Mysore
24
scattered clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಮೈಲಾರಲಿಂಗನ ಗೊರವಯ್ಯಂದಿರು

  • ಎಸ್.ಜಿ.ಮಹಾಲಿಂಗ ಗಿರ್ಗಿ

ಪರಂಪರಾನುಗತವಾಗಿ ರೂಢಿಯಲ್ಲಿರುವ ಕೆಲವು ಆಚಾರ, ಸಂಪ್ರದಾಯಗಳು ಮತ್ತು ನಂಬಿಕೆಗಳು ಕಾಲಾನುಕ್ರಮದಲ್ಲಿ ದೈವಿಕವಾಗತ್ತವೆ. ಪೀಳಿಗೆಯಿಂದ ಪೀಳಿಗೆಗೆ ಅಂತಹ ಆಚರಣೆಗಳು ಬದುಕಿನ ಭಾವವೆಂಬಂತೆ ಆಚರಣೆಗೆ ಬಂದು ಜೀವನಶೈಲಿಯಾಗಿಯೂ ಬದಲಾಗುತ್ತವೆ. ಇಂತಹ ಪರಂಪರೆಗಳು ಜನಪದೀಯವಾಗಿ ರೂಢಿಯಲ್ಲಿರುತ್ತವೆ.

ಚಾಮರಾಜನಗರ ಜಿಲ್ಲೆ ಜನಪದರ ನಾಡಾಗಿದ್ದು, ಮಲೆಮಹದೇ ಶ್ವರ, ಮಂಟೇಸ್ವಾಮಿ, ಸಿದ್ದಪ್ಪಾಜಿ, ಬಿಳಿಗಿರರಂಗಪ್ಪ ಇಲ್ಲಿನ ಜೀವಪರ ದನಿಯಾಗಿದ್ದಾರೆ. ಜಾತಿ ಧರ್ಮಗಳ ಎಲ್ಲೆಯನ್ನು ಮೀರಿ ಮಾನವ ಸಂಬಂಧಗಳಿಗೆ ಜೀವನ ಸ್ಫೂರ್ತಿಯಾಗಿರುವ ಈ ಜನಪದ ನಾಯಕರು ದೈವಸ್ವರೂಪಿಗಳಾಗಿದ್ದಾರೆ. ಮಂಟೇಸ್ವಾಮಿ, ಮಹದೇಶ್ವರ, ಸಿದ್ದಪ್ಪಾಜಿ ದೇವರ ಒಕ್ಕಲಿನವರು ದೇವರ ಗುಡ್ಡರಾಗಿ, ಬಿಳಿಗಿರಿಂಗಪ್ಪನ ಒಕ್ಕಲಿನವರು ದಾಸಯ್ಯಗಳಾಗಿ ದೀಕ್ಷೆ ಪಡೆಯುವ ಮೂಲಕ ಜನಪದರ ಆಚರಣೆಗಳನ್ನು ಪೀಳಿಗೆಯಿಂದ ಪೀಳಿಗೆಗೆ ದಾಟಿಸುತ್ತಿದ್ದಾರೆ ಮತ್ತು ಮೌಖಿಕ ಸಂಪನ್ಮೂಲ ವ್ಯಕ್ತಿಗಳಾಗಿ ಜಾನಪದ ಸಂಪತ್ತನ್ನು ಅತ್ಯಂತ ಜತನದಿಂದ ಕಾಯ್ದುಕೊಂಡು ಬರುತ್ತಿದ್ದಾರೆ.

