ಸಾಮಾನ್ಯವಾಗಿ ರಚಿತಾ ರಾಮ್ ತಮ್ಮ ಹುಟ್ಟುಹಬ್ಬವನ್ನು ಹೆಚ್ಚು ಸದ್ದುಗದ್ದಲವಿಲ್ಲದೆ ಆಚರಿಸಿಕೊಳ್ಳುತ್ತಿದ್ದರು. ಈ ವರ್ಷ, ರಾಜರಾಜೇಶ್ವರಿ ನಗರದಲ್ಲಿರುವ ತಮ್ಮನಿವಾಸದಲ್ಲಿ ಅಭಿಮಾನಿಗಳೊಂದಿಗೆ ಕೇಕ್ ಕಟ್ ಮಾಡುವ ಮೂಲಕ ಹುಟ್ಟುಹಬ್ಬ ಆಚರಿಸಿಕೊಂಡರು. ಇದೇ ಸಂದರ್ಭದಲ್ಲಿ ರಚಿತಾ ರಾಮ್ ನಾಯಕಿಯಾಗಿ ಅಭಿನಯಿಸಿರುವ ‘ಲ್ಯಾಂಡ್‍ಲಾರ್ಡ್’ ಚಿತ್ರದ ಪಾತ್ರ ಪರಿಚಯಿಸುವ ಟೀಸರ್ ಬಿಡುಗಡೆ ಮಾಡಲಾಯಿತು.
‘ಲ್ಯಾಂಡ್‍ಲಾರ್ಡ್’ ಚಿತ್ರದಲ್ಲಿ ರಚಿತಾ ನಟಿಸುತ್ತಿರುವ ಸುದ್ದಿ ಇದ್ದೇ ಹೊರತು, ಅವರ ಪಾತ್ರವೇನು? ಅವರು ಹೇಗೆ ಕಾಣುತ್ತಾರೆ? ಮುಂತಾದ ವಿಷಯಗಳನ್ನು ಚಿತ್ರತಂಡ ಬಿಟ್ಟುಕೊಟ್ಟಿರಲಿಲ್ಲ. ರಚಿತಾ ಸಹ ಚಿತ್ರದ ಪತ್ರಿಕಾಗೋಷ್ಠಿಗಳಿಗೆ ಬಂದಿರಲಿಲ್ಲ. ಇದೀಗ ರಚಿತಾ ಪಾತ್ರದ ಟೀಸರ್ ಬಿಡುಗಡೆಯಾಗಿದೆ.
ಕೆ.ವಿ. ಸತ್ಯಪ್ರಕಾಶ್ ಮತ್ತು ಹೇಮಂತ್ ಗೌಡ ಕೆ.ಎಸ್ ನಿರ್ಮಾಣದ, ಜಡೇಶ್ ಕೆ. ಹಂಪಿ ಅವರನಿರ್ದೇಶನದ ‘ಲ್ಯಾಂಡ್‍ಲಾರ್ಡ್’ ಚಿತ್ರದಲ್ಲಿ ‘ದುನಿಯಾ’ ವಿಜಯ್, ರಚಿತಾ ರಾಮ್, ರಿತನ್ಯಾ, ಶಿಶಿರ್ ಮುಂತಾದವರು ಅಭಿನಯಿಸುತ್ತಿದ್ದಾರೆ.
ಟೀಸರ್ ಬಿಡುಗಡೆ ಬಳಿಕ ಮಾತನಾಡಿದ ರಚಿತಾ ರಾಮ್, ‘ಈ ವರ್ಷದ ಹುಟ್ಟುಹಬ್ಬ ನನಗೆ ತುಂಬಾ ಸ್ಪೆಷಲ್. ‘ಲ್ಯಾಂಡ್‍ಲಾರ್ಡ್’ ಚಿತ್ರತಂಡದ ಕಡೆಯಿಂದ ಈ ಟೀಸರ್ ನನಗೆ ಸರ್ ಪ್ರೈಸ್ ಗಿಫ್ಟ್. ಇದೊಂದು ವಿಭಿನ್ನ ಪಾತ್ರ’ ಎಂದು ಹೇಳಿದರು.
ನಿರ್ದೇಶಕ ಜಡೇಶ್ ಕೆ ಹಂಪಿ ಮಾತನಾಡಿ, ‘ಇಂಥಹ ಪಾತ್ರವನ್ನು ರಚಿತಾ ರಾಮ್ ಅವರು ಒಪ್ಪುತ್ತಾರಾ? ಎಂಬ ಆತಂಕವಿತ್ತು. ಅವರು ಒಪ್ಪಿಕೊಂಡು ಅಭಿನಯಿಸಿದ್ದು ತುಂಬಾ ಸಂತೋಷ. ‘ಕೂಲಿ’ ಚಿತ್ರದಲ್ಲಿ ಕಲ್ಯಾಣಿಯಾಗಿ ನಟಿಸಿದ್ದರು. ಅದಕ್ಕಿಂತ ಬೇರೆ ಥರದಲ್ಲಿ ಈ ಪಾತ್ರ ಮೂಡಿ ಬಂದಿದೆ. ಇದರಲ್ಲಿ ಅವರು ಚಿನ್ನಮ್ಮ ಆಗಿದ್ದಾರೆ’ ಎಂದು ಹೇಳಿದರು.
ನಿರ್ಮಾಪಕ ಕೆ.ವಿ. ಸತ್ಯಪ್ರಕಾಶ್ ಮಾತನಾಡಿ, ‘ನಮ್ಮ ಚಿತ್ರದಲ್ಲಿ ರಚಿತಾ ರಾಮ್ ಅವರು ಅದ್ಭುತ ಪಾತ್ರ ನಿರ್ವಹಿಸಿದ್ದಾರೆ. ಇದು ನೈಜ ಘಟನೆಯನ್ನು ಆಧರಿಸಿ ನಿರ್ಮಿಸಿದ ಚಿತ್ರ. ಈ ಚಿತ್ರದ ಅಭಿನಯಕ್ಕೆ ರಚಿತಾ ರಾಮ್ ಅವರಿಗೆ ರಾಷ್ಟ್ರಮಟ್ಟದ ಪ್ರಶಸ್ತಿ ಸಿಗುತ್ತದೆ’ ಎಂದು ಹೇಳಿದರು.
‘ಲ್ಯಾಂಡ್‍ಲಾರ್ಡ್’ ಚಿತ್ರಕ್ಕೆ ಸ್ಚಾಮಿ ಗೌಡ ಛಾಯಾಗ್ರಹಣ, ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಇದೆ. ಮಾಸ್ತಿ ಮಂಜು ಹಾಗೂ ಶ್ರೀಕಾಂತ್ ಜೊತೆಯಾಗಿ ಸಂಭಾಷಣೆ ರಚಿಸಿದ್ದಾರೆ.





