ಮೈಸೂರು: ನಾಡದೇವತೆ ನೆಲೆಸಿರುವ ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಇಂದು ಶ್ರೀ ಚಾಮುಂಡೇಶ್ವರಿ ಅಮ್ಮನವರ ಭವ್ಯ ರಥೋತ್ಸವ ಅದ್ಧೂರಿಯಾಗಿ ಜರುಗಿತು.
ಇಂದು ಬೆಳಿಗ್ಗೆ 10.05ಕ್ಕೆ ಆರಂಭವಾದ ರಥೋತ್ಸವಕ್ಕೆ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಚಾಲನೆ ನೀಡಿದರು.
ಚಾಮುಂಡಿಬೆಟ್ಟದಲ್ಲಿ ರಥೋತ್ಸವದ ಅಂಗವಾಗಿ ಇಂದು ಮುಂಜಾನೆಯಿಂದಲೇ ಚಾಮುಂಡಿ ತಾಯಿಗೆ ದೇವಾಲಯದಲ್ಲಿ ವಿಶೇಷ ಪೂಜೆಗಳು ನೆರವೇರಿದವು. ದೇವಾಲಯದ ಗರ್ಭಗುಡಿಯಲ್ಲಿ ವಿರಾಜಮಾನಳಾಗಿರುವ ಚಾಮುಂಡೇಶ್ವರಿ ಮೂಲ ವಿಗ್ರಹಕ್ಕೆ ಸಿಂಹವಾಹಿನಿಯ ಅಲಂಕಾರ ಮಾಡಲಾಗಿತ್ತು.
ಇದನ್ನು ಓದಿ : ಅ.6 ರಂದು ಚಾಮುಂಡಿ ಬೆಟ್ಟದಲ್ಲಿ ರಥೋತ್ಸವ
ರಥೋತ್ಸವದಲ್ಲಿ ಮೆರವಣಿಗೆಗೆ ಸಿದ್ಧಪಡಿಸಿದ ಉತ್ಸವಮೂರ್ತಿಯು ವಜ್ರಾಭರಣಗಳ ಅಲಂಕಾರದಿಂದ ಕಂಗೊಳಿಸುತ್ತಿತ್ತು. ರಾಜವಂಶಸ್ಥರಾದ ಪ್ರಮೋದಾದೇವಿ ಒಡೆಯರ್, ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮತ್ತು ಅವರ ಪತ್ನಿ ತ್ರಿಷಿಕಾ ಕುಮಾರಿ ಸೇರಿದಂತೆ ರಾಜವಂಶಸ್ಥರು ರಥೋತ್ಸವದಲ್ಲಿ ಭಾಗಿಯಾಗಿದ್ದರು.
ದೇವಾಲಯದ ಸುತ್ತಲೂ ಒಂದು ಸುತ್ತು ಪ್ರದಕ್ಷಿಣೆ ಹಾಕಿದ ರಥದಲ್ಲಿ ನಾಡದೇವತೆಯ ಉತ್ಸವಮೂರ್ತಿಯನ್ನು ಇಟ್ಟು ಮೆರವಣಿಗೆ ಮಾಡಲಾಯಿತು. ರಥೋತ್ಸವಕ್ಕೆ ಸಾವಿರಾರು ಭಕ್ತರು ಸಾಕ್ಷಿಯಾದರು.





