಿರ್ಮಾಣ ಸಹ ಮಾಡಿದ್ದಾರೆ.

‘ರಾಧೇಯ’ ತಮ್ಮ ವೃತ್ತಿಬದುಕಿನಲ್ಲಿ ವಿಭಿನ್ನವಾದ ಚಿತ್ರ ಎನ್ನುವ ಅಜೇಯ್‍, ‘ಈ ತರಹದ ಪಾತ್ರ ನಾನು ಮಾಡಿರಲಿಲ್ಲ. ನಾನು ಒಂದೇ ತರಹದ ಪಾತ್ರಗಳಿಗೆ ಸೀಮಿತವಾಗಿದ್ದೆ. ಇವನಲ್ಲಿ ಪ್ರತಿಭೆಯಿದೆ, ಇವನಿಂದ ಈ ಪಾತ್ರ ಮಾಡಿಸಬೇಕು ಎಂದು ವೇದಗುರು ಬಂದಿದ್ದರು. ಈ ಚಿತ್ರಕ್ಕೆ ಅವರೇ ಹೀರೋ. ನನ್ನನ್ನು ಅರ್ಥ ಮಾಡಿಕೊಂಡು ಚಿತ್ರ ನಿರ್ಮಿಸಿ-ನಿರ್ದೇಶಿಸಿದ್ದಾರೆ. ನನ್ನ ಮೇಲೆ ನಂಬಿಕೆ ಇಟ್ಟು ಈ ಚಿತ್ರ ಮಾಡಿದ್ದಾರೆ’ ಎಂದರು.

ಇದನ್ನು ಓದಿ: ಮೊದಲು ಕನ್ನಡ, ನಂತರ ಬೇರೆ ಭಾಷೆಗಳಲ್ಲಿ ಬರಲಿದ್ದಾನೆ ‘ಬ್ರ್ಯಾಟ್‍’

‘ರಾಧೇಯ’ ಎಂದರೆ ಕುಂತಿ ಪುತ್ರ ಕರ್ಣ ಎಂದರ್ಥ. ಹಾಗಂತ ಈ ಚಿತ್ರಕ್ಕೂ ನಾಯಕನ ಪಾತ್ರಕ್ಕೂ ಯಾವುದೇ ಸಂಬಂಧವಿಲ್ಲವಂತೆ. ಆದರೆ, ಕರ್ಣನ ತ್ಯಾಗ ಬಹಳ ಪ್ರಸ್ತುತವಾಗಿದೆ ಎನ್ನುವ ಅಜೇಯ್‍, ‘ಇಲ್ಲಿ ಹೀರೋ ತನ್ನ ಮೌಲ್ಯಗಳನ್ನು ಸಮಾಜಕ್ಕೆ ಹೇಗೆ ಬಳಸಿಕೊಳ್ಳುತ್ತನೆ, ಅದು ಹೇಗೆ ಅವನ ವೈಯಕ್ತಿಕ ಜೀವನಕ್ಕೆ ಸಮಸ್ಯೆ ಆಗುತ್ತದೆ ಎಂಬುದು ಕಥೆ. ಅವನು ಕ್ರಿಮಿನಲ್‍ ಆಗಿ ಜೈಲಿನಲ್ಲಿ ಕುಳಿತು ತನ್ನ ಅನುಭವಗಳನ್ನು ಹೇಳುವ ಸಿನಿಮಾ. ಸಮಾಜಕ್ಕೆ ನಾವೂ ಏನಾದರೂ ಮಾಡಬೇಕು ಎಂದು ಸ್ಫೂರ್ತಿ ತುಂಬುವ ಸಿನಿಮಾ. ನಾನು ಸೈಕ್‍ ಆಗಿ ಅಭಿನಯಿಸಿದ್ದೇನೆ. ಅದಕ್ಕೆ ಕಾರಣವೇನು ಎಂದು ಚಿತ್ರದಲ್ಲಿ ಗೊತ್ತಾಗುತ್ತದೆ’ ಎಂದರು.

‘ರಾಧೇಯ’ ಚಿತ್ರದಲ್ಲಿ ಅಜೇಯ್‍ಗೆ ನಾಯಕಿಯಾಗಿ ನಟಿಸಿದ್ದು, ಮಿಕ್ಕಂತೆ ಧನ್ಯಾ ಬಾಲಕೃಷ್ಣ, ಗಿರಿ ಶಿವಣ್ಣ ಮುಂತಾದವರು ನಟಿಸಿದ್ದಾರೆ. ಈ ಚಿತ್ರಕ್ಕೆ ವಿಯಾನ್ (ಸ್ಯಾಂಡಿ) ಅವರ ಸಂಗೀತ ಸಂಯೋಜನೆ, ರಮ್ಮಿ ಅವರ ಛಾಯಾಗ್ರಹಣವಿದೆ.

Tags:
error: Content is protected !!