ನವದೆಹಲಿ: ಇರಾನ್ ಮತ್ತು ಇಸ್ರೇಲ್ ಮಧ್ಯೆ ನಡೆಯುತ್ತಿದ್ದ ಸಂಘರ್ಷಕ್ಕೆ ಅಮೆರಿಕ ಪ್ರವೇಶಿಸಿದ ಬೆನ್ನಲ್ಲೇ ಜಾಗತಿಕ ಮಾರುಕಟ್ಟೆಯಲ್ಲಿ ತಲ್ಲಣ ಉಂಟಾಗಿದೆ.
ಇರಾನ್ ಮೇಲೆ ಅಮೆರಿಕ ದಾಳಿ ಮಾಡಿದ ನಂತರ, ಜಾಗತಿಕ ಮಾರುಕಟ್ಟೆಗಳಲ್ಲಿ ಸಾಕಷ್ಟು ಅಚ್ಚರಿಯ ಬೆಳವಣಿಗೆಗಳು ನಡೆದಿದ್ದು, ಅಮೆರಿಕದ ಷೇರು ವಿನಿಮಯ ಕೇಂದ್ರದ ಭವಿಷ್ಯ ಕುಸಿದು ಕಚ್ಚಾ ತೈಲ ಬೆಲೆಗಳು ತೀವ್ರವಾಗಿ ಏರಿವೆ. ಆರಂಭಿಕ ವಹಿವಾಟಿನಲ್ಲಿ ಕಚ್ಚಾ ತೈಲ ಬೆಲೆಗಳು 5.7%ರಷ್ಟು ಏರಿಕೆಯಾದವು. ಆದರೆ, ನಂತರ ಅದು ತಣ್ಣಗಾಗಿ ಬೆಳಿಗ್ಗೆ ಸುಮಾರು 2.6% ರಷ್ಟು ಲಾಭದೊಂದಿಗೆ ವಹಿವಾಟು ಪ್ರಾರಂಭಿಸಿತು. ಈ ಅಸ್ಥಿರತೆಯು ಚಿನ್ನದ ಬೆಲೆಗಳ ಮೇಲೂ ಆತಂಕ ಹೆಚ್ಚಿಸಿದ್ದು, ಇದೇ ಸಮಯದಲ್ಲಿ ಡಾಲರ್ ಕೂಡ ಬಲಗೊಂಡಿದೆ.
ಅಮೆರಿಕ ಇರಾನ್ ವಿರುದ್ಧ ನೇರ ದಾಳಿ ನಡೆಸಿದ ನಂತರದ ಮೊದಲ ವಹಿವಾಟಿನ ಆರಂಭದಲ್ಲಿ ತೈಲ ಭವಿಷ್ಯವು 2%ಕ್ಕಿಂತ ಹೆಚ್ಚು ಏರಿಕೆಯಾಗಿದ್ದು, ತೈಲ-ಸಮೃದ್ಧ ಮಧ್ಯಪ್ರಾಚ್ಯ ಪ್ರದೇಶದಲ್ಲಿ ಪೂರೈಕೆಯ ಭವಿಷ್ಯದ ಮೇಲೆ ಕರಿನೆರಳು ಬೀರಿದೆ.





