Mysore
23
broken clouds

Social Media

ಸೋಮವಾರ, 26 ಜನವರಿ 2026
Light
Dark

ಸು ಫ್ರಂ ಸೋ, ಕನ್ನಡ ಒಟಿಟಿ, ವೆಬ್ ಸರಣಿ, ಹೊಸ ವಾಹಿನಿ ಮತ್ತು ಅತ್ತ.. 

su from so

ಜೆ.ಪಿ.ತುಮಿನಾಡು ನಿರ್ದೇಶನದ ‘ಸು ಫ್ರಂ ಸೋ’ ಚಿತ್ರ ಈ ಮಟ್ಟದಲ್ಲಿ ಗೆಲ್ಲುತ್ತದೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ. ತಾರಾ ವರ್ಚಸ್ಸು, ಬ್ರಾಂಡ್, ಪ್ರಚಾರ ಎಲ್ಲಕ್ಕಿಂತ ಮಿಗಿಲಾಗಿ ಚಿತ್ರದ ವಸ್ತು, ನಿರೂಪಣೆಗಳು ಅದರ ಗೆಲುವನ್ನು ನಿರ್ಧರಿಸುತ್ತವೆ ಎನ್ನುವುದನ್ನು ಈ ಚಿತ್ರ ಸಾಬೀತುಪಡಿಸಿದೆ. ಚಿತ್ರಮಂದಿರಕ್ಕೆ ಪ್ರೇಕ್ಷಕರು ಬರುತ್ತಿಲ್ಲ ಎನ್ನುವ ಮಾತನ್ನು ಈ ಚಿತ್ರ ಸುಳ್ಳಾಗಿಸಿದೆ.

ಭಾರೀ ಬಜೆಟಿನ ಎರಡು ಚಿತ್ರಗಳು ಕಳೆದ ವಾರ ತೆರೆ ಕಾಣುವ ವೇಳೆ‘ ಸು ಫ್ರಂ ಸೋ’ ಚಿತ್ರವನ್ನು ಕೆಲವೆಡೆ ಎತ್ತಂಗಡಿ ಮಾಡಿದ ಪ್ರಸಂಗಗಳಿದ್ದವು. ಬೆಂಗಳೂರು ನಗರವೊಂದರಲ್ಲೇ ರಜನಿಕಾಂತ್ ಅಭಿನಯದ ‘ಕೂಲಿ’ ಚಿತ್ರದ ೯೦೦ಕ್ಕೂ ಹೆಚ್ಚು ಪ್ರದರ್ಶನಗಳಿದ್ದವು. ಮೂವತ್ತೋ ಮೂವತ್ತೈದೋ ಕನ್ನಡ ಡಬ್ಬಿಂಗ್ ಪ್ರದರ್ಶನಗಳಿದ್ದವು! ಅದ್ಕಕಿಂತ ಎಂಟೋ ಹತ್ತೋ ಹೆಚ್ಚು ತೆಲುಗು ಡಬ್ ಅವತರಣಿಕೆಗಳು! ಕೇವಲ ಮೂರು ನಾಲ್ಕು ದಿನಗಳಲ್ಲೀ ಪ್ರಚಾರದ ಅಬ್ಬರ ಕಡಿಮೆಯಾಗಿ, ಚಿತ್ರದ ಕುರಿತಂತೆ ಬಂದ ಅಭಿಪ್ರಾಯಗಳು ಅವುಗಳ ಪ್ರದರ್ಶನದ ಮೇಲೆ ಸಹಜವಾಗಿಯೇ ಪರಿಣಾಮ ಬೀರಿದವು.

‘ಸು ಫ್ರಂ ಸೋ’ ಚಿತ್ರದ ಪ್ರದರ್ಶನಗಳಿಗೆ ಅಲ್ಲಿ ಮತ್ತೆ ಅವಕಾಶ ಆಯಿತು ಎನ್ನುವ ಮಾತು ಕೇಳತೊಡಗಿದೆ. ಕನ್ನಡ ಚಿತ್ರೋದ್ಯಮದ ಪಾಲಿಗೆ ಸಹಜವಾಗಿಯೇ ಇದು ಗರ್ವದ ವಿಷಯ. ಉದ್ಯಮ, ವ್ಯಾಪಾರ ಎನ್ನುವ ಮಂದಿಗೆ, ಅದರಲ್ಲೂ ಪರಭಾಷಾ ಚಿತ್ರಪ್ರೇಮಿ ಉದ್ಯಮಿಗಳಿಗೆ ಅಷ್ಟೇನೂ ಹಿತವಾಗಲಾರದು.

