Mysore
15
few clouds

Social Media

ಬುಧವಾರ, 21 ಜನವರಿ 2026
Light
Dark

‘ಗೆರಿಲ್ಲಾ WAR’ ಚಿತ್ರಕ್ಕೆ ಉಪೇಂದ್ರ ನಾಯಕ: ಹುಟ್ಟುಹಬ್ಬಕ್ಕೆ ಪೋಸ್ಟರ್ ಬಿಡುಗಡೆ

ಕೆಲವು ತಿಂಗಳುಗಳ ಹಿಂದೆ ‘ಮಂಡ್ಯ ಸ್ಟಾರ್’ ಲೋಕಿ ಅಭಿನಯದಲ್ಲಿ ಓಂ ಪ್ರಕಾಶ್‍ ರಾವ್ ಒಂದು ಹೊಸ ಚಿತ್ರ ಮಾಡುತ್ತಿದ್ದಾರೆ. ಅದು ಅವರ ನಿರ್ದೇಶನದ 50ನೇ ಚಿತ್ರವಾಗಿರಲಿದೆ ಎಂಬ ಸುದ್ದಿಯಾಗಿತ್ತು. ಈಗ ಅದರಲ್ಲಿ ಒಂದು ಬದಲಾವಣೆಯಾಗಿದ್ದು, ಚಿತ್ರದಲ್ಲಿ ಲೋಕಿ ಬದಲು ಉಪೇಂದ್ರ ನಾಯಕರಾಗಿ ನಟಿಸುತ್ತಿದ್ದಾರೆ.

ಉಪೇಂದ್ರ, ಸೆಪ್ಟೆಂಬರ್.18ರಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಈ ಸಂದರ್ಭದಲ್ಲಿ ಚಿತ್ರತಂಡದವರು, ವಿಶೇಷ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಉಪೇಂದ್ರ ಅವರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ.

ಇದು ಓಂಪ್ರಕಾಶ್‍ ನಿರ್ದೇಶನದಲ್ಲಿ ಉಪೇಂದ್ರ ಅಭಿನಯದ ಎರಡನೇ ಚಿತ್ರವಾಗಿದೆ. ಇದಕ್ಕೂ ಮೊದಲು ಕೆಲವು ವರ್ಷಗಳ ಹಿಂದೆ ‘ತ್ರಿಶೂಲಂ’ ಎಂಬ ಓಂ ಪ್ರಕಾಶ್‍ ರಾವ್ ‍ನಿರ್ದೇಶನದ ಚಿತ್ರದಲ್ಲಿ ರವಿಚಂದ್ರನ್ ಮತ್ತು ಉಪೇಂದ್ರ ಜೊತೆಯಾಗಿ ನಟಿಸಿದ್ದರು. ಈ ಚಿತ್ರ ಕಾರಣಾಂತರಗಳಿಂದ ತಡವಾಗಿದ್ದು, ಅದರ ಬಿಡುಗಡೆಗೂ ಮೊದಲೇ ‘ಗೆರಿಲ್ಲಾ ವಾರ್’ ಶುರುವಾಗುತ್ತಿದೆ.

