ವಯನಾಡು: ಕೇರಳದ ವಯನಾಡು ಭೂಕುಸಿತ ಪ್ರಕರಣದಲ್ಲಿ ಸಾವನ್ನಪ್ಪಿದವರ ಸಂಖ್ಯೆ 350ಕ್ಕೆ ಏರಿಕೆಯಾಗಿದ್ದು, ರಕ್ಷಣಾ ಕಾರ್ಯಾಚರಣೆ 6ನೇ ದಿನಕ್ಕೆ ಕಾಲಿಟ್ಟಿದೆ.
ಮೃತದೇಹಗಳನ್ನು ಹೊರತೆಗೆಯುವ ಸಾಧ್ಯತೆ ಹೆಚ್ಚಿರುವ ಸ್ಥಳಗಳಲ್ಲಿ ಹೆಚ್ಚಿನ ಬಲ ಮತ್ತು ಉಪಕರಣಗಳನ್ನು ನಿಯೋಜಿಸಿ ಕಾರ್ಯಾಚರಣೆ ನಡೆಸಲಾಗುತ್ತಿದೆ.
ದಾಖಲೆಗಳ ಪ್ರಕಾರ ಮುಂಡಕ್ಕೈ ಮತ್ತು ಚೂರಲ್ಮಲಾದಿಂದ 206 ಜನರು ಇನ್ನೂ ಕಾಣೆಯಾಗಿದ್ದಾರೆ. ಇಲ್ಲಿ ಸಾವಿನ ಸಂಖ್ಯೆ ಕೂಡ 250 ದಾಟಿದೆ. ಸುಧಾರಿತ ರಾಡಾರ್‌ಗಳು, ಡ್ರೋನ್‌ಗಳು ಹಾಗೂ ಯಂತ್ರೋಪಕರಣಗಳನ್ನು ರಕ್ಷಣಾ ತಂಡ ಬಳಸಿಕೊಂಡು ಕಾರ್ಯಾಚರಣೆ ಮುಂದುವರಿಸಿವೆ.
ವಯನಾಡು, ಮಲಪ್ಪುರಂ ಮತ್ತು ಕೋಝಿಕ್ಕೋಡ್ ಜಿಲ್ಲೆಗಳಲ್ಲಿ ಹರಿಯುವ ಚಾಲಿಯಾರ್ ನದಿಯ 40 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಶೋಧ ಕಾರ್ಯಾಚರಣೆ ಮುಂದುವರಿದಿದೆ.
ಚಾಲಿಯಾರ್ ನದಿಯಲ್ಲಿಯೇ ಇದುವರೆಗೆ 73 ಮೃತದೇಹಗಳು ಪತ್ತೆಯಾಗಿದ್ದು, ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಮೃತದೇಹಗಳು ಸಿಗಲಿವೆ ಎನ್ನಲಾಗಿದೆ.
ದುರಂತ ನಡೆದ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಚುರುಕುಗೊಳಿಸಲಾಗಿದ್ದು, ಎನ್‌ಡಿಆರ್‌ಎಫ್, ಕೆ-9 ಶ್ವಾನದಳ, ಸೇನೆ, ವಿಶೇಷ ಕಾರ್ಯಾಚರಣೆ ಗುಂಪು, ಅಗ್ನಿಶಾಮಕ ದಳ, ಅರಣ್ಯ ಇಲಾಖೆ ಸೇರಿದಂತೆ ವಿವಿಧ ಪಡೆಗಳ ನೂರಾರು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.