ಡಿಜಿಟಲ್ ಹಕ್ಕುಗಳ ಮಾರಾಟದ ವಿಷಯದಲ್ಲೂ ಈ ಚಿತ್ರ ಹೊಸದೊಂದು ದಾಖಲೆ ಬರೆದಿದೆ. ಚಿತ್ರದ ಬಿಡುಗಡೆಗೆ ಮೊದಲು ಈ ಹಕ್ಕುಗಳ ಮಾರಾಟಕ್ಕೆ ಚಿತ್ರತಂಡ ವಿಫಲ ಪ್ರಯತ್ನ ನಡೆಸಿತ್ತು. ಚಿತ್ರ ತೆರೆಕಂಡು ಈ ಗೆಲುವನ್ನು ಕಾಣುತ್ತಲೇ ಭಾರೀ ಮೊತ್ತಕ್ಕೆ ಆ ಹಕ್ಕುಗಳ ಮಾರಾಟ ಆದ ಸುದ್ದಿ. ಅದೊಂದೇ ವ್ಯವಹಾರದಲ್ಲಿ ನಿರ್ಮಾಣವೆಚ್ಚ ಸರಿದೂಗಿರಬಹುದೇನೋ! ಸಾಮಾನ್ಯವಾಗಿ ಯಾವುದೇ ಚಿತ್ರ ಗೆದ್ದಾಗ, ಅದರ ನಿರ್ಮಾಣ ವೆಚ್ಚವೂ ತರಹೇವಾರಿ ಪ್ರಚಾರ ಆಗುತ್ತಿರುತ್ತದೆನ್ನಿ.

ಅದೇನೇ ಇರಲಿ, ದೇಶ, ವಿದೇಶಗಳಲ್ಲಿ ಕನ್ನಡ ಚಿತ್ರವೊಂದು ವಿಜೃಂಭಿಸಿ, ಈ ವರ್ಷದ ಹಿಂದಿನ ದಿನಗಳ ಸೋಲಿನ ನಿರಾಸೆಗೆ ತೆರೆ ಎಳೆದಿದೆ. ಕಿರುತೆರೆ ವಾಹಿನಿಗಳ ಆರಂಭದ ದಿನಗಳಲ್ಲಿ ಚಿತ್ರೋದ್ಯಮ ಅದನ್ನು ತನ್ನ ಪ್ರತಿಸ್ಪರ್ಧಿ ಎಂದು ಪರಿಗಣಿಸಿತ್ತು. ಜನಪ್ರಿಯ ತಾರೆಯರು ಕಿರುತೆರೆಗಳ ರಿಯಾಲಿಟಿ ಶೋ, ಧಾರಾವಾಹಿಗಳಲ್ಲಿ ನಟಿಸಬಾರದು ಎನ್ನುವಲ್ಲಿಯ ವರೆಗೆ  ಈ ಬೆಳವಣಿಗೆ ಇತ್ತು. ಕೇರಳದಲ್ಲಂತೂ, ಕಿರುತೆರೆಯಲ್ಲಿ ನಟಿಸಿದ ನಟರನ್ನು ‘ಬ್ಯಾನ್’ ಮಾಡಿದ ಪ್ರಸಂಗಗಳೂ ಇದ್ದವೆನ್ನಿ. ಆದರೆ ಈಗ ಎಲ್ಲವೂ ಬದಲಾಗಿದೆ. ಕಿರುತೆರೆ ಮತ್ತು ಚಿತ್ರೋದ್ಯಮ ಪರಸ್ಪರ ಕೊಡುಕೊಳ್ಳುಗಳಲ್ಲಿ ತೊಡಗಿಸಿಕೊಂಡಿವೆ.

