ಸರಗೂರು ತಾಲ್ಲೂಕಿನ ನಂಜೀಪುರ, ಕಲ್ಲಂಬಾಳು, ಕಟ್ಟೆಹುಣಸೂರು, ಕುಂದೂರು, ದಡದಹಳ್ಳಿ ಮತ್ತು ಕಡಜೆಟ್ಟಿ ಮುಂತಾದ ಗ್ರಾಮಗಳ ನಡುವೆ ವರ್ಷಪೂರ್ತಿ ಹರಿಯುವ ನುಗು ಹೊಳೆಗೆ ಅಡ್ಡಲಾಗಿ ಕೆಳದರ್ಜೆಯ ಚಿಕ್ಕ ಸೇತುವೆ ನಿರ್ಮಿಸಲಾಗಿದ್ದು, ಅಲ್ಪಸ್ವಲ್ಪ ಮಳೆಯಾದರೂ ಸೇತುವೆ ಮುಳುಗಡೆಯಾಗಿ ಅಕ್ಕ ಪಕ್ಕದಲ್ಲಿರುವ ಜಮೀನುಗಳಿಗೆ ನೀರು ನುಗ್ಗಿ ಬೆಳೆ ನಷ್ಟವಾಗುತ್ತಿದೆ.
ಅಲ್ಲದೇ ಗ್ರಾಮಗಳು ಸಂಪರ್ಕವನ್ನೇ ಕಳೆದುಕೊಳ್ಳುತ್ತವೆ. ಹಲಸೂರು ಕಟ್ಟೆ ಮತ್ತು ನುಗು ಜಲಾಶಯದಿಂದ ನೀರಿನ ಹೊರ ಹರಿವಿನ ಪ್ರಮಾಣವನ್ನು ಹೆಚ್ಚಿಸಿದರೆ ಸೇತುವೆ ಮುಳುಗಡೆಯಾಗಿ ಜನ ಜೀವನ ಅಸ್ತವ್ಯಸ್ತವಾಗುತ್ತದೆ. ಸೇತುವೆ ಮುಳುಗಡೆಯಾದರೆ ಈ ಭಾಗದ ವಿದ್ಯಾರ್ಥಿಗಳು ಹುಲ್ಲಹಳ್ಳಿಯಲ್ಲಿರುವ ಶಾಲೆಗಳಿಗೆ ತೆರಳಲು ಸಾಧ್ಯವಾಗುವುದಿಲ್ಲ. ಈ ಗ್ರಾಮಗಳಿಗೆಲ್ಲ ಈ ಸೇತುವೆಯೇ ಸಂಪರ್ಕ ಕೊಂಡಿಯಾಗಿದ್ದು, ವಿದ್ಯಾರ್ಥಿಗಳು, ವ್ಯಾಪಾರಸ್ಥರು, ಕೂಲಿ ಕಾರ್ಮಿಕರು, ಸಾರ್ವಜನಿಕರು, ವಾಹನ ಸವಾರರು ಹಾಗೂ ರೈತರ ದಿನನಿತ್ಯದ ಕೃಷಿ ಚಟುವಟಿಕೆಗಳಿಗೆ ಅನನುಕೂಲವಾಗಿದೆ.
ಈ ಸೇತುವೆ ಸಂಪರ್ಕಕ್ಕೆ ಇರುವ ರಸ್ತೆಗಳು ಕೂಡ ಮಳೆಗಾಲದಲ್ಲಿ ಕೆಸರುಮಯವಾಗಿದ್ದು, ಅದೆಷ್ಟೋ ವಾಹನ ಸವಾರರು ಆಯತಪ್ಪಿ ಬಿದ್ದು ಗಾಯಗೊಂಡಿದ್ದಾರೆ. ಸಂಬಂಧಪಟ್ಟವರು ಕೂಡಲೇ ಈ ಸೇತುವೆಯನ್ನು ಮೇಲ್ದರ್ಜೆಗೇರಿಸುವುದರೊಂದಿಗೆ ಸಂಪರ್ಕ ರಸ್ತೆಗಳನ್ನು ದುರಸ್ತಿ ಮಾಡುವ ಮೂಲಕ ಗ್ರಾಮಸ್ಥರ ಸಮಸ್ಯೆಯನ್ನು ನಿವಾರಿಸಲು ಕ್ರಮ ಕೈಗೊಳ್ಳಬೇಕಾಗಿದೆ.
– ಪರಶಿವಮೂರ್ತಿ ಎನ್.ಪಿ. , ನಂಜೀಪುರ, ಸರಗೂರು ತಾ





