ಗೊರಕೆ ನಿಯಂತ್ರಣಕ್ಕೆ ಎಐ ಇಂಟಿಗ್ರೆಟ್ ಸ್ಲೀಪ್ ಆಪ್ನಿಯಾ ಡಿಟೆಕ್ಟರ್; ಎಸ್‌ಜೆಸಿಇ ವಿದ್ಯಾರ್ಥಿಗಳಿಂದ ಆವಿಷ್ಕಾರ
ಎಷ್ಟೋ ಜನರಿಗೆ ನಿದ್ರೆ ಮಾಡುವಾಗ ನಾವು ಕೂಡ ಗೊರಕೆ ಹೊಡೆಯುತ್ತಿರುತ್ತೇವೆ ಎಂಬುದರ ಅರಿವೇ ಇರುವುದಿಲ್ಲ. ಇಂತಹ ಗೊರಕೆ ಪಕ್ಕದಲ್ಲಿ ಮಲಗಿರುವವರಿಗೆ ತೊಂದರೆ ಕೊಡುತ್ತದೆ ಎಂಬುದರ ಅರಿವೂ ಇರುವುದಿಲ್ಲ. ಅದಕ್ಕಿಂತ ಹೆಚ್ಚಾಗಿ ಇದೊಂದು ಆರೋಗ್ಯ ಸಮಸ್ಯೆ ಅಂತ ಕೂಡ ಭಾವಿಸಿರುವುದಿಲ್ಲ. ಇದರ ನಿವಾರಣೆ ಹೇಗಪ್ಪಾ ಅಂತ ಯೋಚಿಸಬೇಡಿ. ಎಐ ಆಧಾರಿತ ತಂತ್ರಜ್ಞಾನದ ಮೂಲಕ ಉಪಕರಣವೊಂದನ್ನು ಇಂಜಿನಿಯರಿಂಗ್ ವಿದ್ಯಾರ್ಥಿಗಳು ಸಂಶೋಧನೆ ಮಾಡಿದ್ದಾರೆ! ಮೈಸೂರಿನ ಶ್ರೀ ಜಯಚಾಮರಾಜೇಂದ್ರ ಇಂಜಿನಿಯರಿಂಗ್ ಕಾಲೇಜಿನ ಎಲೆಕ್ಟ್ರಾನಿಕ್ ಆಂಡ್ ಕಮ್ಯೂನಿಕೇಷನ್ ವಿದ್ಯಾರ್ಥಿಗಳು ಪ್ರಾಧ್ಯಾಪಕರ ಸಹಾಯದೊಂದಿಗೆ ಮಾನವನ ಗೊರಕೆ ಸಮಸ್ಯೆಗೆ, ನೂತನವಾದ ಕೃತಕ ಬುದ್ಧಿಮತ್ತೆ(ಎಐ) ಆಧಾರಿತ ಎಲೆಕ್ಟ್ರಾನಿಕ್ ಉಪಕರಣ ಕಂಡುಹಿಡಿದಿದ್ದಾರೆ. ನಿದ್ರೆ ಮಾಡುವಾಗ ಗೊರಕೆ ಅಥವಾ ಅದರಿಂದ ಉಸಿರುಗಟ್ಟು ವಿಕೆ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಅತ್ಯಂತ ಈ ಡಿಟೆಕ್ಟರ್ ಉಪಯುಕ್ತವಾದ ಉಪಕರಣವಾಗಿದೆ. ಎಐ ಇಂಟಿಗ್ರೆಟ್ ಸ್ಲೀಪ್ ಆಪ್ನಿಯಾ ಡಿಟೆಕ್ಟರ್ ಎಂಬ ಹೊಸದೊಂದು ಸಾಧನವನ್ನು ಆವಿಷ್ಕಾರ ಮಾಡಲಾಗಿದೆ.
