‘ಜೋಗಿ’ ಪ್ರೇಮ್ ನಿರ್ದೇಶನದ ‘ಕೆಡಿ – ದಿ ಡೆವಿಲ್’ ಚಿತ್ರದಲ್ಲಿ ಸುದೀಪ್ ನಟಿಸುತ್ತಿದ್ದಾರೆ ಎಂಬ ಪ್ರಶ್ನೆಯೊಂದು ಕೆಲವು ದಿನಗಳ ಹಿಂದೆ ಕೇಳಿಬಂದಿತ್ತು. ಆದರೆ, ಸುದೀಪ್ ಆಗಲೀ, ನಿರ್ದೇಶಕ ಪ್ರೇಮ್ ಆಗಲೀ ಈ ಕುರಿತು ತುಟಿ ಬಿಚ್ಚಿರಲಿಲ್ಲ. ಸುದೀಪ್ ಚಿತ್ರದಲ್ಲಿ ನಿಜಕ್ಕೂ ನಟಿಸುತ್ತಿದ್ದಾರಾ? ಅಥವಾ ಇದು ಗಾಳಿಸುದ್ದಿಯಾ ಎಂಬ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ.
ಸುದೀಪ್, ‘ಕೆಡಿ – ದಿ ಡೆವಿಲ್’ ಚಿತ್ರದಲ್ಲಿ ನಿಜಕ್ಕೂ ನಟಿಸುತ್ತಿದ್ದು, ಹೈದರಾಬಾದ್‍ನಲ್ಲಿ ನಡೆಯುತ್ತಿರುವ ಚಿತ್ರೀಕರಣದಲ್ಲಿ ಅವರು ಭಾಗವಹಿಸಿದ್ದಾರೆ. ಸುದೀಪ್ ನಟಿಸುತ್ತಿರುವ ವಿಷಯವನ್ನು ಚಿತ್ರತಂಡದವರೇ ಸ್ಪಷ್ಟಪಡಿಸಿದ್ದಾರೆ. ಆದರೆ, ಚಿತ್ರದಲ್ಲಿ ಸುದೀಪ್ ಅವರ ಪಾತ್ರವೇನು? ಎಷ್ಟು ಹೊತ್ತು ತೆರೆಯ ಮೇಲೆ ಕಾಣಿಸಿಕೊಳ್ಳುತ್ತಾರೆ ಮುಂತಾದ ಎಲ್ಲಾ ವಿಷಯಗಳನ್ನು ಸದ್ಯಕ್ಕೆ ಗೌಪ್ಯವಾಗಿಡಲಾಗಿದೆ.
‘ಕೆಡಿ – ದಿ ಡೆವಿಲ್’ ಚಿತ್ರದಲ್ಲಿ ದೊಡ್ಡ ತಾರಾಗಣವಿದೆ. ಧ್ರುವ ಸರ್ಜಾ ನಾಯಕನಾಗಿ ನಟಿಸುವುದರ ಜೊತೆಗೆ ರವಿಚಂದ್ರನ್, ರಮೇಶ್ ಅರವಿಂದ್, ಸಂಜಯ್ ದತ್ ಮುಂತಾದವರು ನಟಿಸಿದ್ದಾರೆ. ಈಗ ಈ ತಾರಾಗಣಕ್ಕೆ ಸುದೀಪ್ ಸಹ ಸೇರ್ಪಡೆಯಾಗಿದ್ದಾರೆ. ಇದಕ್ಕೂ ಮುನ್ನ ಪ್ರೇಮ್ ನಿರ್ದೇಶನದ ‘ದಿ ವಿಲನ್’ ಚಿತ್ರದಲ್ಲಿ ಸುದೀಪ್ ನಾಯಕನಾಗಿ ಕಾಣಿಸಿಕೊಂಡಿದ್ದರು. ಇದೀಗ, ‘ಕೆಡಿ – ದಿ ವಿಲನ್’ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ನಟಿಸುತ್ತಿರುವುದು ವಿಶೇಷ.
‘ಕೆಡಿ – ದಿ ಡೆವಿಲ್’ ಚಿತ್ರಕ್ಕೆ ಪ್ರೇಮ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿದ್ದಾರೆ. ಕೆ.ವಿ.ಎನ್. ಪ್ರೊಡಕ್ಷನ್ಸ್ ಬ್ಯಾನರ್‍ನಡಿ ಈ ಚಿತ್ರವನ್ನು ನಿರ್ಮಿಸಲಾಗಿದೆ. ಚಿತ್ರದಲ್ಲಿ ಧ್ರುವ ಸರ್ಜಾ, ರೀಷ್ಮಾ ನಾಣಯ್ಯ, ರವಿಚಂದ್ರನ್, ರಮೇಶ್ ಅರವಿಂದ್, ಸಂಜಯ್ ದತ್, ಶಿಲ್ಪಾ ಶೆಟ್ಟಿ ಮುಂತಾದವರು ನಟಿಸಿದ್ದಾರೆ. ಅರ್ಜುನ್ ಜನ್ಯ ಸಂಗೀತ ಮತ್ತು ವಿಲಿಯಂ ಡೇವಿಡ್ ಛಾಯಾಗ್ರಹಣ ಚಿತ್ರಕ್ಕಿದೆ.
ಈ ಚಿತ್ರದ ಚಿತರೀಕರಣ ಮುಗಿದಿದ್ದು, ಬರೀ ಸುದೀಪ್ ಅಭಿನಯದ ಭಾಗದ ಚಿತ್ರೀಕರಣ ಮಾತ್ರ ಬಾಕಿ ಇತ್ತು. ಅದೂ ಮುಕ್ತಾಯದ ಹಂತಕ್ಕೆ ಬಂದಿದ್ದು, ಸದ್ಯದಲ್ಲೇ ಚಿತ್ರದ ಬಿಡುಗಡೆ ದಿನಾಂಕ ಘೋಷಣೆಯಾಗಲಿದೆ. ಮೂಲಗಳ ಪ್ರಕಾರ, ನವೆಂಬರ್ ತಿಂಗಳಲ್ಲಿ ಚಿತ್ರದ ಬಿಡಗುಡೆ ಆಗಲಿದೆ.





