Mysore
18
scattered clouds

Social Media

ಶುಕ್ರವಾರ, 26 ಡಿಸೆಂಬರ್ 2025
Light
Dark

ಅತ್ಯುತ್ತಮ ಪ್ರವಾಸಿ ಕೇಂದ್ರ ನಮ್ಮ ಗುರಿ : ಡಿಸಿಎಂ ಡಿಕೆಶಿ

Our Goal is to Become the Best Tourist Destination: DyCM D.K. Shivakumar

ಮಂಡ್ಯ : “ಬೃಂದಾವನ ಉದ್ಯಾನವನ್ನು ಅತ್ಯಂತ ಹೆಚ್ಚು ಆಕರ್ಷಣೀಯಗೊಳಿಸುವುದು ನಮ್ಮ ಉದ್ದೇಶವಾಗಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್‌ ಹೇಳಿದರು.

92 ವರ್ಷಗಳ ಇತಿಹಾಸದಲ್ಲಿ ಮೊಟ್ಟಮೊದಲ ಬಾರಿಗೆ ಜೂನ್ ತಿಂಗಳಿನಲ್ಲಿ ಭರ್ತಿಯಾಗಿರುವ ಕೆಆರ್ ಎಸ್ ಅಣೆಕಟ್ಟಿಗೆ ಸಿಎಂ ಹಾಗೂ ಡಿಸಿಎಂ ಅವರು ಬಾಗಿನ ಅರ್ಪಿಸಿ ನಂತರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮೈಸೂರು ದಸರಾ ರೀತಿ ಅತ್ಯುತ್ತಮ ದೀಪಾಲಂಕಾರ ಮಾಡಲಾಗಿದೆ. ಅತ್ಯುತ್ತಮ ಕಾರಂಜಿಗಳನ್ನು ತರಿಸಲಾಗಿದೆ. ವಿದೇಶಗಳಿಂದ ಅಲಂಕಾರಿಕ‌ ಸಸ್ಯಗಳನ್ನು ತರಿಸಲಾಗಿದೆ.‌ ಮುಖ್ಯಮಂತ್ರಿಗಳು ಇದನ್ನು ಅತ್ಯುತ್ತಮ ಪ್ರವಾಸಿ ಕೇಂದ್ರ ಮಾಡಬೇಕು ಎಂದು ಸಂಕಲ್ಪ ಮಾಡಿದ್ದಾರೆ. ಇದಕ್ಕೆ ಖಾಸಗಿಯವರು ಬಂಡವಾಳ ಹೂಡಬಹುದು ಎಂದು ಆಹ್ವಾನ ಮಾಡಿದ್ದೇವೆ” ಎಂದು ಹೇಳಿದರು.

“ರಾಜ್ಯದ ಅಣೆಕಟ್ಟುಗಳ ಗೇಟ್ ಗಳನ್ನು ದುರಸ್ತಿಗೊಳಿಸಲು ಈಗಾಗಲೇ ತಾಂತ್ರಿಕ ಸಮಿತಿಯನ್ನು ರಚನೆ ಮಾಡಿದ್ದೇವೆ. ಆ ಸಮಿತಿಯಿಂದ ವರದಿ ತೆಗೆದುಕೊಂಡು ಹಂತ, ಹಂತವಾಗಿ ರಾಜ್ಯದ ಅಣೆಕಟ್ಟುಗಳ ಗೇಟ್ ದುರಸ್ತಿಯನ್ನು ಮಾಡಬೇಕು ಎಂದು ಮುಂದಾಗಿದ್ದೇವೆ. ಕೃಷ್ಣ ಟ್ರಿಬ್ಯೂನಲ್ ಅವಾರ್ಡ್ ಗೆ ಒಮ್ಮೆ ಮಹಾರಾಷ್ಟ್ರದವರು ಅಡ್ಡಗಾಲು ಹಾಕಿದ್ದರು. ಈಗ ಆಂಧ್ರ ಪ್ರದೇಶದವರು ಇದನ್ನು ಮುಂದೂಡಿಸಿದ್ದಾರೆ” ಎಂದರು.

“ಬಜೆಟ್ ಮಂಡಿಸಿ ಒಂದು ತಿಂಗಳಾಗಿದೆ ತಾಳ್ಮೆಯಿಂದ ಇದ್ದರೆ ಅನುದಾನ ಬಂದೇ ಬರುತ್ತದೆ. ನಾವು ಕೊಟ್ಟ ಮಾತನ್ನು ತಪ್ಪುವವರಲ್ಲ. ಆರ್ಥಿಕ ಇಲಾಖೆಯವರು ಆರ್ಥಿಕ ಶಿಸ್ತಿಗಾಗಿ ಹಂತ, ಹಂತವಾಗಿ ಹಣ ಬಿಡುಗಡೆ ಮಾಡುತ್ತಾರೆ. ಯಡಿಯೂರಪ್ಪ, ಕುಮಾರಸ್ವಾಮಿ, ಬೊಮ್ಮಾಯಿ ಕಾಲದಲ್ಲಿ ಬಜೆಟ್ ಗಿಂತ ಹೆಚ್ಚು ಕಾಮಗಾರಿಗಳಿಗೆ ಅನುಮೋದನೆ ನೀಡಿದ್ದಾರೆ. ಅದಕ್ಕಾಗಿ ಗುತ್ತಿಗೆದಾರರು ಸ್ವಲ್ಪ ತಾಳ್ಮೆಯಿಂದ ವರ್ತನೆ ಮಾಡಬೇಕು. ನಮ್ಮನ್ನು ಟೀಕೆ ಮಾಡುವವರಿಗೆ ಮಾಧ್ಯಮಗಳು ಪ್ರಶ್ನೆ ಮಾಡಬೇಕು. ಮಂಡ್ಯ, ಮೈಸೂರು, ಬೆಂಗಳೂರು ಭಾಗಕ್ಕೆ ಅವರ ಕೊಡುಗೆ ಏನು ಎಂದು ಕೇಳಬೇಕು” ಎಂದು ಹೇಳಿದರು.