ಮನುಷ್ಯರಿಗೆ ನಿದ್ರೆಯಲ್ಲಿ ಉಸಿರುಗಟ್ಟುವಿಕೆ ಸಮಸ್ಯೆಯನ್ನು ಸ್ಲೀಪ್ ಆಪ್ನಿಯಾ ಡಿಸಿಸ್ಎನ್ನಲಾಗಿದೆ. ಈ ಸಮಸ್ಯೆ ಇರುವ ವ್ಯಕ್ತಿ ನಿದ್ರೆಸಮಯದಲ್ಲಿ ಗೊರಕೆ ಹೊಡೆಯುವುದು ಸಹಜ. ಒಮ್ಮೊಮ್ಮೆ ಇದು ಗಂಭೀರ ಆರೋಗ್ಯ ಸಮಸ್ಯೆಯಾಗಿಯೂ ಕಾಡಬಹುದು ಎನ್ನಲಾಗಿದೆ.
ಇದನ್ನು ಓದಿ: ಕೃತಕ ಹಲ್ಲು ಜೋಡಣೆಗೆ ಆಂಗಲ್ ಕರೆಕ್ಷನ್ ಡಿವೈಸ್
ಡಿಟೆಕ್ಟರ್ ಕಾರ್ಯವಿಧಾನ: ಉಪಕರಣವನ್ನು ಎಐ ಆಧಾರಿತ ತಂತ್ರಜ್ಞಾನ ಆಧರಿಸಿ ಸಂಶೋಧನೆ ಮಾಡಲಾಗಿದೆ. ಗೊರಕೆ ಸಮಸ್ಯೆ ಇರುವವರು ಈ ಸ್ಲೀಪ್ ಆಪ್ನಿಯಾ ಡಿಟೆಕ್ಟರ್ ಸ್ಮಾರ್ಟ್ ಉಪಕರಣವನ್ನು ಕುತ್ತಿಗೆಗೆ ಧರಿಸಿ ಮಲಗಿದರೆಸಾಕು. ಗೊರಕೆ ಶುರುವಾಗುತ್ತಿದ್ದಂತೆ ಉಪಕರಣವು ಶಬ್ದವನ್ನು ಗ್ರಹಿಸಿ ತತ್‌ಕ್ಷಣ ಸ್ನಾಯುಗಳಿಗೆ ಹಾಗೂ ನರಗಳಿಗೆ ಎಲೆಕ್ಟ್ರಿಕ್ ಫ್ರಿಕ್ವೆನ್ಸಿ ಮೂಲಕ ವೈಬ್ರೇಷನ್ ಉಂಟು ಮಾಡಿ ಗೊರಕೆ ಬಾರದಂತೆ ತಡೆಯುತ್ತದೆ. ಈ ಸ್ಮಾರ್ಟ್ ಉಪಕರಣಕ್ಕೆ ಎಐ (ಕೃತಕ ಬುದ್ಧಿಮತ್ತೆ) ಅನಾಲಿ ಸಿಸ್, ಶಬ್ದ ಗ್ರಹಿಕೆ ಸೆನ್ಸಾರ್, ವೈಬ್ರೇಷನ್ ಸೆನ್ಸಾರ್, ಪಲ್ಸ್ ಅಕ್ಯುಮಲೇಟರ್ ಬಳಸಲಾಗಿದೆ.
ವಿದ್ಯಾರ್ಥಿಗಳು ಇದರ ಮಾದರಿಯನ್ನು ೨೦೨೪ರಲ್ಲಿ ಮುಂಬೈನಲ್ಲಿ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ)ಆಯೋಜಿಸಿದ್ದ ಮೆಧಾ(ಎಂಇಡಿಎಚ್‌ಎ) ರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಪ್ರದರ್ಶಿಸಿ ೨ನೇ ಸ್ಥಾನ ಪಡೆದಿದ್ದಾರೆ.
ಎಸ್‌ಜೆಸಿಇ ಕಾಲೇಜು ಸ್ಲೀಪ್ ಆಪ್ನಿಯಾ ಡಿಟೆಕ್ಟರ್‌ನ ಡಿಸೈನರ್ ಪೇಟೆಂಟ್ ಮಾಡಲಾಗಿದ್ದು, ಶೀಘ್ರದಲ್ಲೇ ಯುಟಿಲಿಟಿ ಪೇಟೆಂಟ್ ಕೂಡ ದೊರೆಯಲಿದೆ. ಇದನ್ನು ಮಾರುಕಟ್ಟೆಗೆ ತರಲು ಸಿದ್ಧತೆ ನಡೆದಿದೆ ಎಂದು ಕಾಲೇಜಿನ ಎಲೆಕ್ಟ್ರಾನಿಕ್ ಆಂಡ್ ಕಮ್ಯುನಿಕೇಷನ್ ವಿಭಾಗದ ಸಹಾಯಕ ಉಪನ್ಯಾಸಕ ಎಸ್.ಡಿ.ಯಶ್ವಂತ್ ಮಾಹಿತಿ ಹಂಚಿಕೊಂಡಿದ್ದಾರೆ.
” ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಅಲ್ಲದೇ, ಪ್ರಾಯೋಗಿಕವಾಗಿ ಹೆಚ್ಚು ಒತ್ತು ನೀಡಲಾಗುತ್ತಿದೆ. ಪ್ರತಿ ವರ್ಷ ಹತ್ತಕ್ಕೂ ಹೆಚ್ಚು ಹೊಸ ರೀತಿಯ ಆವಿಷ್ಕಾರಗಳು ನಡೆಯುತ್ತಿವೆ. ಇದಕ್ಕೆಲ್ಲ ಜೆಎಸ್‌ಎಸ್ ಸಂಸ್ಥೆಯು ಎಲ್ಲ ರೀತಿಯಲ್ಲೂ ಒತ್ತು ನೀಡುತ್ತಿದೆ. ಪ್ರಾಧ್ಯಾಕರ ಹೆಚ್ಚಿನ ಶ್ರಮವೂ ಇದೆ.”
-ನಟರಾಜು, ಪ್ರಾಂಶುಪಾಲರು, ಎಸ್‌ಜೆಸಿಇ
” ಪ್ರತಿ ವರ್ಷವೂ ಸಂಸ್ಥೆಯು ನೂತನ ಆವಿಷ್ಕಾರಗಳಿಗೆ ಉತ್ತೇಜನ ದೊರೆಯುತ್ತಿದ್ದು, ಹೊಸದಾದ ತಂತ್ರಜ್ಞಾನಯುಗದಲ್ಲಿ ಹೆಚ್ಚು ಸಂಶೋಧನೆಗಳೂ ನಡೆಯುತ್ತಿವೆ. ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರು ಒಟ್ಟಾಗಿ ಇಂತಹ ಆವಿಷ್ಕಾರಕ್ಕೆ ಅಡಿಪಾಯ ಹಾಕುತ್ತಿದ್ದು, ಈ ತಂತ್ರಜ್ಞಾನ ಯುಗದಲ್ಲಿ ದೇಶಕ್ಕೆ ಮಾದರಿ ಕೊಡುಗೆಯಾಗುವ ವಿಶ್ವಾಸ ಇದೆ.”
– ಎಸ್.ಡಿ.ಯಶ್ವಂತ್, ಸಹಾಯಕ ಉಪನ್ಯಾಸಕ
” ಸ್ಲೀಪ್ ಆಪ್ನಿಯಾ ಡಿಟೆಕ್ಟರ್ ತಯಾರಿಸಲು ಸಂಶೋಧನೆ ನಡೆಸಿ ಒಂದು ಮಾದರಿಯನ್ನು ತಯಾರಿಸಲಾಗಿದೆ. ಇದಕ್ಕೆ ೮ರಿಂದ ೧೦ ಸಾವಿರ ರೂ. ವೆಚ್ಚವಾಗಿದೆ. ಇನ್ನಷ್ಟು ಸುಧಾರಿತ ತಂತ್ರಜ್ಞಾನ ಬಳಸಿ ಮಾರುಕಟ್ಟೆಗೆ ತರಲು ಹಲವು ಖಾಸಗಿ ಸಂಸ್ಥೆಗಳೊಂದಿಗೆ ಮಾತುಕತೆ ನಡೆಸಲಾಗಿದೆ. ಮಾರುಕಟ್ಟೆಗೆ ಸ್ಲೀಪ್ ಆಪ್ನಿಯಾ ಡಿಟೆಕ್ಟರ್ ಬಿಡುಗಡೆ ಮಾಡಿದರೆ ಕೇವಲ ೨ ರಿಂದ ೩ ಸಾವಿರ ರೂ. ಬೆಲೆಯಲ್ಲಿ ದೊರೆಯುವ ಸಾಧ್ಯತೆಯಿದೆ.”