ಮೈಸೂರು, ಮಂಡ್ಯ, ಚಾಮರಾಜನಗರ ಜಿಲ್ಲೆಯ ಕೆಲವು ಕಡೆ ಗೊರವರ ಸಂಪ್ರದಾಯ ರೂಢಿಯಲ್ಲಿದೆ. ಮುಡುಕುತೊರೆ ಮಲ್ಲಿಕಾರ್ಜುನಸ್ವಾಮಿ ಪಾರ್ವತಿಯ ಒಕ್ಕಲಿನ ಕುಟುಂಬಗಳು ಗೊರವಯ್ಯಗಳಾಗಿ ಮೈಲಾರಲಿಂಗನ ದೀಕ್ಷೆ ಪಡೆದು ಶಿವನ ಆರಾಧಕ ರಾಗಿ ಮನೆಮನೆಗಳಲ್ಲಿ ಉಪದಾನ ಮಾಡುತ್ತಾ ಮೈಲಾರ ಲಿಂಗನ ದೈವ ಪರಂಪರೆಯನ್ನು ಆಚರಿಸುತ್ತಾ ಹಾಡುತ್ತಾ ನೃತ್ಯದ ಮೂಲಕ ಗೊರವರ ಸಂಸ್ಕೃತಿಯನ್ನು ಮುಂದುವರಿಸಿಕೊಂಡು ಬರುತ್ತಿದ್ದಾರೆ.

ಬಿಳಿ ಜುಬ್ಬಾ, ಬಿಳಿ ಕಚ್ಚೆಪಂಚೆ ತೊಟ್ಟು ತಲೆಗೆ ಬಿಳಿ ರುಮಾಲು ಹಾಕಿ ಮೇಲೊಂದು ಕರಿಯ ಕಂಬಳಿ ಹೊದ್ದು, ಕೆಂಪಿನ ಬನಾತು ಧರಿಸಿ, ಹೊಟ್ಟೆಯ ಭಾಗಕ್ಕೆ ಬಂಡಾರ ಸಜ್ಜೆ, ಒಳಗೆ ಹರಿಶಿನ ಕುಂಕುಮ ಪ್ರಸಾದ ಇಟ್ಟು, ಎದೆಯ ಮೇಲೆ ಅಡ್ಡಿಗೆ ಸರ, ಕತ್ತಿಗೆ ರುದ್ರಾಕ್ಷಿ, ಕವಡೆಪಟ್ಟು ಧರಿಸಿ, ಎಡದ ಹೆಗಲಲ್ಲಿ ಜೋಳಿಗೆ ನೇತುಹಾಕಿ ಎಡದ ಕೈಯಲ್ಲಿ ಬೆತ್ತ ಮತ್ತು ಕೊಳಲು, ಬಲದ ಕೈಯಲ್ಲಿ ಡಮರುಗಗಳನ್ನು ಹಿಡಿದು, ತಲೆಯ ಮೇಲೆ ಕರಡಿ ಚರ್ಮದ ಗುಂಜು ಹೊತ್ತು ಹಣೆಗೆ ಭಸ್ಲಾಂಗ ಕಣ್ಣಿನ ಸುತ್ತ ಕೆಂಪು ಮತ್ತು ಬಳಿಯ ಬಣ್ಣದ ಭಸ ಬಳಿದು, ದೇವರ ಧ್ಯಾನ ಮಾಡುತ್ತಾ ರುದ್ರಾವತಾರ ತಾಳುತ್ತಾ, ಹರಲಿಂಗು ಗುರುಲಿಂಗು ಶಿವಲಿಂಗು ಎಂದು ಹಾಡುತ್ತಾ ಡಮರುಗದಲ್ಲಿ ಬುಡು, ಬುಡು, ಬುಡು ಶಬ್ದ ಮಾಡುತ್ತಾ ಶಿವನ ರುದ್ರನರ್ತನ ಮಾಡುತ್ತಾ ಗೊರವಯ್ಯಗಳಾಗಿ ತಮ್ಮ ಒಕ್ಕಲುತನದ ಕಾಯಕವೆಂಬ ಹೆಮ್ಮೆಯಿಂದ ಮನೆ ಮನೆಗೆ ತೆರಳಿ ಭಿಕ್ಷೆ ಬೇಡುತ್ತಾ ಜೀವನ ನಡೆಸುತ್ತಾ ಪರಂಪರೆಯನ್ನು ಉಳಿಸುತ್ತಾ ಬಂದಿದ್ದಾರೆ.

