ಕಳೆದ ವರ್ಷ ನಡೆದ ‘ಬಿಗ್ ಬಾಸ್’ ಕಾರ್ಯಕ್ರಮವೇ ತಮ್ಮ ಕೊನೆಯ ‘ಬಿಗ್ ಬಾಸ್’ ಆಗಿರಲಿದೆ ಎಂದು ಸುದೀಪ್ ಹೇಳಿಕೊಂಡಿದ್ದರು. ಆದರೆ, ‘ಬಿಗ್ ಬಾಸ್’ ಕಾರ್ಯಕ್ರಮದ 12ನೇ ಅವತರಣಿಕೆಯನ್ನು ಸುದೀಪ್ ಈ ವರ್ಷ ನಡೆಸಿಕೊಡುವುದಷ್ಟೇ ಅಲ್ಲ, ಇನ್ನೂ ನಾಲ್ಕು ಸೀಸನ್‍ಗಳ ನಿರೂಪಣೆ ಮಾಡಲಿದ್ದಾರಂತೆ. ನಡೆಸಿಕೊಡುವುದಿಲ್ಲ ಎಂದು ಹೇಳಿದ್ದ ಸುದೀಪ್, ಕಾರ್ಯಕ್ರಮದ ನಿರೂಪಣೆಗೆ ವಾಪಸ್ಸಾಗಿದ್ದೇಕೆ?
ಈ ಕುರಿತು ಇತ್ತೀಚೆಗೆ ಕಾರ್ಯಕ್ರಮದ ಘೋಷಣೆ ಸಂದರ್ಭದಲ್ಲಿ ಮಾತನಾಡಿರುವ ಸುದೀಪ್, ‘ನಾನು ವಾಪಸ್ಸು ಬರುತ್ತಿರುವುದಕ್ಕೆ ಕಾರಣವಿದೆ. ಅದಕ್ಕೆ ಮುಖ್ಯ ಕಾರಣ, ಜನರ ಪ್ರೀತಿ. ಬಹಳಷ್ಟು ಜನ ನಾನು ಕಾರ್ಯಕ್ರಮವನ್ನು ಮುಂದುವರೆಸಬೇಕು ಎಂದು ಆಸೆಪಟ್ಟಿದ್ದಾರೆ. ಕಾರ್ಯಕ್ರಮವನ್ನು ತಂಡ ನಡೆಸಿಕೊಡುತ್ತಿರುವ ರೀತಿ, ಅದು ಬೆಳೆಯುತ್ತಿರುವ ರೀತಿ, ಜನ ಅದನ್ನು ಪ್ರೀತಿಯಿಂದ ನೋಡುತ್ತಿರುವ ರೀತಿ. ಇವೆಲ್ಲವೂ ನಾನು ವಾಪಸ್ಸು ಬರುತ್ತಿರುವುದಕ್ಕೆ ಕಾರಣಗಳು ಎಂದರು.
ಇಷ್ಟಕ್ಕೂ ಸುದೀಪ್ ಕಾರ್ಯಕ್ರಮದಿಂದ ಹೊರನಡೆಯುವುದಕ್ಕೆ ತೀರ್ಮಾನಿಸಿದ್ದು ಯಾಕೆ? ಈ ಕುರಿತು ಮಾತನಾಡಿರುವ ಅವರು, ಬಿಗ್ ಬಾಸ್ ಕಾರ್ಯಕ್ರಮ ಬರೀ ಕನ್ನಡದಲ್ಲಿ ಮಾತ್ರವಲ್ಲ, ಬೇರೆ ಭಾಷೆಗಳಲ್ಲೂ ಪ್ರಸಾರವಾಗುತ್ತಿದೆ. ಬೇರೆ ಭಾಷೆಗಳಲ್ಲಿ ಸ್ಪರ್ಧಿಗಳಿಗೆ ಕೊಡುವ ಸೌಲಭ್ಯ ಇಲ್ಲೂ ಕೊಡಿ ಎಂಬುದು ನನ್ನ ಮೊದಲ ಬೇಡಿಕೆಯಾಗಿತ್ತು. ಕನ್ನಡದ ‘ಬಿಗ್ ಬಾಸ್’ ಒಳ‍್ಳೆಯ ಫಲಿತಾಂಶವನ್ನು ಕೊಟ್ಟಿದೆ. ಟಿಆರ್‌ಪಿಯಲ್ಲಿ ದಾಖಲೆ ಮಾಡಿದೆ. ಹಾಗಾಗಿ, ಇಲ್ಲಿನ ಕಾರ್ಯಕ್ರಮಕ್ಕೂ ಹೆಚ್ಚಿನ ಪ್ರಾಮುಖ್ಯತೆ ಕೊಡಿ ಎಂದು ಹೇಳಿದ್ದೆ. ಅದಕ್ಕೆ ಚಾನಲ್‍ನವರು ಸೂಕ್ತವಾಗಿ ಸ್ಪಂದಿಸಿದ್ದರಿಂದ ನಾನು ಕಾರ್ಯಕ್ರಮಕ್ಕೆ ವಾಪಸ್ಸಾದೆ’ ಎಂದರು.
‘ಬಿಗ್ ಬಾಸ್ – ಸೀಸನ್ 12’ ಕಾರ್ಯಕ್ರಮದ ಬಗ್ಗೆ ಅಧಿಕೃತವಾಗಿ ಘೋಷಣೆಯಾಗಿದೆಯಾದರೂ, ಕಾರ್ಯಕ್ರಮ ಶುರುವಾಗುವುದಕ್ಕೆ ಇನ್ನೂ ಸಮಯವಿದೆ. ಸುದೀಪ್ ಅಭಿನಯದ ಹೊಸ ಚಿತ್ರ ‘ಮ್ಯಾಕ್ಸ್ 2’ ಸದ್ಯದಲ್ಲೇ ಪ್ರಾರಂಭವಾಗಲಿದೆ. ಅದರ ಚಿತ್ರೀಕರಣ ಮುಗಿದೆ ನಂತರ, ‘ಬಿಗ್ ಬಾಸ್ – ಸೀಸನ್ 12’ ಶುರುವಾಗುವ ಸಾಧ್ಯತೆ ಇದೆ.