“ತುಂಗಾಭದ್ರಾ ಅಣೆಕಟ್ಟಿನ ಗೇಟ್ ಒಡೆದು ಹೋದಾಗ ಪ್ರತಿ ಪಕ್ಷಗಳು ಇಲ್ಲ ಸಲ್ಲದ ಟೀಕೆ ಮಾಡಿದರು. ಇಡೀ ಡ್ಯಾಂ ಒಡೆದು ಹೋಗುತ್ತದೆ ಎಂದು ಆರೋಪ ಮಾಡಿದರು. ನಾವು ತಕ್ಷಣ ತೀರ್ಮಾನ ತೆಗೆದುಕೊಂಡು ಆ ಗೇಟ್ ಅನ್ನು ದುರಸ್ತಿಗೊಳಿಸಿ ರೈತರ ಎರಡನೇ ಬೆಳೆಗೂ ನೀರು ನೀಡಿದ ಇತಿಹಾಸ ಈ ಕಾಂಗ್ರೆಸ್ ‌ಸರ್ಕಾರಕ್ಕಿದೆ. ಆ ಗೇಟ್ ದುರಸ್ತಿಗೆ ದುಡಿದ ಪ್ರತಿಯೊಬ್ಬ ಕಾರ್ಮಿಕನಿಗೂ ನಾನು ಹಾಗೂ ಸಿದ್ದರಾಮಯ್ಯ ಅವರು ಸನ್ಮಾನಿಸಿದೆವು. ಮುಖ್ಯ ಎಂಜಿನಿಯರ್‌ ಒಬ್ಬರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿದೆವು” ಎಂದು ಹೇಳಿದರು.

ಕವನ ವಾಚಿಸಿದ ಡಿಸಿಎಂ
“ಕಾವೇರಿ ತುಂಬಿದ್ದಾಳೆ, ರೈತರು ನಲಿದಿದ್ದಾರೆ. ಕಾವೇರಿ ಒಲಿದಿದ್ದಾಳೆ ಬರ ಓಡಿಸಿದ್ದಾಳೆ. ನಮ್ಮೆಲ್ಲರ ಪ್ರಾರ್ಥನೆಗೆ, ನಿಮ್ಮೆಲ್ಲರ ಆರತಿಗೆ ಕಾವೇರಿ ತುಂಬಿ ಹರಿಯುತ್ತಿದ್ದಾಳೆ. ಕಾವೇರಿ ತುಂಬಿದರೆ ಶಾಂತಿ. ಕಾವೇರಿ ಹರಿದರೆ ಸಂತೃಪ್ತಿ” ಎಂದು ಕವನವನ್ನು ಡಿಸಿಎಂ ಶಿವಕುಮಾರ್ ಅವರು ವಾಚನ ಮಾಡಿದರು.

“ಮೈಸೂರು ರಾಜಮಾತೆ ತಮ್ಮ ಒಡವೆಗಳನ್ನು ಅಡವಿಟ್ಟು ಈ ಅಣೆಕಟ್ಟು ನಿರ್ಮಾಣಕ್ಕೆ ಮುನ್ನುಡಿ ಬರೆದರು. ಈ ಕಾರಣಕ್ಕೆ ಕಬ್ಬಿನ ಸಿಹಿ ಹಂಚಲಾಗುತ್ತಿದೆ, ಇಡೀ ಬೆಂಗಳೂರಿಗೆ, ತಮಿಳುನಾಡಿಗೆ ‌ನೀರು ನೀಡಲಾಗುತ್ತಿದೆ” ಎಂದು ಹೇಳಿದರು.

“ಕಾವೇರಿ ನಮ್ಮೆಲ್ಲರ ಜೀವಧಾರೆ, ಕೆಆರ್ ಎಸ್ ತುಂಬಿದರೆ ಸಂತೃಪ್ತಿಯ ಧಾರೆ, ಕನ್ನಂಬಾಡಿ ಕಟ್ಟೆ ನಮ್ಮೆಲ್ಲರ ಅನ್ನದ ತಟ್ಟೆ. ಹಿಮಾಲಯದಲ್ಲಿ ಹುಟ್ಟುವ ಗಂಗಾ ನದಿಯಷ್ಟೇ ನಮ್ಮ ರಾಜ್ಯದಲ್ಲಿ ಹುಟ್ಟುವ ಕಾವೇರಿ ನದಿ ಪವಿತ್ರವಾದುದು. ಹುಟ್ಟು ಸಾವು, ಪ್ರಕೃತಿ, ಭೂಮಿ ಯಾವುದು ನಮ್ಮ ಕೈಯಲ್ಲಿ ಇಲ್ಲ. ಎಲ್ಲವೂ ಭಗವಂತನ ಕೈಯಲ್ಲಿದೆ. ಇನ್ನೊಬ್ಬರ ಜೀವನದಲ್ಲಿ ಎಷ್ಟು ಬದಲಾವಣೆ ತರುತ್ತೇವೆ, ಸಂತೋಷ ಉಂಟು ಮಾಡುತ್ತೇವೆ ಎನ್ನುವುದರಲ್ಲಿ ನಮ್ಮ ಬದುಕಿನ ಸಾರ್ಥಕತೆ ಅಡಗಿದೆ” ಎಂದು ತಿಳಿಸಿದರು.

Tags:
error: Content is protected !!