ಹಿಂದೆ ರಂಗಭೂಮಿ ಬೆಳ್ಳಿತೆರೆಗೆ ಚಿಮ್ಮುಹಲಗೆಯಾಗಿತ್ತು. ಅಲ್ಲಿನ ಅನುಭವ ಇಲ್ಲಿ ಶ್ರೀರಕ್ಷೆಯಾಗಿತ್ತು. ಅಷ್ಟೇ ಏಕೆ, ಸಿನಿಮಾ ಎಂದರೆ ರಂಗಭೂಮಿಯ ವಿಸ್ತರಣೆಯಂತೆಯೇ ಆರಂಭದ ದಿನಗಳಲ್ಲಿತ್ತು. ಈಗ ಕಿರುತೆರೆ ಬಹಳಷ್ಟು ಮಂದಿಗೆ ಬೆಳ್ಳಿತೆರೆಗೆ ಕಾಲಿಡಲು ಚಿಮ್ಮುಹಲಗೆ ಆಗಿದೆ. ತೆರೆಯ ಮೇಲೆ, ತೆರೆಯ ಹಿಂದೆ ಸಾಕಷ್ಟು ಮಂದಿ ಕಿರುತೆರೆಯ ಮಂದಿ ಬರತೊಡಗಿದ್ದಾರೆ. ಅದು ಕನ್ನಡ ಚಿತ್ರರಂಗ ಮಾತ್ರವಲ್ಲ, ಎಲ್ಲ ಭಾರತೀಯ ಭಾಷಾ ಚಿತ್ರೋದ್ಯಮಗಳಲ್ಲೂ ಈ ಬೆಳವಣಿಗೆ ಆಗಿದೆ, ಆಗುತ್ತಿದೆ.

ಕಿರುತೆರೆಯ ಬೆನ್ನಲ್ಲೇ ಒಟಿಟಿ ತಾಣಗಳು. ಇದು ಚಿತ್ರರಂಗದ ಪಾಲಿಗೆ ವರವೂ ಆಗಿದೆ, ಶಾಪವೂ ಆಗಿದೆ ಎನ್ನುವವರಿದ್ದಾರೆ. ಅದರ ಹಿಂದೆ ಎರಡೂ ಕಡೆಯ ವ್ಯಾವಹಾರಿಕ ಸತ್ಯಗಳಿವೆ. ಚಿತ್ರವೊಂದರ ನಿರ್ಮಾಣದ ವೇಳೆ, ಚಿತ್ರದ ಕಡೆಗಿನ ಗಮನಕ್ಕಿಂತ, ಅದು ಬಿಡುಗಡೆಗೆ ಮುನ್ನ ಆಡಿಯೋ ಹಕ್ಕು, ಪ್ರಸಾರದ ಹಕ್ಕು, ಡಿಜಿಟಲ್ ಹಕ್ಕು. ಹೀಗೆ ಎಷ್ಟು ವ್ಯಾಪಾರ ಆಗಬಹುದು, ಎಷ್ಟು ಲಾಭ  ಬಿಡುಗಡೆಗೆ ಮೊದಲು ಆಗಬಹುದು ಎನ್ನುವ ಲೆಕ್ಕಾಚಾರ ಮಾಡುವ ಮಂದಿಯೇ ಹೆಚ್ಚು. ಒಂದೊಳ್ಳೆಯ ಚಿತ್ರ ಎನ್ನುವ ಗುರಿಗಿಂತ, ಅದರ ವ್ಯಾಪಾರ, ಲಾಭಗಳ ಲೆಕ್ಕಾಚಾರದಲ್ಲಿ ಮೂಲ ಮರೆಯುವವರ ಸಂಖ್ಯೆಯೇ ಹೆಚ್ಚು.

