ಮೈಸೂರು : ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಮೈಸೂರಿನಲ್ಲೂ ಸಹ ಹಾಳಾಗಿದೆ ಎಂದು ಎಂಎಲ್‌ಸಿ ವಿಶ್ವನಾಥ್ ಆರೋಪಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಸೂರಿಗೆ ಎಸಿಪಿ ಆಗಿ ಬರಬೇಕಾದರೆ ೧ ಕೋಟಿ ನೀಡಬೇಕಿದೆ. ಇನ್ಸ್‌ಪೆಕ್ಟರ್ ಆಗಲು ೭೫ ಲಕ್ಷ, ಎಸ್‌ಐ ಆಗಲು ೫೦ ಲಕ್ಷ ಕೊಡಬೇಕು. ಇದರ ಪರಿಣಾಮ ರಾಜ್ಯದಲ್ಲಿ ಆಡಳಿತ ಯಂತ್ರ, ಕಾನೂನು ಸುವ್ಯವಸ್ಥೆ ಕುಸಿದಿದೆ ಎಂದು ಗಂಭೀರ ಆರೋಪ ಮಾಡಿದರು.
ಈಗ ಕರ್ತವ್ಯ ನಿರ್ವಹಿಸುತ್ತಿರುವವರು ಎಲ್ಲ ಅಧಿಕಾರಿಗಳು ಶಾಸಕರ ಕೃಪಾ ಪೋಷಿತರಾಗಿದ್ದು, ಶಾಸಕರು ಆಯಾಯ ಕ್ಷೇತ್ರಗಳ ಮಾಲೀಕರಾಗಿದ್ದಾರೆ. ರಾಜ್ಯದಲ್ಲಿ ಅತ್ಯಾಚಾರ, ಮಕ್ಕಳನ್ನು ಹೊತ್ತುಕೊಂಡು ಹೋಗುವ ಘಟನೆ ನಡೆಯುತ್ತಿದ್ದು, ಈ ಬಗ್ಗೆ ಮಾಹಿತಿ ಇದ್ದರೂ ಅವರ ಪುತ್ರ ಯತೀಂದ್ರ ಹಾಗು ಆತನ ಸ್ನೇಹಿತರು ವರ್ಗಾವಣೆ ದಂಧೆಯಲ್ಲಿ ತೊಡಗಿರುವುದರಿಂದ ಸಿಎಂ ಸಿದ್ದರಾಮಯ್ಯಗೆ ಇದನ್ನು ಕೇಳಲಾಗುತ್ತಿಲ್ಲ ಎಂದು ದೂರಿದರು.
ಇದನ್ನೂ ಓದಿ:-ಮೈಸೂರು | ಹಾಡುಹಗಲೇ ಮತ್ತೊಂದು ಭೀಕರ ಕೊಲೆ , ಪತ್ನಿಯ ಕತ್ತು ಸೀಳಿ ಕೊಂದ ಪತಿ
ಬೊಗಳೆ ಬಿಡುವ ಸಿದ್ದರಾಮಯ್ಯ
ಮಡಿವಾಳರು ಶಾಸಕರಾಗಬೇಕು ಎನ್ನುವ ಸಿಎಂ ಸಿದ್ದರಾಮಯ್ಯ, ಅವರಿಗೆ ಎಲ್ಲಿ ಅವಕಾಶ ಕೊಟ್ಟಿದ್ದೀರಾ?. ತರೀಕೆರೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತವರಿಗೆ ಅವಕಾಶ ಮಾಡಿಕೊಡಿ. ಇದರ ಬಗ್ಗೆ ಮಾತನಾಡದೆ ಸುಮ್ಮನೇ ಬೊಗಳೆ ಬಿಡುವ ಸಿದ್ದರಾಮಯ್ಯ, ಹೋದಲ್ಲೆಲ್ಲಾ ಸುಳ್ಳು ಹೇಳುವ ಮೂಲಕ ನಗೆಪಾಟಲಿಯಾಗಿದ್ದಾರೆ. ಈಗ ತೋರಿಕೆಗಾಗಿ ಮೂರು ಪಟ್ಟೆ ವಿಭೂತಿ, ಮಧ್ಯೆ ಕುಂಕುಮ ಹಾಕಿಕೊಂಡು ನಾನು ಹಿಂದೂ ಎನ್ನುತ್ತಿದ್ದಾರೆ. ಕಾಂತರಾಜು ಆಯೋಗದ ವರದಿಯನ್ನು ಮೊದಲು ಸ್ವೀಕಾರ ಮಾಡಿ. ಗಣತಿ ಹೆಸರಿನಲ್ಲಿ ಶಿಕ್ಷಕರನ್ನು ನಿಮ್ಮಿಷ್ಟದಂತೆ ನಡೆಸಿಕೊಳ್ಳುತ್ತಿದ್ದು, ಜನರ ಹಿಂದೆ ಬಾರದೆ ಎಲ್ಲ ದುಡ್ಡಿನ ಹಿಂದೆ ಹೋಗುತ್ತಿದ್ದಾರೆ. ಯಾವುದೇ ಮಾನದಂಡವಿಲ್ಲದೇ ಹಣ ಕೊಡುತ್ತಿದ್ದು, ಯಾರಾದರೂ ಹುಚ್ಚ, ಹೆಣ್ಣು ಮಕ್ಕಳಿಗೆ ಎರಡು ಸಾವಿರ ಕೊಡ್ತಾನಾ? ಎಂದು ವಾಗ್ದಾಳಿ ನಡೆಸಿದರು.