ಮೈಲಾರ ಲಿಂಗನ ದೀಕ್ಷೆ ತೆಗೆದುಕೊಳ್ಳುವ ಕ್ರಮ; ಕುರುಬ ಜನಾಂಗವನ್ನು ಹಾಲುಮತದ ಜನಾಂಗ ಎಂತಲೂ ಕರೆಯುತ್ತಾರೆ, ಮುಡುಕುತೊರೆ ಪಾರ್ವತಿ ಮಲ್ಲಿಕಾರ್ಜುನ ಸ್ವಾಮಿ ದೇವರ ಮನೆತನ ದವರು ಮಾತ್ರ ಗೊರವಯ್ಯಗಾಳಾಗುತ್ತಾರೆ. ಹನ್ನೆರಡು ವರ್ಷದ ಪ್ರಾಯಕ್ಕೆ ಬಂದ ಗಂಡುಮಕ್ಕಳು ಮಾತ್ರ ದೀಕ್ಷಗೆ ಅರ್ಹರು, ಮುಡುಕು ತೊರೆ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ ಮೊದಲು ಮುಡಿ ತೆಗೆದು, ಸ್ನಾನ ಮಾಡಿಸಿ ಗುರುಗಳಿಂದ ಐದು ಕಳಸಗಳನ್ನು ಇಟ್ಟು ಭಸ್ಮಾಂಗ ಗಳನ್ನು ಬಳಿದು ಪಾದಪೂಜೆ ಮಾಡಿಸಿ ರುದ್ರಾಕ್ಷಿ ಕವಡೆ ಮಣಿಧಾರಣೆ ಮಾಡಿ ದೇವರನ್ನು ಪೂಜೆ ಮಾಡಿಸುತ್ತಾರೆ. ತಮ್ಮಗಳ ಶಕ್ತಾನುಸಾರವಾಗಿ ಕೆಲವರು ಬಾಡೂಟವನ್ನು ಮಾಡಿಸಿ ಬಂದ ಜನರಿಗೆ ಪ್ರಸಾದವೆಂಬಂತೆ ಅನ್ನದಾನ ಮಾಡುತ್ತಾರೆ. ಗೊರವಯ್ಯ ನಾಗಿ ರೂಪಾಂತರಗೊಂಡ ವ್ಯಕ್ತಿ ಯಾವುದೇ ಜಾತಿ ಧರ್ಮಗಳ ಭೇದವಿಲ್ಲದೆ ಮನೆಮನೆಗೆ ತೆರಳಿ ಭಿಕ್ಷೆ ಮಾಡಿ ದೇವರ ಹೆಸರಿನಲ್ಲಿ ಉಪದಾನ ಮಾಡಬೇಕಾಗುತ್ತದೆ. ಗೊರವಯ್ಯಗಳು ಮನೆಮನೆಗೆ ತೆರಳಿ ಮಕ್ಕಳಿಗೆ ತಲೆಯ ಮೇಲೆ ತಾವು ತಲೆಯ ಮೇಲೆ ಹೊತ್ತುಕೊಂಡ ಕರಡಿಯ ಗುಂಜನ್ನು ಹರಸಿ ಇಟ್ಟರೆ ಮಕ್ಕಳಿಗೆ ಪೀಡೆ ಪಿಶಾಚಿ ಗಾಳಿಸೋಂಕು ಭೀತಿ ಶಂಕೆ ಎಂಬ ನಕರಾತಕ ಶಕ್ತಿ ಸುಳಿಯುವುದಿಲ್ಲ ಎಂಬ ನಂಬಿಕೆ ಇದೆ. ಗೊರವಯ್ಯಗಳಾದವರು ಎಷ್ಟೇ ಶ್ರೀಮಂತರಾದರೂ ಸೋಮವಾರ, ಶುಕ್ರವಾರ ಸ್ನಾನ ಮಡಿ ಮಾಡಿಕೊಂಡು ಶಿವನ ಧ್ಯಾನ ಮಾಡುತ್ತಾ ನಾಲ್ಕಾರು ಮನೆಗಳಲ್ಲಿ ಭಿಕ್ಷೆ ಬೇಡಿ ಶಿವನ ಸರಣೆ ಮಾಡಬೇಕು ಎಂಬ ಪ್ರತೀತಿ ಇದೆ. ಹಲವಾರು ಕುಟುಂಬಗಳು ಶಿವನ ಆಶೀರ್ವಾದದಿಂದ ಭಿಕ್ಷಾಟನೆ ಮಾಡಿಯೇ ಜೀವನ ಸಾಗಿಸುತ್ತಿವೆ ಎನ್ನುತ್ತಾರೆ.