ಒಟಿಟಿ ತಾಣಗಳ ಪ್ರಾಬಲ್ಯ ಹೆಚ್ಚಿದ್ದು ಕೊರೊನಾ ದಿನಗಳಲ್ಲಿ. ಮನೆಯಲ್ಲೇ ಕುಳಿತುಕೊಳ್ಳಬೇಕಾಗಿದ್ದ ದಿನಗಳವು. ಮನರಂಜನೆಗಾಗಿ ಇದ್ದ ಏಕೈಕ ಆಯ್ಕೆ. ಒಟಿಟಿ ತಾಣಗಳು. ಎಲ್ಲ ಭಾಷೆಗಳ, ಎಲ್ಲ ದೇಶಗಳ ಚಿತ್ರಗಳನ್ನು ಮನೆಯಲ್ಲೇ ಕುಳಿತು ನೋಡಲು ಸಿಕ್ಕ ಅವಕಾಶ. ಇದರಿಂದ ಕನ್ನಡ ಚಿತ್ರಗಳನ್ನು ಇತರ ಭಾಷೆಗಳ ಚಿತ್ರಗಳ ಜೊತೆ ಹೋಲಿಸಿಕೊಳ್ಳುವ ಅವಕಾಶ ಮನೆಯಲ್ಲಿ ವೀಕ್ಷಕರಾಗಿದ್ದ ಸಿನಿಮಾ ಪ್ರೇಕ್ಷಕರ ಪಾಲಿಗೆ ಬಂತು. ಮುಂದೆ ಅವರ ಆಯ್ಕೆಗೆ ಅಳತೆಗೋಲೂ ಆಯಿತು. ಬೇರೆ ಭಾಷೆಗಳ ಚಿತ್ರಗಳ ಜೊತೆ ಕನ್ನಡ ಚಿತ್ರಗಳ ಗುಣಮಟ್ಟವನ್ನು ಹೋಲಿಸುವ ಮನೋಧರ್ಮವೂ ಹೆಚ್ಚಾಯಿತು. ಅಷ್ಟೇ ಅಲ್ಲ, ಚಿತ್ರ ಮಂದಿರಗಳಿಗೆ ಹೋಗುವುದಕ್ಕಿಂತ ಮನೆಯಲ್ಲೇ ಒಟಿಟಿ ತಾಣಗಳ ಮೂಲಕವೋ, ಇಲ್ಲವೇ ವಾಹಿನಿಗಳಲ್ಲಿ ಪ್ರಸಾರ ಆದಾಗಲೇ ಅವನ್ನು ನೋಡಬಹುದು ಎನ್ನುವ ಮನೋಭಾವನೆ ಕೂಡ ಚಿತ್ರಮಂದಿರಗಳಿಂದ ಪ್ರೇಕ್ಷಕರನ್ನು ದೂರಮಾಡುವಲ್ಲಿ ಬಹುದೊಡ್ಡ ಪಾತ್ರ ವಹಿಸಿತು.

ಕೆಲವು ಕಿರುತೆರೆ ವಾಹಿನಿಗಳು ಅವುಗಳದೇ ಆದ ಒಟಿಟಿ ತಾಣಗಳನ್ನು ಹೊಂದಿವೆ. ಮೊದಲ ಸ್ಥಾನದಲ್ಲಿದೆ ಎನ್ನಲಾಗಿರುವ ವಾಹಿನಿ ಘಛಿಛಿ ತನ್ನದೇ ಆದ ಘಛಿಛಿ೫ ಒಟಿಟಿ ತಾಣ ಹೊಂದಿದ್ದು, ಅದೀಗ ಬೇರೆಬೇರೆ ಭಾಷೆಗಳಿಗೆ ಪ್ರತ್ಯೇಕ ತಾಣಗಳನ್ನು ಆರಂಭಿಸಿದೆ. ಕನ್ನಡ Zee ಕನ್ನಡ ವೆಬ್ ಸರಣಿಗಳನ್ನು ಪ್ರಸಾರ ಮಾಡಲಾರಂಭಿಸಿದೆ.

