ಮೈಸೂರು : ಕರ್ನಾಟಕ ಹಾಜರಾತಿ ನಿರ್ವಹಣಾ ವ್ಯವಸ್ಥೆ (ಕೆಎಎಂಎಸ್) ಮೂಲಕ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಜಿಲ್ಲೆಯ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರ (ಪಿಎಚ್‌ಸಿ)ಗಳಲ್ಲಿ ವೈದರೂ ಸೇರಿದಂತೆ ಸಿಬ್ಬಂದಿಗೆ ಮೊಬೈಲ್ ಹಾಜರಾತಿ ವ್ಯವಸ್ಥೆಯನ್ನು ಜಾರಿಗೊಳಿಸಿದೆ.
ಗ್ರಾಮೀಣ ಪ್ರದೇಶದ ಪಿಎಚ್‌ಸಿಗಳಲ್ಲಿ ವೈದ್ಯರು ಹಾಗೂ ಸಿಬ್ಬಂದಿ ಕೆಲಸದ ಅವಧಿಯಲ್ಲಿ ನಾಪತ್ತೆ ಯಾಗಿರುತ್ತಾರೆ ಎಂಬ ಸಾರ್ವಜನಿಕರ ದೂರುಗಳ ಹಿನ್ನೆಲೆಯಲ್ಲಿ ಕೆಎಎಂಎಸ್ ಮೊಬೈಲ್ ಹಾಜರಾತಿ ವ್ಯವಸ್ಥೆಯನ್ನು ಕಡ್ಡಾಯಗೊಳಿಸಲಾಗಿದೆ.
ಬಯೋಮೆಟ್ರಿಕ್ ಹಾಜರಾತಿ ಸಮಸ್ಯೆಗೆ ತೆರೆ: ಈಗಾಗಲೇ ವೈದ್ಯರು ಸೇರಿದಂತೆ ಸಿಬ್ಬಂದಿ ಬಳಸುತ್ತಿರುವ ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆಯಲ್ಲಿ ಆಗಾಗ ಸಮಸ್ಯೆ ಕಂಡುಬರುತ್ತಿತ್ತು. ಹಾಗಾಗಿ ಮೊಬೈಲ್ ಆಧಾರಿತ ಹಾಜರಾತಿ ವ್ಯವಸ್ಥೆಯನ್ನು ಜಾರಿಗೊಳಿಸಲು ನಿರ್ಧರಿಸಲಾಗಿದೆ. ಯಾವ ಪ್ರದೇಶದಿಂದ ಹಾಜರಾತಿ ಹಾಕಲಾಗುತ್ತಿದೆ ಎನ್ನುವುದನ್ನೂ ಪತ್ತೆ ಮಾಡುವ ನೂತನ ಯೋಜನೆಯನ್ನು ರಾಜ್ಯ ಸರ್ಕಾರ ಅನುಷ್ಠಾನಗೊಳಿಸಿದೆ.
ಮೂವ್‌ಮೆಂಟ್ ರಿಜಿಸ್ಟರ್ ಪಾಲನೆಗೆ ಸೂಚನೆ: ಕಚೇರಿ ಸಮಯದಲ್ಲಿ ಕರ್ತವ್ಯದ ಕಾರಣಕ್ಕೆ ನ್ಯಾಯಾಲಯದ ಪ್ರಕರಣಗಳ ವಿಚಾರಣೆಗೆ ಹಾಜರು, ಸ್ಥಳ ಪರಿಶೀಲನೆ, ಸರ್ವೆ ಅಂತಹ ಕಾರ್ಯಕ್ಕೂ ತೆರಳಲು ವಿಭಾಗದ ಮುಖ್ಯಸ್ಥರ ಒಪ್ಪಿಗೆ ಪಡೆಯಬೇಕಾಗುತ್ತದೆ. ಇದಕ್ಕಾಗಿ ಆಯಾ ಕಚೇರಿಗಳಲ್ಲಿ ‘ಮೂವ್‌ಮೆಂಟ್ ರಿಜಿಸ್ಟರ್’ ಅನ್ನು ತೆರೆದು ಅದರಲ್ಲಿ ಹೊರ ಹೋಗುವ ಹಾಗೂ ವಾಪಸ್ ಬರುವ ಸಮಯವನ್ನು ನಮೂದಿಸುವಂತೆ ಸೂಚಿಸಲಾಗಿದೆ.
ನಕಲಿ ಹಾಜರಾತಿ ಬಂದ್: ಇತ್ತೀಚೆಗೆ ಕೆಲವು ವೈದ್ಯರು ಹಾಗೂ ಸಿಬ್ಬಂದಿ ಹಾಜರಾತಿಯಲ್ಲಿ ಅಶಿಸ್ತು ಹೆಚ್ಚಾಗಿದೆ ಎಂಬ ಆರೋಪಗಳು ಕೇಳಿಬಂದಿದ್ದವು. ಹಲವೆಡೆ, ವೈದ್ಯರು, ಸಿಬ್ಬಂದಿ ಆಸ್ಪತ್ರೆಯಲ್ಲಿ ಗೈರಾಗಿದ್ದರೂ, ಹಾಜರಾಗಿರುವಂತೆ ತಪ್ಪು ಮಾಹಿತಿ ನೀಡಲಾಗುತ್ತಿತ್ತು. ಈ ಕುರಿತು ಆಸ್ಪತ್ರೆಗೆ ಬಂದಂತಹ ರೋಗಿಗಳು ಹಾಗೂ ಸಾರ್ವಜನಿಕರು ಹಿರಿಯ ಅಽಕಾರಿಗಳಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ, ಪಿಎಚ್‌ಸಿ ವೈದ್ಯರು, ಸಿಬ್ಬಂದಿಗೆ ಮೊಬೈಲ್ ಹಾಜರಾತಿಯನ್ನು ಕಡ್ಡಾಯಗೊಳಿಸಿ ಆದೇಶಿಸಿದ್ದಾರೆ. ಬಹುತೇಕ ಸರ್ಕಾರಿ ಆಸ್ಪತ್ರೆಗಳಲ್ಲಿ ಕೆಲ ವೈದ್ಯರು, ಸಿಬ್ಬಂದಿ ಕರ್ತವ್ಯಕ್ಕೆ ತಡವಾಗಿ ಆಗಮಿಸುವುದು ಹಾಗೂ ಅವಽ ಮುಗಿಯುವ ಮುನ್ನವೇ ನಿರ್ಗಮಿಸುವಂತಹ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿದ್ದು, ರೋಗಿಗಳಿಗೆ ಸರಿಯಾದ ಚಿಕಿತ್ಸೆ ದೊರಕದೇ ಪರದಾಡುತ್ತಿದ್ದು ಖಾಸಗಿ ಆಸ್ಪತ್ರೆಯತ್ತ ಮುಖ ಮಾಡುತ್ತಾರೆ ಎಂಬ ಆರೋಪಗಳು ಕೇಳಿಬಂದಿವೆ. ಹಾಗಾಗಿ ಇದನ್ನೆಲ್ಲಾ ಅರಿತು ಆರೋಗ್ಯ ಇಲಾಖೆ ಮೊಬೈಲ್ ಆಧಾರಿತ ಹಾಜ ರಾತಿಯನ್ನು ಅನುಷ್ಠಾನಗೊಳಿಸಿದೆ.
– ಪ್ರಶಾಂತ್ ಎಸ್.





