Mysore
25
light rain

Social Media

ಸೋಮವಾರ, 26 ಜನವರಿ 2026
Light
Dark

1116 ಪರದೆಗಳಲ್ಲಿ ಕಿರೀಟಿ ಅಭಿನಯದ ‘ಜೂನಿಯರ್‌’ ಬಿಡುಗಡೆ

ಗಾಲಿ ಜನಾರ್ಧನ ರೆಡ್ಡಿ ಮಗ ಕಿರೀಟಿ ಅಭಿನಯದ ಮೊದಲ ಚಿತ್ರ ‘ಜೂನಿಯರ್‌’, ಜುಲೈ 18ರಂದು ಬಿಡುಗಡೆಯಾಗಲಿದೆ. ಚಿತ್ರವು ಕನ್ನಡ, ತೆಲುಗು ಮತ್ತು ತಮಿಳಿನಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿದ್ದು, ಚಿತ್ರವನ್ನು ದೊಡ್ಡ ಮಟ್ಟದಲ್ಲಿ ಬಿಡುಗಡೆ ಮಾಡುವುದಕ್ಕೆ ಚಿತ್ರತಂಡ ಸಜ್ಜಾಗಿದೆ.

ಹೊಸ ನಾಯಕನೊಬ್ಬನ ಚಿತ್ರವನ್ನು ಇದೇ ಮೊದಲ ಬಾರಿಗೆ ದಾಖಲೆಯ 1116 ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಕರ್ನಾಟಕದ ಜೊತೆಗೆ ಆಂಧ್ರ ಪ್ರದೇಶ, ತೆಲಂಗಾಣ ಮತ್ತು ತಮಿಳುನಾಡಿನಲ್ಲೂ ಚಿತ್ರ ಬಿಡುಗಡೆಯಾಗುತ್ತಿದೆ. ಬೆಂಗಳೂರಿನ ತ್ರಿವೇಣಿ ಸೇರಿದಂತೆ ನೂರಾರು ಚಿತ್ರಮಂದಿರಗಳಲ್ಲಿ ‘ಜೂನಿಯರ್‌’ ಬಿಡುಗಡೆಯಾಗುತ್ತಿದೆ.

‘ಜೂನಿಯರ್‌’ ಚಿತ್ರದಲ್ಲಿ ಕಿರೀಟಿಗೆ ಶ್ರೀಲೀಲಾ ನಾಯಕಿಯಾಗಿ ನಟಿಸಿದ್ದಾರೆ. ಮಿಕ್ಕಂತೆ ರವಿಚಂದ್ರನ್‍, ಜೆನಿಲಿಯಾ ಡಿಸೋಜ ಮುಂತಾದವರು ನಟಿಸಿದ್ದಾರೆ. ಇದೊಂದು ತಂದೆ-ಮಗನ ಬಾಂಧವ್ಯದ ಚಿತ್ರವಾಗಿದ್ದು, ರವಿಚಂದ್ರನ್ ಮತ್ತು ಕಿರೀಟಿ ತಂದೆ-ಮಗನಾಗಿ ಕಾಣಿಸಿಕೊಂಡಿದ್ದಾರೆ.

ಈ ಚಿತ್ರದ ಕುರಿತು ಮಾತನಾಡುವ ಕಿರೀಟ, ‘ನನಗೆ ಅಪ್ಪು ಅವರ ‘ಜಾಕಿ’ ಚಿತ್ರ ನಟನಾಗಲು ಸ್ಫೂರ್ತಿ ಕೊಟ್ಟಿತು. ಹೀರೋ ಆಗು ಎಂದು ಪುನೀತ್‍ ರಾಜಕುಮಾರ್‌ ನನ್ನನ್ನು ಪ್ರೇರೇಪಿಸಿದರು. ಅವರ ಜೊತೆಗೆ ಹಲವು ದಿನಗಳ ಕಾಲ ಕಳೆದಿದ್ದೇನೆ. ಅವರಿಂದ ತುಂಬಾ ಕಲಿತಿದ್ದೇನೆ. ‘ಜೇಮ್ಸ್’ ಚಿತ್ರದ ಚಿತ್ರೀಕರಣ ಅರಮನೆ ಮೈದಾನದಲ್ಲಿ ನಡೆಯುವಾಗ, ಸುಮಾರು 10 ದಿನಗಳ ಕಾಲ ನಾನು ಅವರ ಜೊತೆಗೆ ಇದ್ದೆ’ ಎಂದರು.

ಪುನೀತ್ ರಾಜಕುಮಾರ್ ನಿರ್ಮಿಸಿದ್ದ ‘ಮಾಯಾಬಜಾರ್’ ಸಿನಿಮಾದ ನಿರ್ದೇಶಕ ರಾಧಾಕೃಷ್ಣ ರೆಡ್ಡಿ ಈ ಚಿತ್ರಕ್ಕೆ ಕಥೆ-ಚಿತ್ರಕಥೆ ಬರೆದು ನಿರ್ದೇಶಿಸಿದ್ದು, ‘ಬಾಹುಬಲಿ’ ಮತ್ತು ‘RRR’ ಚಿತ್ರಗಳಿಗೆ ಛಾಯಾಗ್ರಹಣ ಮಾಡಿದ್ದ ಸೆಂಥಿಲ್‍ ಕುಮಾರ್‌ ಛಾಯಾಗ್ರಹಣ ಮಾಡಿದ್ದಾರೆ. ಇನ್ನು, ತೆಲುಗಿನ ಜನಪ್ರಿಯ ಸಂಗೀತ ನಿರ್ದೇಶಕ ದೇವಿ ಶ್ರೀ ಪ್ರಸಾದ್‍ ಅಲಿಯಾಸ್‍ ಡಿಎಸ್‍ಪಿ ಈ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ.

Tags:
error: Content is protected !!