ಮನೆಮನೆಗೆ ತೆರಳಿ ಶಿವ ಪಾರ್ವತಿ ದಾನಕೊಟ್ಟವರು ಹಾಲು ಸಾಗರವಾಗಿ ಬಾಳಲಪ್ಪ, ಕುಟುಂಬ ಹೆಚ್ಚು ಒಕ್ಕಲನ್ನು ಪಡೆಯಲಿ, ಬಂದ ಕಷ್ಟಗಳು ಬಯಲಾಗಿ, ಸುಖಸಂತೋಷವನ್ನು ನೀಡಪ್ಪಾ, ಇವರ ಒಕ್ಕಲು ತಣ್ಣಗೆ ಬಾಳಲಪ್ಪ ಎಂದು ಶಿವನನ್ನು ನೆನೆದು ಹರಸುತ್ತಾರೆ. ಜನರೂ ಅದೇ ನಂಬಿಕೆಯಿಂದ ಭಿಕ್ಷೆ ನೀಡಿ ನಮ್ಮನ್ನು ಗೌರವಿಸುತ್ತಾರೆ ಎಂದು ಹೇಳುತ್ತಾರೆ.


ಗೊರವಯ್ಯಗಳು ಶಿವನ ಭಂಟರು ಶಿವ ತನ್ನ ಬಿರುದುಗಳಾದ ಖಡ್ಗ, ಕತ್ತಿ, ಸೂರಿಪಾನಿ, ಲಿಂಗ ಎಲ್ಲವನ್ನೂ ನಮಗೆ ನೀಡಿದ್ದಾರೆ. ಅವು ನಮ್ಮ ಸಂಕೇತಗಳು ಎನ್ನುತ್ತಾರೆ. ನಮ್ಮ ತಲೆಯ ಮೇಲೆ ಮೈಲಾರ ಲಿಂಗನ ಕರಡಿಗುಂಜು ಇದ್ದು ಕಾಡು ಮೇಡುಗಳಲ್ಲಿ ಅಲೆದರೂ ನಿರ್ಜನ ರಾತ್ರಿಗಳಲ್ಲೂ ಯಾವ ಅತಿರೇಕ ಶಕ್ತಿಗಳು ನಮ್ಮ ಮೇಲೆ ಪರಿಣಾಮ ಬೀರಲಾರವು ಎಂಬ ದೈವ ನಂಬಿಕೆ ಹೊಂದಿದ್ದಾರೆ.

ಶಿವನು ಪಾರ್ವತಿ ದೇವಿಯ ಸತ್ಯವನ್ನು ಪರೀಕ್ಷೆ ಮಾಡುವುದಾಕ್ಕಾಗಿ ತನ್ನ ರೂಪವನ್ನು ಮರೆಸುತ್ತಾ, ಗೊರವಯ್ಯನಾಗಿ ರೂಪತಾಳಿ ಪಾರ್ವತಿ ದೇವಿ ಮನೆ ಬಳಿ ಬಂದು ಭಿಕೆಯನ್ನು ಕೇಳುತ್ತಾನೆ ಎನ್ನುವ ಜಾನಪದೀಯ ನಂಬಿಕೆ ಜನಪದರಲ್ಲಿ ಹಾಸುಹೊಕ್ಕಾಗಿದೆ.