ಇದನ್ನು ಓದಿ: ಎಂಟು ವರ್ಷಗಳ ನಂತರ ವಾಪಸ್ಸಾದ ಅಮೂಲ್ಯ: ‘ಪೀಕಬೂ’ ಚಿತ್ರದಲ್ಲಿ ನಟನೆ

ಎನ್.ಎಸ್.ರಾವ್ ಸಿನಿ ಕ್ರಿಯೇಷನ್ಸ್ ಲಾಂಛನದಲ್ಲಿ ಓಂಪ್ರಕಾಶ್ ರಾವ್ ಹಾಗೂ ಆರ್.ವಾಸುದೇವ ರೆಡ್ಡಿ ನಿರ್ಮಿಸುತ್ತಿರುವ ಈ ಚಿತ್ರದ ಚಿತ್ರೀಕರಣ ಸದ್ಯದಲ್ಲೇ ಆರಂಭವಾಗಲಿದೆ. ಡೆನ್ನಿಸಾ ಪ್ರಕಾಶ್ ಅವರು ಬರೆದಿರುವ ಕಥೆಗೆ ಓಂಪ್ರಕಾಶ್ ರಾವ್ ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಹಂಸಲೇಖ ಸಾಹಿತ್ಯ ಬರೆಯುವುದರ ಜೊತೆಗೆ ಸಂಗೀತ ಸಂಯೋಜಿಸುತ್ತಿದ್ದಾರೆ. ರವಿಕುಮಾರ್ ಛಾಯಾಗ್ರಹಣ, ಲಕ್ಷ್ಮಣ್ ರೆಡ್ಡಿ ಸಂಕಲನ ಈ ಚಿತ್ರಕ್ಕಿದೆ.

ಈ ಚಿತ್ರದ ಕುರಿತು ಮಾತನಾಡಿರುವ ಓಂಪ್ರಕಾಶ್ ರಾವ್‍, ‘ಗೆರಿಲ್ಲಾ WAR’ ಒಂದು ರೀತಿಯ ಯುದ್ಧವಾಗಿದ್ದು, ಅಲ್ಲಿ ಒಂದು ಸಣ್ಣ ಗುಂಪು ದೊಡ್ಡ ಸಂಖ್ಯೆಯ ಶತ್ರುಗಳೊಂದಿಗೆ ಅಸಾಂಪ್ರದಾಯಿಕ ತಂತ್ರಗಳನ್ನು ಬಳಸಿ ಯುದ್ಧ ಮಾಡುತ್ತದೆ. ಹಿಂದೆ ಈ ರೀತಿಯ ಯುದ್ಧಗಳು ಆಗಿರುವ ಅನೇಕ ಉದಾಹರಣೆಗಳಿದೆ. ಹಾಗಂತ ನಮ್ಮದು ಐತಿಹಾಸಿಕ ಚಿತ್ರವಲ್ಲ. ಈ ವಿಷಯವನ್ನಿಟ್ಟುಕೊಂಡು ಪ್ರಸಕ್ತ ನಾವು ಎದುರಿಸುತ್ತಿರುವ ಅನೇಕ ಸಮಸ್ಯೆಗಳ ಬಗ್ಗೆ ತೋರಿಸುವ ಪ್ರಯತ್ನ ಮಾಡಲಾಗುತ್ತಿದೆ. ಉಪೇಂದ್ರ ಅವರು ಈ ಚಿತ್ರದಲ್ಲಿ ಸೈನಿಕನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆದರೆ, ಈ ಸೈನಿಕ ಗಡಿ ಮಾತ್ರ ಕಾಯುವ ಸೈನಿಕನಲ್ಲ‌‌. ಪ್ರಸ್ತುತ ನಾವು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸುವ ಧೀಮಂತ ನಾಯಕ. ಇನ್ನೂ, ಈಗಿನ ಹೊಸ ತಂತ್ರಜ್ಞಾನಗಳನ್ನು ಬಳಸಿಕೊಂಡು ಈ ಚಿತ್ರ ಮೂಡಿಬರಲಿದೆ’ ಎಂದು ನಿರ್ದೇಶಕ ಓಂಪ್ರಕಾಶ್ ರಾವ್ ತಿಳಿಸಿದ್ದಾರೆ.

ಉಪೇಂದ್ರ ಅವರಿಗೆ ನಾಯಕಿಯಾಗಿ ನಿಮಿಕಾ ರತ್ನಾಕರ್ ನಟಿಸುತ್ತಿದ್ದಾರೆ. ಮಿಕ್ಕಂತೆ ರಂಗಾಯಣ ರಘು, ಸ್ವಸ್ತಿಕ್ ಶಂಕರ್, ಅಚ್ಯುತ್ ರಾವ್, ಭಾಸ್ಕರ್ ಶೆಟ್ಟಿ, ಆರಾಧ್ಯ, ಶ್ವೇತ ವೀರೇಶ್ ಮುಂತಾದವರು ಚಿತ್ರದಲ್ಲಿ ನಟಿಸುತ್ತಿದ್ದಾರೆ.

Tags:
error: Content is protected !!