ಯಳಂದೂರು: ತಾಲ್ಲೂಕಿನ ಎಳೆಪಿಳ್ಳಾರಿ ಬಳಿ ರಾಷ್ಟ್ರೀಯ ಹೆದ್ದಾರಿ ೯೪೮ರಲ್ಲಿ ಬುಧವಾರ ನಸುಕಿನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಯುವ ರೈತ ಸೇರಿದಂತೆ ಇಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ.
ಚಾಮರಾಜನಗರ ತಾಲ್ಲೂಕಿನ ಉಮ್ಮತ್ತೂರು ಗ್ರಾಮದಿಂದ ಬೆಳೆದ ಟೊಮ್ಯಾಟೊವನ್ನು ಗೂಡ್ಸ್ ಆಟೋದಲ್ಲಿ ಇವರು ತುಂಬಿಕೊಂಡು ಕೊಳ್ಳೇಗಾಲಕ್ಕೆ ಸಾಗಿಸುತ್ತಿದ್ದರು. ಬೆಳಗಿನ ಜಾವ ರಸ್ತೆಯಲ್ಲಿ ಕಬ್ಬು ತುಂಬಿಸಲು ನಿಂತಿದ್ದ ಲಾರಿಗೆ ಚಾಲಕ ನಿಯಂತ್ರಣ ತಪ್ಪಿ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಆಟೋದ ಮುಂದೆ ಕುಳಿತಿದ್ದ ಟೊಮ್ಯಾಟೊ ಬೆಳೆದಿದ್ದ ಅಗ್ರಹಾರ ಗ್ರಾಮದ ನಿತಿನ್‌ಕುಮಾರ್ (೧೬) ಹಾಗೂ ಉಮ್ಮತ್ತೂರು ಗ್ರಾಮದ ಸುಮಂತ್(೨೨) ಎಂಬವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಆಟೋ ಗುದ್ದಿದ ರಭಸಕ್ಕೆ ಆಟೋದ ಅರ್ಧ ಭಾಗ ಕಬ್ಬಿನ ಲಾರಿ ಒಳಗೆ ಸಿಲುಕಿಕೊಂಡಿದೆ. ಸ್ಥಳಕ್ಕೆ ಆಗಮಿಸಿ ಅಗರ ಮಾಂಬಳ್ಳಿ ಪೊಲೀಸ್ ಠಾಣೆಯ ಪೊಲೀಸರು ಇವರಿಬ್ಬರ ಕಳೇಬರಗಳನ್ನು ಹೊರಕ್ಕೆತ್ತಲು ಹರಸಾಹಸ ಮಾಡಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸಾಗಿಸಲಾಗಿದೆ.
ಈ ಸಂಬಂಧ ಅಗರ-ಮಾಂಬಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಪೊಲೀಸರು ಮುಂದಿನ ಕ್ರಮ ವಹಿಸಿದ್ದಾರೆ.





