ಎಚ್.ಡಿ.ಕೋಟೆ: ಪುರಸಭೆ ಅಧಿಕಾರಿಗಳ ಬೇಜವಾಬ್ದಾರಿಯಿಂದ ಕೋಟ್ಯಂತರ ರೂ. ಅನುದಾನದ ಕೆಲಸ ಕಾರ್ಯಗಳು ನಡೆಯದೆ ಮತ್ತು ಮೂಲಸೌಕರ್ಯಗಳು ದೊರೆಯುತ್ತಿಲ್ಲ ಎಂದು ಆರೋಪಿಸಿ ಪುರಸಭಾ ಸದಸ್ಯ ಮಿಲ್ ನಾಗರಾಜು ಪಟ್ಟಣದಲ್ಲಿ ಅರೆ ಬೆತ್ತಲೆ ಪ್ರತಿಭಟನೆ ನಡೆಸಿದರು.
ಪುರಸಭೆ ಕಚೇರಿಯ ಮುಂಭಾಗದಲ್ಲಿ ಕುಳಿತು, ಚರಂಡಿ ತ್ಯಾಜ್ಯವನ್ನು ಮುಂದೆ ಹರಡಿಕೊಂಡು ಅರೆಬೆತ್ತಲೆಯಾಗಿ ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿ, ಪುರಸಭೆ ವ್ಯಾಪ್ತಿಯ ವಾರ್ಡ್‌ಗಳಲ್ಲಿ ಚರಂಡಿಗಳನ್ನು ಸ್ವಚ್ಛಗೊಳಿಸಿಲ್ಲ ಹಾಗೂ ನೀರುಗಂಟಿಗಳಿಗೆ ಕಳೆದ ಐದು ತಿಂಗಳಿಂದ ವೇತನ ನೀಡಿಲ್ಲ. ಅಮೃತ್ ಯೋಜನೆಯಡಿ 32 ಕೋಟಿ ರೂ. ಅನುದಾನ ಬಂದಿದ್ದರೂ ಕಾಮಗಾರಿ ಪ್ರಾರಂಭಿಸಿಲ್ಲ. ವಾಣಿಜ್ಯ ಮಳಿಗೆಗಳನ್ನು ನಿರ್ಮಾಣ ಮಾಡಲು 4 ಕೋಟಿ ರೂ. ಬಂದಿದ್ದರು ಕ್ರಮ ಕೈಗೊಂಡಿಲ್ಲ ಎಂದು ದೂರಿದರು.
ಪುರಸಭೆ ವ್ಯಾಪ್ತಿಯಲ್ಲಿ ಚರಂಡಿಗಳು ಸ್ವಚ್ಛತೆ ಕಾಣದೆ ಅನೈರ್ಮಲ್ಯ ಉಂಟಾಗಿದೆ. ರಸ್ತೆಗಳಲ್ಲಿ ಕೊಳಚೆ ನೀರು ಹರಿಯುತ್ತಿದೆ. ಈ ಕುರಿತು ಗಮನ ಸೆಳೆದು, ಪಟ್ಟಣದಲ್ಲಿ ಮೂಲಸೌಕರ್ಯ ಕಲ್ಪಿಸುವಂತೆ ಹಲವು ಬಾರಿ ಪುರಸಭೆ ಮುಖ್ಯಾಧಿಕಾರಿಗೆ ಮನವಿ ಮಾಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಅವರ ಸ್ವಂತ ಮತ್ತು ಲಾಭದ ಕೆಲಸಗಳಿಗೆ ಮಾತ್ರ ಇಲ್ಲಿನ ಅಧಿಕಾರಿಗಳು ಒತ್ತು ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಮಳೆಗಾಲವಾದ್ದರಿಂದ ಕೊಳಚೆ ನೀರು ಚರಂಡಿಯಲ್ಲಿ ತುಂಬಿ ರಸ್ತೆಯಲ್ಲಿ ಹರಿಯುತ್ತಿದೆ. ನಿವಾಸಿಗಳು ಆ ನೀರನ್ನೇ ತುಳಿದುಕೊಂಡು ತಿರುಗಾಡುತ್ತಿದ್ದಾರೆ. ಸೊಳ್ಳೆಗಳ ಕಾಟ ಹೆಚ್ಚಾಗಿದ್ದು, ರೋಗ ರುಜಿನಗಳು ಹರಡಿದರೆ ಯಾರು ಹೊಣೆ? ಕೂಡಲೇ ಮೇಲಧಿಕಾರಿಗಳು ಇತ್ತ ಗಮನಹರಿಸಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿ ಮಾತನಾಡಿದ ಪುರಸಭೆ ಸದಸ್ಯ ಐಡಿಯಾ ವೆಂಕಟೇಶ್, ಟೌನ್ ವ್ಯಾಪ್ತಿಯಲ್ಲಿ 23 ವಾರ್ಡ್‌ಗಳಿದ್ದು, ನೀರು ಸರಬರಾಜು ಸಹಾಯಕರ ಟೆಂಡರ್ ಕಳೆದ ಫೆಬ್ರವರಿಯಲ್ಲಿ ಮುಗಿದಿದೆ. ಹೊಸ ಟೆಂಡರ್ ಕರೆಯದೆ ಈಗಿರುವ ಸಹಾಯಕರ ಅವಧಿ ವಿಸ್ತರಿಸಿ ವೇತನ ಪಾವತಿಸುವುದಾಗಿ ಪುರಸಭೆ ಮುಖ್ಯಾಧಿಕಾರಿ ಸುರೇಶ್ ಸುಳ್ಳು ಹೇಳುತ್ತಿದ್ದಾರೆ. ವೇತನ ನೀಡಿಕೆಯಲ್ಲಿ ವಿಳಂಬವಾದ್ದರಿಂದ ವಾರ್ಡ್‌ಗಳಿಗೆ ನೀರು ಸರಬರಾಜಾಗದ ಕಾರಣ ವಾರ್ಡಿನ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಇವರು ನಡೆಸಿರುವ ಹಗರಣಗಳ ಬಗ್ಗೆಯೂ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗೆ ದೂರು ನೀಡಲಾಗುವುದು ಎಂದು ತಿಳಿಸಿದರು.
ಭೀಮನಹಳ್ಳಿ ಸೋಮೇಶ್, ನಾಗೇಗೌಡ, ಉಮೇಶ್, ರಾಜಮ್ಮ ಮುಂತಾದವರು ಹಾಜರಿದ್ದರು.




