Mysore
27
clear sky

Social Media

ಗುರುವಾರ, 22 ಜನವರಿ 2026
Light
Dark

ದಸರಾ ಸಾಂಸ್ಕೃತಿಕ ಆಚರಣೆ ಹೊರತು ಧಾರ್ಮಿಕ ಹಬ್ಬವಲ್ಲ : ಡಿಸಿಎಂ ಡಿ.ಕೆ.ಶಿವಕುಮಾರ್‌

DK Shivakumar

ಬೆಂಗಳೂರು : ಚಾಮುಂಡೇಶ್ವರಿ ಕೇವಲ ಹಿಂದೂಗಳ ಆಸ್ತಿ ಅಲ್ಲ. ದಸರಾ ಧಾರ್ಮಿಕ ಆಚರಣೆ ಅಲ್ಲ. ಸಾಂಸ್ಕೃತಿಕ ಆಚರಣೆ. ಬಾನು ಮುಷ್ತಾಕ್ ದಸರಾ ಉದ್ಘಾಟನೆ ಮಾಡಿದ್ರೆ ತಪ್ಪೇನು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರಶ್ನಿಸಿದ್ದಾರೆ.

ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಆಯ್ಕೆಗೆ ಬಿಜೆಪಿ ವಿರೋಧ ವಿಚಾರವಾಗಿ ಮಂಗಳವಾರ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಚಾಮುಂಡಿ ಬೆಟ್ಟ, ಚಾಮುಂಡಿ ದೇವರು ಎಲ್ಲಾ ಧರ್ಮದವರಿಗೂ ಇದೆ. ಚಾಮುಂಡೇಶ್ವರಿ ಹಿಂದೂಗಳ ಆಸ್ತಿಯಲ್ಲ. ಎಲ್ಲಾ ಸಮುದಾಯದವರು ಚಾಮುಂಡೇಶ್ವರಿ ದೇವಾಲಯಕ್ಕೆ ಹೋಗ್ತಾರೆ. ಅದು ಅವರ ನಂಬಿಕೆ. ನಾವು ಮಸೀದಿ, ಚರ್ಚ್ಗೆ ಹೋಗ್ತೀವಿ, ಬಸ್ತಿ, ಜೈನ ದೇವಾಲಯ, ಗುರುದ್ವಾರಗೆ ಹೋಗ್ತೀವಿ. ಗುರುದ್ವಾರಕ್ಕೆ ಹೋಗೋದು ತಪ್ಪಿಸೋಕೆ ಅಗುತ್ತಾ? ಹಿಂದೂ ದೇವಾಲಯಕ್ಕೆ ಅವರನ್ನ ಬರೋದು ತಪ್ಪಿಸೋಕೆ ಆಗುತ್ತಾ? ಯಾರ್ ಬೇಕಾದ್ರು ಹೋಗಬಹುದು, ಬರಬಹುದು ಎಂದಿದ್ದಾರೆ.

ಇತರೆ ಧರ್ಮದವರು ಯಾಕೆ ಬೆಟ್ಟ ಹತ್ತಬಾರದು? ಯಾಕೆ ಉದ್ಘಾಟನೆ ಮಾಡಬಾರದು. ಅಯೋಧ್ಯೆಗೆ ಹಿಂದುಗಳು ಮಾತ್ರ ಬರಬೇಕು ಅಂತ ಯಾಕೆ ಬೋರ್ಡ್ ಹಾಕಿಲ್ಲ. ಎಲ್ಲಿದೆ ಆ ರೀತಿ. ನಿಮ್ಮ ಸರ್ಕಾರ ಇತ್ತು. ಹಜ್ ಕಮಿಟಿ ಸೇರಿ ಮುಸ್ಲಿಂ ಕಮಿಟಿಗಳನ್ನ ಯಾಕೆ ನೀವು ಮುಚ್ಚಿಲ್ಲ. ಇಡೀ ದೇಶದಲ್ಲಿ ಯಾಕೆ ಮುಚ್ಚೋಕೆ ಆಗಲಿಲ್ಲ ಎಂದು ತಿರುಗೇಟು ನೀಡಿದ್ದಾರೆ.

ನಮ್ಮದು ಜಾತ್ಯಾತೀತ ದೇಶ. ಸಂವಿಧಾನದಲ್ಲಿ ಎಲ್ಲರಿಗೂ ರಕ್ಷಣೆ ಇದೆ. ಎಲ್ಲರಿಗೂ ಸ್ವಾಗತ ಇದೆ. ಮುಸ್ಲಿಂ ಹೆಣ್ಣು, ಹಿಂದೂ ಗಂಡ ಇರುತ್ತಾರೆ. ಅವರ ಮಗ ಏನೂ ಬೇಕಾದ್ರು ಆಚರಣೆ ಮಾಡಬಹುದು. ಕ್ರಿಶ್ಚಿಯನ್ ಗಂಡ, ಹಿಂದೂ ಹೆಂಡ್ತಿ ಇರುತ್ತಾರೆ. ಆಗ ಮಗು ಹಿಂದೂ ಧರ್ಮ ಬೇಕು ಅಂದರೆ ಯಾರು ನಿಲ್ಲಿಸೋಕೆ ಆಗುತ್ತದೆ. ಹೆಣ್ಣು ಮಗಳು ಕನ್ನಡ ಬರೆಯುತ್ತಿದ್ದರು. ನೀವು ಯಾಕೆ ಬರೆಯುತ್ತೀರಾ ಅಂತ ಯಾಕೆ ಕೇಳಲಿಲ್ಲ. ದಸರಾ ಧಾರ್ಮಿಕ ಆಚರಣೆ ಅಲ್ಲ. ಇದು ಸಾಂಸ್ಕೃತಿಕ ಆಚರಣೆ ಎಂದು ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದ್ದಾರೆ.

Tags:
error: Content is protected !!