‘ಅಯ್ಯನ ಮನೆ’ ಸರಣಿಗೆ ಒಳ್ಳೆಯ ಉತ್ತೇಜನ ದೊರಕಿದ್ದು, ಮುಂದಿನ ವಾರ ‘ಶೋಧ’ ಸರಣಿ ಪ್ರಸಾರ ಆಗಲಿದೆ. ಸ್ಥಳೀಯ ಸಂಸ್ಕೃತಿ ಆಚರಣೆಗಳ ಹಿನ್ನೆಲೆಯಲ್ಲಿ ಈ ವೆಬ್ ಸರಣಿಗಳು ಇರಲಿವೆ ಎನ್ನುವುದು ಸ್ವಾಗತಾರ್ಹ ಬೆಳವಣಿಗೆ. ಹೆಸರಾಂತ ನಿರ್ಮಾಣ ಸಂಸ್ಥೆಗಳು ವೆಬ್ ಸರಣಿಯತ್ತಲೂ ಮುಖ ಮಾಡಿವೆ. ‘ಶೋಧ’ವನ್ನು ಕೆಆರ್‌ಜಿ ಸಂಸ್ಥೆ ನಿರ್ಮಿಸಿದ್ದು, ಪಿಆರ್‌ಕೆ ಸಂಸ್ಥೆ ಸೇರಿದಂತೆ ಹಲವು ಪ್ರತಿಷ್ಠಿತ ಸಂಸ್ಥೆಗಳು ಇತ್ತಲೂ ಗಮನ ಹರಿಸಿವೆ. ಇದು ಪರಸ್ಪರ ಅನುಕೂಲಕರ ಕೂಡ. ಕನ್ನಡ ಒಟಿಟಿ ತಾಣಕ್ಕೆ ಚಂದಾದಾರರು ಹೆಚ್ಚಾದಂತೆ ಕಡಿಮೆ ವೆಚ್ಚದ ಕನ್ನಡ ಚಿತ್ರಗಳನ್ನು ಕೊಂಡುಕೊಳ್ಳಲು ಅದು ಹೆಚ್ಚು ಸಮರ್ಥವಾಗಬಹುದು.

ಇದರ ಬೆನ್ನಲ್ಲೇ ಇನ್ನೊಂದು ವಾಹಿನಿಯನ್ನು ನಾಳೆಯಿಂದ ಪ್ರಾರಂಭಿಸಲಿದೆ. Zee ಪವರ್ ಅದರ ಹೆಸರು. ಅದರ ಪ್ರಕಟಣೆಯ ಪ್ರಕಾರ, ಇದು ಕೇವಲ ವಾಹಿನಿಯಲ್ಲ ಕಲ್ಪನೆ, ನಿಜಜೀವನ ಮತ್ತು ಕರುನಾಡಿನ ಸಂಸ್ಕೃತಿಯನ್ನು ಒಳಗೊಂಡ ವಾಹಿನಿಯಾಗಿರಲಿದೆ. ಪ್ರಬಲ ಕಥಾನಾಯಕರು ಮತ್ತು ಕಥಾನಾಯಕಿಯರಿರುವ ಧಾರಾವಾಹಿಗಳು, ಸಮಾಜವನ್ನು ತಲುಪುವ ವಾಸ್ತವ ಕಾರ್ಯಕ್ರಮಗಳು, ಮಹಿಳಾ ಪ್ರಧಾನ ಧಾರಾವಾಹಿಗಳು, ಬ್ಲಾಕ್ ಬಸ್ಟರ್ ಸಿನಿಮಾಗಳು, ಹಬ್ಬ ಮತ್ತು ವಿಶೇಷ ಕಾರ್ಯಕ್ರಮಗಳೊಂದಿಗೆ ಜೀ ಪವರ್ ಆಧುನಿಕ ಕನ್ನಡಿಗರ ನೆಚ್ಚಿನ ವಾಹಿನಿಯಾಗಲಿದೆ.

ಕನ್ನಡದ ಕಿರುತೆರೆ ವಾಹಿನಿಗಳಲ್ಲಿ ಈಗ ಪ್ರಸಾರ ಆಗುವ ಸರಣಿಗಳಿರಲಿ, ಇತರ ರಿಯಾಲಿಟಿ ಪ್ರದರ್ಶನಗಳಿರಲಿ, ಹೆಚ್ಚಿನವು ಒಂದೋ ಇತರ ಭಾಷೆಗಳಲ್ಲಿ ಜನಪ್ರಿಯವಾದ ಸರಣಿಗಳ ರಿಮೇಕ್‌ಗಳು, ಇಲ್ಲವೇ, ಅವುಗಳ ಡಬ್ಬಿಂಗ್ ಅವತರಣಿಕೆಗಳು. ನಾಳೆ ಆರಂಭವಾಗಲಿರುವ ಹೊಸ ವಾಹಿನಿ ‘ಕರುನಾಡಿನ ಸಂಸ್ಕೃತಿ’ಯನ್ನು ಒಳಗೊಂಡ ಸರಣಿ, ಕಾರ್ಯಕ್ರಮಗಳತ್ತ ಗಮನ ಕೊಡುತ್ತದೋ, ಅಥವಾ ಉಳಿದ ವಾಹಿನಿಗಳ ದಾರಿಯಲ್ಲಿ ಹೋಗುತ್ತದೋ ಎನ್ನುವುದನ್ನು ಮುಂದಿನ ದಿನಗಳು ಹೇಳಲಿವೆ.