ಜನಪದಕ್ಕೆ ಚಾಮರಾಜನಗರದ ಜಿಲ್ಲೆಯ ಗೊರವರ ಕಾಣಿಕೆ: ಚಾಮರಾಜನಗರ ಟೌನ್ ರಾಮಸಮುದ್ರ ಗ್ರಾಮದಲ್ಲಿ ವಾಸವಾಗಿರುವ ಕುರುಬ ಜನಾಂಗದವರು ಈ ಗೊರವ ಸಂಪ್ರದಾಯವನ್ನು ಮುಂದುವರಿಸುತ್ತಾ ಬಂದಿದ್ದಾರೆ. ಮುಡುಕುತೊರೆ ಮಲ್ಲಿಕಾರ್ಜುನ ಸ್ವಾಮಿ ಮತ್ತು ಪಾರ್ವತಿಯ ಒಕ್ಕಲಿನ ಸುಮಾರು 50 ಕುಟುಂಬಗಳು ಈ ಸಂಪ್ರದಾಯವನು ಮುಂದುವರಿಸುತ್ತಾ ಬಂದಿದ್ದಾರೆ. ಗೊರವರ ಕುಣಿತವನು ಪ್ರಸಿದ್ಧಗೊಳಿಸಿದ ದಿವಂಗತ ಪುಟ್ಟಮಲ್ಲೇಗೌಡರ ಶಿಷ್ಯಬಳಗ ಈ ಗುರುಪರಂಪರೆಯನ್ನು ಮುಂದುವರೆಸಿಕೊಂಡು ಬರುತ್ತಿದೆ. ಚಾಮರಾಜನಗರದಲ್ಲಿ ಪುಟ್ಟಮಲ್ಲೇಗೌಡ ಮತ್ತು ಅವರ ಸಹೋದರರು ಗೊರವರ ಕುಣಿತಕ್ಕೆ ನೀಡಿದ ಕೊಡುಗೆ ಅಪಾರ. ಚಾಮರಾಜನಗರದ ಕೀರ್ತಿಯನ್ನು ರಾಷ್ಟ್ರಮಟ್ಟದಲ್ಲಿ ಬೆಳಗಿದ ವ್ಯಕ್ತಿಗಳು ಅವರು. ಅವರ ಕುಟುಂಬದವರು ಮತ್ತು ಅನೇಕ ಶಿಷ್ಯರು ಈ ಕಾಯಕದಲ್ಲಿ ತಮ್ಮನ್ನು ತೊಡಗಿಸಿಕೊಂಡು ಜನಪದಕ್ಕೆ ತಮ್ಮದೇಯಾದ ಕೊಡುಗೆ ನೀಡುತ್ತಿದ್ದಾರೆ.

ತುಂಬು ಕುಟುಂಬದ ಶಿವಗೌಡರವರು ತನ್ನ ತಂದೆ ಸಿದ್ದೇಗೌಡ ತಾಯಿ ಮಾಲೂರಮ್ಮ ಹಾಗೂ ಗುರುಗಳಾದ ಪುಟ್ಟಮಲ್ಲೇಗೌಡರನ್ನು ನೆನೆಯುತ್ತಾ ತನ್ನ ಜೋಳಿಗೆ ಎಂದೂ ಬರಿದಾಗಿಲ್ಲ ಶಿವ ಅನ್ನ ನೀಡಿದ್ದಾನೆ ಎಂದು ಮುಗ್ಧತೆಯಿಂದ ನುಡಿಯುತ್ತಾರೆ. ಆಧುನಿಕ ಜೀವನ ಶೈಲಿಯಿಂದ ಬದಲಾಗದೆ ತನ್ನ ಕಾಯಕ ನಿಷ್ಠೆಯನ್ನು ಮುಂದುವರೆಸಿದ್ದಾರೆ, ಯಾವ ಪ್ರಶಸ್ತಿಗಳಿಗೂ ದಾರಿ ಕಾಯದ, ತಲೆಕೆಡಿಸಿಕೊಳ್ಳದ ಜೀವ ಇದಾಗಿದೆ,

