ಮಂಡ್ಯ: ನಾಗಮಂಗಲ ಪಟ್ಟಣದಲ್ಲಿ ಸೆ.11ರಂದು ಗಣೇಶ ವಿಸರ್ಜನೆ ವೇಳೆ ನಡೆದಿದ್ದ ಗಲಭೆ ಪ್ರಕರಣದ ಎಲ್ಲಾ 55 ಆರೋಪಿಗಳಿಗೂ ಇಲ್ಲಿ 1ನೇ ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್ ಶುಕ್ರವಾರ ಜಾಮೀನು ಮಂಜೂರು ಮಾಡಿದೆ.
ನ್ಯಾಯಾಂಗ ಬಂಧನದಲ್ಲಿದ್ದ ಹಿಂದೂ ಸಮುದಾಯದ 18 ಮತ್ತು ಮುಸ್ಲಿಂ ಸಮುದಾಯದ 37ಆರೋಪಿಗಳಿಗೆ ಜಾಮೀನು ನೀಡಲಾಗಿದೆ. ಆರೋಪಿಗಳು 1 ಲಕ್ಷ ಬಾಂಡ್ ಹಾಗೂ ಇಬ್ಬರ ಶ್ಯೂರಿಟಿ ನೀಡಿದ ನಂತರ ಬಿಡುಗಡೆ ಆಗುತ್ತಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಗಣೇಶ ಮೂರ್ತಿ ವಿಸರ್ಜನೆ ವೇಳೆ ಕೋಮುಗಲಭೆ ಆರಂಭಗೊಂಡು ಜಿಲ್ಲೆಯ ನಾಗಮಂಗಲ ಪಟ್ಟಣ ಹೊತ್ತಿ ಉರಿದಿತ್ತು. ಕಿಡಿಗೇಡಿಗಳು ಕಂಡಕಂಡಲ್ಲಿ ಅಂಗಡಿ ಮುಂಗಟ್ಟುಗಳಿಗೆ ಬೆಂಕಿ ಹಚ್ಚಿದ್ದರು. ಇಡೀ ಪ್ರಕರಣ ಕೇಂದ್ರ ಬಿಂದು ಬದ್ರಿಕೊಪ್ಪಲು ಗ್ರಾಮ ಅಕ್ಷರಸಹಃ ಸ್ಮಶಾನ ಮೌನವಾಗಿತ್ತು. ಬಂಧನದ ಭೀತಿಯಿಂದ ಹಲವು ಯುವಕರು ಗ್ರಾಮವನ್ನು ತೊರೆದಿದ್ದರು.