ಯಾವುದೇ ಚಿತ್ರ ಗೆಲ್ಲಲು ಅದರ ಚಿತ್ರಕಥೆ ಮುಖ್ಯ, ಅದೇ ಚಿತ್ರದ ನಾಯಕ ಎನ್ನುವವರಲ್ಲಿ ಈಗ ಸುದ್ದಿಯಲ್ಲಿರುವ, ‘ಸು ಫ್ರಂ ಸೋ’ ಚಿತ್ರದ ನಟ, ನಿರ್ಮಾಪಕ ರಾಜ್ ಬಿ. ಶೆಟ್ಟಿ ಮಲೆಯಾಳ ಚಿತ್ರಗಳಲ್ಲೂ ನಟಿಸಿದ್ದಾರೆ. ಅಲ್ಲಿ ಚಿತ್ರಕಥೆಗೆ ನೀಡುವ ಮಹತ್ವ, ಅದಕ್ಕಾಗಿ ನಡೆಯುವ ಚರ್ಚೆ ಇವುಗಳನ್ನು ಗಮನಿಸಿ, ಇಲ್ಲೂ ಚಿತ್ರಕಥಾ ಕಮ್ಮಟದ ಯೋಚನೆ ಮಾಡಿದ್ದರು. ಮಲೆಯಾಳ ಚಲನಚಿತ್ರ ಕಲಾವಿದರ ಸಂಘದ ಚುನಾವಣೆ ಕಳೆದ ವಾರ ನಡೆಯಿತು. ಇದೇ ಮೊದಲ ಬಾರಿಗೆ ಮಹಿಳೆಯೊಬ್ಬರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಪ್ರಧಾನ ಕಾರ್ಯದರ್ಶಿ, ಖಜಾಂಚಿ ಕೂಡ ಮಹಿಳೆಯರೇ. ೨೦೧೭ರಲ್ಲಿ ನಟಿಯೊಬ್ಬರ ಮೇಲೆ ನಡೆದ ಲೈಂಗಿಕ ಹಗರಣ, ಅದರಲ್ಲಿ ನಟರೊಬ್ಬರ ಪ್ರಸ್ತಾಪದ ನಂತರ, ಅಲ್ಲಿನ ಚಿತ್ರೋದ್ಯಮದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯರು ‘ವಿಮೆನ್ ಇನ್ ಸಿನಿಮಾ ಕಂಬೈನ್’ ಹೆಸರಿನಲ್ಲಿ ಸಂಘಟನೆಯೊಂದನ್ನು ಆರಂಭಿಸಿದ್ದರು. ಅದು ಮಹಿಳೆಯರ ಸಮಸ್ಯೆಗಳ ಕುರಿತಂತೆ ಗಮನ ಹರಿಸಲು ಸರ್ಕಾರದ ಮುಂದೆ ಬಂತು. ಸರ್ಕಾರ ನ್ಯಾಯಮೂರ್ತಿ ಹೇಮಾ ಅಧ್ಯಕ್ಷತೆಯ ಸಮಿತಿಯೊಂದನ್ನು ನೇಮಿಸಿತು. ಅದು ನೀಡಿದ ವರದಿ ಮತ್ತು ಮುಂದಿನ ಬೆಳವಣಿಗೆ ಮಲಯಾಳ ಚಿತ್ರರಂಗದ ಇನ್ನೊಂದು ಮುಖವನ್ನು ಅನಾವರಣ ಮಾಡಿತ್ತು.

ಅದಕ್ಕೂ ಮೊದಲು ಬಹಳಷ್ಟು ಮಂದಿ ನಟಿಯರು ಕಲಾವಿದರ ಸಂಘದಿಂದ ಹೊರಬಂದಿದ್ದರು. ಈಗ ನಟಿಯೊಬ್ಬರು ಅದರ ಅಧ್ಯಕ್ಷರಾಗಿದ್ದು, ಅವರು ಸಂಘಟನೆಯನ್ನು ಹೇಗೆ ಮುನ್ನಡೆಸುತ್ತಾರೆ ನೋಡಬೇಕು. ಹಿಂದಿನ ಅಧ್ಯಕ್ಷರಾಗಿದ್ದ ಮೋಹನ್‌ಲಾಲ್ ಮತ್ತು ಹಿರಿಯ ನಟರಾದ ಮಮ್ಮುಟಿ ಅವರು ಹೊಸ ಆಡಳಿತ ವರ್ಗಕ್ಕೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಪ್ರಕಟಿಸಿದ್ದಾರೆ. ಅಲ್ಲಿ ಅಶಕ್ತ ಕಲಾವಿದರಿಗೆ ಪ್ರತಿ ತಿಂಗಳೂ ೫೦೦೦ ರೂ.ಗಳಂತೆ ಕಲಾವಿದರ ಸಂಘ ನೀಡುತ್ತಿದೆ. ಅಷ್ಟೇ ಅಲ್ಲ, ಅವರು ಆಸ್ಪತ್ರೆಗೆ ದಾಖಲಾದರೆ ಅವರ ಚಿಕಿತ್ಸಾ ವೆಚ್ಚವನ್ನು ಅದು ಭರಿಸುತ್ತದೆ. ಅಶಕ್ತ ಕಲಾವಿದರಿಗೆ ನೀಡುವ ಮಾಸಿಕ ನೆರವಿಗೆ ಬೇಕಾದ ಮೂಲಧನ ಅಲ್ಲಿದೆ. ಆದರೆ ಚಿಕಿತ್ಸಾ ವೆಚ್ಚಕ್ಕೆ ಬೇಕಾದ ಮೊತ್ತಕ್ಕೆ ಮೂಲಧನ ಇಲ್ಲ. ಇದನ್ನೆಲ್ಲ ಹೇಗೆ ಹೊಂದಿಸುತ್ತಾರೆ ಎನ್ನುವ ಪ್ರಶ್ನೆ ಅಲ್ಲಿ ಎದ್ದಿದೆ. ಕಲಾವಿದರ ಸಂಘ ಮಾತ್ರವಲ್ಲ, ಇತರ ಸಂಘಟನೆಗಳೂ ಅಲ್ಲಿ ಸಕ್ರಿಯವಾಗಿವೆ. ನಮ್ಮಲ್ಲಿ ಕಲಾವಿದರ ಸಂಘ ಇದೆ, ಕಟ್ಟಡ ಇದೆ. ಅದು ಸಕ್ರಿಯವಾಗಿ ಕೇರಳದ ಸಂಘದಂತೆ ಆಗಲು ಸಾಧ್ಯವೇ?

” ಹಿಂದೆ ರಂಗಭೂಮಿ ಬೆಳ್ಳಿತೆರೆಗೆ ಚಿಮ್ಮು ಹಲಗೆಯಾಗಿತ್ತು. ಅಲ್ಲಿನ ಅನುಭವ ಇಲ್ಲಿ ಶ್ರೀರಕ್ಷೆಯಾಗಿತ್ತು. ಅಷ್ಟೇ ಏಕೆ, ಸಿನಿಮಾ ಎಂದರೆ ರಂಗಭೂಮಿಯ ವಿಸ್ತರಣೆಯಂತೆಯೇ ಆರಂಭದ ದಿನಗಳಲ್ಲಿತ್ತು. ಈಗ ಕಿರುತೆರೆ ಬಹಳಷ್ಟು ಮಂದಿಗೆ ಬೆಳ್ಳಿತೆರೆಗೆ ಕಾಲಿಡಲು ಚಿಮ್ಮುಹಲಗೆ ಆಗಿದೆ.”

ವೈಡ್‌ ಆಂಗಲ್‌ 
-ಬಾ.ನಾ.ಸುಬ್ರಹ್ಮಣ್ಯ 

Tags:
error: Content is protected !!