ಹಿರಿಯ ಗೊರವಯ್ಯ ಶಿವಗೌಡ ಅವರು ತಮ್ಮ ತಾತ ಮುತ್ತಾತರಿಂದ ನಮ್ಮ ತಂದೆಗೆ ಬಂದ ಗೊರವಯ್ಯನ ಪರಂಪರೆಯನ್ನು ನಾನು ಮುಂದುವರಿಸಿಕೊಂಡು ಬಂದಿದ್ದೇನೆ. ಆದರೆ ನಮ್ಮ ಮಕ್ಕಳು ಅದನ್ನು ಮುಂದುವರಿಸಲು ಇಷ್ಟಪಡುವುದಿಲ್ಲ ಯಾಕೆಂದರೆ ಆಷಾಢಭೂತಿತನದಿಂದ ಈ ಕೆಲಸ ಸಾಧ್ಯವಾಗುವುದಿಲ್ಲ. ದೇವರ ಮೇಲೆ ಭಕ್ತಿ ನಿಷ್ಠೆ ಇರಬೇಕು. ಈ ಕಲೆಯಿಂದ ಅವರು ವಿಮುಖರಾಗಿದ್ದಾರೆ. ಆಧುನಿಕ ಜೀವನ ಅವರನ್ನು ಬದಲಾಯಿಸಿದೆ. ಕೇವಲ ಗೊರವ ನೃತ್ಯ ಮತ್ತು ಹಾಡುಗಳಿಗೆ ಮಾತ್ರ ಸೀಮಿತವಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸುತ್ತಾರೆ, ಬಿಡಿ ಅವರನ್ನು ಬಲವಂತ ಮಾಡಬಾರದು ಕನಿಷ್ಠ ಸೋಮವಾರ, ಶುಕ್ರವಾರಗಳಾದರೂ ನಮ್ಮ ಪರಂಪರೆಯನ್ನು ಉಳಿಸುವಂತಾಗಲಿ ಎನ್ನುತ್ತಾರೆ.

ಮತ್ತೊಬ್ಬರಾದ ಕರಿಯಗೌಡ ತಂದೆ ಮಲ್ಲೇಗೌಡರಿಂದ ಬಂದ ಕಲೆಯನ್ನು ತಮ್ಮ ಜೀವನಕ್ಕೆ ಅಳವಡಿಸಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಹಲವು ಸ್ನೇಹಿತರ ಜೊತೆಗೂಡಿ ಕಲಿತ ಗೊರವ ನೃತ್ಯವನ್ನು ಅನೇಕ ಕಡೆ ಪ್ರಸ್ತುತಪಡಿಸಿದ್ದಾರೆ ಮತ್ತು ಜನಮನ್ನಣೆ ಗಳಿಸಿದ್ದಾರೆ. ಹಿರಿಯ ಶಿವಗೌಡ ಮತ್ತು ಶಿವಮಲ್ಲೇಗೌಡರ ಜೊತೆ ಸೇರಿಕೊಂಡು ಅನೇಕ ಶಿಷ್ಯರಿಗೆ ಈ ಪರಂಪರೆಯನ್ನು ಧಾರೆ ಎರೆದು ಉಳಿಸಿಕೊಳ್ಳುವ ನಿಟ್ಟಿನಲ್ಲಿ ನಿರತರಾಗಿದ್ದಾರೆ.

