Mysore
27
clear sky

Social Media

ಗುರುವಾರ, 22 ಜನವರಿ 2026
Light
Dark

ಮೂರು ದಿನಗಳಲ್ಲಿ 163 ಕೋಟಿ ರೂ. ಗಳಿಕೆ ಮಾಡಿದ ‘ಕಾಂತಾರ – ಚಾಪ್ಟರ್ 1’

ರಿಷಭ್‍ ಶೆಟ್ಟಿ ಅಭಿನಯದ ಮತ್ತು ನಿರ್ದೇಶನದ ‘ಕಾಂತಾರ – ಚಾಪ್ಟರ್ 1’ ಚಿತ್ರವು ಜಗತ್ತಿನಾದ್ಯಂತ ಗುರುವಾರ ಬಿಡುಗಡೆಯಾಗಿದೆ. ಚಿತ್ರಕ್ಕೆ ಒಳ್ಳೆಯ ಓಪನಿಂಗ್‍ ಸಿಕ್ಕಿದ್ದು, ಕಳೆದ ಮೂರು ದಿನಗಳಲ್ಲಿ ಎಲ್ಲಾ ಕಡೆ ಹೌಸ್‍ಫುಲ್‍ ಪ್ರದರ್ಶನಗಳನ್ನು ಕಾಣುತ್ತಿದೆ.

‘ಕಾಂತಾರ – ಚಾಪ್ಟರ್ 1’ ಚಿತ್ರವು ಎಷ್ಟು ಗಳಿಕೆ ಮಾಡಿದೆ ಎಂಬ ಪ್ರಶ್ನೆ ಎಲ್ಲರಲ್ಲೂ ಇದ್ದೇ ಚಿತ್ರ. ಚಿತ್ರವು ಬಿಡುಗಡೆಯಾದ ಮೂರು ದಿನಗಳಲ್ಲಿ (ಗುರುವಾರ, ಶುಕ್ರವಾರ ಮತ್ತು ಶನಿವಾರ) 163.1 ಕೋಟಿ ರೂ. ಗಳಿಕೆ ಮಾಡಿದೆ ಎಂದು ಬಾಕ್ಸ್ ಆಫೀಸ್‍ ಟ್ರಾಕರ್‍ ಸಚ್ನಿಕ್‍ ಡಾಟ್‍ಕಾಂ ವರದಿ ಮಾಡಿದೆ.

ಈ ಪೈಕಿ ಚಿತ್ರವು ಮೊದಲ ದಿನ 61.85, ಎರಡನೇ ದಿನ 46 ಮತ್ತು ಮೂರನೇ ದಿನ 55.25 ಕೋಟಿ ರೂ.ಗಳನ್ನು ಗಳಿಕೆ ಮಾಡಿದೆ ಎಂದು ಹೇಳಲಾಗುತ್ತಿದೆ. ಒಟ್ಟಾರೆ ಮೂರು ದಿನಗಳಲ್ಲಿ 163.1 ಕೋಟಿ ರೂ. ಗಳಿಕೆಯಾಗಿದ್ದು, ಇದು ಬರೀ ಭಾರತದ ಲೆಕ್ಕ ಅಷ್ಟೇ. ಈ ಪೈಕಿ ಕರ್ನಾಟಕದ್ದೇ 47.6 ಕೋಟಿ ರೂ. ಗಳಿಕೆಯಾದರೆ, ಉತ್ತರ ಭಾರತದಿಂದ 50 ಕೋಟಿ ರೂ. ಗಳಿಕೆ ಮಾಡಿದೆ. ಇನ್ನು, ಚಿತ್ರವು ಮೊದಲ ದಿನ 88 ಕೋಟಿ ರೂ. ಗಳಿಕೆ ಮಾಡಿದ ಸುದ್ದಿ ಇತ್ತು. ಈ ಪೈಕಿ, ಭಾರತದ ಪಾಲು 74.25 ಕೋಟಿ ರೂ.ಗಳಷ್ಟಾದರೆ, ಬೇರೆ ದೇಶಗಳಲ್ಲಿ ಸುಮಾರು 13.50 ಕೋಟಿ ರೂ. ಗಳಿಕೆಯಾಗಿದೆ. ಚಿತ್ರಕ್ಕೆ ಬುಕ್‍ ಮೈ ಶೋನಲ್ಲಿ ಮೊದಲ ದಿನ (ಗುರುವಾರ) ದಾಖಲೆಯ 1.28 ಮಿಲಿಯನ್ ಪ್ಲಸ್‍ ಟಿಕೆಟ್‍ಗಳು ಮಾರಾಟವಾಗಿವೆ.

ಇದನ್ನೂ ಓದಿ:-ನೇಪಾಳದಲ್ಲಿ ಭೀಕರ ಪ್ರವಾಹ: 42 ಜನರು ಸಾವು

‘ಕಾಂತಾರ ಚಾಪ್ಟರ್ 1’ ಚಿತ್ರವನ್ನು ಹೊಂಬಾಳೆ ಫಿಲಂಸ್‍ ನಿರ್ಮಿಸಿದ್ದು, ರಿಷಭ್‍ ಶೆಟ್ಟಿ ನಿರ್ದೇಶಿಸುವುದರ ಜೊತೆಗೆ ನಾಯಕನಾಗಿಯೂ ಕಾಣಿಸಿಕೊಂಡಿದ್ದಾರೆ. ಅವರ ಜೊತೆಗೆ ರುಕ್ಮಿಣಿ ವಸಂತ್‍, ಅಚ್ಯುತ್‍ ಕುಮಾರ್, ಗುಲ್ಶನ್‍ ದೇವಯ್ಯ ಮುಂತಾದವರು ನಟಿಸಿದ್ದು, ಚಿತ್ರವು ಕನ್ನಡ ಸೇರಿದಂತೆ ತೆಲುಗು, ಹಿಂದಿ, ತಮಿಳು, ಮಲಯಾಳಂ, ಬಂಗಾಳಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ವಿಶ್ವಾದ್ಯಂತ ಬಿಡುಗಡೆಯಾಗಿದೆ.

Tags:
error: Content is protected !!