ನವದೆಹಲಿ: ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ದೇಶದ್ರೋಹ ಎಸಗಿದ್ದು, ಭಾರತೀಯರನ್ನು ಅವಮಾನಿಸಿದ್ದಾರೆ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭಾರತಕ್ಕೆ ನಿಜವಾದ ಸ್ವಾತಂತ್ರ್ಯ 1947ರಲ್ಲಿ ಸಿಕ್ಕಿಲ್ಲ. ರಾಮಮಂದಿರ ಪ್ರತಿಷ್ಠಾಪನಾ ದಿನದಂದು ಸಿಕ್ಕಿತು ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿಕೆ ನೀಡಿದ್ದರು.
ಮೋಹನ್ ಭಾಗವತ್ ಹೇಳಿಕೆ ವಿರುದ್ಧ ಕಾಂಗ್ರೆಸ್ ನಾಯಕರು ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತಿದ್ದು, ರಾಹುಲ್ ಗಾಂಧಿ ಕೂಡ ಕಿಡಿಕಾರಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, ಜನರು ಅಂತಹ ಅಸಂಬದ್ಧ ಮಾತುಗಳನ್ನು ಕೇಳುವುದನ್ನು ನಿಲ್ಲಿಸುವ ಸಮಯ ಬಂದಿದೆ ಎಂದರು.
ಮೋಹನ್ ಭಾಗವತ್ ಅವರು ಸ್ವಾತಂತ್ರ್ಯ ಚಳುವಳಿ ಹಾಗೂ ಸಂವಿಧಾನದ ಬಗ್ಗೆ ತಮ್ಮ ಅಭಿಪ್ರಾಯವನ್ನು ದೇಶಕ್ಕೆ ಹೇಳುವ ಧೈರ್ಯ ಹೊಂದಿದ್ದಾರೆ. ಅವರು ನಿನನೆ ದೇಳಿದ್ದು ದೇಶದ್ರೋಹ. ಏಕೆಂದರೆ ಅವರು ಸಂವಿಧಾನ ಅಮಾನ್ಯವಾಗಿದೆ ಮತ್ತು ಬ್ರಿಟಿಷರ ವಿರುದ್ಧದ ಹೋರಾಟವೂ ಅಮಾನ್ಯ ಎಂದು ಹೇಳುತ್ತಿದ್ದಾರೆ ಎಂದರು.
ಇದನ್ನು ಸಾರ್ವಜನಿಕವಾಗಿ ಹೇಳುವ ದಿಟ್ಟತನ ಅವರಿಗೆ ಇದೆ. ಬೇರೆ ಯಾವುದೇ ದೇಶದಲ್ಲಿ ಈ ರೀತಿ ಹೇಳಿದ್ದರೆ ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗುತ್ತದೆ. ಇದು ಸತ್ಯ ಎಂದು ಹೇಳಿದರು.