ಬೆಂಗಳೂರು: ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ನಾಳೆ ಬೆಂಗಳೂರಿಗೆ ಆಗಮಿಸುತ್ತಿದ್ದು, ಶಾಸಕರ ಜೊತೆ ಪ್ರತ್ಯೇಕವಾಗಿ ಚರ್ಚೆ ನಡೆಸಲಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಣದೀಪ್ ಸಿಂಗ್ ಸುರ್ಜೇವಾಲ ನಾಳೆ ರಾಜ್ಯಕ್ಕೆ ಭೇಟಿ ನೀಡುತ್ತಿದ್ದು, ಶಾಸಕರ ಜೊತೆ ಪ್ರತ್ಯೇಕವಾಗಿ ಚರ್ಚೆ ನಡೆಸುತ್ತಾರೆ. ಈ ಬಗ್ಗೆ ರಣದೀಪ್ ಸಿಂಗ್ ಸುರ್ಜೇವಾಲ ಅವರ ಕಚೇರಿಯಿಂದಲೇ ನೇರವಾಗಿ ಶಾಸಕರಿಗೆ ಮಾಹಿತಿ ಹೋಗಿದೆ. ನನಗೂ ಕಾರ್ಯಕ್ರಮದ ವೇಳಾಪಟ್ಟಿ ಕಳುಹಿಸಿದ್ದಾರೆ. ಅದರಂತೆ ನಾನು ಶಾಸಕರಿಗೆ ವಿಷಯ ತಿಳಿಸುತ್ತಿದ್ದೇನೆ ಎಂದು ಹೇಳಿದರು.
ಇನ್ನು ದಸರಾ ವೇಳೆಗೆ ಮುಖ್ಯಮಂತ್ರಿ ಬದಲಾಗುತ್ತಾರೆ. ನೂತನ ಮುಖ್ಯಮಂತ್ರಿ ದಸರಾ ಉದ್ಘಾಟಿಸುತ್ತಾರೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಅಶೋಕ್ ಜೋತಿಷ್ಯ ಕಲಿತಿದ್ದರೆ ನನಗೂ ಸಮಯ ಕೊಡಿಸಿ, ನಾನು ಭವಿಷ್ಯ ಕೇಳುವುದಿದೆ. ಅವರನ್ನು ಭೇಟಿ ಮಾಡುತ್ತೇನೆ ಎಂದು ಮಾರ್ಮಿಕವಾಗಿ ಹೇಳಿದರು.
ಇನ್ನು ಕಾವೇರಿ ಆರತಿ ಕುರಿತು ಹೈಕೋರ್ಟ್ ನೋಟಿಸ್‌ಗೆ ಕಾನೂನು ಪ್ರಕಾರವೇ ಉತ್ತರ ನೀಡುತ್ತೇವೆ. ಆರತಿ ವಿಚಾರಕ್ಕೆ ಯಾರು ಅನುಮತಿ ಕೇಳುತ್ತಿಲ್ಲ. ದಿನಾ ಅಲ್ಲಿ ಆರತಿ, ಪೂಜೆ ನಡೆಯುತ್ತಿದೆ ಎಂದು ಹೇಳಿದರು.





