ಬೆಂಗಳೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಯುಕ್ತ ಬೆಂಗಳೂರಿನಲ್ಲಿಂದು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ದಸರಾ ಪೂರ್ವಭಾವಿ ಸಭೆ ನಡೆಸಲಾಯಿತು.
ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಈ ಬಾರಿ 9 ದಿನದ ಬದಲು 11 ದಿನ ದಸರಾ ಆಚರಣೆ ನಡೆಯಲಿದೆ.
ಸೆಪ್ಟೆಂಬರ್.22ರಂದು ಚಾಮುಂಡಿಬೆಟ್ಟದಲ್ಲಿ ದಸರಾ ಮಹೋತ್ಸವ್ಕೆ ಚಾಲನೆ ಸಿಗಲಿದೆ. ಸೆ.22ರಂದು ಬೆಳಿಗ್ಗೆ 10.10ಕ್ಕೆ ದಸರಾ ಮಹೋತ್ಸವ ಉದ್ಘಾಟನೆಯಾಗಲಿದೆ. ಸೆಪ್ಟೆಂಬರ್.22ರಿಂದ ಅಕ್ಟೋಬರ್.2ರವರೆಗೆ ದಸರಾ ನಡೆಯಲಿದೆ. ಅಕ್ಟೋಬರ್.2ರಂದು ಜಂಬೂಸವಾರಿ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಇನ್ನು ಮುಂದುವರಿದು ಮಾತನಾಡಿದ ಅವರು, ರಾಜ್ಯದಲ್ಲಿ ಈ ಬಾರಿ ಮಳೆ ಬೆಳೆ ಚೆನ್ನಾಗಿದೆ. ಅಧಿಕ ಪಂಚಮಿ ಬಂದಿರುವುದರಿಂದ 9 ದಿನದ ಬದಲು ಅದ್ಧೂರಿಯಾಗಿ 11 ದಿನ ಆಚರಣೆ ಮಾಡಲು ನಿರ್ಧರಿಸಲಾಗಿದೆ ಎಂದು ದಸರಾ ಆಚರಣೆ ಸಂಬಂಧ ಮಾಹಿತಿ ನೀಡಿದರು.
ಈ ಬಾರಿ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಅದ್ಧೂರಿ ದಸರಾ ನಡೆಯಲಿದ್ದು, ದಸರಾ ಉದ್ಘಾಟಕರಾಗಿ ಯಾರನ್ನು ಆಯ್ಕೆ ಮಾಡಲಿದ್ದಾರೆ ಎಂಬ ಪ್ರಶ್ನೆ ಮೂಡಿದೆ. ಆದರೆ ಇನ್ನು ಕೆಲವು ದಿನಗಳಲ್ಲಿ ದಸರಾ ಉದ್ಘಾಟಕರನ್ನು ಆಯ್ಕೆ ಮಾಡಲಾಗುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ.