ಸುಮಾರು 70 ವರ್ಷದ ವಯಸ್ಸಿನ ಶಿವಮಲ್ಲೇಗೌಡರವರು ತನ್ನ ಹದಿನಾರನೇ ವಯಸ್ಸಿಗೆ ತನ್ನ ತಂದೆ ಮಲ್ಲೇಗೌಡರಿಂದ ದೀಕ್ಷೆ ಪಡೆದು ಗೊರವ ನೃತ್ಯದಲ್ಲಿ ಪ್ರಾವೀಣ್ಯತೆಯನ್ನು ಪಡೆದು ಭಾರತದ ಅನೇಕ ಕಡೆ ಸುತ್ತಾಡಿ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದ್ದಾರೆ. 2021 ನೇ ಸಾಲಿನ ಕರ್ನಾಟಕ ಜಾನಪದ ಅಕಾಡೆಮಿಯ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ. ದೆಹಲಿ, ಬಾಂಬೆ, ರಾಜಸ್ಥಾನ, ಭೂಪಾಲ್, ನಾಗಪುರ್, ಆಂಧ್ರಪ್ರದೇಶ, ಅಂಡಮಾನ್ ನಿಕೋಬಾರ್, ಕನ್ಯಾಕುಮಾರಿ, ಹೈದರಾಬಾದ್‌ ವಯನಾಡು ಹಾಗೂ ಇನ್ನಿತರ ಕಡೆಗಳಲ್ಲಿ ಗೊರವರ ನೃತ್ಯ ಕಾರ್ಯಕ್ರಮವನ್ನು ಪ್ರಸ್ತುತಪಡಿಸಿದ್ದಾರೆ. ಮತ್ತು ಜಿಲ್ಲೆಯ ಅನೇಕ ಸಾಂಸ್ಕೃತಿಕ ಸಂಸ್ಥೆಗಳು ನೀಡುವ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ದಿವಂಗತ ಪುಟ್ಟಮಲ್ಲೇಗೌಡರ ಶಿಷ್ಯರಾಗಿ ಗುರುಗಳನ್ನು ಸದಾ ಸ್ಮರಿಸಿಕೊಳ್ಳುತ್ತಾರೆ. ಹೆಂಡತಿ ಮಾದಮ್ಮ ಮತ್ತು ಮೂವರು ಹೆಣ್ಣುಮಕ್ಕಳೊಂದಿಗೆ ಸಂತಸದ ಜೀವನ ನಡೆಸುತ್ತಿದ್ದಾರೆ. ಜೊತೆಗಾರ ಶಿವಣ್ಣೆಗೌಡರವರೊಡನೆ ಅನೇಕ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದ್ದಾರೆ.

ಬಹಮುಖ ಪ್ರತಿಭೆಯ ಈ ಕಲಾವಿದರು ಕಳೆದ 45 ವರ್ಷಗಳಿಂದಲೂ ಶಿವ ಪರಂಪರೆ ಮೈಲಾರಲಿಂಗನ ಧ್ಯಾನ ಮಾಡುವ ಮೂಲಕ ಸಾಂಸ್ಕೃತಿಕವಾಗಿ ಚಾಮರಾಜನಗರ ಜಿಲ್ಲೆಯ ಜನಪದ ಸಂಸ್ಕೃತಿಗೆ ತನ್ನದೆಯಾದ ಕೊಡುಗೆ ನೀಡುತ್ತಾ ಬಂದಿದ್ದಾರೆ ಮತ್ತು ತಮ್ಮ ಈ ಕಲೆ ತಮ್ಮಲ್ಲೇ ನಾಶವಾಗಬಾರದು ಎಂಬ ಕಾರಣದಿಂದ ತಮ್ಮ ಒಕ್ಕಲುತನದ ಅನೇಕ ಮಕ್ಕಳಿಗೆ ಕಥೆ ಹೇಳುತ್ತಾ ಹಾಡು ಹೇಳುತ್ತಾ ನೃತ್ಯವನ್ನು ಕಲಿಸುತ್ತಾ ಬಂದಿದ್ದಾರೆ.

                                                                            ಎಸ್.ಜಿ ಮಹಾಲಿಂಗ ಗಿರ್ಗಿ

Tags: