ಮಂಡ್ಯ : ಶಿಕ್ಷಣದಲ್ಲಿ ದ್ವಿ ಭಾಷಾ ನೀತಿಯನ್ನ ಜಾರಿಗೆ ತರುವ ಮೂಲಕ ಕನ್ನಡ ಭಾಷೆಯ ಬಳಕೆ, ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ವಿಶ್ರಾಂತ ಆಂಗ್ಲಬಾಷಾ ಪ್ರಾಧ್ಯಾಪಕಿ ಶ್ರೀದೇವಿ ಹೇಳಿದರು.
ನಗರದ ಸ್ವರ್ಣಸಂದ್ರದ ಎಇಟಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಭೂಮಿ ಬೆಳಗು ಸಾಂಸ್ಕೃತಿಕ ಸಂಘ ಆಯೋಜಿಸಿದ್ದ ‘ದ್ವಿಭಾಷಾ ನೀತಿಯ ಅನಿವಾರ್ಯತೆ’ ಕುರಿತ ವಿಚಾರ ಮಂಥನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ದ್ವಿಭಾಷಾ ನೀತಿಯನ್ನು ಕಡ್ಡಾಯಗೊಳಿಸುವುದರಿಂದ ಪ್ರತಿಯೊಬ್ಬರೂ ಶಿಕ್ಷಣದಲ್ಲಿ ಕನ್ನಡವನ್ನು ಕಲಿಯಬೇಕೆಂದು ಕಡ್ಡಾಯಗೊಳಿಸುತ್ತದೆ ಎಂದು ಅಭಿಪ್ರಾಯಪಟ್ಟರು.
ತ್ರಿಭಾಷಾ ನೀತಿಯಿಂದ ಮಕ್ಕಳಿಗೆ ಮಾನಸಿಕ ಒತ್ತಡ ಉಂಟಾಗುತ್ತಿದ್ದು, ದ್ವಿ ಭಾಷಾ ನೀತಿಯು ಮಕ್ಕಳ ಆರೋಗ್ಯದ ದೃಷ್ಟಿಯಿಂದಲೂ ಉಪಯುಕ್ತವಾಗುತ್ತದೆ. ಇದರಿಂದ ಕನ್ನಡ ಭಾಷೆಯ ಬಳಕೆ ಮತ್ತೆ ಅಧ್ಯಯನವನ್ನು ಪ್ರೋತ್ಸಾಹಿ ಸಿದಂತಾಗುತ್ತದೆ ಎಂದರು.
ಚಿಂತಕ ಡಾ.ಕೆ.ಪಿ.ನಟರಾಜ್ ಅವರು ವಿಚಾರ ಮಂಡನೆ ಮಾಡಿ, ತ್ರಿಭಾಷಾ ಸೂತ್ರ ಗುಲಾಮಗಿರಿಯ ಸಂಕೇತವಾಗಿದ್ದು, ಇದರಿಂದ ಬಿಡುಗಡೆ ಹೊಂದುವ ಮನಸ್ಥಿತಿ ಕನ್ನಡಿಗರಲ್ಲಿ ಕ್ಷೀಣಿಸುತ್ತಿರುವುದು ವಿಷಾದನೀಯ ಸಂಗತಿ. ಕನ್ನಡಿಗರೆಲ್ಲರೂ ಕೂಡ ದ್ವಿಭಾಷಾ ನೀತಿಯ ಪರವಾಗಿರಬೇಕೆಂದರು.
ಎಇಟಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಶಿವಕುಮಾರ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕನ್ನಡ ಪ್ರಾಧ್ಯಾಪಕ ಎಚ್.ಪಿ.ಧರ್ಮೇಶ್, ಭೂಮಿ ಬೆಳಗು ಸಾಂಸ್ಕೃತಿಕ ಸಂಘದ ಅಧ್ಯಕ್ಷ ಮಂಗಲ ಎಂ.ಯೋಗೀಶ್, ಸಹಾಯಕ ಪ್ರಾಧ್ಯಾಪಕರುಗಳಾದ ಸುಕೇಶ್, ದಯಾನಂದ್, ಮೋಹನ್‌ದಾಸ್, ವಾಣಿ, ರಕ್ಷಿತಾ ಮತ್ತಿತರರು ಹಾಜರಿದ್ದರು.





